Yuvraj on Sachin: ಈ ಆಟದಲ್ಲಿ ತೆಂಡೂಲ್ಕರ್ ಸೋಲಿಸಲು ಯಾರಿಂದಲೂ ಸಾಧ್ಯವಿಲ್ವಂತೆ; ಯುವರಾಜ್ ಮಾತು ಕೇಳಿ-cricket news yuvraj singh on sachin tendulkar 50th birthday 2011 world cup sports news in kannada jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Yuvraj On Sachin: ಈ ಆಟದಲ್ಲಿ ತೆಂಡೂಲ್ಕರ್ ಸೋಲಿಸಲು ಯಾರಿಂದಲೂ ಸಾಧ್ಯವಿಲ್ವಂತೆ; ಯುವರಾಜ್ ಮಾತು ಕೇಳಿ

Yuvraj on Sachin: ಈ ಆಟದಲ್ಲಿ ತೆಂಡೂಲ್ಕರ್ ಸೋಲಿಸಲು ಯಾರಿಂದಲೂ ಸಾಧ್ಯವಿಲ್ವಂತೆ; ಯುವರಾಜ್ ಮಾತು ಕೇಳಿ

Sachin Tendulkar 50th birthday: ಕ್ರಿಕೆಟ್ ಹೊರತಾಗಿ ಮತ್ತೊಂದು ಕ್ರೀಡೆಯಲ್ಲಿ ಸಚಿನ್ ತುಂಬಾ ಬಲಿಷ್ಠರಂತೆ. ಆ ಒಂದು ಕ್ರೀಡೆಯಲ್ಲಿ ತೆಂಡೂಲ್ಕರ್‌ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಯುವಿ ಬಹಿರಂಗಪಡಿಸಿದ್ದಾರೆ.

ಯುವರಾಜ್ ಸಿಂಗ್, ಸಚಿನ್ ತೆಂಡೂಲ್ಕರ್
ಯುವರಾಜ್ ಸಿಂಗ್, ಸಚಿನ್ ತೆಂಡೂಲ್ಕರ್ (ICC)

ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ಸೋಮವಾರ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ದಿನದಂದು ಹಲವಾರು ಆಟಗಾರರು ಹಾಗೂ ಅಭಿಮಾನಿಗಳು ಕ್ರಿಕೆಟ್‌ ದಿಗ್ಗಜನಿಗೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಶ್ವ ಕ್ರಿಕೆಟ್‌ನ ದಾಖಲೆಯ ಸರದಾರನಿಗೆ ಶುಭಾಶಯಗಳ ಹೊಳೆಯೇ ಹರಿದಿದೆ.

ಸಚಿನ್ ಅವರೊಂದಿಗೆ ಹಲವು ಪಂದ್ಯಗಳಲ್ಲಿ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವ ಯುವರಾಜ್ ಸಿಂಗ್, ಕ್ರಿಕೆಟ್ ದೇವರ ಕುರಿತ ನೆನಪುಗಳನ್ನು ಇಂದು ಮೆಲುಕು ಹಾಕಿದ್ದಾರೆ. 2011ರಲ್ಲಿ ಭಾರತವು ವಿಶ್ವಕಪ್ ಟ್ರೋಫಿಯನ್ನು ಎತ್ತುವಲ್ಲಿ ಯುವಿ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಸಚಿನ್‌ ಅವರ ಹುಟ್ಟುಹಬ್ಬದ ಈ ವಿಶೇಷ ದಿನದಂದು ಯುವರಾಜ್ ಸಿಂಗ್‌ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಸರಣಿ ಟ್ವೀಟ್‌ ಮೂಲಕ ಭಾರತ ಕ್ರಿಕೆಟ್‌ಗೆ ಸಚಿನ್ ಅವರ ಅಪಾರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

ಈ ವಿಡಿಯೋದಲ್ಲಿ ಯುವರಾಜ್ ಸಿಂಗ್ ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ. 2008ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಚಿನ್ ಅವರ ಮ್ಯಾಚ್ ವಿನ್ನಿಂಗ್ ಪ್ರದರ್ಶನವು, ತಾನು ನೋಡಿದ ಅತ್ಯುತ್ತಮ ಕ್ಷಣವೆಂದು ಯುವಿ ಬಣ್ಣಿಸಿದ್ದಾರೆ.

ಕ್ರಿಕೆಟ್ ಹೊರತಾಗಿ ಇನ್ನೂ ಕೆಲ ಹೊಸ ಅಂಶಗಳನ್ನು ಯುವಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಕ್ರಿಕೆಟ್ ಹೊರತಾಗಿ ಮತ್ತೊಂದು ಕ್ರೀಡೆಯಲ್ಲಿ ಸಚಿನ್ ತುಂಬಾ ಬಲಿಷ್ಠರಂತೆ. ಆ ಒಂದು ಕ್ರೀಡೆಯಲ್ಲಿ ತೆಂಡೂಲ್ಕರ್‌ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಯುವಿ ಬಹಿರಂಗಪಡಿಸಿದ್ದಾರೆ.

"ನೀವು ಎಷ್ಟೇ ಪ್ರಯತ್ನಿಸಿದರೂ ಟೇಬಲ್ ಟೆನ್ನಿಸ್‌ನಲ್ಲಿ ನೀವು ಅವರನ್ನು ಸೋಲಿಸಲು ಸಾಧ್ಯವಿಲ್ಲ" ಎಂದು ಯುವರಾಜ್ ಸಿಂಗ್‌ ಬಹಿರಂಗಪಡಿಸಿದ್ದಾರೆ.‌

ಕ್ರಿಕೆಟ್‌ನಲ್ಲಿ ಸಚಿನ್‌ ಮಾಡಿರುವ ಹಲವು ದಾಖಲೆಗಳನ್ನು ಇದುವರೆಗೂ ಯಾರಿಂದಲೂ ಮಾಡಲಾಗಿಲ್ಲ. ಕ್ರಿಕೆಟ್‌ನ ಹಲವು ಪ್ರಥಮಗಳಿಗೆ ಲಿಟಲ್‌ ಮಾಸ್ಟರ್‌ ಕಾರಣರಾಗಿದ್ದಾರೆ.

ಸಚಿನ್‌ ಒಟ್ಟು 664 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ‌ ಬರೋಬ್ಬರಿ 34,357 ರನ್ ಗಳಿಸಿದ್ದಾರೆ. ಭಾರತದ ಪರ 200 ಟೆಸ್ಟ್ ಪಂದ್ಯಗಳು (Tests), 463 ಏಕದಿನ ಪಂದ್ಯಗಳು (ODI) ಮತ್ತು ಏಕೈಕ ಟಿ20 ಪಂದ್ಯ (T20I) ಆಡಿದ್ದಾರೆ. 1989ರ ನವೆಂಬರ್ ತಿಂಗಳಲ್ಲಿ ಪಾಕಿಸ್ತಾನದ ವಿರುದ್ಧ ಸಚಿನ್ ತಮ್ಮ 16ನೇ ವಯಸ್ಸಿನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. ಕ್ರಿಕೆಟ್ ದೇವರು 2013ರಲ್ಲಿ ಮುಂಬೈನ ವಾಂಖೆಡೆ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು.

ಇದನ್ನೂ ಓದಿ : Sachin Tendulkar Birthday: ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸಚಿನ್ ಹೆಸರಿನಲ್ಲಿ ವಿಶೇಷ ಗೇಟ್ ಅನಾವರಣ

ಕ್ರಿಕೆಟ್​​ ಜಗತ್ತಿನ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 100 ಶತಕ ಬಾರಿಸಿರುವ ವಿಶ್ವದ ಏಕೈಕ ಕ್ರಿಕೆಟಿಗ ಸಚಿನ್. ಸುಮಾರು ಎರಡೂವರೆ ದಶಕಗಳ ಕಾಲ ಮಾಸ್ಟರ್‌ ಬ್ಲಾಸ್ಟರ್ ಕ್ರಿಕೆಟ್ ಜಗತ್ತನ್ನು ಆಳಿದ್ದಾರೆ. ಅವರು ತಮ್ಮ ಹೆಸರಿನಲ್ಲಿ ಗರಿಷ್ಠ ಟೆಸ್ಟ್ ಹಾಗೂ ಏಕದಿನ ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ.

ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಒಂದು ದಶಕ ಕಳೆದಿದೆ. ಆದರೆ ಅವರ ಕ್ರಿಕೆಟ್ ನೆನಪುಗಳು ಸದಾ ಹಸಿರಾಗಿಯೇ ಉಳಿದಿವೆ.

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.