WTC Final: ಸಿರಾಜ್ ಬಿಗಿ ಬೌಲಿಂಗ್ ದಾಳಿ; ಬೃಹತ್ ಮೊತ್ತ ಕಲೆ ಹಾಕಿ ಆಸ್ಟ್ರೇಲಿಯಾ ಆಲೌಟ್
ಕನ್ನಡ ಸುದ್ದಿ  /  ಕ್ರೀಡೆ  /  Wtc Final: ಸಿರಾಜ್ ಬಿಗಿ ಬೌಲಿಂಗ್ ದಾಳಿ; ಬೃಹತ್ ಮೊತ್ತ ಕಲೆ ಹಾಕಿ ಆಸ್ಟ್ರೇಲಿಯಾ ಆಲೌಟ್

WTC Final: ಸಿರಾಜ್ ಬಿಗಿ ಬೌಲಿಂಗ್ ದಾಳಿ; ಬೃಹತ್ ಮೊತ್ತ ಕಲೆ ಹಾಕಿ ಆಸ್ಟ್ರೇಲಿಯಾ ಆಲೌಟ್

WTC Final 2023: ನಾಲ್ಕು ವಿಕೆಟ್‌ ಪಡೆದ ಸಿರಾಜ್, ಟೀಮ್‌ ಇಂಡಿಯಾ ಪರ ಹೆಚ್ಚು ವಿಕೆಟ್‌ ಕಬಳಿಸಿದರು.‌ ಈ ನಡುವೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 50 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದರು. ಶಮಿ ಮತ್ತು ಠಾಕೂರ್‌ ತಲಾ ಎರಡು ವಿಕೆಟ್‌ ಪಡೆದರು.

ಭಾರತದ ಆಟಗಾರರ ಸಂಭ್ರಮ
ಭಾರತದ ಆಟಗಾರರ ಸಂಭ್ರಮ (AP)

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ (World Test Championship final) ಪಂದ್ಯದ ಎರಡನೇ ದಿನದಾಟದಲ್ಲಿ‌, ಆಸ್ಟ್ರೇಲಿಯಾ ತಂಡವು ಬೃಹತ್‌ ಮೊತ್ತ ಪೇರಿಸಿ ಆಲೌಟ್‌ ಆಗಿದೆ. ಎರಡನೇ ದಿನದಾಟದಲ್ಲಿ ಭಾರತದ ಬೌಲರ್‌ಗಳು ಮೇಲುಗೈ ಸಾಧಿಸಿದರು. ಟೀಮ್‌ ಇಂಡಿಯಾ ಪರ ಮೊಹಮ್ಮದ್‌ ಸಿರಾಜ್‌ ನಾಲ್ಕು ವಿಕೆಟ್‌ಗಳನ್ನು ಕಬಳಿಸದ್ದಾರೆ. ಅಂತಿಮವಾಗಿ ಆಸ್ಟ್ರೇಲಿಯಾ 121.3 ಓವರ್‌ಗಳಲ್ಲಿ 469 ರನ್‌ ಗಳಿಸಿ, ಮೊದಲ ಇನ್ನಿಂಗ್ಸ್‌ ಮುಗಿಸಿದೆ.

ಇಂಗ್ಲೆಂಡ್‌ನ ದಿ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಡಬ್ಲ್ಯೂಟಿಸಿ ಫೈನಲ್‌ (WTC final) ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 327 ರನ್ ಕಲೆಹಾಕಿದ್ದ ಆಸೀಸ್‌, ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಡಿತ್ತು. ಟ್ರಾವಿಸ್ ಹೆಡ್ ಮತ್ತು ಸ್ಟೀವ್‌ ಸ್ಮಿತ್‌ ಭರ್ಜರಿ ದ್ವಿಶತಕದ ಜೊತೆಯಾಟವು ತಂಡದ ಮೊತ್ತ ಹೆಚ್ಚಿಸಲು ನೆರವಾಯ್ತು.

ಎರಡನೇ ದಿನದ ಮೊದಲ ಅವಧಿಯಲ್ಲೇ, ಆಸೀಸ್‌ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಮೊದಲ ದಿನದಾಟದಲ್ಲಿ ಶತಕ ಸಿಡಿಸಿದ್ದ ಹೆಡ್, ಅಂತಿಮವಾಗಿ 174 ಎಸೆತಗಳಲ್ಲಿ 25 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 163 ರನ್ ಗಳಿಸಿ ಔಟಾದರು. ಮೊಹಮ್ಮದ್ ಸಿರಾಜ್ ಎಸೆತದಲ್ಲಿ ವಿಕೆಟ್‌ ಕೀಪರ್‌ ಕೆಎಸ್ ಭರತ್‌ಗೆ ಕ್ಯಾಚ್‌ ನೀಡಿ ಹೆಡ್‌ ಔಟಾದರು. ಅವರ ಬೆನ್ನಲ್ಲೇ ಕ್ಯಾಮರೂನ್‌ ಗ್ರೀನ್‌ 6 ರನ್‌ ಗಳಿಸಿ ನಿರ್ಗಮಿಸಿದರು. ಇನ್ನಿಂಗ್ಸ್‌ನ ಆರಂಭದಲ್ಲೇ ಶತಕ ಸಿಡಿಸಿದ ಸ್ಟೀವ್‌ ಸ್ಮಿತ್‌, 229 ಎಸೆತಗಳಿಂದ ತಮ್ಮ ಶತಕವನ್ನು ಪೂರೈಸಿದರು. ಅಂತಿಮವಾಗಿ ಅವರು 121 ರನ್‌ ಕಲೆ ಹಾಕಿ ಠಾಕೂರ್‌ ಎಸೆತದಲ್ಲಿ ಔಟಾದರು.

ಬದಲಿ ಫೀಲ್ಡರ್‌ ಆಗಿ ಮೈದಾನಕ್ಕೆ ಬಂದ ಅಕ್ಷರ್ ಪಟೇಲ್, ಚಂಗನೆ ಹಾರಿ ಸ್ಟಂಪ್‌ಗೆ ಚೆಂಡು ಎಸೆದು ಮಿಚೆಲ್ ಸ್ಟಾರ್ಕ್ ಅವರನ್ನು ರನ್ ಔಟ್ ಮಾಡಿದರು. ಆ ಬಳಿಕ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಅಲೆಕ್ಸ್ ಕ್ಯಾರಿ ಜೊತೆಗೂಡಿ ಅರ್ಧಶತಕದ ಜೊತೆಯಾಟವಾಡಿದರು. 48 ರನ್‌ ಗಳಿಸಿದ ಕ್ಯಾರಿ, ಜಡೇಜಾಗೆ ವಿಕೆಟ್‌ ಒಪ್ಪಿಸಿದರು. ಆ ಬಳಿಕ ಲಿಯಾನ್ 9 ರನ್‌ ಗಳಿಸಿ ಔಟಾದರು.

ಪ್ಯಾಟ್ ಕಮ್ಮಿನ್ಸ್ ಕೊನೆಯವರಾಗಿ ಔಟಾಗುವುದರೊಂದಿಗೆ ಆಸ್ಟ್ರೇಲಿಯಾ ಇನ್ನಿಂಗ್ಸ್‌ ಮುಕ್ತಾಯವಾಯ್ತು. ಸಿರಾಜ್‌ ಎಸೆತದ ವೇಳೆ ಎಕ್ಸ್‌ಟ್ರಾ ಕವರ್‌ನಲ್ಲಿ ಅಜಿಂಕ್ಯ ರಹಾನೆ ತಮ್ಮ 100ನೇ ಟೆಸ್ಟ್ ಕ್ಯಾಚ್ ಹಿಡಿಯುವ ಮೂಲಕ, ಕಮಿನ್ಸ್‌ ವಿಕೆಟ್‌ ಒಪ್ಪಿಸಿದರು.

ಒಟ್ಟು ನಾಲ್ಕು ವಿಕೆಟ್‌ ಪಡೆದ ಸಿರಾಜ್, ಟೀಮ್‌ ಇಂಡಿಯಾ ಪರ ಹೆಚ್ಚು ವಿಕೆಟ್‌ ಕಬಳಿಸಿದರು.‌ ಈ ನಡುವೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 50 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದರು. ಶಮಿ ಮತ್ತು ಠಾಕೂರ್‌ ತಲಾ ಎರಡು ವಿಕೆಟ್‌ ಪಡೆದರು. ಜಡೇಜಾ ಒಂದು ವಿಕೆಟ್‌ ಪಡೆದರು.

ಇಂದಿನ ದಿನದಾಟದಲ್ಲಿ ಟ್ರಾವಿಸ್ ಹೆಡ್ 150 ರನ್‌ಗಳ ಗಡಿ ದಾಟಿದರು. ಆಸ್ಟ್ರೇಲಿಯಾದ ಮಾಜಿ ಬ್ಯಾಟರ್‌ ಶೇನ್ ವ್ಯಾಟ್ಸನ್ ನಂತರ, ಇಂಗ್ಲೆಂಡ್‌ನ ಓವಲ್‌ ಮೈದಾನದಲ್ಲಿ 150 ರನ್ ಸಿಡಿಸಿದ ಎರಡನೇ ಆಸೀಸ್‌ ಬ್ಯಾಟರ್‌ ಎಂಬ ಖ್ಯಾತಿಗೆ ಟ್ರಾವಿಸ್ ಹೆಡ್ ಪಾತ್ರರಾಗಿದ್ದಾರೆ. ವಿಕೆಟ್‌ ಒಪ್ಪಿಸುವುದಕ್ಕೂ ಮುನ್ನ ಸ್ಟೀವ್ ಸ್ಮಿತ್ ಅವರೊಂದಿಗೆ ಹೆಡ್ ದಾಖಲೆಯ ಜೊತೆಯಾಟವಾಡಿದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿಯು 285 ರನ್‌ಗಳ ಬೃಹತ್‌ ಜೊತೆಯಾಟವಾಡಿದರು.

ಮೊದಲ ದಿನದಾಟದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ, ಆರಂಭದಲ್ಲೇ ಪ್ರಮುಖ ಬ್ಯಾಟರ್‌ ಉಸ್ಮಾನ್‌ ಖವಾಜಾ ವಿಕೆಟ್‌ ಕಳೆದುಕೊಂಡಿತು. ಒಂದು ಹಂತದಲ್ಲಿ ಪ್ಯಾಟ್ ಕಮ್ಮಿನ್ಸ್ ಬಳಗವು ಕೇವಲ 76 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ, ಸ್ಮಿತ್‌ ಹಾಗೂ ಹೆಡ್ ದ್ವಿಶತಕದ ಜೊತೆಯಾಟದ ನೆರವಿನಿಂದ ತಂಡದ ಮೊತ್ತ ಹೆಚ್ಚಿತು.‌

Whats_app_banner