FIFA World Cup 2022: ವಿಶ್ವಕಪ್‌ನಿಂದ ಕೆನಡಾವನ್ನು ಹೊರದಬ್ಬಿದ ಕ್ರೊಯೇಷಿಯಾ; ಸ್ಪೇನ್ ಮತ್ತು ಜರ್ಮನಿ ಪಂದ್ಯ ಡ್ರಾ
ಆಂಡ್ರೆಜ್ ಕ್ರಾಮರಿಕ್ ಅವರ ಎರಡು ಗೋಲುಗಳ ನೆರವಿನಿಂದ, ಭಾನುವಾರ ಕೆನಡಾ ವಿರುದ್ಧ ಕ್ರೊಯೇಷಿಯಾ 4-1 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಕೆನಡಾ ತಂಡದ ನಾಕೌಟ್ ಕನಸು ನುಚ್ಚುನೂರಾಯಿತು.
ಕತಾರ್: ಫಿಫಾ ವಿಶ್ವಕಪ್‌ನಲ್ಲಿ ನಿನ್ನೆಯೂ ರೋಚಕ ಫಲಿತಾಂಶ ಹೊರಬಿದ್ದಿದೆ. ಕ್ರಿಯೇಷಿಯಾ ವಿರುದ್ಧ ಸೋತು, ಕೆನಡಾ ತಂಡ ಗುಂಪು ಹಂತದಿಂದಲೇ ಹೊರಬಿದ್ದಿದೆ. ಮತ್ತೊಂದೆಡೆ ಬಲಿಷ್ಠ ಜರ್ಮನಿ ತಂಡ ಕೂಡಾ ಗೆಲ್ಲಲಾಗದೆ, ಮುಂದೆ ಮಾಡು ಇಲ್ಲವೇ ಮಡಿ ಪಂದ್ಯವನ್ನು ಎದುರಿಸಲಿದೆ. ನಿನ್ನೆ ನಡೆದ ಎಲ್ಲಾ ನಾಲ್ಕು ಪಂದ್ಯಗಳ ಫಲಿತಾಂಶ ಹೀಗಿವೆ.
ಜಪಾನ್ ವಿರುದ್ಧ ಗೆದ್ದ ಕೋಸ್ಟರಿಕಾ
ತಮ್ಮ ಆರಂಭಿಕ ಪಂದ್ಯದಲ್ಲಿ ಸ್ಪೇನ್ ವಿರುದ್ಧ 0-7 ಗೋಲುಗಳ ಅಂತರದಿಂದ ಸೋಲು ಕಂಡಿದ್ದ ಕೋಸ್ಟರಿಕಾ, ಗುಂಪು Eನಲ್ಲಿ ತನ್ನ ಎರಡನೇ ಪಂದ್ಯದಲ್ಲಿ ಜಪಾನ್ ವಿರುದ್ಧ 1-0 ಗೆಲುವಿನೊಂದಿಗೆ ಗೆಲುವಿನ ಲಯಕ್ಕೆ ಮರಳಿತು. ಭಾನುವಾರ ಕತಾರ್‌ನ ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಮೊದಲಾರ್ಧದಲ್ಲಿ 0-0 ಯೊಂದಿಗೆ ಮುಕ್ತಾಯವಾಯ್ತು. ದ್ವಿತೀಯಾರ್ಧದಲ್ಲಿ ಜಾಗರೂಕ ಆಟ ಪ್ರದರ್ಶಿಸಿದ ಕೋಸ್ಟರಿಕಾ, ಅಂತಿಮವಾಗಿ 81ನೇ ನಿಮಿಷದಲ್ಲಿ ಗೋಲು ಗಳಿಸಿತು. ಕೀಷರ್ ಫುಲ್ಲರ್ ಮಹತ್ವದ ಗೋಲು ಗಳಿಸುವುದರೊಂದಿಗೆ ಮುನ್ನಡೆ ಸಾಧಿಸಿದರು. ಗೆಲುವಿನ ಬಳಿಕ, ಕೋಸ್ಟರಿಕಾ ಇ ಗುಂಪಿನಲ್ಲಿ ಮೂರನೇ ಸ್ಥಾನಕ್ಕೆ ಏರಿತು. ಬಲಿಷ್ಠ ಜರ್ಮನಿಯನ್ನು ಹಿಂದಿಕ್ಕಿತು. ಸ್ಪೇನ್ ಅಗ್ರಸ್ಥಾನವನ್ನು ಆಕ್ರಮಿಸಿಕೊಂಡರೆ, ಜಪಾನ್ ಎರಡನೇ ಸ್ಥಾನದಲ್ಲಿದೆ.
ಬೆಲ್ಜಿಯಂ ಮತ್ತು ಮೊರಾಕೊ ಪಂದ್ಯ
ಅಲ್ ಥುಮಾಮಾ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ F ಪಂದ್ಯದಲ್ಲಿ ಬೆಲ್ಜಿಯಂ ಮತ್ತು ಮೊರಾಕೊ ಮುಖಾಮುಖಿಯಾದವು. ರಾಬರ್ಟೊ ಮಾರ್ಟಿನೆಜ್ ನೇತೃತ್ವದ ಬೆಲ್ಜಿಯಂ ತಂಡವನ್ನು ಅಂತಿಮವಾಗಿ 2-0 ಗೋಲುಗಳಿಂದ ಮೊರಾಕೊ ಸೋಲಿಸಿತು. ಮೊರಾಕೊ ಕೈಯಲ್ಲಿ 2-0 ಅಂತರದಿಂದ ಸೋಲುವುದರೊಂದಿಗೆ, ರೆಡ್ ಡೆವಿಲ್ಸ್ ಪಡೆಯು ಫಿಫಾ ವಿಶ್ವಕಪ್‌ನ ನಾಕೌಟ್ ಸುತ್ತಿನಲ್ಲಿ ಆರಂಭಿಕ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆ. ಅಬ್ದೆಲ್‌ಹಮಿದ್ ಸಬೀರಿ ಮತ್ತು ಅಬ್ದೆಲ್‌ಹಮಿದ್ ಸಬೀರ್ ಅವರು ಗಳಿಸಿದ ಗೋಲುಗಳು, ಕತಾರ್‌ನಲ್ಲಿ ಬೆಲ್ಜಿಯಂ ವಿರುದ್ಧ ಮೊರಾಕೊ ಆಟಗಾರರ ಐತಿಹಾಸಿಕ ಗೆಲುವಿಗೆ ಕಾರಣವಾದವು. ಇದು ಫಿಫಾ ವಿಶ್ವಕಪ್‌ನಲ್ಲಿ ಆಫ್ರಿಕನ್ ರಾಷ್ಟ್ರದ ವಿರುದ್ಧ ಬೆಲ್ಜಿಯಂನ ಮೊದಲ ಸೋಲು.
ವಿಶ್ವಕಪ್‌ನಿಂದ ಕೆನಡಾವನ್ನು ಹೊಡೆದೋಡಿಸಿದ ಕ್ರೊಯೇಷಿಯಾ
ಆಂಡ್ರೆಜ್ ಕ್ರಾಮರಿಕ್ ಅವರ ಎರಡು ಗೋಲುಗಳ ನೆರವಿನಿಂದ, ಭಾನುವಾರ ಕೆನಡಾ ವಿರುದ್ಧ ಕ್ರೊಯೇಷಿಯಾ 4-1 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಕೆನಡಾ ತಂಡದ ನಾಕೌಟ್ ಕನಸು ನುಚ್ಚುನೂರಾಯಿತು. 2018ರ ವಿಶ್ವಕಪ್ ರನ್ನರ್ ಅಪ್ ಕ್ರೊಯೇಷಿಯಾ, ಅರ್ಹ ಆಟ ಪ್ರದರ್ಶಿಸಿತು. ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲಾರ್ಧದಲ್ಲೇ ಎರಡು ಗೋಲು ಗಳಿಸುವುದರೊಂದಿಗೆ ಲೀಡ್ ಸಾಧಿಸಿತು.
ಸೋಲಿನ ನಡುವೆ ಕೆನಡಾ ಆಟಗಾರನ ದಾಖಲೆ
ಈ ಪಂದ್ಯದಲ್ಲಿ ಕೆನಡಾ ಗಳಿಸಿದ್ದು ಒಟ್ಟು ಒಂದು ಗೋಲು. ಅದು ಪಂದ್ಯ ಆರಂಭವಾದ 68 ಸೆಕೆಂಡುಗಳಲ್ಲಿ ಬಂತು. ಕೆನಡಾದ ಅಲ್ಫೊನ್ಸೊ ಡೇವಿಸ್ ಫಿಫಾ ವಿಶ್ವಕಪ್ 2022ರಲ್ಲಿ ಅತಿ ವೇಗವಾಗಿ ಗೋಲು ಗಳಿಸಿ ದಾಖಲೆ ಬರೆದರು. ಆ ಬಳಿಕ ತಂಡಕ್ಕೆ ಒಂದೇ ಒಂದು ಗೋಲು ಕೂಡಾ ಬರಲಿಲ್ಲ.
ಸ್ಪೇನ್ ಮತ್ತು ಜರ್ಮನಿ ಪಂದ್ಯ ಡ್ರಾ
ತಡರಾತ್ರಿ ನಡೆದ ಜರ್ಮನಿ ಮತ್ತು ಸ್ಪೇನ್ ನಡುವಿನ ಪಂದ್ಯವು ಸಹಜವಾಗಿಯೇ ಈ ಗುಂಪಿನ ಪ್ರಮುಖ ಅಂಶ. ತನ್ನ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದ ಜರ್ಮನಿ, ಈ ಪಂದ್ಯದಲ್ಲೂ ಗೆಲುವು ದಕ್ಕಿಸಿಕೊಳ್ಳಲು ವಿಫಲವಾಯ್ತು. ಅಂತಿಮವಾಗಿ ಪಂದ್ಯವು 1-1ರಿಂದ ಸಮಬಲಗೊಂಡು ಡ್ರಾ ಆಯಿತು. ಕೋಸ್ಟರಿಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿ 7-0 ಅಂತರದಿಂದ ಗೆದ್ದಿದ್ದ ಸ್ಪೇನ್, ಬಲಿಷ್ಠ ಜರ್ಮನಿ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ಇತ್ತ 2014ರ ಚಾಂಪಿಯನ್‌ಗಳು ಕೂಡಾ ಸಾಕಷ್ಟು ಒತ್ತಡದಲ್ಲಿದ್ದಾರೆ. ತಮ್ಮ ಮುಂದಿನ ಪಂದ್ಯದಲ್ಲಿ ಕೋಸ್ಟರಿಕಾವನ್ನು ಸೋಲಿಸುವುದನ್ನು ಬಿಟ್ಟು ಜರ್ಮನಿಗೆ ಬೇರೆ ದಾರಿಯಿಲ್ಲ.