ಕನ್ನಡ ಸುದ್ದಿ  /  Sports  /  Cricket News World Test Championship No Jersey Sponsors For Team India In Wtc Final Adidas Bcci Rohit Sharma Jra

WTC final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ಜೆರ್ಸಿಗೆ ಪ್ರಾಯೋಜಕರಿಲ್ಲ

ಕಡಿಮೆ ಘನತೆಯ ಒಪ್ಪಂದಕ್ಕೆ ಕೈ ಹಾಕುವುವುದಕ್ಕಿಂತ ಹೆಚ್ಚು ಪ್ರತಿಷ್ಠಿತ ಮತ್ತು ದೀರ್ಘಾವಧಿಯ ಪಾಲುದಾರರೊಂದಿಗೆ ತೊಡಗಿಸಿಕೊಳ್ಳುವುದು ಸೂಕ್ತ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಮುನ್ನ ಟೀಮ್ ಇಂಡಿಯಾ ಸದಸ್ಯರ ಅಭ್ಯಾಸ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಮುನ್ನ ಟೀಮ್ ಇಂಡಿಯಾ ಸದಸ್ಯರ ಅಭ್ಯಾಸ

ಐಪಿಎಲ್‌ ಸಂಭ್ರಮ ಮುಗಿಯಿತು. ಮುಂದಕ್ಕೆ ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳ ಕಣ್ಣು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಫೈನಲ್‌ ಪಂದ್ಯದತ್ತ ಸಾಗಲಿದೆ. ಆದರೆ, ಇದಕ್ಕೂ ಮುನ್ನ ಭಾರತಕ್ಕೆ ಸಣ್ಣ ಹಿನ್ನಡೆಯಾದಂತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಮ್‌ ಇಂಡಿಯಾ ಆಟಗಾರರ ಜೆರ್ಸಿಗೆ ಯಾವುದೇ ಪ್ರಾಯೋಜಕತ್ವವಿಲ್ಲದೆ ಕಣಕ್ಕಿಳಿಸಲು ಮುಂದಾಗಿದೆ.

ಐಪಿಎಲ್‌ನಲ್ಲಿ ಪ್ರತಿನಿಧಿಸಿದ್ದ ಭಾರತದ ಆಟಗಾರರು, ತಮ್ಮ ತಮ್ಮ ತಂಡಗಳ ಅಭಿಯಾನ ಮುಗಿದ ಬೆನ್ನಲ್ಲೇ ಡಬ್ಲ್ಯೂಟಿಸಿ ಫೈನಲ್‌ ಪಂದ್ಯದಲ್ಲಿ ಭಾಗಿಯಾಗುವ ಸಲುವಾಗಿ ಇಂಗ್ಲೆಂಡ್‌ಗೆ ಹಾರಿದ್ದಾರೆ. ಲಂಡನ್‌ನಲ್ಲಿ ಈಗಾಗಲೇ ಅನೇಕ ಆಟಗಾರರು ತರಬೇತಿ ಆರಂಭಿಸಿದ್ದಾರೆ. ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಕೂಡಾ ಮಂಗಳವಾರ ತಂಡ ಸೇರಿಕೊಂಡಿದ್ದಾರೆ. ಅಭ್ಯಾಸ ಅವಧಿಯ ವೇಳೆ ಭಾರತದ ಆಟಗಾರರು ಹೊಸ ಉಡುಪುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಉಡುಪುಗಳಲ್ಲಿ ಭಾರತ ತಂಡದ ಆಟಗಾರರ ಜೆರ್ಸಿ ಪ್ರಾಯೋಜಕತ್ವ ವಹಿಸಿದ ಹೊಸ ಪ್ರಾಯೋಜಕ ಅಡಿಡಾಸ್‌ ಕಂಪನಿಯ ಮೂರು ಪಟ್ಟಿಗಳಿರುವ ಲೋಗೋ ಮತ್ತು ಬಿಸಿಸಿಐ ಲೋಗೋ ಮಾತ್ರ ಕಾಣಿಸುತ್ತಿದೆ. ಉಳಿದಂತೆ ಜೆರ್ಸಿಯು ಖಾಲಿ ಖಾಲಿ ಕಾಣಿಸುತ್ತಿದೆ.

ಪ್ಯಾಯೋಜಕರ ಸಂಖ್ಯೆಯಲ್ಲಿ ಈ ರೀತಿಯ ಇಳಿಕೆ ಇಂದಿನ ಸಮಯದಲ್ಲಿ ಬಹಳ ಅಪರೂಪ. ಈ ಹಿಂದೆ ಜೆರ್ಸಿ ಪ್ರಾಯೋಜಕತ್ವ ವಹಿಸಿದ್ದ ಬೈಜುಸ್‌, ಪ್ರತಿಕೂಲ ಮಾರುಕಟ್ಟೆ ಪರಿಸ್ಥಿತಿಯಿಂದಾಗಿ ಬಿಸಿಸಿಐ ಜೊತೆಗಿನ ಒಪ್ಪಂದವನ್ನು ಕಳೆದ ಮಾರ್ಚ್‌ ತಿಂಗಳಲ್ಲಿ ಮೊಟಕುಗೊಳಿಸಿತ್ತು. ಒಪ್ಪಂದದ ಪ್ರಕಾರ, ಅದು ಈ ವರ್ಷದ ನವೆಂಬರ್‌ ತಿಂಗಳವರೆಗೆ ಮುಂದುವರೆಯಬೇಕಿತ್ತು.

ಬಿಸಿಸಿಐ ಅಧಿಕಾರಿಗಳು ದೀರ್ಘಾವಧಿಯ ಪ್ರಾಯೋಜಕತ್ವಕ್ಕೆ ಆಸಕ್ತ ಕಂಪನಿಗಳನ್ನು ಆಹ್ವಾನಿಸಲು ಟೆಂಡರ್‌ ನೀಡುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಕುರಿತು ನಡೆದ ಮಾತುಕತೆಗಳಲ್ಲಿ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗದ ಕಾರಣ ಜಾಹೀರಾತಿನೊಂದಿಗೆ ಮುಂದುವರೆಯಲಿಲ್ಲ. ಅಲ್ಪಾವಧಿಯ ಒಪ್ಪಂದಕ್ಕಾಗಿ ಕೆಲವು ಕಂಪನಿಗಳು ಮುಂದಾಗಿದ್ದವು. ಆದರೆ, ಬಿಸಿಸಿಐ ಇದಕ್ಕೆ ಆಸಕ್ತಿ ತೋರಲಿಲ್ಲ ಎಂದು ತಿಳಿದುಬಂದಿದೆ.

"ಕಡಿಮೆ ಘನತೆಯ ಒಪ್ಪಂದಕ್ಕೆ ಕೈ ಹಾಕುವುವುದಕ್ಕಿಂತ ಹೆಚ್ಚು ಪ್ರತಿಷ್ಠಿತ ಮತ್ತು ದೀರ್ಘಾವಧಿಯ ಪಾಲುದಾರರೊಂದಿಗೆ ತೊಡಗಿಸಿಕೊಳ್ಳುವುದು ಸೂಕ್ತ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹಿಂದಿನ ಒಪ್ಪಂದದಲ್ಲಿ, ಬಿಸಿಸಿಐ ಪ್ರತಿ ಐಸಿಸಿ ಪಂದ್ಯಕ್ಕೆ 1.5 ಕೋಟಿ ರೂಪಾಯಿ ಗಳಿಸುತ್ತಿತ್ತು. ಇದೇ ವೇಳೆ ದ್ವಿಪಕ್ಷೀಯ ಅಂತಾರಾಷ್ಟ್ರೀಯ ಪಂದ್ಯಕ್ಕೆ 4.6 ಕೋಟಿ ರೂಪಾಯಿ ಸಂಪಾದಿಸುತ್ತಿತ್ತು. ಕಾಲಾನಂತರದಲ್ಲಿ, ಐಸಿಸಿ ಪಂದ್ಯಗಳ ಪ್ರಾಮುಖ್ಯತೆ ಹೆಚ್ಚಾದಂತೆ ಬಿಸಿಸಿಐನ ನಿರೀಕ್ಷೆ ಕೂಡಾ ಹೆಚ್ಚಿದೆ. ಒಂದು ಪಂದ್ಯಕ್ಕೆ ಕೆಲವೇ ಕೆಲವು ಕೋಟಿಗಳ ಸಂಪಾದನೆಯು, ಶ್ರೀಮಂತ ಬಿಸಿಸಿಐಗೆ ಸಮುದ್ರದ ನೀರಿನಲ್ಲಿ ಒಂದು ಹನಿಯಂತಾಗಿದೆ. ಇದು ಸದ್ಯದ ವಾಸ್ತವ.

ಸದ್ಯ ಅಡಿಡಾಸ್‌ ಕಂಪನಿಯೊಂದಿಗಿನ ಐದು ವರ್ಷಗಳ ಒಪ್ಪಂದಕ್ಕೆ ಬಿಸಿಸಿಐ ಈಗಾಗಲೇ ಸಹಿ ಹಾಕಿದೆ. ಮುಂದಿನ ದಿನಗಳಲ್ಲಿ ಪ್ರಮುಖ ಟೂರ್ನಿಗಳು ನಡೆಯಲಿವೆ. ಅದರಲ್ಲಿ ತವರಿನಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್‌ ಕೂಡಾ ಸೇರಿದೆ. ಹೀಗಾಗಿ ಪ್ರಮುಖ ಟೂರ್ನಿಗಳಿಂದಾಗಿ ಟೀಮ್‌ ಇಂಡಿಯಾ ಜೆರ್ಸಿ ಪ್ರಾಯೋಜಕತ್ವಕ್ಕೆ ಪ್ರಾಯೋಕರು ಆಸಕ್ತಿ ವಹಿಸಬಹುದು ಎಂಬುದು ಬಿಸಿಸಿಐ ನಿರೀಕ್ಷೆ. ಅಲ್ಲದೆ ಆಡಿಡಾಸ್‌ ಕಂಪನಿಯು ಸೂಕ್ತ ಪಾಲುದಾರರು ಸಿಗಲು ನೆರವಾಗುತ್ತದೆ ಎಂಬ ಭರವಸೆಯೊಂದಿಗೆ ಮಂಡಳಿ ಇದೆ.

ಪ್ರಾಯೋಜಕರು ಹೆಚ್ಚು ಸಿಕ್ಕಂತೆಲ್ಲಾ, ಬಿಸಿಸಿಐಗೆ ಹಣದ ಹೊಳೆ ಹರಿಯಲಿದೆ. ಇದಕ್ಕೆ ಜೆರ್ಸಿಯಲ್ಲಿ ಹೆಚ್ಚು ಸಂಸ್ಥೆಗಳ ಲೋಗೋ ಕಾಣಬೇಕು. ಐಪಿಎಲ್‌ ಸಮಯದಲ್ಲಿ, ಮುಂಬೈ ಇಂಡಿಯನ್ಸ್‌ನಂತಹ ಪ್ರಮುಖ ಫ್ರಾಂಚೈಸಿಗಳು ಜೆರ್ಸಿ ಪ್ರಾಯೋಜಕತ್ವದಿಂದ ಒಂದೇ ಋತುವಿನಲ್ಲಿ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಮೊತ್ತ ಗಳಿಸುತ್ತವೆ. ಇದು ಬಿಸಿಸಿಐಗೆ ಕಷ್ಟದ ಕೆಲಸವೇನಲ್ಲ.