Explainer: ಗುಕೇಶ್ vs ಡಿಂಗ್ ಲಿರೆನ್; ವಿಶ್ವ ಚೆಸ್ ಚಾಂಪಿಯನ್‌ಶಿಪ್ 14ನೇ ಪಂದ್ಯವೂ ಡ್ರಾ ಆದರೆ ಟೈ ಬ್ರೇಕರ್ ಹೇಗಿರಲಿದೆ?
ವಿಶ್ವ ಚೆಸ್ ಚಾಂಪಿಯನ್‌ಶಿಪ್ 2024ರ ಅಂತಿಮ ಫಲಿತಾಂಶ ಇನ್ನೂ ಖಚಿತವಾಗಿಲ್ಲ. 13 ಸುತ್ತುಗಳ ಬಳಿಕವೂ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಮತ್ತು ಭಾರತದ ಡಿ ಗುಕೇಶ್ ನಡುವೆ ಸಮಬಲವಾಗಿದೆ. ಹೀಗಾಗಿ 14 ಸುತ್ತು ರೋಚಕವಾಗಿರಲಿದೆ.
ವಿಶ್ವ ಚೆಸ್ ಚಾಂಪಿಯನ್‌ಶಿಪ್ ರೋಚಕ ಘಟ್ಟದತ್ತ ಬಂದಿದೆ. ಭಾರತದ ಯುವ ಚೆಸ್ ತಾರೆ ಡಿ ಗುಕೇಶ್ ಮತ್ತು ಚೀನಾದ ಹಾಲಿ ಚಂಪಿಯನ್ ಡಿಂಗ್ ಲಿರೆನ್ ಅವರ ನಡುವಿನ 13ನೇ ಸುತ್ತಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಹೀಗಾಗಿ ಇಂದು (ಗುರುವಾರ, ಡಿಸೆಂಬರ್ 12) ನಡೆಯಲಿರುವ ಸ್ಪರ್ಧೆಯ 14ನೇ ಹಾಗೂ ಕೊನೆಯ ಪಂದ್ಯವು ನಿರ್ಣಾಯಕವಾಗಲಿದೆ. ಇಂದು ಗೆಲ್ಲುವ ಆಟಗಾರನು ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ. 13 ಗೇಮ್‌ಗಳ ಅಂತ್ಯಕ್ಕೆ ಇಬ್ಬರು ಆಟಗಾರರು ತಲಾ 6.5 ಪಾಯಿಂಟ್‌ಗಳನ್ನು ಹೊಂದಿದ್ದು, ಸಮಬಲ ಸಾಧಿಸಿದ್ದಾರೆ.
ಕೊನೆಯ ಪಂದ್ಯದ ಲೆಕ್ಕಾಚಾರ ಸರಳವಾಗಿದೆ. ಏಕೆಂದರೆ ಇಂದು ಯಾವ ಆಟಗಾರ ಗೆಲ್ಲುತ್ತಾರೋ, ಅವರು ನೂತನ ವಿಶ್ವ ಚಾಂಪಿಯನ್ ಆಗಲಿದ್ದಾರೆ. ಆಟಗಾರನು ಚಾಂಪಿಯನ್ ಪಟ್ಟವನ್ನು ಅಲಂಕರಿಸಲು 7.5 ಅಂಕಗಳನ್ನು ಪಡೆಯಬೇಕು. ಸತತ ಎರಡನೇ ವರ್ಷ ವಿಶ್ವ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಚೀನಾದ ಡಿಂಗ್ ಲಿರೆನ್ ಎದುರು ನೋಡುತ್ತಿದ್ದಾರೆ. ಅನುಭವವೂ ಹೆಚ್ಚಿರುವ ಆಟಗಾರ, 14ನೇ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇದೇ ವೇಳೆ ಗುಕೇಶ್ ಕೂಡಾ ಇತಿಹಾಸ ಸೃಷ್ಟಿಸುವ ಅವಕಾಶ ಹೊಂದಿದ್ದಾರೆ. ವಿಶ್ವದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗುವ ತವಕ ಅವರದ್ದು.
ವಿಶ್ವ ಚೆಸ್ ಚಾಂಪಿಯನ್‌ಶಿಪ್ 2024ರ ಇದುವರೆಗಿನ ಫಲಿತಾಂಶ
ಮೊದಲ ಪಂದ್ಯದಲ್ಲಿ ಗೆದ್ದ ಡಿಂಗ್ ಲಿರೆನ್, ಆರಂಭದಲ್ಲೇ ಮುನ್ನಡೆ ಸಾಧಿಸಿದರು. ಆ ಬಳಿಕ ಎರಡನೇ ಪಂದ್ಯ ಡ್ರಾದಲ್ಲಿ ಅಂತ್ಯವಾಯ್ತು. ಆ ಬಳಿಕ ಮೂರನೇ ಗೇಮ್‌ನಲ್ಲಿ ಪುಟಿದೆದ್ದ ಗುಕೇಶ್ ಗೆದ್ದು ಬೀಗಿದರು. ಆ ನಂತರದ ಸತತ ಏಳು ಗೇಮ್‌ಗಳು ಡ್ರಾಗೊಂಡಿತು. 11ನೇ ಗೇಮ್‌ನಲ್ಲಿ ಮತ್ತಷ್ಟು ಚಾಕಚಕ್ಯತೆಯಿಂದ ಆಡಿದ ಚದುರಂಗದ ಚತುರ ಗುಕೇಶ್, ಜಯಗಳಿಸುವ ಮೂಲಕ ನಿರ್ಣಾಯಕ ಮುನ್ನಡೆ ಸಾಧಿಸಿದರು. ಹಾಲಿ ಚಾಂಪಿಯನ್ ಲಿರೆನ್ 12ನೇ ಪಂದ್ಯದಲ್ಲಿ ಜಯ ಸಾಧಿಸಿದರು. ಕೊನೆಗೆ ನಿನ್ನೆ (ಬುಧವಾರ) ನಡೆದ 13ನೇ ಗೇಮ್ ಮತ್ತೆ ಡ್ರಾ ಆಯ್ತು.
14ನೇ ಗೇಮ್ ಕೂಡಾ ಡ್ರಾದಲ್ಲಿ ಕೊನೆಗೊಂಡರೆ ಏನಾಗುತ್ತದೆ?
14ನೇ ಆಟವು ಉಭಯ ಆಟಗಾರರಿಗೆ ನಿರ್ಣಾಯಕವಾಗಿದೆ. ಈಗಾಗಲೇ ಸಮಬಲವಾಗಿರುವುದರಿಂದ, ಇಂದು ಗೆದ್ದ ಆಟಗಾರರು ವಿಜಯಶಾಲಿಯಾಗುತ್ತಾರೆ. ಇಂದು ಒತ್ತಡ ಕೂಡಾ ಹೆಚ್ಚಿರಲಿದೆ. ಅಲ್ಲದೆ ಡ್ರಾ ಆಗುವ ಸಾಧ್ಯತೆಯೂ ಇದೆ. ಒಂದು ವೇಳೆ ಅಂತಿಮ ಸುತ್ತು ಕೂಡಾ ಡ್ರಾದಲ್ಲಿ ಕೊನೆಗೊಂಡರೆ, ಇಬ್ಬರ ಅಂಕಗಳು 7-7 ಆಗುತ್ತದೆ. ಇಂಥಾ ಸನ್ನಿವೇಶದಲ್ಲಿ, ಉಭಯ ಆಟಗಾರರು ಡಿಸೆಂಬರ್ 13ರ ಶುಕ್ರವಾರ ನಡೆಯುವ ಟೈ-ಬ್ರೇಕ್ ಪಂದ್ಯದಲ್ಲಿ ಆಡಲಿದ್ದಾರೆ.
ರಾಪಿಡ್ ಟೈ-ಬ್ರೇಕ್, ಮಿನಿ ಟೈ-ಬ್ರೇಕರ್ ಹೇಗೆ ನಡೆಯುತ್ತೆ?
ಸಾಮಾನ್ಯ ಪಂದ್ಯಗಳಲ್ಲಿ ಪ್ರತಿ ಆಟಗಾರನಿಗೆ ತಮ್ಮ ಮೊದಲ 40 ನಡೆಗಳಿಗಾಗಿ ತಲಾ ಎರಡು ಗಂಟೆಗಳು ಮತ್ತು ಪಂದ್ಯದ ಉಳಿದ ಭಾಗಕ್ಕೆ 30 ನಿಮಿಷಗಳನ್ನು ನೀಡಿದರೆ, ರ್ಯಾಪಿಡ್ ಟೈಬ್ರೇಕ್‌ನಲ್ಲಿ ಉಭಯ ಆಟಗಾರರು 15 ನಿಮಿಷಗಳ (10 ಸೆಕೆಂಡ್ ಹೆಚ್ಚುವರಿ) ನಾಲ್ಕು ಪಂದ್ಯಗಳೊಂದಿಗೆ ವೇಗದ ಆಟ ಆಡುತ್ತಾರೆ. ವಿಜೇತರು ಒಂದು ಅಂಕವನ್ನು ಪಡೆಯುತ್ತಾರೆ. ಡ್ರಾ ಆದರೆ ಇಬ್ಬರೂ ಆಟಗಾರರು ತಲಾ 0.5 ಗಳಿಸುತ್ತಾರೆ. 2.5 ಅಂಕಗಳನ್ನು ಗಳಿಸಿದ ಮೊದಲ ಆಟಗಾರನನ್ನು ವಿಶ್ವ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
ರಾಪಿಡ್ ಟೈ-ಬ್ರೇಕ್ 2-2 ಡ್ರಾ ಆದರೆ, ಡಿಂಗ್ ಮತ್ತು ಗುಕೇಶ್ ಮಿನಿ ರಾಪಿಡ್ ಪಂದ್ಯದಲ್ಲಿ ಆಡಬೇಕಾಗುತ್ತದೆ. ಇದರಲ್ಲಿ ಅವರು 10 ನಿಮಿಷಗಳ (5-ಸೆಕೆಂಡ್ ಇನ್ಕ್ರಿಮೆಂಟ್) ಎರಡು ಪಂದ್ಯಗಳನ್ನು ಆಡುತ್ತಾರೆ. ಇಲ್ಲಿ 1.5 ಅಂಕ ಪಡೆಯುವ ಆಟಗಾರ ಗೆಲ್ಲುತ್ತಾರೆ. ಅಂದರೆ ಒಂದು ಗೆಲುವು, ಒಂದು ಡ್ರಾ ಆದರೂ ಸಾಕಾಗುತ್ತದೆ. ಇದು ಕೂಡಾ ಸಮಬಲವಾದರೆ, ತಲಾ ಮೂರು ನಿಮಿಷಗಳ (2-ಸೆಕೆಂಡ್ ಇನ್ಕ್ರಿಮೆಂಟ್) ಎರಡು ಪಂದ್ಯಗಳ ಬ್ಲಿಟ್ಜ್ ಪಂದ್ಯ ನಡೆಯುತ್ತದೆ. ಇಲ್ಲಿಯೂ ಮತ್ತೆ ಸಮಬಲವಾದರೆ, ಯಾವುದೇ ಸಮಯದ ಮಿತಿಯಿಲ್ಲದ ಪಂದ್ಯದಲ್ಲಿ ಪರಸ್ಪರ ಆಡುತ್ತಾರೆ. ವಿಜೇತರು ಹೊರಹೊಮ್ಮುವವರೆಗೂ ಪಂದ್ಯ ನಡೆಯುತ್ತದೆ.