ಕನ್ನಡ ಸುದ್ದಿ  /  Sports  /  Cricket News Wtc Final 2023 Irfan Pathan Warns Australia On Virat Kohli World Test Championship Final Team India Jra

Irfan Pathan: ಹಳೆ ಕೊಹ್ಲಿ ಅಂತಾ ಕನ್ಫ್ಯೂಸ್ ಆಗ್ಬೇಡಿ, ಈಗ ವಿರಾಟ್ ರೂಪ ವಿಭಿನ್ನ; ಆಸ್ಟ್ರೇಲಿಯಾಗೆ ಪಠಾಣ್ ಎಚ್ಚರಿಕೆ

WTC Final 2023: ಡಬ್ಲ್ಯೂಟಿಸಿ ಫೈನಲ್‌ಗೂ ಮುಂಚಿತವಾಗಿ ಆಸ್ಟ್ರೇಲಿಯಾ ತಂಡಕ್ಕೆ ಇರ್ಫಾನ್ ಪಠಾಣ್ ಎಚ್ಚರಿಕೆ ನೀಡಿದ್ದಾರೆ.

ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ (ICC Twitter)

ಕೊಹ್ಲಿ ಬ್ಯಾಟ್‌ನಿಂದ ಇತ್ತೀಚೆಗೆ ಯಥೇಚ್ಛವಾಗಿ ರನ್‌ ಮಳೆ ಹರಿದು ಬರುತ್ತಿದೆ. ರನ್‌ ಹಾಗೂ ಶತಕಗಳ ಬರಗಾಲ ಕೊನೆಯಾಗಿ ಹಲವು ತಿಂಗಳುಗಳೇ ಕಳೆದಿವೆ. ವಿರಾಟ್ ಕೊಹ್ಲಿ (Virat Kohli) ತಮ್ಮ ಹಳೆಯ ಖದರ್‌ ತೋರಿಸುತ್ತಿದ್ದು, ಈ ಬಾರಿಯ ಐಪಿಎಲ್‌ನಲ್ಲಿಯೂ ಅಬ್ಬರಿಸಿದ್ದಾರೆ. ಸದ್ಯ ಬುಧವಾರದಿಂದ ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿಯೂ (World Test Championship Final) ಅಬ್ಬರಿಸಲು ಕಿಂಗ್‌ ಕೊಹ್ಲಿ ಸಜ್ಜಾಗಿದ್ದಾರೆ.

ಕೊಹ್ಲಿ ಬಲಿಷ್ಠ ಫಾರ್ಮ್‌ನಲ್ಲಿ ಇರುವ ಹಿನ್ನೆಲೆಯಲ್ಲಿ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ಡಬ್ಲ್ಯೂಟಿಸಿ ಫೈನಲ್‌ ಎದುರಾಳಿ ಆಸ್ಟ್ರೇಲಿಯಾಗೆ ಎಚ್ಚರಿಕೆ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಇದ್ದ ಕೊಹ್ಲಿ, ಈ ಆವೃತ್ತಿಯಲ್ಲೂ ಇದ್ದಾರೆ ಎಂದು ಗೊಂದಲಕ್ಕೊಳಗಾಗಬೇಡಿ. ಚೊಚ್ಚಲ ಡಬ್ಲ್ಯುಟಿಸಿ ಫೈನಲ್‌ ಆವೃತ್ತಿಯಲ್ಲಿ ಭಾರತ ಫೈನಲ್ ತಲುಪಿದ್ದಾಗ ಕೊಹ್ಲಿ‌ ಟೀಮ್‌ ಇಂಡಿಯಾ ನಾಯಕರಾಗಿದ್ದರು. ಆದರೆ ಪ್ರಶಸ್ತಿ ಹಣಾಹಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿತು. ಆಗ, ಕೊಹ್ಲಿ ಬ್ಯಾಟ್‌ ಅಷ್ಟೊಂದು ಸದ್ದು ಮಾಡುತ್ತಿರಲಿಲ್ಲ. ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಅವರಿಂದ ಆಗುತ್ತಿರಲಿಲ್ಲ. ಹೀಗಾಗಿ ಕಿವೀಸ್‌ ವಿರುದ್ಧದ ಸೋಲು ವಿರಾಟ್‌ ಹಾಗೂ ಭಾರತಕ್ಕೆ ಭಾರಿ ನೋವುಂಟುಮಾಡಿತ್ತು.

ತಮ್ಮ ಎಲ್ಲಾ ರೀತಿಯ ಫಾರ್ಮ್‌ ಸಮಸ್ಯೆ ಹಾಗೂ ರನ್‌ ಬರಕ್ಕೆ ಕೊಹ್ಲಿ ಉತ್ತರ ಕಂಡುಕೊಂಡಿದ್ದಾರೆ. ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ಅವರು, ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಇತ್ತೀಚೆಗೆ ಮುಗಿದ ಐಪಿಎಲ್‌ ಆವೃತ್ತಿಯಲ್ಲೂ ಅಮೋಘ ಪ್ರದರ್ಶನ ನೀಡಿದರು. ಮೇಲಿಂದ ಮೇಲೆ ಎರಡು ಶತಕ ಸೇರಿದಂತೆ 639 ರನ್‌ ಕಲೆ ಹಾಕಿದರು. ಹೀಗಾಗಿ, ಕೊಹ್ಲಿ 2021ರಲ್ಲಿ ಇದ್ದಂತೆ ಈ ಬಾರಿಯೂ ಇರುತ್ತಾರೆ ಎಂದು ಆಸ್ಟ್ರೇಲಿಯಾ ತಪ್ಪಾಗಿ ಭಾವಿಸುವಂತಿಲ್ಲ. ಕೊಹ್ಲಿ ಕಾಂಗರೂಗಳನ್ನು ಚೂರುಚೂರು ಮಾಡುತ್ತಾರೆ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕನೇ ಕ್ರಮಾಂಕ ಭಾರತಕ್ಕೆ ಅತ್ಯಂತ ನಿರ್ಣಾಯಕ

“ಇದು ಸಂಪೂರ್ಣ ವಿಭಿನ್ನ ವಿರಾಟ್ ಕೊಹ್ಲಿ. ಅವರು ಸಾಕಷ್ಟು ರನ್ ಗಳಿಸಿದ್ದಾರೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಟೆಸ್ಟ್, ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಶತಕ ಸಿಡಿಸಿದ್ದಾರೆ. ಹೀಗಾಗಿ ಶತಕಗಳ ಬರವೂ ನೀಗಿದೆ. ವಿರಾಟ್ ಕೊಹ್ಲಿ ಅತ್ಯಂತ ಆತ್ಮವಿಶ್ವಾಸದ ಆಟಗಾರ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅದು ಹೇಗೆ ಸಾಧ್ಯವಾಯ್ತು? ಅವರ ಸಾಮರ್ಥ್ಯದ ಮೇಲೆ ಅವರಿಗಿರುವ ವಿಶ್ವಾಸದಿಂದ. ಅವರು ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವುದು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ” ಎಂದು ಪಠಾಣ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.

ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಕೇವಲ 24 ಪಂದ್ಯಗಳಲ್ಲಿ 48.27ರ ಸರಾಸರಿಯಲ್ಲಿ 1979 ರನ್‌ಗಳನ್ನು ಕಲೆ ಹಾಕಿದ್ದಾರೆ. ಅದರಲ್ಲಿ ಎಂಟು ಶತಕಗಳು ಸೇರಿವೆ. ಟೆಸ್ಟ್‌ನಲ್ಲಿ ಇತರ ತಂಡಗಳಿಗೆ ಹೋಲಿಸಿದರೆ ಆಸೀಸ್ ವಿರುದ್ಧವೇ ಕೊಹ್ಲಿಯ ದಾಖಲೆ ಹೆಚ್ಚಿದೆ.

ಡಬ್ಲ್ಯೂಟಿಸಿ ಫೈನಲ್ ಪಂದ್ಯವು ಜೂನ್ 7ರಿಂದ 11ರವರೆಗೆ ನಡೆಯಲಿದೆ. ಈ ಪಂದ್ಯವು ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನ ದಿ ಓವಲ್‌ ಮೈದಾನದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಫೈನಲ್ ಪಂದ್ಯವು ಮಧ್ಯಾಹ್ನ 03:00 ಗಂಟೆಗೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆಯು ಮಧ್ಯಾಹ್ನ 02:30ಕ್ಕೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.