ಕನ್ನಡ ಸುದ್ದಿ  /  Sports  /  Cristiano Ronaldo Kicks Bottle As Fans Chants Lionel Messi Name

Watch: ಪಂದ್ಯ ಸೋತು ಹೊರನಡೆಯುವಾಗ 'ಮೆಸ್ಸಿ' ಹೆಸರು ಕೂಗಿ ಕೆಣಕಿದ ಅಭಿಮಾನಿಗಳು; ಕೋಪಗೊಂಡ ರೊನಾಲ್ಡೊ ಮಾಡಿದ್ದೇನು?

ಮೊದಲೇ ಸೋಲಿನಿಂದ ನಿರಾಶರಾಗಿದ್ದ ಅವರಿಗೆ ಎದುರಾಳಿ ತಂದ ಅಭಿಮಾನಿಗಳು ಗಾಯದ ಮೇಲೆ ಉಪ್ಪು ಸವರಿದರು. ಇದರಿಂದಾಗಿ ರೊನಾಲ್ಡೊ ಕೋಪ ನೆತ್ತಿಗೇರಿತು.

ರೊನಾಲ್ಡೊ
ರೊನಾಲ್ಡೊ

ಸೌದಿ ಪ್ರೊಫೆಷನಲ್‌ ಲೀಗ್‌ನ ಮಾರ್ಚ್ 9ರ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದ ತಂಡಕ್ಕೆ ಸೋಲು ಎದುರಾಯ್ತು. ಅಲ್-ಇತ್ತಿಹಾದ್ (Al-Ittihad) ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ನಾಯಕತ್ವದ ಅಲ್ ನಾಸರ್‌ ತಂಡವು 0-1 ಅಂತರದ ರೋಚಕ ಸೋಲು ಕಂಡಿತು.

ನಿನ್ನೆಯ ಪಂದ್ಯದಲ್ಲಿ ರೊನಾಲ್ಡೊ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಈವರೆಗಿನ ಪಂದ್ಯದಲ್ಲಿ ತಂಡದ ಗೆಲವಿನಲ್ಲಿ ದಿಗ್ಗಜ ಫುಟ್ಬಾಲ್‌ ಆಟಗಾರ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ನಿನ್ನೆಯ ಪಂದ್ಯದಲ್ಲಿ ಎದುರಾಳಿ ತಂಡವು ಪ್ರಾಬಲ್ಯ ಸಾಧಿಸಿತು.

ಜೆಡ್ಡಾದ ಕಿಂಗ್ ಅಬ್ದುಲ್ಲಾ ಸ್ಪೋರ್ಟ್ಸ್ ಸಿಟಿಯಲ್ಲಿ ನಡೆದ ಪಂದ್ಯದಲ್ಲಿ ಎದುರಾದ ಈ ಸೋಲಿನಿಂದಾಗಿ ಅಲ್ ನಾಸರ್‌ ತಂಡವು ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಿಂದ ಕೆಳಗಿಳಿಯಬೇಕಾಗಿದೆ. ಈಗ ತಂಡವು 20 ಪಂದ್ಯಗಳಿಂದ 46 ಅಂಕಗಳೊಂದಿಗೆ 16 ತಂಡಗಳ ಲೀಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ವಿಶ್ವದ ಅಗ್ರ-ಶ್ರೇಣಿಯ ಆಟಗಾರನೆಂಬ ಖ್ಯಾತಿಯನ್ನು ರೊನಾಲ್ಡೊ ಹೊಂದಿದ್ದರೂ ಸಹ, ಕೆಲ ದಿನಗಳಲ್ಲಿ ನಿರೀಕ್ಷಿತ ಪ್ರದರ್ಶನ ಬರುವುದಿಲ್ಲ. ಅಲ್-ಇತ್ತಿಹಾದ್‌ನಂತಹ ಅಸಾಧಾರಣ ಎದುರಾಳಿಯ ವಿರುದ್ಧ ಈ ನಿರ್ದಿಷ್ಟ ಪಂದ್ಯವು ಅಲ್ ನಾಸರ್‌ಗೆ ಕಠಿಣವಾಗಿತ್ತು. ಭಾರಿ ಪೈಪೋಟಿ ಹಾಗೂ ರೋಚಕತೆಯಿಂದ ಸಾಗಿದ ಪಂದ್ಯದಲ್ಲಿ ಅಂತಿಮವಾಗಿ ಅಲ್ ನಾಸರ್ ಗೆಲುವು ಸಾಧ್ಯವಾಗಲಿಲ್ಲ.

ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವಿನೊಂದಿಗೆ ಈ ಪಂದ್ಯವನ್ನು ಕೂಡಾ ಗೆದ್ದು ಐದನೇ ಗೆಲುವನ್ನು ತನ್ನದಾಗಿಸಿಕೊಳ್ಳುವ ರೊನಾಲ್ಡೊ ಬಳಗದ ಆಸೆಗೆ ಅಲ್-ಇತ್ತಿಹಾದ್ ತಣ್ಣೀರೆರಚಿತು. ಅಲ್ ಇತ್ತಿಹಾದ್ ವಿರುದ್ಧ ತಮ್ಮ ತವರು ಮೈದಾನದಲ್ಲಿ ಜಯ ಸಾಧಿಸಲು ಅವರಿಗೆ ಸಾಧ್ಯವಾಗಲಿಲ್ಲ. ಸೌದಿ ಅರೇಬಿಯನ್ ಲೀಗ್‌ಗೆ ಹೊಂದಿಕೊಳ್ಳಲು ಆರಂಭದಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿದ್ದ ರೊನಾಲ್ಡೊ, ತಂಡದ ನೀರಸ ಪ್ರದರ್ಶನದಿಂದ ನಿರಾಶೆಗೊಂಡರು. ಮೊದಲೇ ಸೋಲಿನಿಂದ ನಿರಾಶರಾಗಿದ್ದ ಅವರಿಗೆ ಎದುರಾಳಿ ತಂದ ಅಭಿಮಾನಿಗಳು ಗಾಯದ ಮೇಲೆ ಉಪ್ಪು ಸವರಿದರು. ಇದರಿಂದಾಗಿ ರೊನಾಲ್ಡೊ ಕೋಪ ನೆತ್ತಿಗೇರಿತು.

ಪ್ರತಿಸ್ಪರ್ಧಿ ತಂಡದ ಅಭಿಮಾನಿಗಳು, ರೊನಾಲ್ಡೊ ಅವರು ದೀರ್ಘಾವಧಿಯ ಆನ್-ಫೀಲ್ಡ್ ಪ್ರತಿಸ್ಪರ್ಧಿ ಲಿಯೋನೆಲ್ ಮೆಸ್ಸಿಯ ಹೆಸರನ್ನು ಜೋರಾಗಿ ಹೇಳುವ ಮೂಲಕ ಅವರನ್ನು ಕೆಣಕಿದರು. ಮೈದಾನದಲ್ಲಿ ರೊನಾಲ್ಡೊ ನಡೆದು ಬರುತ್ತಿರುವಾಗ ಅಭಿಮಾನಿಗಳು ಜೋರಾಗಿ "ಮೆಸ್ಸಿ, ಮೆಸ್ಸಿ" ಎಂದು ಕೂಗುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ಅದರಲ್ಳೂ ಈ ಒಂದು ನಿರ್ದಿಷ್ಟ ವಿಡಿಯೋ ಅಭಿಮಾನಿಗಳ ಗಮನಸೆಳೆದಿದೆ. ರೊನಾಲ್ಡೊ ತಮ್ಮ ತಂಡದ ನೀರಸ ಪ್ರದರ್ಶನದ ಬಳಿಕ ಹತಾಶೆಯಿಂದ ನಡೆದು ಬರುತ್ತಿದ್ದಾಗ, ಅಭಿಮಾನಿಗಳ ಬೊಬ್ಬೆಗೆ ಕೋಪಗೊಂಡಿದ್ದಾರೆ. ಈ ವೇಳೆ ಮೈದಾನದಲ್ಲಿದ್ದ ನೀರಿನ ಬಾಟಲಿಯನ್ನು ಕಾಲಿನಿಂದ ಒದ್ದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಐದು ಬಾರಿ ಬ್ಯಾಲನ್ ಡಿ'ಓರ್ ವಿಜೇತ ರೊನಾಲ್ಡೊ, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸೌದಿ ಅರೇಬಿಯಾದ ಕ್ಲಬ್‌ ಸೇರಿ ಅಚ್ಚರಿ ಮೂಡಿಸಿದ್ದರು. ಅವರು ಸೌದಿ ಕ್ಲಬ್‌ನೊಂದಿಗೆ ಲಾಭದಾಯಕ ಎರಡೂವರೆ ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದ ಮೌಲ್ಯವು ವರ್ಷಕ್ಕೆ 200 ಮಿಲಿಯನ್ ಯುರೋಗಳಷ್ಟು ಮೌಲ್ಯಯುತವಾಗಿದೆ ಎಂದು ಅಂದಾಜಿಸಲಾಗಿದೆ.