ಕನ್ನಡ ಸುದ್ದಿ  /  Sports  /  Damien Fleming Says Siri Doesnt Know Where To Bowl To Sachin

Damien Fleming: 'ಸಚಿನ್‌ಗೆ ಹೇಗೆ ಬೌಲ್ ಮಾಡಬೇಕೆಂದು 'ಸಿರಿ'ಗೂ ತಿಳಿದಿಲ್ಲ'; ಆಸೀಸ್‌ ದಿಗ್ಗಜನ ಮಾತು ಕೇಳಿ

ಐದು ಬಾರಿಯ ವಿಶ್ವ ಚಾಂಪಿಯನ್‌ಗಳ ವಿರುದ್ಧ ವಿರುದ್ಧ ಆಡಿದ 71 ಏಕದಿನ ಪಂದ್ಯಗಳಲ್ಲಿ ಮಾಸ್ಟರ್‌ ಬ್ಲಾಸ್ಟರ್‌ 3077 ರನ್ ಗಳಿಸಿದ್ದಾರೆ. 39 ಟೆಸ್ಟ್‌ಗಳಿಂದ ಬರೋಬ್ಬರಿ 3630 ರನ್ ಪೇರಿಸಿದ್ದಾರೆ. ಇದರಲ್ಲಿ ಒಟ್ಟು 20 ಶತಕಗಳು ಕೂಡಾ ಸೇರಿವೆ.

ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್ (Getty)

ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯ ನಡುವಿನ ಜಿದ್ದಾಜಿದ್ದಿನ ಪೈಪೋಟಿ ಬಗ್ಗೆ ತಿಳಿಯದವರು ಯಾರೂ ಇಲ್ಲ. 1990ರ ದಶಕದಿಂದ 2011ರ ವಿಶ್ವಕಪ್‌ವರೆಗೂ, ತೆಂಡೂಲ್ಕರ್ ವರ್ಸಸ್‌ ಆಸ್ಟ್ರೇಲಿಯಾ ನಡುವೆ ಪ್ರಬಲ ಸ್ಪರ್ಧೆ ನಡೆದಿತ್ತು. ಆಸೀಸ್‌ ತಂಡದ ಬೆಂಕಿ ಬೌಲಿಂಗ್‌ಗೆ ಸಮರ್ಥವಾಗಿ ಬ್ಯಾಟಿಂಗ್ ಮಾಡುವುದನ್ನು ಸಚಿನ್‌ ತುಂಬಾ ಇಷ್ಟಪಟ್ಟರು. ಅವರ ಬಲಿಷ್ಠ ಬೌಲಿಂಗ್ ದಾಳಿಯನ್ನು ಆನಂದಿಸಿದರು.

ತೆಂಡೂಲ್ಕರ್ ಅವರ ವೃತ್ತಿಜೀವನದ ಕೆಲವು ಅತ್ಯುತ್ತಮ ಕ್ಷಣಗಳಿವೆ. ಸಿಡ್ನಿ ಮತ್ತು ಪರ್ತ್‌ನಲ್ಲಿ ಅವಳಿ ಶತಕ, ಮೊದಲ ಏಕದಿನ ಶತಕ, ಎಸ್‌ಸಿಜಿ ಮೈದಾನದಲ್ಲಿ ಗಳಿಸಿದ ಅಜೇಯ 241 ರನ್‌, 2008ರ ಇಂಡೋ-ಆಸೀಸ್‌-ಶ್ರೀಲಂಕಾ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಸ್ಮರಣೀಯ ಆಟ... ಹೀಗೆ ಸಚಿನ್‌ ವೃತ್ತಿಜೀವನದ ಈ ಎಲ್ಲಾ ಅಮೋಘ ಪ್ರದರ್ಶನಗಳು ಹೊರಹೊಮ್ಮಿದ್ದು ಕಾಂಗರೂಗಳ ವಿರುದ್ಧವೇ ಎಂಬುದು ವಿಶೇಷ.

ಆಸ್ಟ್ರೇಲಿಯಾ ತಂಡವು ತೆಂಡೂಲ್ಕರ್ ಅವರ ನೆಚ್ಚಿನ ಎದುರಾಳಿಗಳಲ್ಲಿ ಒಂದಾಗಿತ್ತು. ಇದನ್ನು ಅಂಕಿ-ಅಂಶಗಳು ಕೂಡಾ ಒತ್ತಿ ಹೇಳುತ್ತವೆ. ಐದು ಬಾರಿಯ ವಿಶ್ವ ಚಾಂಪಿಯನ್‌ಗಳ ವಿರುದ್ಧ ವಿರುದ್ಧ ಆಡಿದ 71 ಏಕದಿನ ಪಂದ್ಯಗಳಲ್ಲಿ ಮಾಸ್ಟರ್‌ ಬ್ಲಾಸ್ಟರ್‌ 3077 ರನ್ ಗಳಿಸಿದ್ದಾರೆ. 39 ಟೆಸ್ಟ್‌ಗಳಿಂದ ಬರೋಬ್ಬರಿ 3630 ರನ್ ಪೇರಿಸಿದ್ದಾರೆ. ಇದರಲ್ಲಿ ಒಟ್ಟು 20 ಶತಕಗಳು ಕೂಡಾ ಸೇರಿವೆ. ಆ ಕಾಲದಲ್ಲಿ ಬೌಲಿಂಗ್‌ನಲ್ಲಿ ಅತ್ಯಂತ ಮಾರಕ ದಾಳಿ ನಡೆಸಬಲ್ಲಿ ವೇಗಿಗಳು ಇದ್ದ ಆಸೀಸ್‌ ತಂಡವು, ಸಚಿನ್‌ ತೆಂಡೂಲ್ಕರ್‌ ಬ್ಯಾಟಿಂಗ್‌ ಮುಂದೆ ಮಂಕಾಗುತ್ತಿತ್ತು.

ಮೈದಾನದಲ್ಲಿ ಗ್ಲೆನ್ ಮೆಕ್‌ಗ್ರಾತ್, ಬ್ರೆಟ್ ಲೀ ಮತ್ತು ಶೇನ್ ವಾರ್ನ್ ಅವರೊಂದಿಗೆ ತೆಂಡೂಲ್ಕರ್ ಅವರ ಸ್ಫೋಟಕ ಆಟದ ದೃಶ್ಯಗಳು ಜಾಗತಿಕ ಕ್ರಿಕೆಟ್‌ ಅಭಿಮಾನಿಗಳ ಸ್ಮೃತಿಪಟಲದಲ್ಲಿ ಸದಾ ಅಚ್ಚಳಿಯದೆ ಉಳಿಯುತ್ತವೆ. 20 ಏಕದಿನ ಪಂದ್ಯಗಳಲ್ಲಿ ಐದು ಬಾರಿ ಮತ್ತು ನಾಲ್ಕು ಟೆಸ್ಟ್‌ಗಳಲ್ಲಿ ಎರಡು ಬಾರಿ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ ಆಸ್ಟ್ರೇಲಿಯಾದ ಮಾಜಿ ವೇಗಿ ಡೇಮಿಯನ್ ಫ್ಲೆಮಿಂಗ್ ಅವರು, ಸಚಿನ್ ಬಗ್ಗೆ ಮಾತನಾಡುವಾಗ ಒಂದು ಅನನ್ಯ ಅನುಭವವನ್ನು ಹಂಚಿಕೊಂಡರು.

"ಅವರು ತ್ವರಿತವಾಗಿ ತಮ್ಮ ಬ್ಯಾಟಿಂಗ್ ಸ್ಥಾನಕ್ಕೆ‌ ಬರುತ್ತಿದ್ದರು. ಆದರೆ ತಮ್ಮ ಹೊಡೆತಗಳನ್ನು ಆಡಲು ತುಂಬಾ ತಡ ಮಾಡುತ್ತಿದ್ದರು. ಹೀಗಾಗಿ ಅವರನ್ನು ಮರುಳು ಮಾಡುವುದು ನಿಜವಾಗಿಯೂ ಕಷ್ಟಕರವಾಗಿತ್ತು," ಫ್ಲೆಮಿಂಗ್ ಅವರು 'ಬ್ರಾಡ್‌ಮನ್ ಮತ್ತು ತೆಂಡೂಲ್ಕರ್ - ದಿ ಸ್ಟೋರಿ ಆಫ್ ಕ್ರಿಕೆಟರ್ಸ್ಜೈಂಟ್ಸ್‌' ಸಾಕ್ಷ್ಯಚಿತ್ರದಲ್ಲಿ ಹೇಳಿದರು. ತೆಂಡೂಲ್ಕರ್‌ ಚಾಣಾಕ್ಷ ಬ್ಯಾಟರ್‌ ಎಂಬುದು ಫ್ಲೆಮಿಂಗ್ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಬೌಲರ್‌ ಯಾವ ತಂತ್ರದಿಂದ ಬೌಲಿಂಗ್‌ ಮಾಡಬಹುದು ಎಂಬ ಲೆಕ್ಕಾಚಾರವನ್ನು ಲಿಟಲ್‌ ಮಾಸ್ಟರ್‌ ಮೊದಲೇ ಹಾಕಿಕೊಳ್ಳುತ್ತಿದ್ದರು.

ಇದೇ ವೇಳೆ ಮಾತನಾಡಿದ ಫ್ಲೆಮಿಂಗ್, ಹಾಸ್ಯಾತ್ಮಕ ಹೇಳಿಕೆಯೊಂದನ್ನು ಹರಿಬಿಟ್ಟರು. ಸಚಿನ್‌ಗೆ ಬೌಲಿಂಗ್‌ ಮಾಡಲು ಇಂಟರ್ನೆಟ್‌ ಮೊರೆ ಹೋಗಿದ್ದಾಗಿ ತಿಳಿಸಿದರು. “ಸಿರಿ, ನೀನು ತೆಂಡೂಲ್ಕರ್‌ಗೆ ಹೇಗೆ ಬೌಲಿಂಗ್ ಮಾಡುತ್ತೀಯಾ? ಎಂದು ಕೇಳಿದರೆ ಅದು ಉತ್ತರಿಸಲಿಲ್ಲ. ಏಕೆಂದರೆ ತೆಂಡೂಲ್ಕರ್‌ಗೆ ಎಲ್ಲಿ, ಹೇಗೆ ಬೌಲ್ ಮಾಡಬೇಕೆಂದು ಸಿರಿಗೂ ತಿಳಿದಿಲ್ಲ,” ಎಂದು ಫ್ಲೆಮಿಂಗ್ ಹಾಸ್ಯಚಟಾಕಿ ಹಾರಿಸಿದರು.