ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಕ್ರಿಸ್ಟಿಯಾನೊ ರೊನಾಲ್ಡೊ; ಈ ಸಾಧನೆ ಮಾಡಿದ ವಿಶ್ವದ ಏಕೈಕ ಫುಟ್ಬಾಲ್ ಆಟಗಾರ
Cristiano Ronaldo: ಫುಟ್ಬಾಲ್ ದೈತ್ಯ ಕ್ರಿಸ್ಟಿಯಾನೊ ರೊನಾಲ್ಡೊ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಕ್ಲಬ್ ಫುಟ್ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಗೆಲುವುಗಳನ್ನು ದಾಖಲಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಪೋರ್ಚುಗಲ್‌ನ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಕ್ರೀಡಾ ಲೋಕದ ಅತ್ಯಂತ ಜನಪ್ರಿಯ ಆಟಗಾರ. ಇದಕ್ಕೆ ಫುಟ್ಬಾಲ್ ಕ್ರೀಡೆಯಲ್ಲಿ ಅವರ ಅಮೋಘ ಪ್ರದರ್ಶನ ಹಾಗೂ ದಾಖಲೆಗಳೇ ಕಾರಣ. ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ರೊನಾಲ್ಡೊ, ಕಾಲ್ಚೆಂಡು ಕ್ರೀಡೆಯಲ್ಲಿ ಹಲವಾರು ದಾಖಲೆ ಹಾಗೂ ಮೈಲುಗಲ್ಲುಗಳನ್ನು ಸಾಧಿಸಿದ್ದಾರೆ. ಇದೀಗ ಪೋರ್ಚುಗಲ್ ಫುಟ್ಬಾಲ್ ದೈತ್ಯ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಾರೆ.
ಸೌದಿ ಪ್ರೊ ಲೀಗ್‌ನಲ್ಲಿ ಗುರುವಾರ (ಜನವರಿ 30) ನಡೆದ ಪಂದ್ಯದಲ್ಲಿ ರೊನಾಲ್ಡೊ ಗಳಿಸಿದ ಗೋಲಿನ ನೆರವಿಂದ ಅಲ್ ನಾಸರ್ ತಂಡವು ಅಲ್-ರಯೆದ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಇದರೊಂದಿಗೆ ರೊನಾಲ್ಡೊ ಈಗ ಫುಟ್ಬಾಲ್ ಇತಿಹಾಸದಲ್ಲಿ ಕ್ಲಬ್‌ಗಳ ಪರ ಆಡಿ ಬರೋಬ್ಬರಿ 700 ಗೆಲುವುಗಳನ್ನು ದಾಖಲಿಸಿದ ವಿಶ್ವದ ಮೊದಲ ಮತ್ತು ಏಕೈಕ ಫುಟ್ಬಾಲ್ ಆಟಗಾರ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಾರ್ಕಾ ಪ್ರಕಾರ, ರೊನಾಲ್ಡೊ ಸ್ಪೋರ್ಟಿಂಗ್‌ನೊಂದಿಗೆ 13, ರಿಯಲ್ ಮ್ಯಾಡ್ರಿಡ್ ಕ್ಲಬ್ ಪರ 316, ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಪರ ಆಡಿ 214, ಜುವೆಂಟಸ್ ತಂಡದಲ್ಲಿ 91 ಮತ್ತು ಅಲ್-ನಾಸರ್ ಕ್ಲಬ್ ಪರ 66 ಗೆಲುವುಗಳನ್ನು ದಾಖಲಿಸಿದ್ದಾರೆ.
ರೊನಾಲ್ಡೊ ಈ ಎಲ್ಲಾ ಪಂದ್ಯಗಳಲ್ಲಿ ಬರೋಬ್ಬರಿ 900ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. ಫುಟ್ಬಾಲ್ ಕ್ಲಬ್ ಇತಿಹಾಸದಲ್ಲಿ ಪ್ರಮುಖ ಗೋಲ್ ಸ್ಕೋರರ್ ಏನಿಸಿಕೊಂಡಿದ್ದಾರೆ. ಸೌದಿ ಕ್ಲಬ್ ಪರ ರೊನಾಲ್ಡೊ 94 ಪಂದ್ಯಗಳಲ್ಲಿ 85 ಗೋಲುಗಳನ್ನು ಗಳಿಸಿದ್ದಾರೆ.
2026ರ ಫಿಫಾ ವಿಶ್ವಕಪ್‌ನಲ್ಲಿ ಆಡುತ್ತಾರಾ ರೊನಾಲ್ಡೊ?
ರೊನಾಲ್ಡೊ ಸಹ ಆಟಗಾರ ಬ್ರೂನೋ ಫರ್ನಾಂಡಿಸ್, ರೊನಾಲ್ಡೊ 2026ರ ಫಿಫಾ ವಿಶ್ವಕಪ್‌ನಲ್ಲಿ ಆಡಬಹುದು ಎಂದು ಸುಳಿವು ನೀಡಿದ್ದರು. “ವಿಶ್ವಕಪ್ ಆಡುತ್ತಾರೆ ಎಂಬುದು ನನಗೆ ಬಹುತೇಕ ಖಚಿತವಾಗಿದೆ. ಕ್ರಿಸ್ಟಿಯಾನೊ ರೊನಾಲ್ಡೊ ರಾಷ್ಟ್ರೀಯ ತಂಡದೊಂದಿಗೆ ವಿಶ್ವಕಪ್ ಗೆಲ್ಲುವ ಕನಸನ್ನು ಈಡೇರಿಸಿದರೆ ಅದು ಅವರಿಗೆ ಮಾತ್ರವಲ್ಲ, ಪೋರ್ಚುಗೀಸ್ ಜನರಿಗೂ ಖುಷಿ” ಎಂದು ಮ್ಯಾಂಚೆಸ್ಟರ್ ಯುನೈಟೆಡ್ ನಾಯಕ ಬ್ರೂನೋ ಫರ್ನಾಂಡಿಸ್ ಮಾಧ್ಯಮ ಹೇಳಿಕೆ ನೀಡಿದ್ದಾರೆ.
ರೊನಾಲ್ಡೊ ಅವರ ಶ್ರೀಮಂತ ವೃತ್ತಿಬದುಕಿನಲ್ಲಿ ಇಲ್ಲದಿರುವ ಏಕೈಕ ಪ್ರಮುಖ ಟ್ರೋಫಿ ಎಂದರೆ ಫಿಫಾ ವಿಶ್ವಕಪ್. ವಿಶ್ವದ ದಿಗ್ಗಜ ಫುಟ್ಬಾಲ್ ಆಟಗಾರನಿಗೆ 2026ರ ವಿಶ್ವಕಪ್ ಆವೃತ್ತಿ ವೇಳೆಗೆ 41 ವರ್ಷ ವಯಸ್ಸಾಗಲಿದೆ. ಐದು ಬಾರಿಯ ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತ, ಐದು ವಿಭಿನ್ನ ಫಿಫಾ ವಿಶ್ವಕಪ್ ಆವೃತ್ತಿಗಳಲ್ಲಿ ಗೋಲು ಗಳಿಸಿದ ವಿಶ್ವದ ಏಕೈಕ ಆಟಗಾರರಾಗಿದ್ದಾರೆ. ಪೋರ್ಚುಗಲ್ ಪರ 217 ಪಂದ್ಯಗಳನ್ನಾಡಿರುವ ದಿಗ್ಗಜ, 135 ಗೋಲುಗಳನ್ನು ಗಳಿಸಿದ್ದಾರೆ.
