ಕನ್ನಡ ಸುದ್ದಿ  /  Sports  /  Cricket News Yuzvendra Chahal Donate 1 Lakh For Odisha Train Accident Virat Kohli 30 Crore Donate Fake News Prs

Odisha train accident: ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ಚಹಲ್ 1 ಲಕ್ಷ ದೇಣಿಗೆ; ಕೊಹ್ಲಿ 30 ಕೋಟಿ ಕೊಟ್ಟಿಲ್ಲ, ಇದು ಸುಳ್ಳು ಸುದ್ದಿ

ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತದ ಸಂತ್ರಸ್ತರಿಗೆ ಟೀಮ್​ ಇಂಡಿಯಾದ ಸ್ಪಿನ್ನರ್​ ಯುಜುವೇಂದ್ರ ಚಹಲ್​, 1 ಲಕ್ಷ ದೇಣಿಗೆ ಕೊಟ್ಟಿದ್ದಾರೆ. ಚಹಲ್​ ಸಹಾಯಹಸ್ತ ಚಾಚಿರುವ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ಚಹಲ್ 1 ಲಕ್ಷ ದೇಣಿಗೆ
ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ಚಹಲ್ 1 ಲಕ್ಷ ದೇಣಿಗೆ

ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ (Odisha Train Accident) 270ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆ, 1000ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಈ ಘನ ಘೋರ ದುರಂತಕ್ಕೆ ದೇಶದ ಜೊತೆಗೆ ವಿಶ್ವವೂ ಮಮ್ಮಲ ಮರುಗಿದೆ. ಈ ಘೋರ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ದೇಶ-ವಿದೇಶಗಳ ಗಣ್ಯರೇ ಸಂತಾಸ ಸೂಚಿಸಿದ್ದರು. ಅದರಂತೆ ಕ್ರಿಕೆಟಿಗರು ಕೂಡ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ವೀರೇಂದ್ರ ಸೆಹ್ವಾಗ್​, ವಿವಿಎಸ್​ ಲಕ್ಷ್ಮಣ್​, ಹರ್ಭಜನ್​ ಸಿಂಗ್​... ಹೀಗೆ ಪ್ರಮುಖ ಆಟಗಾರರು ಸಂತಾಪ ಸೂಚಿಸಿದ್ದರು.

1 ಲಕ್ಷ ದೇಣಿಗೆ ಕೊಟ್ಟ ಚಹಲ್​

ಈಗ ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತದ ಸಂತ್ರಸ್ತರಿಗೆ ಟೀಮ್​ ಇಂಡಿಯಾದ ಸ್ಪಿನ್ನರ್​ ಯುಜುವೇಂದ್ರ ಚಹಲ್​ (Yuzvendra Chahal), 1 ಲಕ್ಷ ದೇಣಿಗೆ ಕೊಟ್ಟಿದ್ದಾರೆ. ಚಹಲ್​ ಸಹಾಯಹಸ್ತ ಚಾಚಿರುವ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಅವರು ಜನಪ್ರಿಯ ಆನ್​ಲೈನ್ ಗೇಮಿಂಗ್ ಟೀಮ್​ S8ulesports ಯೂಟ್ಯೂಬ್‌ ಲೈವ್ ಸ್ಟ್ರೀಮ್ ಮೂಲಕ ದೇಣಿಗೆ ಸಂಗ್ರಹಿಸಿದ್ದರು. ಈ ವೇಳೆ ಲೈವ್​ ಬಂದಿದ್ದ ಯುಜುವೇಂದ್ರ ಚಹಲ್ ಒಡಿಶಾ ರೈಲು ಅಪಘಾತದ ಸಂತ್ರಸ್ತರಿಗಾಗಿ 1 ಲಕ್ಷ ರೂಪಾಯಿ ದೇಣಿಗೆ ನೀಡಿದರು.

ಇನ್ನು ಚಹಲ್ ಅವರ ಈ ಮಾನವೀಯತೆಗೆ S8UL ತಂಡದ ಸದಸ್ಯರು, ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಆದರೆ ಚಹಲ್ ನೀಡಿದ ದೇಣಿಗೆ ಮೊತ್ತಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದೆ. ಕೆಲ ನೆಟ್ಟಿಗರು ಟೀಮ್ ಇಂಡಿಯಾ ಆಟಗಾರನಾಗಿ ಕೋಟಿ ಕೋಟಿ ದುಡಿಯುವ ಚಹಲ್​, ಸಂತ್ರಸ್ತರ ನೆರವಿಗೆ ನೀಡಿದ ಮೊತ್ತ ತುಂಬಾ ಕಡಿಮೆ ಎಂದು ವಾದಿಸಿದರೆ, ಇನ್ನೂ ಹಲವರು ಕೊಡುವ ಮನಸ್ಸಿದ್ದರೆ ಎಷ್ಟಾದರೂ ಸಾಕು ಎಂದು ವಾದಿಸಿದವರಿಗೆ ತಿರುಗೇಟು ಕೊಟ್ಟಿದ್ದಾರೆ.

ಐಪಿಎಲ್​ನಲ್ಲೇ 6.5 ಕೋಟಿ ದುಡಿಮೆ

ಇನ್ನೂ ಕೆಲವರು ಐಪಿಎಲ್​ನಲ್ಲಿ ಪಡೆಯುವ ಸಂಬಳಕ್ಕೆ ಸಂಬಂಧಿಸಿ ಟ್ರೋಲ್​ ಮಾಡುತ್ತಿದ್ದಾರೆ. ಐಪಿಎಲ್​ನ ಪ್ರತಿ ಸೀಸನ್​ಗೆ 6.5 ಕೋಟಿ ಸಂಪಾದನೆ ಮಾಡುತ್ತಾರೆ. ಇದರ ಜೊತೆಗೆ ಜಾಹೀರಾತುಗಳಲ್ಲೂ ಕೋಟಿ ಕೋಟಿ ದುಡಿಯುತ್ತಾರೆ. ಪ್ರತಿ ಪಂದ್ಯಕ್ಕೂ ವೇತನ ಪಡೆಯುತ್ತಾರೆ. ಅಂತಹ ಆಟಗಾರನಿಂದ ಈಗ ಇಷ್ಟು ಮೊತ್ತದ ದೇಣಿಗೆ ನಿರೀಕ್ಷಿಸಿರಲಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.

ಸೆಹ್ವಾಗ್​​ ಅವರಿಂದ ಉಚಿತ ಶಿಕ್ಷಣ

ಒಂದೆಡೆ ಚಹಲ್​ ಒಂದು ಲಕ್ಷ ದೇಣಿಗೆ ಕೊಟ್ಟಿದ್ದರೆ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag)​, ಅಪಘಾತದಲ್ಲಿ ಸಾವನ್ನಪ್ಪಿದ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಪಘಾತದ ಸ್ಥಳದ ಫೋಟೋದೊಂದಿಗೆ ಟ್ವೀಟ್‌ ಮಾಡಿರುವ ವೀರು, ಈ ಚಿತ್ರವು ನಮ್ಮನ್ನು ದೀರ್ಘಕಾಲ ಕಾಡುತ್ತದೆ. ಇಂತಹ ದುಃಖದ ಸಮಯದಲ್ಲಿ, ಈ ದುರಂತ ಅಪಘಾತದಲ್ಲಿ ಜೀವ ಕಳೆದುಕೊಂಡವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ನಾನು ವಹಿಸಬಲ್ಲೆ. ಅಂತಹ ಮಕ್ಕಳಿಗೆ ನಾನು ಸೆಹ್ವಾಗ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಬೋರ್ಡಿಂಗ್ ಸೌಲಭ್ಯದಲ್ಲಿ ಉಚಿತ ಶಿಕ್ಷಣವನ್ನು ನೀಡುತ್ತೇನೆ ಎಂದು ಉದಾರತೆ ಮೆರೆದಿದ್ದಾರೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ.

ಕೊಹ್ಲಿ 30 ಕೋಟಿ ನೀಡಿರುವುದು ಸುಳ್ಳು

ಒಡಿಶಾದಲ್ಲಿ ನಡೆದ ರೈಲು ಅಪಘಾತದ ಸಂತ್ರಸ್ತರಿಗೆ ಭಾರತದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ (Virat Kohli), 30 ಕೋಟಿ ರೂಪಾಯಿ ಸಹಾಯಹಸ್ತ ಚಾಚಿದ್ದಾರೆ ಎಂಬ ಸುದ್ದಿಗಳು ವೈರಲ್​ ಆಗುತ್ತಿವೆ. ಆದರೆ ಇದು ಸುಳ್ಳು ಸುದ್ದಿ. ಕೊಹ್ಲಿ ಈವರೆಗೂ ಅಂತಹ ಹೇಳಿಕೆ ನೀಡಿಲ್ಲ. ಇದೊಂದು ಸುಳ್ಳು ಸುದ್ದಿ. ಕೊಹ್ಲಿಯಾಗಲಿ ಅಥವಾ ಪತ್ನಿ ಅನುಷ್ಕಾ ಶರ್ಮಾ ಆಗಲಿ ಹೇಳಿಕೆ ಅಥವಾ ಪ್ರಕಟಣೆಯನ್ನಾಗಲಿ ನೀಡಿಲ್ಲ. ಸದ್ಯ ಇಂಗ್ಲೆಂಡ್​​ನಲ್ಲಿ ಡಬ್ಲ್ಯುಟಿಸಿ ಫೈನಲ್​​​ ಆಡುತ್ತಿರುವ ಕೊಹ್ಲಿ, ಭಾರತಕ್ಕೆ ಮರಳಿದ ಬಳಿಕ ದೇಣಿಗೆ ಕೊಟ್ಟರೂ ಅಚ್ಚರಿ ಇಲ್ಲ. ಏಕೆಂದರೆ ಕೋವಿಡ್​ ಸೇರಿದಂತೆ ಈ ಹಿಂದೆ ಹಲವಾರು ಬಾರಿ ಸಹಾಯ ಮಾಡಿದ್ದಾರೆ.