ಕನ್ನಡ ಸುದ್ದಿ  /  Sports  /  Cricket News Wtc Final After Ipl 2023 Virat Kohli And 7 India Stars To Leave For England The Oval Jra

WTC Final: ಕಹಿ ಐಪಿಎಲ್ ಆವೃತ್ತಿ ಬೆನ್ನಲ್ಲೇ ವಿರಾಟ್ ಜೊತೆಗೆ ಇಂಗ್ಲೆಂಡ್‌ಗೆ ಹಾರಲಿದ್ದಾರೆ ಏಳು ಆಟಗಾರರು, ವರದಿ ಹೇಳಿದ್ದಿಷ್ಟು

ಐಪಿಎಲ್ ಪ್ಲೇಆಫ್‌ಗೆ ರೇಸ್‌ನಿಂದ‌ ಆರ್‌ಸಿಬಿ ಹೊರಬಿದ್ದ ಬಳಿಕ, ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಕೂಡಾ ಇಂಗ್ಲೆಂಡ್‌ಗೆ ತೆರಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ (AFP)

ವಿರಾಟ್ ಕೊಹ್ಲಿಯವರ ಆರ್‌ಸಿಬಿ ತಂಡವು, ಐಪಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿಯೂ ಮುಗ್ಗರಿಸಿತು. ಮತ್ತೊಂದು ಅರಗಿಸಿಕೊಳ್ಳಲಾಗದ ಆವೃತ್ತಿ ಮುಗಿಸಿದ ಬೆನ್ನಲ್ಲೇ, ವಿರಾಟ್‌ ಕೊಹ್ಲಿ ಮತ್ತೊಂದು ಸವಾಲು ಎದುರಿಸಲು ಸಿದ್ಧರಾಗಿದ್ದಾರೆ. ಟೀಮ್‌ ಇಂಡಿಯಾ ಆಟಗಾರರು ಈಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನತ್ತ ಗಮನ ಹರಿಸುತ್ತಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ 2021ರ ಫೈನಲ್‌ನಲ್ಲಿ ಸೋತಿದ್ದ ಭಾರತ, ಈ ಬಾರಿ ಟೆಸ್ಟ್‌ ಚಾಂಪಿಯನ್‌ ಪಟ್ಟ ಒಲಿಸಿಕೊಳ್ಳುವ ವಿಶ್ವಾಸದಲ್ಲಿದೆ. ಸದ್ಯ ನಾಲ್ಕು ತಂಡಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತಂಡಗಳು ಐಪಿಎಲ್‌ನ ಪ್ರಸಕ್ತ ಆವೃತ್ತಿಯಿಂದ ಎಲಿಮನೇಟ್‌ ಆಗಿವೆ. ಹೀಗಾಗಿ ಆರ್‌ಸಿಬಿಯ ವಿರಾಟ್‌, ಸಿರಾಜ್‌ ಸೇರಿದಂತೆ ಕೆಲವು ಪ್ರಮುಖ ಆಟಗಾರರು ಇಂಗ್ಲೆಂಡ್‌ಗೆ ಹಾರಲು ಸಜ್ಜಾಗಿದ್ದಾರೆ.

ವಿರಾಟ್‌ ಕೊಹ್ಲಿ ಸೇರಿದಂತೆ ಓಟ್ಟು ಎಂಟು ಭಾರತೀಯ ಆಟಗಾರರು, ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪ್ರಮುಖ ಪಂದ್ಯಕ್ಕೆ ಶೀಘ್ರದಲ್ಲೇ ತೆರಳಲಿದ್ದಾರೆ. ಐಪಿಎಲ್ ಪ್ಲೇಆಫ್‌ಗೆ ರೇಸ್‌ನಿಂದ‌ ಆರ್‌ಸಿಬಿ ಹೊರಬಿದ್ದ ಬಳಿಕ, ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಕೂಡಾ ಇಂಗ್ಲೆಂಡ್‌ಗೆ ತೆರಳುತ್ತಿದ್ದಾರೆ ಎಂದು ಸ್ಪೋರ್ಟ್‌ಸ್ಟಾರ್ ವರದಿ ತಿಳಿಸಿದೆ. ಇವರೊಂದಿಗೆ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್, ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ವೇಗಿಗಳಾದ ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕತ್ ಕೂಡ ಒಂದೇ ವಿಮಾನದಲ್ಲಿ ಇದೇ ಮಂಗಳವಾರ ಆಂಗ್ಲರ ನಾಡಿಗೆ ಪ್ರಯಾಣಿಸಲಿದ್ದಾರೆ.

ಉನದ್ಕತ್ ಮತ್ತು ಉಮೇಶ್‌ ಯಾದವ್‌, ಐಪಿಎಲ್ 2023ರ ಋತುವಿನ ಮಧ್ಯದಲ್ಲೇ ಗಾಯದಿಂದಾಗಿ ಹೊರಗುಳಿದರು. ವರದಿಯ ಪ್ರಕಾರ, ಈ ಇಬ್ಬರೂ ವೇಗಿಗಳು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಚೇತೇಶ್ವರ ಪೂಜಾರ ಅವರು ಈಗಾಗಲೇ ಇಂಗ್ಲೆಂಡ್‌ನಲ್ಲಿದ್ದು, ಅವರು ಸಸೆಕ್ಸ್‌ ಪರ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಕ್ಲಬ್‌ನ ನಾಯಕರಾಗಿ ಒಂದೆರಡು ಶತಕಗಳನ್ನು ಸಿಡಿಸಿರುವ ಪೂಜಾರ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

ಈ ನಡುವೆ, ಮೀಸಲು ಪಟ್ಟಿಯ ಭಾಗವಾಗಿರುವ ಮುಖೇಶ್ ಕುಮಾರ್ ಅವರು ಇಂಗ್ಲೆಂಡ್‌ಗೆ ತೆರಳಲಿರುವ ಭಾರತೀಯ ಆಟಗಾರರ ಮೊದಲ ಬ್ಯಾಚ್‌ನ ಭಾಗವಾಗಿದ್ದಾರೆ. ಭಾರತವು ಡಬ್ಲ್ಯೂಟಿಸಿ ಫೈನಲ್‌ಗೆ ಇನ್ನೂ ಮೂವರು ವೇಗಿಗಳನ್ನು ನೆಟ್ ಬೌಲರ್‌ಗಳಾಗಿ ಕರೆಸಿಕೊಳ್ಳುತ್ತಿದೆ. ಅನಿಕೇತ್ ಚೌಧರಿ, ಆಕಾಶ್ ದೀಪ್ ಮತ್ತು ಯರ್ರಾ ಪೃಥ್ವಿರಾಜ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ.

ಸದ್ಯ ರೋಹಿತ್ ಶರ್ಮಾ, ಇಶಾನ್ ಕಿಶನ್, ಶುಬ್ಮನ್ ಗಿಲ್, ಮೊಹಮ್ಮದ್ ಶಮಿ, ಕೆ ಎಸ್ ಭರತ್ ಮತ್ತು ಅಜಿಂಕ್ಯ ರಹಾನೆ ತಮ್ಮ ತಮ್ಮ ತಂಡಗಳ ಪರ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ.‌ ಇವರು ಪಂದ್ಯಗಳು ಮುಗಿದ ಬೆನ್ನಲ್ಲೇ ಇಂಗ್ಲೆಂಡ್‌ಗೆ ಹಾರಲಿದ್ದಾರೆ.

ಎರಡು ತಿಂಗಳ ಅವಧಿಯ ಐಪಿಎಲ್ ಋತುವಿನಲ್ಲಿ ಹೆಚ್ಚಿನ ಭಾರತೀಯ ಆಟಗಾರರು ತೊಡಗಿಸಿಕೊಂಡಿದ್ದಾರೆ. ಅತ್ತ ಆಸೀಸ್‌ ತಂಡದಿಂದ ಟೆಸ್ಟ್‌ ಚಾಂಪಿಯನ್‌ಶಿಪ್‌ ಆಡುತ್ತಿರುವ ಕೇವಲ ಮೂವರು ಆಟಗಾರರು ಮಾತ್ರ ಲೀಗ್‌ನ ಭಾಗವಾಗಿದ್ದಾರೆ.

ಭಾರತವು ಡಬ್ಲ್ಯುಟಿಸಿ ಫೈನಲ್ ತಲುಪಿರುವುದು ಇದು ಎರಡನೇ ಬಾರಿ. 2021ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ ತಂಡದ ವಿರುದ್ಧ ಭಾರತ ಸೋತಿತ್ತು. ಎಂಎಸ್ ಧೋನಿ ನಾಯಕತ್ವದಲ್ಲಿ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ, ಭಾರತ ತಂಡ ಮೊದಲ ಬಾರಿಗೆ ಐಸಿಸಿ ಟ್ರೋಫಿ ಗೆಲ್ಲುವತ್ತ ಎದುರು ನೋಡುತ್ತಿದೆ.

ಈ ಪಂದ್ಯವು 2021ರಿಂದ 23ರ ಅವಧಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತರು ಯಾರು ಎಂಬುದನ್ನು ನಿರ್ಧರಿಸಲಿದೆ. ಕಳೆದ ಆವೃತ್ತಿಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನ ಪಡೆದಿರುವ ಭಾರತ, ನಿಸ್ಸಂದೇಹವಾಗಿ ಗೆಲ್ಲುವ ಫೇವರೆಟ್‌ ತಂಡ ಎನಿಸಿಕೊಂಡಿದೆ. ವಿಶೇಷವೆಂದರೆ, ತಟಸ್ಥ ಸ್ಥಳದಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಹೀಗಾಗಿ ಸೋಲು ಗೆಲುವುಗಳ ಲೆಕ್ಕಾಚಾರ ನಡೆಯುತ್ತಿದೆ.