ಕನ್ನಡ ಸುದ್ದಿ  /  Sports  /  Cricket News Wtc Final 2023 Steve Smith On Wtc Final Against India World Test Championship India Vs Australia Jra

Steve Smith: ಭಾರತದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ; ನಮಗೆ ಗೆಲ್ಲುವ ವಿಶ್ವಾಸವಿದೆ ಎಂದ ಸ್ಟೀವ್ ಸ್ಮಿತ್

WTC final 2023: ಡಬ್ಲ್ಯೂಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತವನ್ನು ಸೋಲಿಸುತ್ತದೆ. ಅಲ್ಲದೆ ಉತ್ತಮ ಕ್ರಿಕೆಟ್‌ ಆಟ ಇರುತ್ತದೆ ಎಂದು ಸ್ಮಿತ್ ಭರವಸೆ ವ್ಯಕ್ತಪಡಿಸಿದ್ದಾರೆ.

ಸ್ಟೀವ್‌ ಸ್ಮಿತ್
ಸ್ಟೀವ್‌ ಸ್ಮಿತ್ (PTI)

ಮಹತ್ವದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯಕ್ಕೆ ಒಂದು ದಿನವಷ್ಟೇ ಬಾಕಿ ಉಳಿದಿದೆ. ಗೆಲುವಿನ ಲೆಕ್ಕಾಚಾರದಲ್ಲಿ ಜಗತ್ತಿನ ಎರಡು ಬಲಿಷ್ಠ ಟೆಸ್ಟ್‌ ತಂಡಗಳು ಐಸಿಸಿ ಟ್ರೋಫಿಗಾಗಿ ಸೆಣಸಾಡಲಿದೆ. ಈ ನಡುವೆ ಮಾತನಾಡಿರುವ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ (Steve Smith), ಈ ಪಂದ್ಯ ಹಾಗೂ ಎದುರಾಳಿಯಾಗಿರುವ ಭಾರತ ತಂಡದ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಒಂದೊಳ್ಳೆ ಕ್ರಿಕೆಟ್‌ ಆಟವನ್ನು ನಿರೀಕ್ಷಿಸುವುದಾಗಿ ತಿಳಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತವನ್ನು ಸೋಲಿಸುತ್ತದೆ. ಅಲ್ಲದೆ ಉತ್ತಮ ಕ್ರಿಕೆಟ್‌ ಆಟ ಇರುತ್ತದೆ ಎಂದು ಸ್ಮಿತ್ ಭರವಸೆ ವ್ಯಕ್ತಪಡಿಸಿದ್ದಾರೆ.

“ನಾವು ಉತ್ತಮ ಪ್ರದರ್ಶನ ನೀಡಿ ಭಾರತವನ್ನು ಸೋಲಿಸುತ್ತೇವೆ ಎಂಬ ನಂಬಿಕೆ ನಮಗಿದೆ. ನಾವು ಕಳೆದ ಕೆಲವು ವರ್ಷಗಳಲ್ಲಿ ಉತ್ತಮ ಕ್ರಿಕೆಟ್ ಆಡಿದ್ದೇವೆ. ಭಾರತ ಕೂಡಾ ನಿಜವಾಗಿಯೂ ಉತ್ತಮ ಪ್ರದರ್ಶನ‌ ನೀಡಿದೆ. ಎರಡು ಬಲಿಷ್ಠ ತಂಡಗಳು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಆಡುತ್ತಿರುವುದು ನಿಜಕ್ಕೂ ಖುಷಿಯ ವಿಷಯ. ಆಶಾದಾಯಕವಾಗಿ, ಇದು ಕ್ರಿಕೆಟ್‌ನ ಉತ್ತಮ ಆಟವಾಗಲಿದೆ ಎಂಬ ನಿರೀಕ್ಷೆ ಇದೆ. ನಾನು ಎದುರಾಳಿಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳಿಗೆ ಈ ವಾರ ತುಂಬಾ ಮಹತ್ವದ್ದು” ಎಂದು ಸ್ಮಿತ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಬೌಲಿಂಗ್‌ನಲ್ಲಿ ಭಾರತ ಬಲಿಷ್ಠ

“ಭಾರತವು ಸೀಮ್ ಮತ್ತು ಸ್ವಿಂಗ್ ಬೌಲರ್ ಉತ್ತಮ ಸಮ್ಮಿಶ್ರಣವನ್ನು ಹೊಂದಿದೆ. ಅವರೊಂದಿಗೆ ಸ್ಪಿನ್ನರ್‌ಗಳು ಕೂಡಾ ಇದ್ದಾರೆ. ಭಾರತವು ಉತ್ತಮ ಬಲಿಂಗ್‌ ದಾಳಿಯನ್ನು ಹೊಂದಿದೆ. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಇಬ್ಬರು ಪ್ರಮುಖ ವೇಗಿಗಳು. ಅಲ್ಲದೆ ಇಂಗ್ಲೆಂಡ್‌ ಪರಿಸ್ಥಿತಿಗಳ ಬಗ್ಗೆ ತಿಳಿಸಿದಿರುವ ಸ್ಪಿನ್ನರ್‌ಗಳೂ ಇದ್ದಾರೆ. ಹೀಗಾಗಿ ಭಾರತದ ಬೌಲಿಂಗ್ ದಾಳಿ ಉತ್ತಮವಾಗಿದೆ. ನಾವು ಅವರ ವಿರುದ್ಧ ಉತ್ತಮವಾಗಿ ಆಡಬೇಕಾಗಿದೆ” ಎಂದು ಆಸ್ಟ್ರೇಲಿಯಾ ಬ್ಯಾಟರ್ ಹೇಳಿದ್ದಾರೆ.

“ದೇಶಕ್ಕಾಗಿ ಆಡುವ ಪ್ರತಿ ಪಂದ್ಯ ಹಾಗೂ ಪ್ರತಿಯೊಂದು ಸರಣಿ ಕೂಡಾ ಮಹತ್ವದ್ದು. ಏಕದಿನ ವಿಶ್ವಕಪ್ ಹತ್ತಿರ ಬರುತ್ತಿದೆ. ಈ ಫೈನಲ್‌ ಪಂದ್ಯದ ಬಳಿಕ ನಾವು ಅದರತ್ತ ಗಮನ ಕೇಂದ್ರೀಕರಿಸುತ್ತೇವೆ. ನಾವು ವಿಶ್ವಕಪ್ ಗೆಲ್ಲಲು ಬಯಸುತ್ತೇವೆ,” ಎಂದು ಸ್ಮಿತ್‌ ತಿಳಿಸಿದರು.

ಆಸ್ಟ್ರೇಲಿಯಾ ತಂಡದಿಂದ ಜೋಶ್ ಹ್ಯಾಜಲ್‌ವುಡ್‌ ಹೊರಬಿದ್ದಿದ್ದಾರೆ. ಬದಲಿ ಆಟಗಾರನಾಗಿ ಆಯ್ಕೆಯಾದ ಮೈಕೆಲ್ ನೆಸರ್ ಅವರನ್ನು ನೇರವಾಗಿ ಆಡುವ ಬಳಗಕ್ಕೆ ಸೇರಿಸಿದರೆ, ಭಾರತಕ್ಕೆ ಮಾರಕವಾಗುವ ಎಲ್ಲಾ ಕೌಶಲ್ಯಗಳನ್ನು ಅವರು ಹೊಂದಿದ್ದಾರೆ ಎಂದು ಆಸೀಸ್ ಮಾಜಿ ನಾಯಕ ತಿಳಿಸಿದರು.

“ನನಗೆ ಅವರ ಮೇಲೆ ತುಂಬಾ ನಂಬಿಕೆ ಇದೆ. ಅವರು ಗುಣಮಟ್ಟದ ಆಟಗಾರ. ನಾನು ಅವರನ್ನು ಕೌಂಟಿ ತಂಡದಲ್ಲಿ ಆಡುವಾಗ ಒಂದೆರಡು ವಾರಗಳ ಹಿಂದೆ ಎದುರಿಸಿದ್ದೇನೆ. ಅವರ ಬೌಲಿಂಗ್ ಉತ್ತಮವಾಗಿದೆ. ಉತ್ತಮ ಕೌಶಲ್ಯಗಳನ್ನು ಹೊಂದಿದ್ದಾರೆ. ಅದರೊಂದಿಗೆ ಚೆನ್ನಾಗಿ ಬ್ಯಾಟಿಂಗ್ ಕೂಡಾ ಮಾಡುತ್ತಿದ್ದಾರೆ. ಹೀಗಾಗಿ ಅವರು ನಮಗೆ ಉತ್ತಮ ಪ್ಯಾಕೇಜ್ ಆಗಿದ್ದಾರೆ. ಅವರಿಗೆ ಅವಕಾಶ ಸಿಕ್ಕರೆ ಅವರು ಖಂಡಿತವಾಗಿಯೂ ಉತ್ತಮ ಕೆಲಸ ಮಾಡುತ್ತಾರೆ,” ಎಂದು ಸ್ಮಿತ್ ಹೇಳಿದ್ದಾರೆ.

ನಾಳೆಯಿಂದ ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನ ದಿ ಓವಲ್‌ ಮೈದಾನದಲ್ಲಿ ಡಬ್ಲ್ಯೂಟಿಸಿ ಫೈನಲ್‌ ಪಂದ್ಯ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಫೈನಲ್ ಪಂದ್ಯವು ಮಧ್ಯಾಹ್ನ 03:00 ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.