ಕನ್ನಡ ಸುದ್ದಿ  /  Sports  /  Cricket News Wtc Final Pakistan Cricketer Saeed Anwar Prediction On Virat Kohli In World Test Championship Jra

WTC final: ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಮುನ್ನ ವಿರಾಟ್ ಆಟದ ಬಗ್ಗೆ ಪಾಕ್ ದಿಗ್ಗಜನ ಭವಿಷ್ಯ; ಎಂಥಾ ಮಾತು ಎಂದ ನೆಟ್ಟಿಗರು

Saeed Anwar on Virat Kohli: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಗೆದ್ದು, ಐಸಿಸಿ ಕಪ್‌ ಬರವನ್ನು ನೀಗಿಸಲು ಭಾರತ ಮುಂದಾಗಿದೆ. ಭಾರತ ತಂಡದ ಪ್ರಮುಖ ಆಟಗಾರನಾದ ವಿರಾಟ್‌ ಕೊಹ್ಲಿ ಮೇಲೆ ನಿರೀಕ್ಷೆಗಳು ಹೆಚ್ಚಿದ್ದು, ಅವರ ಪ್ರದರ್ಶನದ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗರೊಬ್ಬರು ಭವಿಷ್ಯ ನುಡಿದಿದ್ದಾರೆ.

ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ (File)

ಸತತ 16ನೇ ಆವೃತ್ತಿಯ ಐಪಿಎಲ್‌ನಲ್ಲೂ ಟ್ರೋಫಿ ಗೆಲ್ಲಲು ವಿಫಲವಾದ ಆರ್‌ಸಿಬಿಯು, ಭಾರವಾದ ಹೃದಯದೊಂದಿಗೆ ಟೂರ್ನಿಯಿಂದ ನಿರ್ಗಮಿಸಿತು. ಐಪಿಎಲ್‌ (IPL) ಮೊದಲ ಆವೃತ್ತಿಯಿಂದಲೂ ತಂಡದ ಕಾಯಂ ಸದಸ್ಯನಾಗಿರುವ ವಿರಾಟ್ ಕೊಹ್ಲಿ (Virat Kohli), ಐಪಿಎಲ್‌ನಲ್ಲಿ ತಮ್ಮ ಪಾತ್ರ ಮುಗಿದ ಬೆನ್ನಲ್ಲೇ ರಾಷ್ಟ್ರೀಯ ತಂಡದ ಬಾಧ್ಯತೆಯತ್ತ ಗಮನ ಹರಿಸಿದ್ದಾರೆ. ಈಗಾಗಲೇ ಇಂಗ್ಲೆಂಡ್‌ಗೆ ಹಾರಿರುವ ಅವರು, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ (WTC Final)ನಲ್ಲಿ ಆಡಲು ಸಿದ್ಧರಾಗಿದ್ದಾರೆ.

ಇಂಗ್ಲೆಂಡ್‌ನ ದಿ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯಕ್ಕೆ, ಕೆಲವೇ ದಿನಗಳು ಬಾಕಿ ಉಳಿದಿವೆ. ಇದಕ್ಕಾಗಿ ಕಿಂಗ್ ಕೊಹ್ಲಿ ಸಿದ್ಧತೆ ಪ್ರಾರಂಭಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಅಪ್ಡೇಟ್‌ ನೀಡಿದ್ದಾರೆ. ಕಿಂಗ್‌ ಕೊಹ್ಲಿ ಅವರಿಂದ ಅಪ್ಡೇಟ್‌ ಬರುತ್ತಿದ್ದಂತೆಯೇ, ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾಕಿಸ್ತಾನದ ಕ್ರಿಕೆಟ್ ತಂಡದ ದಿಗ್ಗಜ ಆಟಗಾರರೊಬ್ಬರು ಕೂಡಾ ಕೊಹ್ಲಿಗೆ ಶುಭ ಹಾರೈಸಿದ್ದಾರೆ. ಅಲ್ಲದೆ ಭಾರತದ ಮಾಜಿ ನಾಯಕನ ಕುರಿತಾಗಿ ಭಾರಿ ಭವಿಷ್ಯ ನುಡಿದಿದ್ದಾರೆ.

ಐಪಿಎಲ್ 2023ರ ಆರಂಭಕ್ಕೂ ಮುನ್ನ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಮಣಿಸಿತ್ತು. ಆ ಮೂಲಕ ಸತತ ಎರಡನೇ ಬಾರಿ ಡಬ್ಲ್ಯೂಟಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. 2021ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಸೋತಿತ್ತು. ಸದ್ಯ ವಿರಾಟ್‌ ಅವರು ಭಾರತ ತಂಡವನ್ನು ಮುನ್ನಡೆಸುತ್ತಿಲ್ಲ. ಕಳೆದ ವರ್ಷ ಟೀಮ್‌ ಇಂಡಿಯಾ ನಾಯಕತ್ವ ತ್ಯಜಿಸಿದ್ದ ಅವರು, ತಂಡದ ಸದಸ್ಯನಾಗಿ ಮುಂದುವರೆದಿದ್ದಾರೆ. ಸದ್ಯ ನಂಬರ್ 1 ಶ್ರೇಯಾಂಕಿತ ಟೆಸ್ಟ್ ತಂಡವನ್ನು ಹತ್ತು ವರ್ಷಗಳ ಬಳಿಕ ಐಸಿಸಿ ಕಪ್ ಗೆಲುವಿನತ್ತ ಮುನ್ನಡೆಸುವ ಭರವಸೆಯಲ್ಲಿದ್ದಾರೆ.

ಲಂಡನ್ ತಲುಪಿದ ಬಳಿಕ, ಕೊಹ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಇದರ ಫೋಟೋವನ್ನು ಹಂಚಿಕೊಂಡಿರುವ ಅವರು, ಆ ಫೋಟೋಗೆ "ದಿ ವೈಟ್ಸ್‌" ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ಕೊಹ್ಲಿ ಪೋಸ್ಟ್‌ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಯೀದ್ ಅನ್ವರ್ (Saeed Anwar) ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿಯ ಬಗ್ಗೆ ಮಹತ್ವದ ಭವಿಷ್ಯ ನುಡಿದಿರುವ ಅವರು, ಕೊಹ್ಲಿಯ ಟ್ವಿಟರ್‌ ಪೋಸ್ಟ್ ಅನ್ನು ರೀಟ್ವೀಟ್ ಮಾಡಿದ್ದಾರೆ. ಮಹತ್ವದ ಟೆಸ್ಟ್‌ ಚಾಂಪಿಯನ್ ಫೈನಲ್‌ನಲ್ಲಿ ಭಾರತದ ಸ್ಟಾರ್‌ ಆಟಗಾರ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಗಳಿಸುತ್ತಾರೆ ಎಂದು ಅವರು ನುಡಿದಿದ್ದಾರೆ.

“ದೊಡ್ಡ ಮಟ್ಟದ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ನೀವು ಬೃಹತ್ ಶತಕಗಳನ್ನು ಸಿಡಿಸುವುದನ್ನು ನೋಡಲು ಕಾಯುತ್ತಿದ್ದೇನೆ. ವಿರಾಟ್ ನಿಮಗೆ ಶುಭ ಹಾರೈಸುತ್ತೇನೆ,” ಎಂದು ಸಯೀದ್ ಅನ್ವರ್ ಟ್ವೀಟ್ ಮಾಡಿದ್ದಾರೆ.

ಒಂದು ವೇಳೆ ಕೊಹ್ಲಿಯು ಫೈನಲ್‌ ಪಂದ್ಯದಲ್ಲಿ ಸತತ ಶತಕಗಳನ್ನು ಸಿಡಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಸೆಂಚುರಿಗಳ ಸಂಖ್ಯೆ 30ಕ್ಕೆ ಏರಲಿದೆ. ಅದು ಸ್ಟೀವ್ ಸ್ಮಿತ್ ಅವರ ದಾಖಲೆಗೆ ಸರಿಹೊಂದಲಿದೆ. ಸಕ್ರಿಯ ಕ್ರಿಕೆಟಿಗರ ಪಟ್ಟಿಯಲ್ಲಿ 29 ಶತಕಗಳೊಂದಿಗೆ ಜೋ ರೂಟ್ ಎರಡನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್‌ ರೇಸ್‌ನಿಂದ ನಿರ್ಗಮಿಸಿದ ಬೆನ್ನಲ್ಲೇ ಕೊಹ್ಲಿ ಲಂಡನ್‌ಗೆ ಹಾರಿದರು. ಅವರೊಂದಿಗೆ ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್ ಮತ್ತು ಆರ್ ಅಶ್ವಿನ್ ಕೂಡಾ ಮೊದಲ ಬ್ಯಾಚ್ ಆಗಿ ಆಂಗ್ಲರ ನಾಡಿಗೆ ತೆರಳಿದ್ದಾರೆ. ಅತ್ತ ಚೇತೇಶ್ವರ ಪೂಜಾರ ಅವರು ಸಸೆಕ್ಸ್‌ ಪರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿರುವುದರಿಂದ, ಈಗಾಗಲೇ ಅವರು ಲಂಡನ್‌ನಲ್ಲಿದ್ದಾರೆ. ಭಾರತ ತಂಡದ ಉಳಿದ ಆಟಗಾರರು ತಮ್ಮ ತಮ್ಮ ತಂಡಗಳ ಐಪಿಎಲ್ ಪಂದ್ಯಗಳು ಮುಗಿದ ಬೆನ್ನಲ್ಲೇ ಇಂಗ್ಲೆಂಡ್‌ಗೆ ತೆರಳಲಿದ್ದಾರೆ.