UAE vs WI: ಯುಎಇ ವಿರುದ್ಧ ಒಂದು ಪಂದ್ಯ ಉಳಿದಿರುವಂತೆಯೇ ಏಕದಿನ ಸರಣಿ ವಶಪಡಿಸಿಕೊಂಡ ವೆಸ್ಟ್ ಇಂಡೀಸ್
ಯುಎಇ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್, ಮೂರು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧದ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ (United Arab Emirates vs West Indies) ಮುನ್ನಡೆ ಸಾಧಿಸಿದೆ. ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ವಿಂಡೀಸ್, 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿದ್ದು, ವಿಂಡೀಸ್ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಶಾರ್ಜಾದಲ್ಲಿ (Sharjah Cricket Stadium) ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಯುಎಇ ವಿರುದ್ಧ 78 ರನ್‌ಗಳ ಜಯದೊಂದಿಗೆ, ವೆಸ್ಟ್ ಇಂಡೀಸ್ ತಂಡದ ನೂತನ ನಾಯಕ ಶೈ ಹೋಪ್ ಮೊದಲ ಸರಣಿ ಜಯವನ್ನು ತಮ್ಮದಾಗಿಸಿಕೊಂಡರು. ಇದೇ ವೇಳೆ ತಂಡದ ನೂತನ ಕೋಚ್ ಡೇರೆನ್ ಸೆಮ್ಮಿ ಕೂಡಾ ಮೊದಲ ಸರಣಿ ಗೆಲುವನ್ನು ಖಚಿತಪಡಿಸಿಕೊಂಡರು.
ಮಂಗಳವಾರ ರಾತ್ರಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ವಿಂಡೀಸ್, ಯುಎಇಗೆ 307 ರನ್‌ಗಳ ಬೃಹತ್ ಗುರಿ ನೀಡಿತು. ಗುರಿ ಬೆನ್ನತ್ತಿದ ಯುಎಇ, 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 228 ರನ್ ಗಳಿಸಲು ಶಕ್ತವಾಯ್ತು. ಹೀಗಾಗಿ 78 ರನ್‌ಗಳ ಬೃಹತ್ ಅಂತರದೊಂದಿಗೆ ಗೆದ್ದು ಸರಣಿ ವಶಪಡಿಸಿಕೊಂಡಿತು.
ಮೊದಲ ಪಂದ್ಯದಲ್ಲಿ ಚೇಸಿಂಗ್ ನಡೆಸಿ ಇನ್ನೂ 88 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿದ್ದ ವೆಸ್ಟ್ ಇಂಡೀಸ್, ಮೂರು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ವಶಪಡಿಸಿಕೊಂಡಿದೆ.
ವಿಂಡೀಸ್ ತಂಡ ಉತ್ತಮ ಆರಂಭ ಪಡೆಯಿತು. ಕಿಂಗ್ ಮತ್ತು ಜಾನ್ಸನ್ ಚಾರ್ಲ್ಸ್ ಉತ್ತಮ ಆರಂಭ ಒದಗಿಸಿದರು. 17ನೇ ಓವರ್‌ನಲ್ಲಿ ಅಲಿ ನಾಸೀರ್ ಅವರ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಚಾರ್ಲ್ಸ್ ಔಟಾದರು. ಅದಕ್ಕೂ ಮುನ್ನ ಬ್ರಾಂಡನ್ ಕಿಂಗ್ ಅವರೊಂದಿಗೆ ಸೇರಿ ಮೊದಲ ವಿಕೆಟ್‌ಗೆ 129 ರನ್‌ಗಳ ಜೊತೆಯಾಟ ನೀಡಿದರು. 47 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಿತ ಚಾರ್ಲ್ಸ್ ಅರ್ಧಶತಕ ಸಿಡಿಸಿದರು.
ಕಿಂಗ್ 70 ಎಸೆತಗಳಲ್ಲಿ 64 ರನ್ ಗಳಿಸಿ ವೆಸ್ಟ್ ಇಂಡೀಸ್ ಪರ ಅಧಿಕ ರನ್ ಗಳಿಸಿದ ಆಟಗಾರನಾದರು. ಕೀಸಿ ಕಾರ್ಟಿ 32 ರನ್ ಗಳಿಸಿದರೆ, ಹೋಪ್ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಕವೆಮ್ ಹಾಡ್ಜ್ 26 ಮತ್ತು ಓಡಿಯನ್ ಸ್ಮಿತ್ 24 ಎಸೆತಗಳಲ್ಲಿ 37 ರನ್ ಗಳಿಸಿದರು. ಯುಎಇ ಪರ ಜಹೂರ್ ಖಾನ್ 44 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು.
ಬೃಹತ್ ಗುರಿ ಬೆನ್ನಟ್ಟಿದ ಅರಬ್ ಹುಡುಗರು 14 ಓವರ್ ಅಂತ್ಯಕ್ಕೆ 52 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿತು. ತಂಡದ ಪರ ಬಾಸಿಲ್ ಹಮೀದ್ 49 ರನ್ ಗಳಿಸಿ ಅರ್ಧಶತಕ ವಂಚಿತರಾದರೆ, ಅಲಿ ನಾಸೀರ್ 57 ರನ್ ಗಳಿಸುವ ಮೂಲಕ ತಂಡದ ಅಧಿಕ ರನ್ ಗಳಿಸಿದ ಆಟಗಾರನಾದರು.
ಮೂರನೇ ಪಂದ್ಯವು ಶುಕ್ರವಾರ ಶಾರ್ಜಾದಲ್ಲಿ ನಿಗದಿಯಾಗಿದೆ. ಜೂನ್ 18 ರಿಂದ ಜಿಂಬಾಬ್ವೆಯಲ್ಲಿ ಪ್ರಾರಂಭವಾಗುವ ವಿಶ್ವಕಪ್ ಅರ್ಹತಾ ಪಂದ್ಯಾವಳಿಗೆ ಉಭಯ ತಂಡಗಳು ಸಿದ್ಧತೆ ನಡೆಸುತ್ತಿವೆ.