Dakshina Kannada News: ವರ್ಲ್ಡ್ ಯುನಿವರ್ಸಿಟಿ ಗೇಮ್ಸ್; ಕಂಚಿನ ಪದಕ ಪಡೆದ ಆಳ್ವಾಸ್ ವಿದ್ಯಾರ್ಥಿನಿ ಭವಾನಿ ಯಾದವ್
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ ಕ್ರೀಡಾಪಟು ಭವಾನಿ ಯಾದವ್ ಇತಿಹಾಸ ಬರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಂಗಳೂರು: ‘ಚೀನಾದ ಚೆಂಗ್ಡುವಿನಲ್ಲಿ ನಡೆದ ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ (ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ -2021) ಲಾಂಗ್‌ಜಂಪ್‌ನಲ್ಲಿ ಕಂಚಿನ ಪದಕವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಭವಾನಿ ಯಾದವ್ ಗೆದ್ದಿದ್ದಾರೆ. ಕೊರೊನಾ ಕಾರಣದಿಂದ 2021ರ ಬದಲು ಈ ವರ್ಷ ಕ್ರೀಡಾಕೂಟ ನಡೆದಿದ್ದರೂ ಕೂಟಕ್ಕೆ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ 2021 ಎಂದು ಹೆಸರಿಸಲಾಗಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ ಕ್ರೀಡಾಪಟು ಭವಾನಿ ಯಾದವ್ ಇತಿಹಾಸ ಬರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
’ಭವಾನಿ ಯಾದವ್ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿಷ್ಠಿತ ಕ್ರೀಡಾ ದತ್ತು ಯೋಜನೆಯ ಅಡಿಯಲ್ಲಿ ಆಳ್ವಾಸ್ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದು, ಮಂಗಳೂರು ವಿಶ್ವವಿದ್ಯಾಲಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಕ್ರೀಡಾಪಟು ಪದಕ ಪಡೆದಿದ್ದಾರೆ. ಆ ಮೂಲಕ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಮೂರನೇ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾದರು.ಅವರನ್ನು ಸ್ವಾತಂತ್ರ್ಯದ ದಿನ (ಆಗಸ್ಟ್ 15ರಂದು) ಅಭಿನಂದಿಸಲಾಗುವುದು ಎಂದರು.
ಜುಲೈನಲ್ಲಿ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಲಾಂಗ್‌ಜಂಪ್‌ನಲ್ಲಿ 6.44 ಮೀಟರ್ ಸಾಧನೆಯೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
ಚೀನಾದ ಚಾಂಗ್ಡುನಲ್ಲಿ ಜುಲೈ 28ರಿಂದ ಆಗಸ್ಟ್ 8ರ ವರೆಗೆ ನಡೆದ ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟ- 2021ರಲ್ಲಿ (ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ -2021) ದೇಶದ 85 ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ 8 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಈ ಬಾರಿಯ ರಾಷ್ಟ್ರೀಯ ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ 12 ಪದಕಗಳನ್ನು ಪಡೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹಾಗೂ ಕೋಚ್ ಅಜಿತ್ ಕುಮಾರ್ ಇದ್ದರು.
ಕೋವಿಡ್ ಕಾರಣದಿಂದ 2021ರ ಗೇಮ್ಸ್ 2023ಕ್ಕೆ ಮುಂದೂಡಲ್ಪಟ್ಟಿತ್ತು
ಜಾಗತಿಕ ವಿಶ್ವವಿದ್ಯಾಲಯಗಳ ಗೇಮ್ಸ್ 2021, ಅದೇ ಇಸವಿಯಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ 2023ರಲ್ಲಿ ನಡೆಯಿತು. ಭಾರತದ 230 ಅಥ್ಲೀಟ್ ಗಳು ಇಲ್ಲಿಉ ಪಾಲ್ಗೊಂಡಿದ್ದರು. ಬಿಲ್ಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಫೆನ್ಸಿಂಗ್, ಜುಡೊ, ಶೂಟಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್, ಟೆಕ್ವಾಂಡೊ, ವಾಲಿಬಾಲ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗವಹಿಸಿದ್ದರು. ಭಾರತ 25 ಪದಕ ಗಳಿಸಿದೆ. ಇವುಗಳಲ್ಲಿ 11 ಚಿನ್ನ, 5 ಬೆಳ್ಳಿ ಮತ್ತು 9 ಕಂಚಿನ ಪದಕಗಳು.