Wasim Akram: ವಿಶ್ವಕಪ್ಗೆ ಭಾರತವೇ ಆತಿಥ್ಯ ವಹಿಸಿದರೂ ಈ ಸಮಸ್ಯೆ ತಪ್ಪಿದ್ದಲ್ಲ; ರೋಹಿತ್ ಪಡೆಗೆ ಪಾಕ್ ಮಾಜಿ ನಾಯಕ ವಾಸಿಂ ಅಕ್ರಮ್ ಎಚ್ಚರಿಕೆ
Wasim Akram: ತವರಿನಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಆಡುತ್ತಿರುವ ಭಾರತ ತಂಡವು ಹೆಚ್ಚು ತೊಂದರೆ ಮತ್ತು ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ರೋಹಿತ್ ಪಡೆಗೆ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದಲೂ ಏಕದಿನ ವಿಶ್ವಕಪ್ ಟೂರ್ನಿಗಳನ್ನು (ODI World Cup 2023) ಆಯೋಜಿಸುತ್ತಿರುವ ತಂಡಗಳೇ ಗೆಲ್ಲುತ್ತಿವೆ. ಹಾಗಾಗಿ ಈ ಬಾರಿಯೂ ಭಾರತವೇ (India) ಗೆಲ್ಲುತ್ತದೆ ಎಂಬುದು ದಿಗ್ಗಜ ಕ್ರಿಕೆಟಿಗ ಅಭಿಪ್ರಾಯ. ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆಯೂ ನಡೆಯುತ್ತಿದೆ. ಚರ್ಚೆ ಬಿರುಸುಗೊಂಡ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ (Wasim Akram), ಭಾರತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
2011, 2015 ಮತ್ತು 2019ರಲ್ಲಿ ನಡೆದ 3 ಏಕದಿನ ವಿಶ್ವಕಪ್ಗಳಲ್ಲಿ ಟೂರ್ನಿ ಆಯೋಜಿಸಿದ ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳೇ ಟ್ರೋಫಿ ಗೆದ್ದಿವೆ. ಸದ್ಯ 2023ರ ವಿಶ್ವಕಪ್ ಟೂರ್ನಿಯನ್ನು ಭಾರತವೇ ಆಯೋಜನೆ ಮಾಡುತ್ತಿದ್ದು, 2013ರ ನಂತರ ಐಸಿಸಿ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ. ಎಂಎಸ್ ಧೋನಿಯ ನಂತರ ಶತಕೋಟಿ ಭಾರತೀಯರ ಕನಸು ನನಸು ಮಾಡಲು ರೋಹಿತ್ ಪಡೆ ಸಜ್ಜಾಗಿದೆ.
ಕಳೆದ ಎರಡು ವಿಶ್ವಕಪ್ಗಳಲ್ಲಿ ಭಾರತವು ಸೆಮಿಫೈನಲ್ಗಳಲ್ಲಿ ಮುಗ್ಗರಿಸಿತು. ಈ ಬಾರಿಯಾದರೂ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ 2015ರ ಮೆಲ್ಬೋರ್ನ್ ಮತ್ತು 2019ರ ಮ್ಯಾಂಚೆಸ್ಟರ್ ಸೋಲಿನ ನೋವಿನ ನೆನಪುಗಳನ್ನು ಅಳಿಸಿಹಾಕಲು ಮತ್ತು ಭಾರತೀಯ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸುವರ್ಣಾವಕಾಶವನ್ನು ಹೊಂದಿದ್ದಾರೆ.
‘ಒತ್ತಡಕ್ಕೆ ಸಿಲುಕುವುದು ಖಚಿತ’
ಆದಾಗ್ಯೂ, ಇದೆಲ್ಲವನ್ನೂ ಮಾಡುವುದಕ್ಕಿಂತ ಹೇಳುವುದು ಸುಲಭ. ತವರಿನಲ್ಲಿ ಆಡುವುದರಿಂದ ಭಾರತವು ಲಾಭ ಪಡೆಯಲು ಇಷ್ಟಪಡುತ್ತದೆ. ಆದರೂ, ಒತ್ತಡಕ್ಕೆ ಸಿಲುಕುವುದು ಖಚಿತ ಎಂದು ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಎಚ್ಚರಿಸಿದ್ದಾರೆ. ಆತಿಥೇಯ ರಾಷ್ಟ್ರವಾಗಿ ಭಾರತ ತಂಡಕ್ಕೆ ಎದುರಾಗುವ ಸವಾಲುಗಳು ಏನೇನು ಎಂಬುದನ್ನೂ ಸೂಚಿಸಿದ್ದಾರೆ.
‘ಬೂಮ್ರಾ ಫಿಟ್ ಆದರೆ ಲಾಭ’
ಭಾರತದ ಬೌಲಿಂಗ್ ಲೈನ್ ಅಪ್ ಅನ್ನು ಹೊಗಳಿದ ಅಕ್ರಮ್, ಮೊಹಮ್ಮದ್ ಶಮಿ ತಂಡದ ತುಂಬಾ ಪ್ರಭಾವಶಾಲಿಯಾಗಿದ್ದಾರೆ. ಮತ್ತು ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ ಬುಮ್ರಾ ಅವಶ್ಯಕತೆ ತಂಡಕ್ಕಿದೆ. ಫಿಟ್ನೆಸ್ ವಿಷಯದಲ್ಲಿ ಅವರ ಪರಿಸ್ಥಿತಿ ಏನೆಂದು ನನಗೆ ತಿಳಿದಿಲ್ಲ. ಆದರೆ ಅವರು ಫಿಟ್ ಆಗಿದ್ದರೆ, ಅದು ದೊಡ್ಡ ಮಟ್ಟದ ಲಾಭವಾಗಲಿದೆ ಎಂದು ಹೇಳಿದ್ದಾರೆ.
‘ಇದು ಪಾಕಿಸ್ತಾನಕ್ಕೂ ಅನ್ವಯವಾಗ್ತಿತ್ತು’
ಇವರ ಜೊತೆಗೆ ರವಿಚಂದ್ರನ್ ಜಡೇಜಾ, ಅಶ್ವಿನ್ ಅವರು ಸ್ಪಿನ್ನರ್ ಮತ್ತು ಆಲ್ರೌಂಡರ್ಗಳಾಗಿದ್ದಾರೆ. ಆದರೆ, ಯಾರಿಗೆ ಅವಕಾಶ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಟೀಮ್ ಇಂಡಿಯಾದಲ್ಲಿ ಅದ್ಭುತ ಆಟಗಾರರಿದ್ದಾರೆ. ಅದರಲ್ಲಿ ಸಂಶಯವೇ ಇಲ್ಲ. ಆದರೆ, ತವರಿನಲ್ಲಿ ವಿಶ್ವಕಪ್ ಟೂರ್ನಿ ಆಡುತ್ತಿರುವುದು ಹೆಚ್ಚು ತೊಂದರೆ ಮತ್ತು ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದಿದ್ದಾರೆ.
ಕೇವಲ ಭಾರತಕ್ಕೆ ಒತ್ತಡಕ್ಕೆ ಎಂದು ಹೇಳುತ್ತಿಲ್ಲ. ಒಂದು ವೇಳೆ ಪಾಕಿಸ್ತಾನ ಮೆಗಾ ಟೂರ್ನಿ ಆಯೋಜಿಸಿದ್ದರೆ, ಇದೇ ರೀತಿಯ ಒತ್ತಡವನ್ನು ಪಾಕ್ ಕೂಡ ಎದುರಿಸುತ್ತಿತ್ತು ಎಂದು ಅಕ್ರಮ್ ಹೇಳಿದ್ದಾರೆ. ವೇಳಾಪಟ್ಟಿ ಬಿಡುಗಡೆಗೂ ಮೊದಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮೈದಾನಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಅದಕ್ಕೆ ವಾಸಿಂ ಅಕ್ರಮ್ ಪ್ರತಿಕ್ರಿಯಿಸುತ್ತಿದ್ದಾರೆ.
ಮೈದಾನ ಯಾವುದಾದರೇನು?
ಭಾರತ ಮತ್ತು ಪಾಕಿಸ್ತಾನ ಪಂದ್ಯದ ಆಯೋಜನೆಗೆ ವ್ಯತಿರಿಕ್ತ ಅಭಿಯಾನ ಪ್ರಾರಂಭವಾಗಿತ್ತು. ಐಸಿಸಿ ಬಿಡುಗಡೆಗೊಳಿಸಿದ ಆರಂಭಿಕ ವೇಳಾಪಟ್ಟಿ ಪ್ರಕಾರ, ಪಾಕಿಸ್ತಾನವು ತನ್ನ ಎಲ್ಲಾ ಪಂದ್ಯಗಳನ್ನು 4 ಸ್ಥಳಗಳಲ್ಲಿ ಆಡಲಿದೆ. ಆದರೆ, ಭಾರತವು ಎದುರಾಳಿಗಳ ಗುಂಪಿನ ವಿರುದ್ಧ ಹೋರಾಡಲು 9 ನಗರಗಳಿಗೆ ಪ್ರಯಾಣ ಬೆಳೆಸಲಿದೆ. ಆರಂಭದಲ್ಲಿ ಪಿಸಿಬಿ ವೇಳಾಪಟ್ಟಿಯ ಕರಡುಗೆ ಇಷ್ಟವಿರಲಿಲ್ಲ. ಒಂದೆರಡು ಸ್ಥಳಗಳನ್ನು ಬದಲಾಯಿಸಬೇಕೆಂದು ಒತ್ತಾಯಿಸಿತ್ತು.
ಇದೀಗ ಅದಕ್ಕೆ ಪ್ರತಿಕ್ರಿಯಿಸಿದ ಅಕ್ರಮ್, ನೋಡಿ, ನಾನು ಇದನ್ನು ಮೊದಲೇ ಹೇಳಿದ್ದೇನೆ. ನಿರ್ದಿಷ್ಟ ದಿನಾಂಕದಂದು ಮತ್ತು ನಿರ್ದಿಷ್ಟ ಸ್ಥಳದಲ್ಲಿ ಆಡಲು ನನ್ನನ್ನು ಕೇಳಿದರೆ, ನಾವು ಆಡಲು ಸಿದ್ಧರಾಗಿರಬೇಕು. ಅದು ಅಹ್ಮದಾಬಾದ್, ಚೆನ್ನೈ, ಕೋಲ್ಕತ್ತಾ ಅಥವಾ ಮುಂಬೈ ಯಾವುದಾದರೇನು? ಇದು ಆಟಗಾರರ ಮೇಲೆ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಸುಮ್ಮನೆ ಆಟವಾಡಿ ಮತ್ತು ಅದರ ಬಗ್ಗೆ ಚಿಂತಿಸಬೇಡಿ ಎಂದು ಅಕ್ರಮ್ ಸಲಹೆ ನೀಡಿದ್ದಾರೆ.
ವಿಶ್ವಕಪ್ ಗೆದ್ದುಕೊಟ್ಟಿದ್ದ ಆಟಗಾರ
1992ರಲ್ಲಿ ನ್ಯೂಜಿಲೆಂಡ್ ಎದುರು ಫೈನಲ್ನಲ್ಲಿ ಅಲ್ರೌಂಡ್ ಆಟ ಪ್ರದರ್ಶಿಸಿ ವಾಸೀಂ ಅಕ್ರಮ್ ಪಾಕಿಸ್ತಾನಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದರು. ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು. 1999ರ ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿದ್ದ ಅಕ್ರಮ್ ತಂಡವನ್ನು ಫೈನಲ್ ಹಂತಕ್ಕೆ ಕೊಂಡೊಯ್ದರು. ಸದ್ಯ ತವರಿನ ಅಂಗಳದ ಲಾಭವನ್ನು ಮತ್ತೊಮ್ಮೆ ಪಡೆಯಲು ಭಾರತ ಸಜ್ಜಾಗಿದ್ದು, 13ನೇ ವಿಶ್ವಕಪ್ ಟೂರ್ನಿಯಲ್ಲಿ ದಶಕದ ನಂತರ ಟ್ರೋಫಿ ಬರ ನೀಗಿಸಿಕೊಳ್ಳಲು ಎದುರು ನೋಡುತ್ತಿದೆ.
ವಿಭಾಗ