ಕನ್ನಡ ಸುದ್ದಿ  /  Sports  /  Delhi Capitals Appoint David Warner As Captain For Ipl 2023; Axar Patel Named Deputy

IPL 2023: ಡೆಲ್ಲಿಗೆ ನೂತನ ಕ್ಯಾಪ್ಟನ್​ ನೇಮಕ.. ವಾರ್ನರ್​ ಮುಂದಿವೆ ಹತ್ತಾರು ಸವಾಲುಗಳು!

IPL 2023: ಭೀಕರ ಅಪಘಾತಕ್ಕೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ರಿಷಭ್​ ಪಂತ್​, ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ಫ್ರಾಂಚೈಸಿಯು ಡೇವಿಡ್​ ವಾರ್ನರ್​​​ಗೆ ಪಟ್ಟ ಕಟ್ಟಿದೆ. ಜೊತೆಗೆ ಅಕ್ಷರ್​ ಪಟೇಲ್​​ಗೆ ವೈಸ್​​ ಕ್ಯಾಪ್ಟನ್ಸಿ ಜವಾಬ್ದಾರಿ ನೀಡಿದೆ. ಆದರೆ ನೂತನ ನಾಯಕನ ಮುಂದೆ ಹಲವು ಸವಾಲುಗಳಿವೆ.

ಡೇವಿಡ್​ ವಾರ್ನರ್​​​ ಮತ್ತು ಅಕ್ಷರ್​ ಪಟೇಲ್​​
ಡೇವಿಡ್​ ವಾರ್ನರ್​​​ ಮತ್ತು ಅಕ್ಷರ್​ ಪಟೇಲ್​​ (Delhi Capitals/Twitter)

ಹದಿನಾರನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್ (Indian Premier League)​​​​ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್‌ 31ರಿಂದ ಟೂರ್ನಿ ಶುರುವಾಗಲಿದ್ದು, ಬಿಸಿಸಿಐ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ. ಇದರ ನಡುವೆಯೇ ಡೆಲ್ಲಿ ಕ್ಯಾಪಿಟಲ್ಸ್ (Delhi Capitals)​ ಫ್ರಾಂಚೈಸಿಯು ನೂತನ ಕ್ಯಾಪ್ಟನ್, ವೈಸ್​ಕ್ಯಾಪ್ಟನ್​​ ಘೋಷಣೆ ಮಾಡಿದೆ.

ಭೀಕರ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಮನೆಯಲ್ಲೇ ಚೇತರಿಸಿಕೊಳ್ಳುತ್ತಿರುವ ರಿಷಭ್​ ಪಂತ್​, ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ಫ್ರಾಂಚೈಸಿಯು ಡೇವಿಡ್​ ವಾರ್ನರ್​​ (David Warner) ಅವರನ್ನು ನೂತನ ನಾಯಕನನ್ನಾಗಿ ನೇಮಿಸಿದೆ. ಜೊತೆಗೆ ಅಕ್ಷರ್​ ಪಟೇಲ್​​ಗೆ (Axar Patel) ವೈಸ್​​ ಕ್ಯಾಪ್ಟನ್ಸಿ ಜವಾಬ್ದಾರಿ ನೀಡಿದೆ. ಆದರೆ ನೂತನ ನಾಯಕನ ಮುಂದೆ ಹಲವು ಸವಾಲುಗಳಿದ್ದು, ಅವುಗಳನ್ನು ಯಾವ ರೀತಿ ಗೆಲ್ಲುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಹೊಸ ನಾಯಕ, ಹೊಸ ಸವಾಲು, ಹೊಸ ಗುರಿ...!

ಪೃಥ್ವಿ ಶಾ, ಮಿಚೆಲ್​ ಮಾರ್ಷ್​​​​, ರಾವ್​ಮನ್​ ಪೊವೆಲ್​, ಲುಂಗಿ ಎನ್​ಗಿಡಿ, ಆ್ಯನ್ರಿಚ್ ನೋಕಿಯಾ ಸೇರಿದಂತೆ ಪ್ರಮುಖ ಆಟಗಾರರೇ ತಂಡದಲ್ಲಿದ್ದಾರೆ. ಜೊತೆಗೆ ಯುವ ಆಟಗಾರರ ಮೇಲೆ ಬೆಟ್ಟದಷ್ಟೂ ನಿರೀಕ್ಷೆ ಇಡಲಾಗಿದೆ. ಜೊತೆಗೆ ವಿಕೆಟ್​ ಕೀಪರ್​ ರಿಷಭ್​ ಪಂತ್​ ಸ್ಥಾನವನ್ನು ಯಾರು ತುಂಬುತ್ತಾರೆ? ಹೊಸ ನಾಯಕ, ಹೊಸ ತಂಡ, ಹೊಸ ಸವಾಲು, ಹೊಸ ಗುರಿ.. ಹೀಗೆ ಇದೆಲ್ಲವನ್ನೂ ನಿಭಾಯಿಸುವುದೇ ದೊಡ್ಡ ಸವಾಲಾಗಿದೆ.

ಚೊಚ್ಚಲ ಐಪಿಎಲ್​ ಟ್ರೋಫಿ ಗೆದ್ದು ಕೊಡ್ತಾರಾ.?

ಪ್ಲೇಯರ್ಸ್​ ಕ್ಯಾಪ್ಟನ್​​​​​ ಎಂದೇ ಕರೆಸಿಕೊಳ್ಳುವ ಡೇವಿಡ್​​ ವಾರ್ನರ್​​ಗೆ, ಈ ಲೀಗ್​​​​ ನಿಜಕ್ಕೂ ಅಗ್ನಿ ಪರೀಕ್ಷೆ! ಈ ಹಿಂದೆ ಸನ್​ರೈಸರ್ಸ್​​ ತಂಡದ ಪರ ಫುಲ್​ಟೈಮ್ ಕ್ಯಾಪ್ಟನ್ ಆಗಿ ಸಕ್ಸಸ್ ಕಂಡಿದ್ದ ವಾರ್ನರ್​​, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಚೊಚ್ಚಲ ಐಪಿಎಲ್​ ಟ್ರೋಫಿ ಗೆದ್ದುಕೊಡುವ ಲೆಕ್ಕಾಚಾರದಲ್ಲಿದ್ದಾರೆ. 2020 ರಲ್ಲಿ ಫೈನಲ್​​​​ ಗೇರಿದ ಸಾಧನೆ ಮಾಡಿದ ಡೆಲ್ಲಿ, 15 ವರ್ಷಗಳಿಂದ ಟ್ರೋಫಿ ಗೆದ್ದಿಲ್ಲ ಎಂಬ ಟೀಕೆಗೆ ಒಳಗಾಗಿದೆ. ಹಾಗಾಗಿ ಈ ಬಾರಿ ಟೀಕೆಗಳಿಗೆ ವಾರ್ನರ್​ ಖಡಕ್​ ಉತ್ತರ ನೀಡುತ್ತಾರಾ.?

ಕೋಚ್ ರಿಕಿ ಪಾಂಟಿಂಗ್​​​ ಜೊತೆ ಸಂಬಂಧ!

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಹೆಡ್​​​ ಕೋಚ್ ರಿಕಿ ಪಾಂಟಿಂಗ್​​​​​, ಸಖತ್​​ ಫ್ರೆಂಡ್ಲಿ ಕೋಚ್.! ಆದರೆ, ಪಂತ್​ ಜೊತೆ ಉತ್ತಮ ಒಡನಾಟ ಹೊಂದಿದ್ದ ಪಾಂಟಿಂಗ್​, ತಮ್ಮದೇ ದೇಶದ ವಾರ್ನರ್​​​ ಜೊತೆಗೆ ಹೇಗೆ ಸಂಬಂಧ ಬೆಳೆಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಆಟಗಾರನಾಗಿ ಕೋಚ್​​​ ಜೊತೆ ಇರುವುದಕ್ಕೂ, ನಾಯಕನಾಗಿ ಕೋಚ್​ ಇರುವುದಕ್ಕೂ ಬಹಳ ವ್ಯತ್ಯಾಸ ಇದೆ. ಪಾಂಟಿಂಗ್​ - ವಾರ್ನರ್​ ಜುಗಲ್​ಬಂದಿ ಯಾವ ರೀತಿ ಪ್ರದರ್ಶನ ನೀಡುತ್ತದೆ ಎಂಬುದು ಕೌತುಕ ಸೃಷ್ಟಿಸಿದೆ.

ಕ್ಯಾಪ್ಟನ್ಸಿ ಜೊತೆಗೆ ಬ್ಯಾಟಿಂಗ್​​ನಲ್ಲೂ ಮಿಂಚಬೇಕು

ಡೇವಿಡ್​ ವಾರ್ನರ್ ಸ್ಫೋಟಕ ಬ್ಯಾಟ್ಸ್​ಮನ್​. ಆರಂಭಿಕನಾಗಿ ಕಣಕ್ಕಿಳಿಯುವ ವಾರ್ನರ್​, ಕ್ರೀಸ್​​​​ನಲ್ಲಿ ಕಚ್ಚಿ ನಿಂತರೆ ಮಾರಿ ಹಬ್ಬ ಅಂತಾನೇ ಅರ್ಥ. ನಾಯಕನಲ್ಲದಿರುವಾಗ ಹಿಗ್ಗಾಮುಗ್ಗಾ ಬ್ಯಾಟಿಂಗ್​ ನಡೆಸುತ್ತಿದ್ದ ವಾರ್ನರ್​​ಗೆ​, ಕ್ಯಾಪ್ಟನ್ಸಿ ಹೆಗಲೇರಿದ್ದು, ಒತ್ತಡ ಹೆಚ್ಚಾಗಲಿದೆ. ನಾಯಕನಾಗಿ ತಂಡವನ್ನು ಮುಂದೆ ಕರೆದುಕೊಂಡು ಹೋಗಬೇಕಿದ್ದು, ಕ್ಯಾಪ್ಟನ್ಸಿ ಒತ್ತಡದ ಜೊತೆಗೆ ಬ್ಯಾಟಿಂಗ್​​​ ಬ್ಯಾಲೆನ್ಸ್​ ಹೇಗೆ ಮಾಡುತ್ತಾರೆ ಎಂಬುದು ಕುತೂಹಲ.!

ನಾಯಕನಾಗಿ ಟ್ರೋಫಿ ಗೆದ್ದಿದ್ದಾರೆ ವಾರ್ನರ್​.!

ನಾಯಕರಾಗಿ ವಾರ್ನರ್ 65 ಪಂದ್ಯಗಳಲ್ಲಿ ಸನ್​ರೈಸರ್ಸ್ ಹೈದರಾಬಾದ್​​​ ತಂಡವನ್ನ ಮುನ್ನಡೆಸಿದ್ದರು. 35 ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ವಾರ್ನರ್​​, 2016ರಲ್ಲಿ ಟ್ರೋಫಿ ಗೆದ್ದು ಕೊಟ್ಟಿದ್ದರು. 2018ರಲ್ಲಿ ತಂಡವನ್ನು ಫೈನಲ್​ವರೆಗೂ ಕೊಂಡೊಯ್ದಿದ್ದರು. ಆದರೆ, 2021ರ IPL​ನಲ್ಲಿ ಸನ್​ರೈಸರ್ಸ್ ಹೀನಾಯ ಪ್ರದರ್ಶನ ನೀಡಿತ್ತು ಎಂಬ ಕಾರಣ ಅವರನ್ನು ಕ್ಯಾಪ್ಟನ್ಸಿಯಿಂದ ಕಿತ್ತು ಹಾಕಲಾಗಿತ್ತು.

ಒಂದೇ ಒಂದು ಸೀಸನ್​ನಲ್ಲಾದ ಹಿನ್ನಡೆಯಿಂದ ಫ್ರಾಂಚೈಸಿ ವಾರ್ನರ್​ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿತು. ಅಲ್ಲದೇ ನಂತರದ ಪಂದ್ಯಗಳಲ್ಲಿ ಡೇವಿಡ್​​ ವಾರ್ನರ್​​ಗೆ ಕೊಕ್​ ನೀಡಿ ಅವಮಾನ ಮಾಡಿತ್ತು. ಸದ್ಯ ಹೊಸ ಜವಾಬ್ದಾರಿ ಪಡೆದಿರುವ ವಾರ್ನರ್​​ ಸನ್​ರೈಸರ್ಸ್​​​ನಂತೆ ಕ್ಯಾಪಿಟಲ್ಸ್​​ ತಂಡವನ್ನೂ ಅದ್ಭುತವಾಗಿ ಲೀಡ್ ಮಾಡುತ್ತಾರಾ.? ತಂಡಕ್ಕೆ ಚೊಚ್ಚಲ ಟ್ರೋಫಿ ತಂದುಕೊಡ್ತಾರಾ.? ಎಂಬುದನ್ನು ಕಾದು ನೋಡಬೇಕಿದೆ. ಡೆಲ್ಲಿ ಕ್ಯಾಪಿಟಲ್ಸ್ ಏಪ್ರಿಲ್​ 1ರಿಂದ ಐಪಿಎಲ್​​ನಲ್ಲಿ ಅಭಿಯಾನ ಆರಂಭಿಸಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಲಕ್ನೋ ತಂಡವನ್ನು ಎದುರಿಸಲಿದೆ.