ಕನ್ನಡ ಸುದ್ದಿ  /  Sports  /  Cricket News Wtc Final 2023 Wicket Keeper Ks Bharat Gets Valuable Advice From Ms Dhoni World Test Championship Jra

KS Bharat: ಡಬ್ಲ್ಯೂಟಿಸಿ ಫೈನಲ್‌ಗೂ ಮುನ್ನ ವಿಕೆಟ್ ಕೀಪರ್‌ಗೆ ಬಲ ತುಂಬಿದ ಮಾಹಿ; ಧೋನಿ ಸಲಹೆ ಪಡೆದ ಭರತ್ ಹೇಳಿದ್ದು ಹೀಗೆ

WTC final 2023: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೂ ಮುನ್ನ, ಧೋನಿಯಿಂದ ವಿಕೆಟ್‌ ಕೀಪಿಂಗ್‌ ಕುರಿತು ಸಲಹೆ ಪಡೆದ ಕೆಎಸ್‌ ಭರತ್‌ ವಿಶ್ವಾಸದಿಂದ ಬೀಗುತ್ತಿದ್ದಾರೆ.

ಎಂಎಸ್‌ ಧೋನಿ
ಎಂಎಸ್‌ ಧೋನಿ (Hindustan Times)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship final) ಫೈನಲ್‌ ಪಂದ್ಯವು ನಾಳೆ (ಬುಧವಾರ)ಯಿಂದ ಆರಂಭವಾಗುತ್ತಿದೆ. ಇಂಗ್ಲೆಂಡ್‌ ನೆಲದಲ್ಲಿ ಭಾರತವು ಐಸಿಸಿ ಟ್ರೋಫಿ ಬರವನ್ನು ನೀಗಿಸಲು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್‌ ಹಾಗೂ ವಿಕೆಟ್‌ ಕೀಪರ್‌ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಭಾರತವು ಡಬ್ಲ್ಯೂಟಿಸಿ ಫೈನಲ್ ಪಂದ್ಯ ಆಡುತ್ತಿದ್ದು, ವಿಕೆಟ್‌ ಕೀಪರ್‌ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ನಾಳೆ ಸ್ಪಷ್ಟವಾಗಲಿದೆ.

ದಿ ಓವಲ್‌ನಲ್ಲಿ ನಡೆಯುವ ನಿರ್ಣಾಯಕ ಟೆಸ್ಟ್‌ ಪಂದ್ಯದಲ್ಲಿ ವಿಕೆಟ್‌ಗಳ ಹಿಂದೆ ನಿಲ್ಲುವವರು ಯಾರು ಎನ್ನುವುದಕ್ಕೆ ಭಾರತದ ಬಳಿ ಎರಡು ಆಯ್ಕೆಗಳಿವೆ. ಅವರೇ ಕೆಎಸ್ ಭರತ್ ಮತ್ತು ಇಶಾನ್ ಕಿಶನ್. ಕಿಶನ್ ಭಾರತದ ಪರ ಇನ್ನೂ ಟೆಸ್ಟ್‌ಗೆ ಪದಾರ್ಪಣೆ ಮಾಡಿಲ್ಲ. ಆದರೆ, ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಟೆಸ್ಟ್ ಸರಣಿಯಲ್ಲಿ ಭರತ್ ವಿಕೆಟ್‌ಗಳ ಹಿಂದೆ ನಿಂತ ಅನುಭವ ಪಡೆದಿದ್ದಾರೆ. ಆದರೆ, ಬ್ಯಾಟಿಂಗ್‌ನಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ. ಅದೇನೇ ಇದ್ದರೂ, ಭರತ್ ಮಾತ್ರ ತಮ್ಮ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಅವರು ವಿಶ್ವದ ಚಾಣಾಕ್ಷ ವಿಕೆಟ್‌ ಕೀಪರ್‌ ಹಾಗೂ ನಾಯಕ ಎನಿಸಿಕೊಂಡಿರುವ ಎಂಎಸ್ ಧೋನಿಯಿಂದ ವಿಕೆಟ್ ಕೀಪಿಂಗ್‌ ಕುರಿತಾಗಿ ಅಮೂಲ್ಯ ಸಲಹೆಗಳನ್ನು ಪಡೆದಿದ್ದಾರೆ. ಹೀಗಾಗಿ ಅದನ್ನು ಇಂಗ್ಲೆಂಡ್‌ನಲ್ಲಿ ಪ್ರಯೋಗಿಸಲು ಎದುರು ನೋಡುತ್ತಿದ್ದಾರೆ.

ಪ್ರಸಕ್ತ ಐಪಿಎಲ್ ಆವೃತ್ತಿಯ ಸಂದರ್ಭದಲ್ಲಿ ಭಾರತ ತಂಡದ ಮಾಜಿ ನಾಯಕನ ಜೊತೆ ಮಾತುಕತೆ ನಡೆಸಿರುವುದಾಗಿ ಕೆಎಸ್ ಭರತ್ ಹೇಳಿದ್ದಾರೆ. ಗುಜರಾತ್ ಟೈಟಾನ್ಸ್‌ ತಂಡದ ಪರ ಆಡುತ್ತಿದ್ದ ಭರತ್, ಈ ಬಾರಿ ಮುಗಿದ ಸೀಸನ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಆದರೆ, ಅವರ ತಂಡವು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಫೈನಲ್‌ ಪಂದ್ಯವನ್ನು ಆಡಿತ್ತು.

“ಇಂಗ್ಲೆಂಡ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡಿದ ಅನುಭವಗಳು ಮತ್ತು ಯಾವುದೇ ವಿಕೆಟ್ ಕೀಪರ್‌ಗೆ ಯಾವೆಲ್ಲಾ ಅಂಶಗಳು ಮುಖ್ಯ ಎಂಬ ಬಗ್ಗೆ ಅವರು ಮಾತನಾಡಿದರು” ಎಂದು ಭರತ್ ಐಸಿಸಿ ಜೊತೆಗೆ ಹೇಳಿಕೊಂಡಿದ್ದಾರೆ.

ಧೋನಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಅವಧಿಯಲ್ಲಿ ಇಂಗ್ಲೆಂಡ್‌ನಲ್ಲಿ 12 ಟೆಸ್ಟ್‌ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.

“ನಮ್ಮ ನಡುವೆ ತುಂಬಾ ಒಳ್ಳೆಯ ಸಂಭಾಷಣೆ ನಡೆಯಿತು. ಅದರಲ್ಲಿ ಸಾಕಷ್ಟು ಒಳನೋಟಗಳಿತ್ತು. ಕೀಪಿಂಗ್‌ ವಿಚಾರದಲ್ಲಿ ಅವರು ಹೊಂದಿರುವ ಅರಿವು ನಿಜಕ್ಕೂ ಅಸಾಧಾರಣವಾಗಿದೆ” ಎಂದು ಭರತ್ ಹೇಳಿದ್ದಾರೆ.

“ಕೀಪರ್ ಆಗಲು ಉತ್ಸಾಹ ಬೇಕು. ಟೆಸ್ಟ್ ಪಂದ್ಯದ ದಿನವೊಂದರಲ್ಲಿ, ಎಲ್ಲಾ 90 ಓವರ್‌ಗಳವರೆಗೆ ಚೆಂಡಿನ ಮೇಲೆ ಗಮನ ಕೇಂದ್ರೀಕರಿಸಬೇಕು. ಒಂದಾದ ಬಳಿಕ ಮತ್ತೊಂದು ಚೆಂಡಿನ ಮೇಲೆ ಗಮನ ಮುಂದುವರೆಯುತ್ತದೆ. ಹೀಗಾಗಿ ಸವಾಲುಗಳನ್ನು ಸ್ವೀಕರಿಸಬೇಕು. ತಂಡಕ್ಕೆ ಕೊಡುಗೆ ನೀಡುವಲ್ಲಿ ನಿಜವಾಗಿಯೂ ಉತ್ಸುಕನಾಗಿರಬೇಕು” ಎಂದು ಭರತ್ ಹೇಳಿದ್ದಾರೆ.

ಡಬ್ಲ್ಯೂಟಿಸಿ ಫೈನಲ್ ಪಂದ್ಯವು ಜೂನ್ 7ರಿಂದ 11ರವರೆಗೆ ನಡೆಯಲಿದೆ. ಈ ಪಂದ್ಯವು ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನ ದಿ ಓವಲ್‌ ಮೈದಾನದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಫೈನಲ್ ಪಂದ್ಯವು ಮಧ್ಯಾಹ್ನ 03:00 ಗಂಟೆಗೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆಯು ಮಧ್ಯಾಹ್ನ 02:30ಕ್ಕೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಇಶಾನ್ ಕಿಶನ್ (ವಿಕೆಟ್‌ ಕೀಪರ್).‌