ಕನ್ನಡ ಸುದ್ದಿ  /  ಕ್ರೀಡೆ  /  Who Is Akash Madhwal: ಪಂತ್​ ನೆರೆಮನೆಯವ ಈ ಆರ್​ಸಿಬಿ ನೆಟ್​ ಬೌಲರ್; ಈಗ ಮುಂಬೈ ತಂಡದ ಮ್ಯಾಚ್​ ವಿನ್ನರ್​​ ಟೆನಿಸ್​ ಬಾಲ್ ಕ್ರಿಕೆಟಿಗ!

Who is Akash Madhwal: ಪಂತ್​ ನೆರೆಮನೆಯವ ಈ ಆರ್​ಸಿಬಿ ನೆಟ್​ ಬೌಲರ್; ಈಗ ಮುಂಬೈ ತಂಡದ ಮ್ಯಾಚ್​ ವಿನ್ನರ್​​ ಟೆನಿಸ್​ ಬಾಲ್ ಕ್ರಿಕೆಟಿಗ!

ಉತ್ತರಾಖಾಂಡ್​​ನ ಆಕಾಶ್ ಮಧ್ವಾಲ್ (Akash Madhwal), (3.3-0-5-5) ಅದ್ಭುತ ಬೌಲಿಂಗ್​ ನೆರವಿನಿಂದ ಲಕ್ನೋ ಬ್ಯಾಟರ್​​​ಗಳು ತತ್ತರಿಸಿದರು. ಯಾರ್ಕರ್​​​ಗಳ ಮೂಲಕ ಗಮನ ಸೆಳೆದಿರುವ ಮಧ್ವಾಲ್​ ಅವರ ಹಿನ್ನೆಲೆ ಏನು ಎಂಬುದನ್ನು ಈ ವರದಿಯಲ್ಲಿ ನೋಡೋಣ.

ಆಕಾಶ್​ ಮಧ್ವಾಲ್​
ಆಕಾಶ್​ ಮಧ್ವಾಲ್​

ಐಪಿಎಲ್​​ನಲ್ಲಿ (IPL 2023) ಐದು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ (Mumbai Indians) ಈಗ ಮತ್ತೊಂದು ಪ್ರಶಸ್ತಿ ಕನಸಿನಲ್ಲಿದೆ. ಟೂರ್ನಿಯ ಆರಂಭದಲ್ಲಿ ಎಡವಿದ್ದ ರೋಹಿತ್ ಶರ್ಮಾ (Rohit Sharma) ಸೇನೆ ಆ ಬಳಿಕ ಮೈಕೊಡವಿ ನಿಂತಿತು. ಬ್ಯಾಕ್ ಟು ಬ್ಯಾಕ್ ಗೆಲುವಿನೊಂದಿಗೆ ಅದೃಷ್ಟದೊಂದಿಗೆ ಪ್ಲೇ ಆಫ್​ಗೂ​ ಅರ್ಹತೆ ಪಡೆಯಿತು. ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಅದ್ಭುತ ಗೆಲುವು ಸಾಧಿಸುವ ಮೂಲಕ 2ನೇ ಕ್ವಾಲಿಫೈಯರ್​​​ಗೂ ಎಂಟ್ರಿ ಕೊಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ಎಲಿಮಿನೇಟರ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ 182 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್​ ಜೈಂಟ್ಸ್ (Lucknow Super Giants)​ 16.3 ಓವರ್‌ಗಳಲ್ಲಿ 101 ರನ್‌ಗೆ ಕುಸಿದಿತ್ತು. ಉತ್ತರಾಖಾಂಡ್​​ನ ಆಕಾಶ್ ಮಧ್ವಾಲ್ (Akash Madhwal), (3.3-0-5-5) ಅದ್ಭುತ ಬೌಲಿಂಗ್​ ನೆರವಿನಿಂದ ಲಕ್ನೋ ಬ್ಯಾಟರ್​​​ಗಳು ತತ್ತರಿಸಿದರು. ಮಧ್ವಲ್ ಮಿಂಚಿನ ಎಸೆತಗಳ ಮೂಲಕ ಬ್ಯಾಟರ್​​ಗಳನ್ನು ಪೆವಿಲಿಯನ್​ಗೆ ಸೇರಿಸಿದರು.

ಮಾರ್ಕಸ್​ ಸ್ಟೋಯ್ನಿಸ್​ (Marcus Stoinis) (27 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 40 ರನ್) ಹೊರತುಪಡಿಸಿದರೆ, ಬೇರೆ ಯಾವುದೇ ಆಟಗಾರ ಲಕ್ನೋ ಪರ ಕನಿಷ್ಠ 20 ರನ್ ಗಳಿಸಲು ಸಾಧ್ಯವಾಗಲಿಲ್ಲ. ಮುಂಬೈ 81 ರನ್‌ಗಳ ಜಯ ಸಾಧಿಸಿತು. ಸೆನ್ಸೇಷನಲ್ ಸ್ಪೆಲ್ ಮೂಲಕ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಕಾಶ್ ಮಧ್ವಾಲ್, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆಕಾಶ್​ ಮಧ್ವಾಲ್​ ಯಾರು?

ಈತ ಟೆನಿಸ್​ ಬಾಲ್ ಕ್ರಿಕೆಟಿಗ. ಓದಿದ್ದು ಇಂಜಿನಿಯರಿಂಗ್​. 2022ರಲ್ಲಿ ಬದಲಿ ಆಟಗಾರನಾಗಿ ಮುಂಬೈ ತಂಡಕ್ಕೆ ಆಯ್ಕೆಯಾಗಿದ್ದ. 2013ರಲ್ಲಿ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡಿದ್ದರು. ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಉತ್ತರಾಖಾಂಡದ ರೂರ್ಕಿಯ ಧಂದೇರಾ ಅವರ ಊರು.

ರಿಷಭ್​ ಪಂತ್​ ನೆರೆಹೊರೆಯವರು

ಆಕಾಶ್​ ಮಧ್ವಾಲ್​, ರೂರ್ಕಿಯಲ್ಲಿ ಭಾರತ ಕ್ರಿಕೆಟ್​ ತಂಡದ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ರಿಷಭ್​ ಪಂತ್​​ ನೆರೆ ಹೊರೆಯವರು ಎಂಬುದು ವಿಶೇಷ. ಕೋಚ್​ ಅವತಾರ್​ ಸಿಂಗ್ ಎಂಬವರಿಂದ ಪಂತ್​ ಮತ್ತು ಮಧ್ವಾಲ್​ ಕ್ರಿಕೆಟ್​​​​ ಕುರಿತು ತರಬೇತಿ ಪಡೆದುಕೊಂಡಿದ್ದರು. ಬಳಿಕ ಪಂತ್​ ಅಲ್ಲಿಂದ ದೆಹಲಿಗೆ ಸ್ಥಳಾಂತರಗೊಂಡರು. ಮೊದಲಿನಿಂದಲೂ ಆಕಾಶ್​ ಟೆನಿಸ್ ಬಾಲ್​ ಕ್ರಿಕೆಟ್​ ಆಡುತ್ತಿದ್ದರು.

2019ರಲ್ಲಿ ಆಗಿನ ಉತ್ತರಾಖಂಡ್ ಕೋಚ್ ಆಗಿದ್ದ ವಾಸಿಮ್ ಜಾಫರ್ ಮತ್ತು ಪ್ರಸ್ತುತ ಕೋಚ್ ಮನೀಶ್ ಝಾ ಅವರ ಕಣ್ಣಿಗೆ ಬಿದ್ದರು ಆಕಾಶ್​ ಮಧ್ವಾಲ್. ಬಳಿಕ ಆಕಾಶ್​ ಲೆದರ್​ಬಾಲ್​ನೊಂದಿಗೆ ಆಡಲು ಶುರು ಮಾಡಿದರು. ಪ್ರಸ್ತುತ ಉತ್ತರಾಖಾಂಡ್ ರಾಜ್ಯದ ಸೀಮಿತ ಓವರ್​​​ಗಳ ತಂಡದ ಕ್ಯಾಪ್ಟನ್​ ಕೂಡ ಆಗಿದ್ದಾರೆ.

ಆರ್​ಸಿಬಿ ನೆಟ್ ಬೌಲರ್​ ಆಗಿದ್ದ ಮಧ್ವಾಲ್​

4 ವರ್ಷಗಳ ಕಾಲ ಲೆದರ್​ಬಾಲ್​ನಲ್ಲಿ ಪ್ರಾಕ್ಟೀಸ್​ ಮಾಡಿದ ಆಕಾಶ್​, ಐಪಿಎಲ್​ನಲ್ಲಿ ಮೊದಲು ಸೇರಿದ್ದು, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ. 2021ರಲ್ಲಿ ಆರ್​ಸಿಬಿ ತಂಡಕ್ಕೆ ನೆಟ್​ ಬೌಲರ್​​ ಆಗಿ ಆಕಾಶ್​ ಮಧ್ವಾಲ್​ ಆಯ್ಕೆಯಾದರು. ಆದರೆ, 2022ರ ಹರಾಜಿನಲ್ಲಿ ಆರ್​ಸಿಬಿ ಮತ್ತೆ ಖರೀದಿಸಲು ಮುಂದಾಗಲಿಲ್ಲ. 2023ರ ಹರಾಜಿನಲ್ಲಿ ಕೇವಲ 20 ಲಕ್ಷಕ್ಕೆ ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಕಾಶ್ ಅವರನ್ನು ಖರೀದಿಸಿತ್ತು.

ಸೂರ್ಯನ ಸ್ಥಾನದಲ್ಲಿ ಮಧ್ವಾಲ್ ಆಯ್ಕೆ

2022ರ ಐಪಿಎಲ್ ಹರಾಜಿನಲ್ಲಿ ಸೇಲ್​ ಆಗ ಆಕಾಶ್ ಮಧ್ವಾಲ್​​​ ಆಕಸ್ಮಿಕವಾಗಿ ಐಪಿಎಲ್​ ಬಾಗಿಲು ಮತ್ತೆ ತೆರೆಯಿತು. ಅದೇ ವರ್ಷ ಸೂರ್ಯಕುಮಾರ್ ಇಂಜುರಿಗೆ ಒಳಗಾಗುತ್ತಿದ್ದಂತೆ ಆಕಾಶ್ ಮಧ್ವಾಲ್​ ಅವರನ್ನು ಬದಲಿಯಾಗಿ ಮುಂಬೈ ತಂಡವನ್ನು ಬದಲಿಯಾಗಿ ಸೇರಿಸಿಕೊಂಡಿತು. ಆದರೆ ಆ ವರ್ಷ ಮುಂಬೈ ಪರ ಒಂದೇ ಒಂದು ಪಂದ್ಯವನ್ನೂ ಆಡಲಿಲ್ಲ. ಇದರ ಹೊರತಾಗಿಯೂ ಮತ್ತೆ ಮುಂಬೈ ಖರೀದಿಸಿತು.

ಕ್ರಿಕೆಟ್​​ ಕರಿಯರ್ ಹೀಗಿದೆ!

ಆಕಾಶ್ ಮಧ್ವಾಲ್​ ಈವರೆಗೂ 10 ಫಸ್ಟ್​ ಕ್ಲಾಸ್​ ಮ್ಯಾಚ್​​ಗಳಲ್ಲಿ 12 ವಿಕೆಟ್, 17 ಲಿಸ್ಟ್-ಎನಲ್ಲಿ 18 ವಿಕೆಟ್ ಮತ್ತು 29 ಟಿ20 ಪಂದ್ಯಗಳಲ್ಲಿ 29 ವಿಕೆಟ್ ಉರುಳಿಸಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ 7 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 13 ವಿಕೆಟ್​​ ಕಬಳಿಸಿದ್ದಾರೆ. ಅವರ ಬೌಲಿಂಗ್​ ಸರಾಸರಿ 12.85. ಬೌಲಿಂಗ್​ ಎಕಾನಮಿ 7.77.

ಐಪಿಎಲ್​ನಲ್ಲಿ ದಾಖಲೆ

ಲಕ್ನೋ ಸೂಪರ್ ಜೈಂಟ್ ವಿರುದ್ಧದ ಪಂದ್ಯದಲ್ಲಿ ಆಕಾಶ್, 3.3 ಓವರ್ ಗಳಲ್ಲಿ 5 ರನ್ ನೀಡಿ, 5 ವಿಕೆಟ್ ಕಬಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಇದರೊಂದಿಗೆ ಹಲವು ದಾಖಲೆಗಳು ಮುರಿದರು. ಆಕಾಶ್ ಪ್ಲೇ ಆಫ್/ನಾಕೌಟ್ ಪಂದ್ಯದಲ್ಲಿ 5 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿದ್ದಾರೆ. ಲಸಿತ್ ಮಾಲಿಂಗ, ಜಸ್​ಪ್ರಿತ್​ ಬೂಮ್ರಾ ಅವರಂತಹ ದಿಗ್ಗಜ ಬೌಲರ್‌ಗಳು ಕೂಡ ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.

ಐಪಿಎಲ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ ಎಂಬ ಮತ್ತೊಂದು ದಾಖಲೆಯನ್ನು ಅವರು ಹೊಂದಿದ್ದಾರೆ. ಮೊದಲು ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಕೂಡ 5 ರನ್ ನೀಡಿ, ಐದು ವಿಕೆಟ್ ಪಡೆದಿದ್ದರು. ಆಕಾಶ್ ಐಪಿಎಲ್‌ನಲ್ಲಿ 4ನೇ ಅತ್ಯುತ್ತಮ ಬೌಲರ್ ಎನಿಸಿಕೊಂಡರು. ಅಲ್ಜಾರಿ ಜೋಸೆಫ್ (6/12) ಅಗ್ರಸ್ಥಾನ.