ಕನ್ನಡ ಸುದ್ದಿ  /  ಕ್ರೀಡೆ  /  Playoff Scenario: ಆರ್​ಸಿಬಿ-ಗುಜರಾತ್​ ಪಂದ್ಯಕ್ಕೆ ಮಳೆ ಭೀತಿ; ಮ್ಯಾಚ್​ ರದ್ದಾದರೆ ಯಾರಿಗೆ ಲಾಭ, ಯಾರಿಗೆ ನಷ್ಟ; ಮುಂಬೈ-ಆರ್​ಆರ್ ಕಥೆ ಏನು?

Playoff Scenario: ಆರ್​ಸಿಬಿ-ಗುಜರಾತ್​ ಪಂದ್ಯಕ್ಕೆ ಮಳೆ ಭೀತಿ; ಮ್ಯಾಚ್​ ರದ್ದಾದರೆ ಯಾರಿಗೆ ಲಾಭ, ಯಾರಿಗೆ ನಷ್ಟ; ಮುಂಬೈ-ಆರ್​ಆರ್ ಕಥೆ ಏನು?

ಐಪಿಎಲ್​ನಲ್ಲಿ ಪ್ಲೇ ಆಫ್ (IPL Playoff Scenario)​ ಪ್ರವೇಶಿಸಲು ಮೂರು ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಆದರೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಮುಂಬೈ ಇಂಡಿಯನ್ಸ್​​, ರಾಜಸ್ಥಾನ್​ ರಾಯಲ್ಸ್ ತಂಡಗಳಲ್ಲಿ ಯಾವ ತಂಡವು ಅಂತಿಮ 4ರ ಘಟಕ್ಕೆ ಪ್ರವೇಶ ಪಡೆಯಲಿದೆ ಎಂಬ ಕುತೂಹಲ ಜೋರಾಗಿದೆ.

ಐಪಿಎಲ್​ ಪ್ಲೇ ಆಫ್​ ಪ್ರವೇಶಿಸಲು 3 ತಂಡಗಳ ನಡುವೆ ಪೈಪೋಟಿ
ಐಪಿಎಲ್​ ಪ್ಲೇ ಆಫ್​ ಪ್ರವೇಶಿಸಲು 3 ತಂಡಗಳ ನಡುವೆ ಪೈಪೋಟಿ

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2023) ಲೀಗ್​ ಪಂದ್ಯಗಳಿಗೆ ಇಂದು ವರ್ಣರಂಜಿತ ತೆರೆ ಬೀಳಲಿದ್ದು, ನಂತರ ಎಲಿಮಿನೇಟರ್​, ಕ್ವಾಲಿಫೈಯರ್​​-1, ಕ್ವಾಲಿಫೈಯರ್-2​ ಮತ್ತು ಫೈನಲ್​​ ಪಂದ್ಯಗಳ ಭರಾಟೆ ಜೋರಾಗಿರಲಿದೆ. ಇಂದು ಎರಡು ರಣರೋಚಕ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ (MI vs SRH) ಮುಖಾಮುಖಿ ಆಗಲಿದೆ. 2ನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ (RCB vs GT) ಅನ್ನು ಎದುರಿಸಲಿದೆ.

ಟ್ರೆಂಡಿಂಗ್​ ಸುದ್ದಿ

ಈಗಾಗಲೇ 3 ತಂಡಗಳು ಪ್ಲೇ ಆಫ್​​ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇನ್ನೊಂದು ಸ್ಥಾನಕ್ಕಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಮುಂಬೈ ಇಂಡಿಯನ್ಸ್​​, ರಾಜಸ್ಥಾನ್​ ರಾಯಲ್ಸ್​ ತಂಡಗಳ ಭವಿಷ್ಯ ನಿರ್ಧಾರವಾಗಲಿದೆ. ಅದರಲ್ಲೂ ಇಂದು ಮುಂಬೈ ಮತ್ತು ಆರ್​ಸಿಬಿ ತಂಡಗಳು ಹೆಚ್ಚಿನ ಅವಕಾಶ ಇದೆ. ಯಾವ ತಂಡ ಗೆದ್ದರೂ, ಪ್ಲೇ ಆಫ್​​ಗೆ ಪ್ರವೇಶ ಪಡೆಯಲಿದೆ. ಒಂದು ವೇಳೆ ಎರಡೂ ತಂಡಗಳು ಸೋತರೂ ಉತ್ತಮ ರನ್​ ರೇಟ್​ ಕಾಪಾಡಿಕೊಂಡಿರುವ ತಂಡಗಳಿಗೆ ಅಗ್ರ 4ಕ್ಕೆ ಅವಕಾಶ ಪಡೆಯಲಿವೆ.

ಪ್ಲೇ ಆಫ್​ ಲೆಕ್ಕಾಚಾರ

ಆರ್​ಸಿಬಿ ತಂಡ 13 ಪಂದ್ಯಗಳಲ್ಲಿ 7 ಗೆಲುವು, 5 ಸೋಲಿನೊಂದಿಗೆ 14 ಅಂಕ ಪಡೆದು ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಮುಂಬೈ ಕೂಡ ಇಷ್ಟೇ ಅಂಕ ಹೊಂದಿದ್ದರೂ, ರನ್​ರೇಟ್​ ಲೆಕ್ಕಾಚಾರದಲ್ಲಿ ರಾಜಸ್ಥಾನ ತಂಡದ ಬಳಿಕ ಅಂದರೆ 6ನೇ ಸ್ಥಾನ ಪಡೆದಿದೆ. ಸಿಎಸ್​ಕೆ, ಲಕ್ನೋ ತಲಾ 17 ಅಂಕಗಳೊಂದಿಗೆ 2, 3ನೇ ಸ್ಥಾನದಲ್ಲಿರುವ ಕಾರಣ, ಆರ್​ಸಿಬಿಗೆ 2ನೇ ಸ್ಥಾನಕ್ಕೇರುವ ಅವಕಾಶ ತಪ್ಪಿಸಿಕೊಂಡಿದೆ.

ಇದೀಗ ಎಲಿಮಿನೇಟರ್​ ಪಂದ್ಯಕ್ಕೆ ಅರ್ಹತೆ ಪಡೆಯುವ ಅವಕಾಶ ಬೆಂಗಳೂರು ಮುಂದಿದ್ದು, ಇದಕ್ಕೆ ಗುಜರಾತ್​ ವಿರುದ್ಧ ಗೆಲುವು ಸಾಧಿಸಿದರೆ, ಯಾವುದೇ ಲೆಕ್ಕಾಚಾರ ಇಲ್ಲದೆ, ಪ್ಲೇ ಆಫ್​ಗೆ ಪ್ರವೇಶ ಪಡೆಯಲಿದೆ. ರಾಯಲ್​ ಚಾಲೆಂಜರ್ಸ್​​ ಉತ್ತಮ ರನ್​ ರೇಟ್​ ಹೊಂದಿರುವುದು ಲಾಭದಾಯಕ ಎನಿಸಿದೆ. ಮುಂಬೈ-ಎಸ್​ಆರ್​​ಎಚ್​ ನಡುವಿನ ಪಂದ್ಯದ ಫಲಿತಾಂಶ ನೋಡಿಕೊಂಡು ಆರ್​ಸಿಬಿ ಆಡಲಿದೆ.

ಮುಂಬೈ ಗೆಲುವು ಸಾಧಿಸಿದರೆ, ಆಗ ಆರ್​ಸಿಬಿ ಗುಜರಾತ್​ ವಿರುದ್ಧ ಗೆಲ್ಲುವುದು ಅನಿವಾರ್ಯ. ಮುಂಬೈ ಜೊತೆಗೆ ಬೆಂಗಳೂರು ಕೂಡ ಸೋತರೆ, ರನ್​ ರೇಟ್​ ಲೆಕ್ಕಾಚಾರದಲ್ಲಿ ಆರ್​ಸಿಬಿ ಪ್ಲೇ ಆಫ್​ ಪ್ರೇವೇಶಿಸಲಿದೆ. ಮುಂಬೈ ಸೋತ ಬಳಿಕ ಆರ್​ಸಿಬಿ 5 ರನ್​ಗಳ ಅಂತರದಲ್ಲಿ ಸೋತರೂ ಪ್ಲೇ ಆಫ್​​ ಪ್ರವೇಶಿಸಲಿದೆ.

ಮಳೆ ಬಂದರೆ ಏನಾಗಲಿದೆ?

ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಶನಿವಾರವೂ ಭಾರಿ ಮಳೆಯಾಗಿತ್ತು. ಭಾನುವಾರ ಕೂಡ ಜೋರು ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಮಳೆಯಿಂದ ಆರ್​ಸಿಬಿ ಪಂದ್ಯ ರದ್ದುಗೊಂಡರೆ, ಆಗ ಮುಂಬೈ ತಂಡ ಮೊದಲ ಪಂದ್ಯದಲ್ಲಿ ಸೋತಿದ್ದರೆ ಮಾತ್ರ ಆರ್​ಸಿಬಿ ಪ್ಲೇ ಆಫ್​​​​​ಗೇರಲು ಸಾಧ್ಯವಾಗುತ್ತದೆ. ಮತ್ತೊಂದೆಡೆ ಆರ್​ಸಿಬಿ (ಕನಿಷ್ಠ 6 ರನ್​ಗಳಿಂದ) ಮತ್ತು ಮುಂಬೈ ತಂಡಗಳೆರಡೂ ಸೋತರೆ ಮಾತ್ರ ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ ಪ್ಲೇ ಆಫ್​ಗೇರುವ ಅವಕಾಶ ದೊರೆಯಲಿದೆ.

ಇಂದಿನ ಹವಾಮಾನದ ಪ್ರಕಾರ, ಗುಜರಾತ್​ ಮತ್ತು ಬೆಂಗಳೂರು ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಸಾಧ್ಯತೆ ಇದೆ. ಸಂಜೆ 4 ಗಂಟೆಯಿಂದ ಮೋಡ ಕವಿದ ವಾತಾವರಣ ಇರಲಿದೆ ಎಂದು ತಿಳಿದು ಬಂದಿದೆ. ಸಂಜೆಯಿಂದಲೇ ಮೋಡ ಕವಿದ ವಾತವರಣ ಇರಲಿದ್ದು, ಸಂಜೆ 5 ಗಂಟೆ, 7 ಗಂಟೆ ಹಾಗೂ 9 ಗಂಟೆಯ ವೇಳೆ ವರುಣನ ಆಗಮನ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಆರ್​ಸಿಬಿ - ಗುಜರಾತ್​ ಪಂದ್ಯ ನಡೆಯುತ್ತಾ ಎಂಬ ಅನುಮಾನ ಹುಟ್ಟಿದೆ.

ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆಯಲಿವೆ. ಆಗ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸುವುದು ಅನುಮಾನ. ಏಕೆಂದರೆ ಮುಂಬೈ ಗೆದ್ದರೆ 16 ಅಂಕಗಳನ್ನು ಸಂಪಾದಿಸಲಿದೆ. ಒಂದು ವೇಳೆ ಪಂದ್ಯ ರದ್ದಾದರೆ, ಆರ್​ಸಿಬಿ 15 ಅಂಕ ಪಡೆದು ಅಂಕಪಟ್ಟಿಯಲ್ಲಿ ಹಿಂದೆ ಸರಿಯಲಿದೆ. ಇದರೊಂದಿಗೆ ರೋಹಿತ್​ ಪಡೆ ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ಇದ್ದರೆ, ಮತ್ತೊಂದೆಡೆ ಆರ್​ಸಿಬಿ ತಂಡದ ಪ್ಲೇಆಫ್ ಕನಸು ಕೂಡ ಕಮರುವುದರಲ್ಲಿ ಅಚ್ಚರಿ ಇಲ್ಲ.