ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಎನ್‌ಐಟಿಕೆ ಹಳೆ ವಿದ್ಯಾರ್ಥಿ ಸುಹಾಸ್ ಎಲ್ ಯತಿರಾಜ್ ವಿಶ್ವದ ನಂಬರ್ ವನ್
Suhas L Yathiraj: ಮಂಗಳೂರಿನ ಸುರತ್ಕಲ್ ಬಳಿಯ ಎನ್‌ಐಟಿಕೆಯ ಹಳೆ ವಿದ್ಯಾರ್ಥಿ ಡಾ.ಸುಹಾಸ್ ಎಲ್ ಯತಿರಾಜ್, ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್‌ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ನಂಬರ್ ವನ್ ಸ್ಥಾನ ಪಡೆದಿದ್ದಾರೆ.
ಮಂಗಳೂರು: ಅರ್ಜುನ ಪ್ರಶಸ್ತಿ ಪುರಸ್ಕೃತ ಭಾರತೀಯ ವೃತ್ತಿಪರ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ, ಸುರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆಯ ವಿದ್ಯಾರ್ಥಿ ಡಾ.ಸುಹಾಸ್ ಲಾಲಿನಕೆರೆ ಯತಿರಾಜ್ ಅವರು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್‌ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಎನ್‌ಐಟಿಕೆಯಲ್ಲಿ 2004ರ ಬ್ಯಾಚ್‌ನ ಬಿಟೆಕ್ ಸಿಎಸ್‌ಇ ಬ್ಯಾಚ್‌ನ ಹಳೆಯ ವಿದ್ಯಾರ್ಥಿ ಡಾ.ಸುಹಾಸ್ ಎಲ್ ಯತಿರಾಜ್ ಅವರು ಬಹುಮುಖಿ ವೃತ್ತಿಜೀವನ ಹೊಂದಿದ್ದಾರೆ. ಸುಹಾಸ್ ಪ್ರಸ್ತುತ ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಫೆಬ್ರವರಿ 2023ರಿಂದ, ಅವರು ಉತ್ತರ ಪ್ರದೇಶ ಸರ್ಕಾರದ ಇಲಾಖೆಯಾದ ಯುವ ಕಲ್ಯಾಣ ಮತ್ತು ಪ್ರಾಂತೀಯ ರಕ್ಷಕ್ ದಳದ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಈ ಹಿಂದೆ ಗೌತಮ್ ಬುದ್ಧ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸಿದ್ದರು.
ಆಡಳಿತಾತ್ಮಕ ಪಾತ್ರವನ್ನು ಮೀರಿ ಸುಹಾಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಪಟುವಾಗಿದ್ದು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ರಾಷ್ಟ್ರವನ್ನು ಹೆಮ್ಮೆಯಿಂದ ಪ್ರತಿನಿಧಿಸುತ್ತಿದ್ದಾರೆ. ಸುರತ್ಕಲ್ ಎನ್ ಐಟಿಕೆ ಡಾ.ಸುಹಾಸ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. 2019ರಲ್ಲಿ ಎನ್ಐಟಿಕೆಯ ವಜ್ರ ಮಹೋತ್ಸವ ವರ್ಷದಲ್ಲಿ ಅವರನ್ನು ವಿಶೇಷ ಹಳೆಯ ವಿದ್ಯಾರ್ಥಿ ಎಂದು ಗೌರವಿಸಲಾಯಿತು.
ಎನ್ಐಟಿಕೆಯು ತನ್ನ ಪದವೀಧರರ ಸಾಧನೆಗೆ ಅಪಾರ ಹೆಮ್ಮೆ ಪಡುತ್ತದೆ. ಹೀಗಾಗಿ ಸಂಸ್ಥೆಯ ನಿರ್ದೇಶಕರು, ಡೀನ್‌ಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ಸುಹಾಸ್ ಎಲ್ ಯತಿರಾಜ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದೆ.
ಯತಿರಾಜ್ ಅವರ ಗಮನಾರ್ಹ ಸಾಧನೆಗಳು
•ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂಬರ್ 1: ಡಾ.ಸುಹಾಸ್ ಪ್ರಸ್ತುತ ಪ್ಯಾರಾ-ಬ್ಯಾಡ್ಮಿಂಟನ್ ವಿಭಾಗದಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.1 ಸ್ಥಾನದಲ್ಲಿದ್ದಾರೆ.
•ಟೋಕಿಯೊ ಪ್ಯಾರಾಲಿಂಪಿಕ್ಸ್ 2021: ಟೋಕಿಯೊ ಪ್ಯಾರಾಲಿಂಪಿಕ್ಸ್ 2021ರಲ್ಲಿ ಎಸ್ಎಲ್ -4 ವಿಭಾಗದಲ್ಲಿ ಬೆಳ್ಳಿ ಪದಕ.
•ರಾಷ್ಟ್ರೀಯ ಚಾಂಪಿಯನ್: ಮಾರ್ಚ್ 2018ರಲ್ಲಿ ವಾರಣಾಸಿಯಲ್ಲಿ ನಡೆದ ಎರಡನೇ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸುಹಾಸ್ ಚಿನ್ನದ ಪದಕ ಗೆದ್ದರು.
•ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ ಮೊದಲ ಭಾರತೀಯ ಅಧಿಕಾರಿ: ಚೀನಾದ ಬೀಜಿಂಗ್‌ನಲ್ಲಿ ನಡೆದ 2016ರ ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ, ಸುಹಾಸ್ ವೃತ್ತಿಪರ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯಮ್‌ಶಿಪ್ ಗೆದ್ದ ಮೊದಲ ಭಾರತೀಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಜಂಗಢದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಫೈನಲ್‌ನಲ್ಲಿ ಇಂಡೋನೇಷ್ಯಾದ ಹ್ಯಾರಿ ಸುಸಾಂಟೊ ಅವರನ್ನು ಸೋಲಿಸುವ ಮೂಲಕ ಅವರು ಚಿನ್ನದ ಪದಕವನ್ನು ಗಳಿಸಿದರು.
•ಯಶ್ ಭಾರತಿ ಪ್ರಶಸ್ತಿ: ಪ್ಯಾರಾ ಸ್ಪೋರ್ಟ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಡಿಸೆಂಬರ್ 2016ರಲ್ಲಿ, ಸುಹಾಸ್ ಉತ್ತರ ಪ್ರದೇಶದ ಅತ್ಯುನ್ನತ ನಾಗರಿಕ ಗೌರವವಾದ ಯಶ್ ಭಾರತಿ ಪ್ರಶಸ್ತಿಯನ್ನು ಪಡೆದರು.
•ಐಎಎಸ್ ಅಧಿಕಾರಿ ಮತ್ತು ಪ್ಯಾರಾಲಿಂಪಿಕ್ಸ್ ಪದಕ ವಿಜೇತ: ಪ್ಯಾರಾಲಿಂಪಿಕ್ಸ್ ಪದಕ ಮತ್ತು ಅರ್ಜುನ ಪ್ರಶಸ್ತಿ ಎರಡನ್ನೂ ಗೆದ್ದ ಭಾರತದ ಏಕೈಕ ಐಎಎಸ್ ಅಧಿಕಾರಿ ಸುಹಾಸ್.
•ಇತರ ಪ್ರಶಸ್ತಿಗಳು: ಅವರು ತಮ್ಮ ಅಧಿಕೃತ ಸಾಮರ್ಥ್ಯದಲ್ಲಿ ಸೇವೆ ಸಲ್ಲಿಸುವಾಗ, ಚುನಾವಣೆಗಳು ಮತ್ತು ಕಂದಾಯ ಆಡಳಿತಕ್ಕೆ ಸಂಬಂಧಿಸಿದ ಪ್ರಶಸ್ತಿಗಳನ್ನು ಸ್ವೀಕರಿಸುವಾಗ ಅವರ ಕಾರ್ಯಕ್ಷಮತೆಗಾಗಿ ಗುರುತಿಸಲ್ಪಟ್ಟಿದ್ದಾರೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು
ಇನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪ್ಯಾರಿಸ್ ಒಲಿಂಪಿಕ್ಸ್ಗೆ ಭಾರತ ಹಾಕಿ ತಂಡ ಪ್ರಕಟ; 9ನೇ ಚಿನ್ನ ಗೆದ್ದುಕೊಡುವುದೇ ಹರ್ಮನ್ಪ್ರೀತ್ ಸಿಂಗ್ ಪಡೆ
ವಿಭಾಗ