ವಿಶ್ವ ಚೆಸ್ ರ‍್ಯಾಂಕಿಂಗ್: ಅರ್ಜುನ್ ಎರಿಗೈಸಿ ಹಿಂದಿಕ್ಕಿ ಭಾರತದ ಹೊಸ ನಂಬರ್ 1 ಸ್ಥಾನಕ್ಕೆ ಏರಿದ ಡಿ ಗುಕೇಶ್
FIDE Chess Ranking: ವಿಜ್ಕ್ ಆನ್ ಝೀನಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಹಾಲಿ ವಿಶ್ವ ಚೆಸ್ ಚಾಂಪಿಯನ್ ವಿನ್ಸೆಂಟ್ ಕೀಮರ್ ವಿರುದ್ಧದ ಗೆಲುವಿನೊಂದಿಗೆ ಡಿ ಗುಕೇಶ್ ಅವರು ಫಿಡೆ ಚೆಸ್ ಶ್ರೇಯಾಂಕದಲ್ಲಿ ಭಾರತದ ಹೊಸ ನಂ 1 ಆಗಿ ಹೊರಹೊಮ್ಮಿದ್ದಾರೆ.

2024ರ ಡಿಸೆಂಬರ್ನಲ್ಲಿ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಗುಕೇಶ್ ದೊಮ್ಮರಾಜು (D Gukesh) ಅವರು ಇದೀಗ ವಿಶ್ವ ಚೆಸ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಗುರುವಾರ (ಜನವರಿ 23) ನೆದರ್ಲೆಂಡ್ಸ್ನಲ್ಲಿ ನಡೆದ ಟಾಟಾ ಸ್ಟೀಲ್ ಟೂರ್ನಮೆಂಟ್‌ನಲ್ಲಿ ಜರ್ಮನ್ ಆಟಗಾರ ವಿನ್ಸೆಂಟ್ ಕೀಮರ್ ಅವರನ್ನು ಮಣಿಸಿದ ನಂತರ ಭಾರತದ ಚೆಸ್ ಪಟು ಗುಕೇಶ್ ಫಿಡೆ ಚೆಸ್ ರ್ಯಾಂಕಿಂಗ್ನಲ್ಲಿ (FIDE Chess Ranking) ಅತ್ಯುನ್ನತ ಶ್ರೇಯಾಂಕದ ಭಾರತೀಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಭಾರತದ ಮತ್ತೊಬ್ಬ ಆಟಗಾರ ಅರ್ಜುನ್ ಎರಿಗೈಸಿ ಅವರನ್ನು ಕೆಳಗಿಳಿಸಿದ್ದಾರೆ.
ವಿಜ್ಕ್ ಆನ್ ಝೀನಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಹಾಲಿ ವಿಶ್ವ ಚೆಸ್ ಚಾಂಪಿಯನ್ ವಿನ್ಸೆಂಟ್ ಕೀಮರ್ ವಿರುದ್ಧ 72-ನಡೆಗಳ ಹೋರಾಟದಲ್ಲಿ ಗೆದ್ದು ಭಾರತದ ಪರ ಅಗ್ರಸ್ಥಾನ ಪಡೆದಿದ್ದಾರೆ. ಗುಕೇಶ್ ಲೈವ್ ರೇಟಿಂಗ್ಗಳಲ್ಲಿ ಅರ್ಜುನ್ ಎರಿಗೈಸಿ ಅವರನ್ನು ಹಿಂದಿಕ್ಕಿ ಭಾರತದ ನಂಬರ್ 1 ಆಟಗಾರನಾಗಿದ್ದಾರೆ. ಇತ್ತೀಚೆಗೆ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದ ಗುಕೇಶ್ 2784 ರೇಟಿಂಗ್ ಪಾಯಿಂಟ್ ಗಳಿಸಿ ಮೊದಲ ಸ್ಥಾನಕ್ಕೆ ಏರಿದರೆ, ದೀರ್ಘಕಾಲ ಅತ್ಯುನ್ನತ ಶ್ರೇಯಾಂಕದ ಭಾರತೀಯ ಆಗಿದ್ದ ಎರಿಗೈಸಿ 2779.5 ರೇಟಿಂಗ್ ಪಾಯಿಂಟ್‌ಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಶ್ರೇಯಾಂಕದಲ್ಲಿ ಪ್ರಜ್ಞಾನಂದ ಮತ್ತು ವಿಶ್ವನಾಥನ್ ಆನಂದ್ ಅವರು 3 ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಮ್ಯಾಗ್ನಸ್ ಕಾರ್ಲ್‌ಸೆನ್ ಅಗ್ರಸ್ಥಾನ
ಪಂದ್ಯಾವಳಿಯಲ್ಲಿ ಭಾಗವಹಿಸದಿದ್ದರೂ, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ 2832.5 ಅಂಕ ಪಡೆದಿದ್ದು, ವಿಶ್ವದ ನಂಬರ್ 1 ಸ್ಥಾನ ಉಳಿಸಿಕೊಂಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಗ್ರ್ಯಾಂಡ್‌ಮಾಸ್ಟರ್ ಹಿಕರು ನಕಮುರಾ (2802), ದೇಶದ ಸಹ ಆಟಗಾರ ಫ್ಯಾಬಿಯಾನೊ ಕರುವಾನಾ (2798) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿರುವ ಗುಕೇಶ್, ವಿಶ್ವ ರ್ಯಾಂಕಿಂಗ್ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆದರೆ ಎರಿಗೈಸಿ ಅವರು 5ನೇ ಸ್ಥಾನದಲ್ಲಿದ್ದಾರೆ. ಆರ್ ಪ್ರಜ್ಞಾನಂದ (2753.9) ಮೂರು ಸ್ಥಾನ ಮೇಲೇರಿ 10ನೇ ಸ್ಥಾನದಲ್ಲಿದ್ದರೆ, ವಿಶ್ವನಾಥನ್ ಆನಂದ್ (2750) 11ನೇ ಸ್ಥಾನದಲ್ಲಿದ್ದಾರೆ.
ಡಿ ಗುಕೇಶ್ ಅಜೇಯ
ಆದರೆ ಲೈವ್ ರೇಟಿಂಗ್ ಬದಲಾಗುವ ನಿರೀಕ್ಷೆಯಿದೆ. ಎರಿಗೈಸಿ ಪುನರಾಗಮನ ಮಾಡಿದರೆ, ತಾನು ಮತ್ತೆ ಗುಕೇಶ್ನಿಂದ ತಮ್ಮ ಸ್ಥಾನ ಮರಳಿ ಪಡೆಯಬಹುದು. ಇನ್ನೂ ಎಂಟು ಸುತ್ತುಗಳು ಬಾಕಿ ಉಳಿದಿವೆ. ಪ್ರಸ್ತುತ ಟೂರ್ನಿಯಲ್ಲಿ ಅಜೇಯರಾಗಿರುವ ಗುಕೇಶ್ 2 ಗೆಲುವು ಮತ್ತು 3 ಡ್ರಾ ಸಾಧಿಸಿದ್ದಾರೆ. ವ್ಲಾದಿಮಿರ್ ಫೆಡೋಸೆವ್ ಮತ್ತು ಅಲೆಕ್ಸಿ ಸರನಾ ವಿರುದ್ಧ ಗುಕೇಶ್ ಡ್ರಾ ಸಾಧಿಸಿದ್ದರೆ, ಅನೀಶ್ ಗಿರಿ, ವಿನ್ಸೆಂಟ್ ಕೀಮರ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ವಿನ್ಸೆಂಟ್ ಅವರು 3 ಪಂದ್ಯಗಳನ್ನು ಸೋತಿದ್ದು, ಎರಡು ಬಾರಿ ಡ್ರಾ ಮಾಡಿಕೊಂಡಿದ್ದಾರೆ. ವಿನ್ಸೆಂಟ್ ಪ್ರಸ್ತುತ ಟೂರ್ನಿಯಲ್ಲಿ ಲಿಯಾನ್ ಲ್ಯೂಕ್ ಮೆಂಡೊಂಕಾ ಅವರೊಂದಿಗೆ ಜಂಟಿ ಸ್ಥಾನದಲ್ಲಿದ್ದಾರೆ.
