WTC Final: ಆಸ್ಟ್ರೇಲಿಯಾ ಹಿಡಿತದಲ್ಲಿ ಡಬ್ಲ್ಯೂಟಿಸಿ ಫೈನಲ್; ಮೂರನೇ ದಿನದಾಟದಲ್ಲಿ ಪುಟಿದೇಳಬೇಕಿದೆ ಭಾರತ
ಕನ್ನಡ ಸುದ್ದಿ  /  ಕ್ರೀಡೆ  /  Wtc Final: ಆಸ್ಟ್ರೇಲಿಯಾ ಹಿಡಿತದಲ್ಲಿ ಡಬ್ಲ್ಯೂಟಿಸಿ ಫೈನಲ್; ಮೂರನೇ ದಿನದಾಟದಲ್ಲಿ ಪುಟಿದೇಳಬೇಕಿದೆ ಭಾರತ

WTC Final: ಆಸ್ಟ್ರೇಲಿಯಾ ಹಿಡಿತದಲ್ಲಿ ಡಬ್ಲ್ಯೂಟಿಸಿ ಫೈನಲ್; ಮೂರನೇ ದಿನದಾಟದಲ್ಲಿ ಪುಟಿದೇಳಬೇಕಿದೆ ಭಾರತ

ರಹಾನೆ ಮತ್ತು ರವೀಂದ್ರ ಜಡೇಜಾ, ಕೆಲಕಾಲ ಕ್ರೀಸ್‌ಕಚ್ಚಿ ಬ್ಯಾಟ್‌ ಬೀಸಿದರು. ಈ ಜೋಡಿ ಐದನೇ ವಿಕೆಟ್‌ಗೆ 71 ರನ್‌ಗಳ ಜೊತೆಯಾಟ ನೀಡಿತು. ಸದ್ಯ 29 ರನ್‌ ಗಳಿಸಿರುವ ರಹಾನೆ, ಹಾಗೂ 5 ರನ್‌ ಗಳಿಸಿರುವ ಕೆಎಸ್‌ ಭರತ್‌, ಮೂರನೇ ದಿನದಾಟದಲ್ಲಿ ಬ್ಯಾಟಿಂಗ್‌ ಆರಂಭಿಸಲಿದ್ದಾರೆ.

ಅಜಿಂಕ್ಯಾ ರಹಾನೆ
ಅಜಿಂಕ್ಯಾ ರಹಾನೆ (Action Images via Reuters)

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ (World Test Championship final) ಪಂದ್ಯದ ಎರಡನೇ ದಿನದಾಟದ ಅಂತ್ಯದ ವೇಳೆಯೂ, ಆಸ್ಟ್ರೇಲಿಯಾ ಪಂದ್ಯದಲ್ಲಿ ಸಂಪೂರ್ಣ ಹಿಡಿದ ಸಾಧಿಸಿದೆ. ಮೊದಲ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ಕಾಂಗರೂಗಳು, ಗುರುವಾರ ಬೌಲಿಂಗ್‌ನಲ್ಲೂ ಕರಾರುವಕ್‌ ದಾಳಿ ನಡೆಸಿದರು. ಹೀಗಾಗಿ ಆಸೀಸ್‌ ಬೌಲಿಂಗ್‌ ದಾಳಿಗೆ ಕ್ರೀಸ್‌ಕಚ್ಚಿ ಆಡಲು ಭಾರತದ ಬ್ಯಾಟರ್‌ಗಳು ಪರದಾಡಿದ್ದಾರೆ.

ಆಸ್ಟ್ರೆಲಿಯಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್‌ಗಳಿಗೆ ಆಲೌಟ್‌ ಆಯ್ತು. ತನ್ನ ಪಾಲಿನ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತ, ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 151 ರನ್‌ ಗಳಿಸಲಷ್ಟೇ ಶಕ್ತವಾಗಿದೆ. ಸದ್ಯ ಭಾರತವು ಮೂರನೇ ದಿನದಾಟದಲ್ಲಿ ಬ್ಯಾಟಿಂಗ್‌ ಮುಂದುವರೆಸಲಿದ್ದು, ಬಲಿಷ್ಠ ಇನ್ನಿಂಗ್ಸ್ ಕಟ್ಟಬೇಕಾಗಿದೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳೆಲ್ಲರೂ ಪೆವಿಲಿಯನ್‌ ಸೇರಿಕೊಂಡಿದ್ದು, ರಹಾನೆ ಹಾಗೂ ಶ್ರೀಕರ್‌ ಭರತ್‌ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಹೀಗಾಗಿ ಎಲ್ಲಾ ನಿರೀಕ್ಷೆಗಳು ಈ ಇಬ್ಬರ ಮೇಲಿದೆ.

ಇನ್ನಿಂಗ್ಸ್‌ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್, ಭಾರತವನ್ನು ಉತ್ತಮವಾಗಿ ಮುನ್ನಡೆಸುವ ಸೂಚನೆ ಕೊಟ್ಟರು. ಆದರೆ, ಇವರಿಬ್ಬರೂ ಮೊದಲ 10 ಓವರ್‌ಗಳೊಳಗೆ ವಿಕೆಟ್‌ ಒಪ್ಪಿಸಿದರು. ನಾಯಕನ ಆಟ 15 ರನ್‌ಗಳಿಗೆ ಮುಕ್ತಾಯವಾದರೆ, ಗಿಲ್‌ 13 ರನ್‌ ಗಳಿಸಿ ಅಚ್ಚರಿಯ ರೀತಿಯಲ್ಲಿ ಬೋಲ್ಯಾಂಡ್‌ ಎಸೆತದಲ್ಲಿ ಬೌಲ್ಡ್‌ ಆದರು. ಆ ಬಳಿಕ ಬಂದ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ದಿನದ ಎರಡನೇ ಸೆಷನ್‌ನಲ್ಲಿ ವಿಕೆಟ್‌ ಕಳೆದುಕೊಳ್ಳದಂತೆ ಎಚ್ಚರಿಕೆಯ ಆಟವಾಡಿದರು. ಆದರೆ, ಮೂರನೇ ಅವಧಿಯ ಆರಂಭದಲ್ಲೇ ಪೂಜಾರ 14 ರನ್‌ ಗಳಿಸಿ ನಿರ್ಗಮಿಸಿದರು. ವಿರಾಟ್ ಕೊಹ್ಲಿ ಕೆಲಕಾಲ ಎದುರಾಳಿ ಬೌಲರ್‌ಗಳ ಮೇಲೆ ಸ್ವಲ್ಪ ಒತ್ತಡ ಬೀರಲು ಪ್ರಯತ್ನಿಸಿದರು. ಆದರೆ, ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿಕೊಂಡರು.

2022ರ ನಂತರ ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಅಜಿಂಕ್ಯ ರಹಾನೆ ಇಂದು ಅಜೇಯರಾಗಿ ಇನ್ನಿಂಗ್ಸ್‌ ಮುಗಿಸಿದ್ದಾರೆ. ರಹಾನೆ ಮತ್ತು ರವೀಂದ್ರ ಜಡೇಜಾ, ಕೆಲಕಾಲ ಕ್ರೀಸ್‌ಕಚ್ಚಿ ಬ್ಯಾಟ್‌ ಬೀಸಿದರು. ಈ ಜೋಡಿ ಐದನೇ ವಿಕೆಟ್‌ಗೆ 100 ಎಸೆತಗಳಲ್ಲಿ 71 ರನ್‌ಗಳ ಜೊತೆಯಾಟ ನೀಡಿತು. ಈ ನಡುವೆ 51 ಎಸೆತಗಳಲ್ಲಿ 48 ರನ್ ಗಳಿಸಿದ್ದ ಜಡೇಜಾ ನಾಥನ್ ಲಿಯಾನ್‌ಗೆ ವಿಕೆಟ್‌ ಒಪ್ಪಿಸಿದರು.

ಸದ್ಯ 29 ರನ್‌ ಗಳಿಸಿರುವ ರಹಾನೆ, ಹಾಗೂ 5 ರನ್‌ ಗಳಿಸಿರುವ ಕೆಎಸ್‌ ಭರತ್‌, ಮೂರನೇ ದಿನದಾಟದಲ್ಲಿ ಬ್ಯಾಟಿಂಗ್‌ ಆರಂಭಿಸಲಿದ್ದಾರೆ.

ಆಸೀಸ್‌ ಇನ್ನಿಂಗ್ಸ್‌

ಮೊದಲ ದಿನದಾಟದ ಅಂತ್ಯಕ್ಕೆ 327 ರನ್ ಕಲೆಹಾಕಿದ್ದ ಆಸೀಸ್‌, ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಡಿತ್ತು. ಎರಡನೇ ದಿನದ ಮೊದಲ ಅವಧಿಯಲ್ಲೇ, ಆಸೀಸ್‌ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಮೊದಲ ದಿನದಾಟದಲ್ಲಿ ಶತಕ ಸಿಡಿಸಿದ್ದ ಹೆಡ್, ಅಂತಿಮವಾಗಿ 174 ಎಸೆತಗಳಲ್ಲಿ 25 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 163 ರನ್ ಗಳಿಸಿ ಔಟಾದರು. ಅವರ ಬೆನ್ನಲ್ಲೇ ಕ್ಯಾಮರೂನ್‌ ಗ್ರೀನ್‌ 6 ರನ್‌ ಗಳಿಸಿ ನಿರ್ಗಮಿಸಿದರು. ಇನ್ನಿಂಗ್ಸ್‌ನ ಆರಂಭದಲ್ಲೇ ಶತಕ ಸಿಡಿಸಿದ ಸ್ಟೀವ್‌ ಸ್ಮಿತ್‌, 229 ಎಸೆತಗಳಿಂದ ತಮ್ಮ ಶತಕವನ್ನು ಪೂರೈಸಿದರು. ಅಂತಿಮವಾಗಿ ಅವರು 121 ರನ್‌ ಕಲೆ ಹಾಕಿ ಠಾಕೂರ್‌ ಎಸೆತದಲ್ಲಿ ಔಟಾದರು.

ಪ್ಯಾಟ್ ಕಮ್ಮಿನ್ಸ್ ಕೊನೆಯವರಾಗಿ ಔಟಾಗುವುದರೊಂದಿಗೆ ಆಸ್ಟ್ರೇಲಿಯಾ ಇನ್ನಿಂಗ್ಸ್‌ ಮುಕ್ತಾಯವಾಯ್ತು. ಸಿರಾಜ್‌ ಎಸೆತದ ವೇಳೆ ಎಕ್ಸ್‌ಟ್ರಾ ಕವರ್‌ನಲ್ಲಿ ಅಜಿಂಕ್ಯ ರಹಾನೆ ತಮ್ಮ 100ನೇ ಟೆಸ್ಟ್ ಕ್ಯಾಚ್ ಹಿಡಿಯುವ ಮೂಲಕ, ಕಮಿನ್ಸ್‌ ವಿಕೆಟ್‌ ಒಪ್ಪಿಸಿದರು.

ಒಟ್ಟು ನಾಲ್ಕು ವಿಕೆಟ್‌ ಪಡೆದ ಸಿರಾಜ್, ಟೀಮ್‌ ಇಂಡಿಯಾ ಪರ ಹೆಚ್ಚು ವಿಕೆಟ್‌ ಕಬಳಿಸಿದರು.‌ ಈ ನಡುವೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 50 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದರು. ಶಮಿ ಮತ್ತು ಠಾಕೂರ್‌ ತಲಾ ಎರಡು ವಿಕೆಟ್‌ ಪಡೆದರು. ಜಡೇಜಾ ಒಂದು ವಿಕೆಟ್‌ ಪಡೆದರು.

Whats_app_banner