ಕನ್ನಡ ಸುದ್ದಿ  /  Sports  /  Cricket News Wtc Final 2023 Sanjay Manjrekar On Rohit Sharma Form Ahead Of World Test Championship Final Jra

Sanjay Manjrekar: ಕಳೆದ ಐಪಿಎಲ್ ಆವೃತ್ತಿಯಲ್ಲೂ ರೋಹಿತ್ ಫಾರ್ಮ್ ಕಳೆದುಕೊಂಡಿದ್ದರು; ನಾಯಕನ ಬಗ್ಗೆ ಮಂಜ್ರೇಕರ್ ಕಾಳಜಿ

WTC final 2023: ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ಗೂ ಮುಂಚಿತವಾಗಿ ರೋಹಿತ್ ಶರ್ಮಾ ಅವರ ಫಾರ್ಮ್‌ ಕುರಿತು ಮಾತನಾಡಿದ್ದಾರೆ.

ರೋಹಿತ್‌ ಶರ್ಮಾ
ರೋಹಿತ್‌ ಶರ್ಮಾ (BCCI)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ (World Test Championship final) ಪಂದ್ಯದಲ್ಲಿ ಆಡಲು ಭಾರತ ತಂಡವು ಇಂಗ್ಲೆಂಡ್‌ಗೆ ಹಾರಿದೆ. ಜೂನ್ 7ರಂದು ಆಸ್ಟ್ರೇಲಿಯಾ (India vs Australia) ವಿರುದ್ಧ ದಿ ಓವಲ್‌ ಮೈದಾನದಲ್ಲಿ ಪಂದ್ಯ ಆರಂಭವಾಗಲಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು 2021ರ ಡಬ್ಲ್ಯೂಟಿಸಿ ಫೈನಲ್‌ (WTC final 2023) ಪಂದ್ಯದಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿತ್ತು. ಉದ್ಘಾಟನಾ ಆವೃತ್ತಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಸೋಲನುಭವಿಸಿತ್ತು.‌ ಇದೀಗ ಮತ್ತೊಮ್ಮೆ ಫೈನಲ್‌ ಪಂದ್ಯ ಆಡುತ್ತಿರುವ ಭಾರತಕ್ಕೆ ಪ್ರಮುಖ ಸವಾಲೊಂದಿದೆ. ಅದುವೇ ನಾಯಕ ರೋಹಿತ್ ಶರ್ಮಾ ಅವರ ಫಾರ್ಮ್.

ಭಾರತ ತಂಡದ 36 ವರ್ಷದ ಆರಂಭಿಕ ಆಟಗಾರ, 2023ರ ಐಪಿಎಲ್‌ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನ ನೀಡಿಲ್ಲ. ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಅವರು ಪ್ಲೇಆಫ್‌ ಹಂತಕ್ಕೆ ಮುನ್ನಡೆಸಿದ್ದರೂ, ರೋಹಿತ್ ಅವರ ಬ್ಯಾಟ್‌ ಮಾತ್ರ ಸದ್ದು ಮಾಡಿಲ್ಲ. ತಂಡದ ಪರ 16 ಪಂದ್ಯಗಳಲ್ಲಿ ಆಡಿದ ಹಿಟ್‌ಮ್ಯಾನ್, 20.75ರ ಕಳಪೆ ಸರಾಸರಿಯಲ್ಲಿ ಬ್ಯಾಟ್‌ ಬೀಸಿ 332 ರನ್ ಮಾತ್ರ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 132.80. ಇದು ಸದ್ಯ ಭಾರತ ತಂಡ್‌ ಚಿಂತೆಗೆ ಕಾರಣವಾಗಿದೆ. ಅಲ್ಲದೆ ಅಭಿಮಾನಿಗಳು ಕೂಡಾ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.

ಐಪಿಎಲ್‌ನಲ್ಲಿ ರೋಹಿತ್‌ ಶರ್ಮಾ ಕಳಪೆ ಪ್ರದರ್ಶನ ತೋರಿದ್ದರೂ, ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಅವರು ಹಿಟ್‌ಮ್ಯಾನ್‌ ಫಾರ್ಮ್ ಕುರಿತು ಟೀಮ್ ಮ್ಯಾನೇಜ್‌ಮೆಂಟ್ ಚಿಂತಿಸಬಾರದು ಎಂದು ಹೇಳಿದ್ದಾರೆ. ಆರಂಭಿಕ ಆಟಗಾರನು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಲಯ ಕಂಡುಕೊಳ್ಳುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

“ರೋಹಿತ್‌ ಅವರ ಐಪಿಎಲ್ ಫಾರ್ಮ್ ಅನ್ನು ಪಕ್ಕಕ್ಕಿರಿಸಿ. ಏಕೆಂದರೆ ಅವರು ಕಳೆದ ಐಪಿಎಲ್‌ನಲ್ಲೂ ಫಾರ್ಮ್‌ ಕಳೆದುಕೊಂಡಿದ್ದರು. ಆದರೆ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರ ಅದ್ಭುತ ಬ್ಯಾಟಿಂಗ್ ಅನ್ನು ನಾವು ನೋಡಿದ್ದೇವೆ. ರೋಹಿತ್ ಶರ್ಮಾ ಅವರ ವೃತ್ತಿಜೀವನದ ಹಂತದ ಬಗ್ಗೆ ನಮಗೆ ತಿಳಿದಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಆಟದಂತೆಯೇ, ರೋಹಿತ್‌ಗೂ ಇದು ಅತ್ಯಂತ ರೋಮಾಂಚಕಾರಿ ಸ್ವರೂಪವಾಗಿದೆ" ಎಂದು ಮಂಜ್ರೇಕರ್ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಮಾತನಾಡಿದ್ದಾರೆ.

“ಈ ಸಮಯದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಬ್ಯಾಟಿಂಗ್ ಬಹುತೇಕ ದೋಷರಹಿತವಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ನಾವು ನೋಡಿದ‌ ಪ್ರಕಾರ ಅವರ ಆಟದಲ್ಲಿ ಒಂದು ಸಮಸ್ಯೆ ಇದೆ. ಅವರು ಕೆಲವೊಮ್ಮೆ ಪುಲ್ ಶಾಟ್ ಆಡುವಾಗ ಔಟ್ ಆಗುತ್ತಾರೆ,” ಎಂದು ಮಂಜ್ರೇಕರ್‌ ಹೇಳಿದ್ದಾರೆ.

ರೋಹಿತ್ ಶರ್ಮಾ 2022ರಲ್ಲಿ ಐಪಿಎಲ್‌ ಆವೃತ್ತಿಯಲ್ಲೀ ಕಳಪೆ ಪ್ರದರ್ಶನ ನೀಡಿದ್ದರು. ಅಲ್ಲಿಯೂ ಅವರು 300 ರನ್ ಗಡಿ ದಾಟಲು ವಿಫಲರಾಗಿದ್ದರು. 14 ಪಂದ್ಯಗಳಲ್ಲಿ ಆಡಿದ ಹಿಟ್‌ಮ್ಯಾನ್‌ ಕೇವಲ 268 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್‌ ನಾಯಕನು ಕೊನೆಯ ಬಾರಿ 2019ರ ಐಪಿಎಲ್‌ ಆವೃತ್ತಿಯಲ್ಲಿ 400+ ರನ್ ಬಾರಿಸಿದ್ದರು. ಅಲ್ಲಿ ಅವರು 15 ಪಂದ್ಯಗಳಲ್ಲಿ 405 ರನ್ ಗಳಿಸಿದ್ದರು. ಅದಾದ ಬಳಿಕ ಅವರ ಬ್ಯಾಟ್ ಅಷ್ಟಾಗಿ ಸದ್ದು ಮಾಡಿಲ್ಲ.