ಕನ್ನಡ ಸುದ್ದಿ  /  ಕ್ರೀಡೆ  /  Wtc Final 2023: ಕೆಎಸ್ ಭರತ್ ವಿಕೆಟ್ ಕೀಪರ್; ಡಬ್ಲ್ಯೂಟಿಸಿ ಫೈನಲ್‌ಗೆ ಭಾರತ ಸಂಭಾವ್ಯ ಆಡುವ ಬಳಗ ಹೀಗಿದೆ

WTC final 2023: ಕೆಎಸ್ ಭರತ್ ವಿಕೆಟ್ ಕೀಪರ್; ಡಬ್ಲ್ಯೂಟಿಸಿ ಫೈನಲ್‌ಗೆ ಭಾರತ ಸಂಭಾವ್ಯ ಆಡುವ ಬಳಗ ಹೀಗಿದೆ

Ishan Kishan: ದಿ ಓವಲ್‌ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯದಲ್ಲಿ ಇಶಾನ್ ಕಿಶನ್ ಆಡುವ ಸಾಧ್ಯತೆ ಇಲ್ಲ.

ಡಬ್ಲ್ಯೂಟಿಸಿ ಫೈನಲ್‌ಗೆ ಭಾರತ ಸಂಭಾವ್ಯ ತಂಡ ಹೀಗಿದೆ
ಡಬ್ಲ್ಯೂಟಿಸಿ ಫೈನಲ್‌ಗೆ ಭಾರತ ಸಂಭಾವ್ಯ ತಂಡ ಹೀಗಿದೆ (Reuters-ANI)

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ (WTC Final 2023) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅದಕ್ಕೂ ಮುನ್ನ ಹಲವು ಪ್ರಶ್ನೆ ಹಾಗೂ ಗೊಂದಲಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಭಾರತದ ವಿಕೆಟ್ ಕೀಪರ್‌ ಯಾರಾಗಲಿದ್ದಾರೆ? ಕೆಎಸ್ ಭರತ್ ಮತ್ತು ಇಶಾನ್ ಕಿಶನ್, ಇವರಿಬ್ಬರಲ್ಲಿ ತಂಡದ ಆಯ್ಕೆ ಯಾರು? ಓವಲ್ ಮೈದಾನದಲ್ಲಿ ಭಾರತದ ಬೌಲಿಂಗ್ ಸಂಯೋಜನೆ ಹೇಗಿರಲಿದೆ? ಸ್ಪಿನ್ನರ್‌ಗಳು ಮತ್ತು ವೇಗಿಗಳ ಸಂಯೋಜನೆ ಹೇಗಿರಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಬುಧವಾರ ಸ್ಪಷ್ಟ ಉತ್ತರ ಸಿಗಲಿದೆ. ದಿ ಓವಲ್‌ ಮೈದಾನಲ್ಲಿ ಬುಧವಾರ (ಜೂನ್‌ 7ರಂದು ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯಕ್ಕೆ ಭಾರತದ ಬಲಿಷ್ಠ ಆಡುವ ಬಳಗ ಸಿದ್ಧವಾಗಬೇಕಿದೆ.

ಟ್ರೆಂಡಿಂಗ್​ ಸುದ್ದಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಅಗ್ರ ಶ್ರೇಯಾಂಕದ ಭಾರತ ತಂಡವು ಆಘಾತ ಅನುಭವಿಸಿತ್ತು. 2021ರ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತು ಕಪ್‌ ಗೆಲ್ಲುವಲ್ಲಿ ಎಡವಿತ್ತು. ಭಾರತವು ಕೊನೆಯದಾಗಿ ಐಸಿಸಿ ಟ್ರೋಫಿಯನ್ನು ಗೆದ್ದು ಒಂದು ದಶಕ ಕಳೆದಿದೆ. ಇದೀಗ ಮತ್ತೆ ಭಾರತ ತಂಡವು ಸತತ ಎರಡನೇ ಬಾರಿ ಡಬ್ಲ್ಯೂಟಿಸಿ ಫೈನಲ್‌ ಪ್ರವೇಶಿಸಿದ್ದು, ಐಸಿಸಿ ಟ್ರೋಫಿ ಬರ ನೀಗಿಸುವ ವಿಶ್ವಾಸದಲ್ಲಿದೆ.

ತವರಿನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಭಾರತ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯದಲ್ಲಿ ಮತ್ತೆ ಅದೇ ತಂಡದೊಂದಿಗೆ ಕಾದಾಡಲಿದೆ. ಹೀಗಾಗಿ ಬಹುತೇಕ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಸರಣಿಯಲ್ಲಿ ಆಡಿದ ತಂಡವೇ ಇಲ್ಲಿಯೂ ಕಣಕ್ಕಿಳಿಯುವ ಸಾಧ್ಯತೆ ಇದೆ.

ಭರತ್ vs ಕಿಶನ್

ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಬಲಿಷ್ಠ ಆಟಗಾರರು ಭಾರತ ತಂಡದೊಂದಿಗೆ ಇಲ್ಲ. ಹೀಗಾಗಿ ತಂಡದಲ್ಲಿ ಪಂತ್ ಬದಲಿಗೆ ವಿಕೆಟ್ ಕೀಪರ್ ಸ್ಥಾನವನ್ನು ಭರತ್ ಅಲಂಕರಿಸಿದ್ದಾರೆ. ಆದರೆ ಅವರಿನ್ನೂ ತಮ್ಮ ಸ್ಥಾನವನ್ನು ಭದ್ರಪಡಿಸಿಲ್ಲ. ಭರತ್ ಮತ್ತು ಕಿಶನ್ ಇಬ್ಬರಿಗೂ ಇಂಗ್ಲೆಂಡ್‌ನಲ್ಲಿ ಆಡಿದ ಅನುಭವ ಇಲ್ಲ. ಡಬ್ಲ್ಯುಟಿಸಿ ಫೈನಲ್‌ ಮೂಲಕ ಟೆಸ್ಟ್‌ಗೆ ಪದಾರ್ಪಣೆ ಮಾಡಲು ಕಿಶನ್‌ಗೆ ಅವಕಾಶ ನೀಡಿದರೆ, ಮ್ಯಾನೇಜ್‌ಮೆಂಟ್‌ ಕಡೆಯಿಂದ ಅದು ದಿಟ್ಟ ನಿರ್ಧಾರವಾಗಲಿದೆ. ಅತ್ತ ಈಗಾಗಲೇ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಆಡಿದ ಅನುಭವ ಹೊಂದಿರುವ ಭರತ್‌ ತಮ್ಮ ಸ್ಥಾನವನ್ನು ಇಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಇನ್ ಫಾರ್ಮ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ಶುಬ್ಮನ್ ಗಿಲ್‌ ಅವರೊಂದಿಗೆ ಭಾರತದ ವಿಶ್ವ ದರ್ಜೆಯ ಬ್ಯಾಟಿಂಗ್ ಲೈನ್‌ಅಪ್ ಅನ್ನು ನಾಯಕ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಐಪಿಎಲ್‌ನಲ್ಲಿ ಯಶಸ್ವಿ ಪ್ರದರ್ಶನ ನೀಡಿದ ಅನುಭವಿ ಅಜಿಂಕ್ಯ ರಹಾನೆ, ತಮ್ಮ ಸ್ಥಾನವನ್ನು ಮತ್ತೆ ಪಡೆಯುವ ನಿರೀಕ್ಷೆಯಿದೆ. 2021ರ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿದಾಗ, ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಇಬ್ಬರೂ ಭಾರತದ ಆಡುವ ಬಳಗದಲ್ಲಿದ್ದರು. ಅನುಭವ ಆಧಾರದಲ್ಲಿ ಇವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ.

ಹಿರಿಯ ವೇಗಿ ಉಮೇಶ್ ಯಾದವ್ ಅವರು ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರ ವೇಗದ ಬೌಲಿಂಗ್‌ಗೆ ಜೊತೆಯಾಗಬಹುದು. ಒಂದು ವೇಳೆ, ಅಗ್ರ ಶ್ರೇಯಾಂಕಿತ ಎರಡು ತಂಡಗಳ ನಡುವಿನ ಪಂದ್ಯಕ್ಕೆ ಉಮೇಶ್ ಅವರನ್ನು ಪರಿಗಣಿಸದಿದ್ದರೆ, ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಆಡುವ ಬಳಗಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

ಭಾರತದ ಸಂಭಾವ್ಯ ಆಡುವ ಬಳಗ

ಆರಂಭಿಕರು: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್,

ಮಧ್ಯಮ ಕ್ರಮಾಂಕ: ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್‌ ಕೀಪರ್),

ಆಲ್ ರೌಂಡರ್‌ಗಳು: ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್,

ಬೌಲರ್‌ಗಳು: ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮೇಶ್ ಯಾದವ್/ಶಾರ್ದೂಲ್ ಠಾಕೂರ್.