MS Dhoni: ಎದುರಿಸಿದ್ದು ಕೇವಲ ಮೂರು ಎಸೆತ, ವೀಕ್ಷಿಸಿದ್ದು 1.7 ಕೋಟಿ ಜನ; 'ಮಾಹಿ, ನಿಮಗೆ ನೀವೇ ಸಾಟಿ'
ಕನ್ನಡ ಸುದ್ದಿ  /  ಕ್ರೀಡೆ  /  Ms Dhoni: ಎದುರಿಸಿದ್ದು ಕೇವಲ ಮೂರು ಎಸೆತ, ವೀಕ್ಷಿಸಿದ್ದು 1.7 ಕೋಟಿ ಜನ; 'ಮಾಹಿ, ನಿಮಗೆ ನೀವೇ ಸಾಟಿ'

MS Dhoni: ಎದುರಿಸಿದ್ದು ಕೇವಲ ಮೂರು ಎಸೆತ, ವೀಕ್ಷಿಸಿದ್ದು 1.7 ಕೋಟಿ ಜನ; 'ಮಾಹಿ, ನಿಮಗೆ ನೀವೇ ಸಾಟಿ'

ಪಂದ್ಯದಲ್ಲಿ ಧೋನಿ ಎದುರಿಸಿದ್ದು ಕೇವಲ ಮೂರು ಎಸೆತಗಳು ಮಾತ್ರ. ಅದರಲ್ಲಿ ಮೊದಲೆರಡು ಎಸೆತಗಳು ಬೌಂಡರಿ ಲೈನ್‌ ದಾಟಿತು. ಮಾಹಿಯ ಆಟವನ್ನು ನೋಡಲು ಒಂಟಿ ಕಾಲಿನಲ್ಲಿ ಕಾಯುತ್ತಿದ್ದ ಅಭಿಮಾನಿಗಳಿಗೆ ಅವರು ನಿರಾಶೆಗೊಳಿಸಲಿಲ್ಲ. ಸತತ ಎರಡು ಸಿಕ್ಸರ್‌ ಸಿಡಿಸಿ ಅಭಿಮಾನಿಗಳ ಮನತಣಿಸಿದರು.

ಧೋನಿ ಬ್ಯಾಟಿಂಗ್‌
ಧೋನಿ ಬ್ಯಾಟಿಂಗ್‌ (PTI)

ಕೂಲ್‌ ಕ್ಯಾಪ್ಟನ್‌ ಮಾಹಿಗಿರುವ ಅಭಿಮಾನಿ ವರ್ಗ ಅಷ್ಟು ದೊಡ್ಡದು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದ ವೇಳೆ, ಎಂಎಸ್ ಧೋನಿ ಬ್ಯಾಟಿಂಗ್‌ಗೆ ಕಾಲಿಟ್ಟಾಗ ಮೈದಾನದ ತುಂಬೆಲ್ಲಾ ಹರ್ಷೋದ್ಘಾರ ಕೇಳಿ ಬಂತು. ಮಾಹಿ ಹೆಸರು ಹೇಳುತ್ತಾ ಅಭಿಮಾನಿಗಳು ಖುಷಿಯಿಂದ ಬಾನೆತ್ತರಕ್ಕೆ ಹಾರಿದರು. ಒಂದೆರಡು ನಿಮಿಷಗಳ ಕಾಲ ನಿರಂತರವಾಗಿ ಅಭಿಮಾನಿಗಳು ಮಾಹಿ ಜಪದಲ್ಲಿ ಮಗ್ನರಾದರು. ಇದು ಭಾರತದಲ್ಲಿ ಮಾಹಿಗೆ ಸಿಗುವ ಗೌರವ.

ಸೋಮವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಸಿಎಸ್‌ಕೆ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ರವೀಂದ್ರ ಜಡೇಜಾ ಔಟಾದ ನಂತರ, ಧೋನಿ ತಮ್ಮ ಸಾಂಪ್ರದಾಯಿಕ ವೇಗದ ನಡಿಗೆಯೊಂದಿಗೆ ಪಿಚ್‌ನತ್ತ ಬಂದರು. ಈ ಸಂದರ್ಭಕ್ಕಾಗಿ ಚೆಪಾಕ್‌ ಮೈದಾನದಲ್ಲಿ ಕಿಕ್ಕಿರಿದು ಸೇರಿದ್ದ ಜನಸಮೂಹ ಜೋರಾಗಿ ಕಿರುಚಲು ಶುರುವಿಟ್ಟರು. ಆ ಕ್ಷಣವು ಮಾಹಿ ಮೇಲಿನ ಭಕ್ತಿಯ ಸಾಮೂಹಿಕ ಅಭಿವ್ಯಕ್ತಿಗೆ ಕಾರಣವಾಯಿತು. ಬರೋಬ್ಬರಿ 1426 ದಿನಗಳವರೆಗೆ ಮಾಹಿಯನ್ನು ಚೆನ್ನೈ ಮೈದಾನದಲ್ಲಿ ನೋಡಲು ಕಾಯುತ್ತಿದ್ದ ಅಭಿಮಾನಿಗಳು, ಆ ಕ್ಷಣವನ್ನು ತನುಮನಗಳಲ್ಲಿ‌ ತುಂಬಿಕೊಂಡರು. ಧೋನಿ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಮೇ 2019ರಲ್ಲಿ ಚೆನ್ನೈನಲ್ಲಿ ಆಡಿದ್ದರು. ಹೀಗಾಗಿ 'ತಲಾ' ಅಭಿಮಾನಿಗಳು ಅವರನ್ನು ನೋಡಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು.

ಪಂದ್ಯದಲ್ಲಿ ಧೋನಿ ಎದುರಿಸಿದ್ದು ಕೇವಲ ಮೂರು ಎಸೆತಗಳು ಮಾತ್ರ. ಅದರಲ್ಲಿ ಮೊದಲೆರಡು ಎಸೆತಗಳು ಬೌಂಡರಿ ಲೈನ್‌ ದಾಟಿತು. ಮಾಹಿಯ ಆಟವನ್ನು ನೋಡಲು ಒಂಟಿ ಕಾಲಿನಲ್ಲಿ ಕಾಯುತ್ತಿದ್ದ ಅಭಿಮಾನಿಗಳಿಗೆ ಅವರು ನಿರಾಶೆಗೊಳಿಸಲಿಲ್ಲ. ಸತತ ಎರಡು ಸಿಕ್ಸರ್‌ ಸಿಡಿಸಿ ಅಭಿಮಾನಿಗಳ ಮನತಣಿಸಿದರು. ಈ ವೇಳೆ ಸ್ಟೇಡಿಯಂನಲ್ಲಿ ಸೇರಿದ್ದ ಅಭಿಮಾನಿಗಳು ಮೊಬೈಲ್ ಫ್ಲಾಶ್‌ಲೈಟ್‌ ಆನ್‌ ಮಾಡಿ ಧೋನಿಗೆ ಗೌರವ ಸಲ್ಲಿಸಿದರು.

ಧೋನಿ ಮ್ಯಾಜಿಕ್ ಚೆಪಾಕ್‌ ಮೈದಾನಕ್ಕಷ್ಟೇ ಸೀಮಿತವಾಗಿರಲಿಲ್ಲ. ಧೋನಿ ಕ್ರೀಸ್‌ಗೆ ಬಂದು ಬ್ಯಾಟಿಂಗ್‌ ಮಾಡುವಾಗ ಜಿಯೋ ಸಿನಿಮಾದಲ್ಲಿ ಪಂದ್ಯ ವೀಕ್ಷಿಸಿದ ವೀಕ್ಷಕರ ಸಂಖ್ಯೆ ಬರೋಬ್ಬರಿ 1.7 ಕೋಟಿ. ಇದು 2023ರ ಐಪಿಎಲ್‌ನಲ್ಲಿ ಈವರೆಗೆ ಏಕಕಾಲಕ್ಕೆ ದಾಖಲಾದ ಅತಿ ಹೆಚ್ಚು ವೀಕ್ಷಣೆ. ದೇಶಾದ್ಯಂತ ಧೋನಿಯನ್ನು ಆರಾಧಿಸುವ ಅಭಿಮಾನಿಗಳಿದ್ದಾರೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಧೋನಿ ಈ ಮೂಲಕ ತಮ್ಮದೇ ದಾಖಲೆಯನ್ನು ಮುರಿದರು. ಈ ಹಿಂದಿನ ದಾಖಲೆ 1.6 ಕೋಟಿ ಆಗಿತ್ತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಧೋನಿ ಬ್ಯಾಟಿಂಗ್‌ ಮಾಡುವಾಗ ಒಂದೂವರೆ ಕೋಟಿಗೆ ಹೆಚ್ಚು ಜನ ಮಾಹಿ ಆಟ ವೀಕ್ಷಿಸಿದ್ದರು.

ಸತತ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್‌ ಸಿಡಿಸಿದ ಮಾಹಿ, ಹ್ಯಾಟ್ರಿಕ್ ಸಿಕ್ಸರ್‌ಗಳನ್ನು ಗಳಿಸುವ ಪ್ರಯತ್ನದಲ್ಲಿ ಔಟಾದರು. ಡೀಪ್ ಪಾಯಿಂಟ್‌ನಲ್ಲಿ ಕ್ಯಾಚ್ ನೀಡಿ ಕ್ರೀಸ್‌ನಿಂದ ನಿರ್ಗಮಿಸಿದರು. 20 ಓವರ್‌ಗಳಲ್ಲಿ ಸಿಎಸ್‌ಕೆ 217 ರನ್‌ ಗಳಿಸಿತು. ಧೋನಿ ಗಳಿಸಿದ ಒಟ್ಟು ಮೊತ್ತ 12 ರನ್.‌ ವಿಶೇಷವೆಂದರೆ ಸಿಎಸ್‌ಕೆ ಗೆದ್ದಿದ್ದು ಕೂಡಾ ಅದೇ 12 ರನ್‌ಗಳ ಅಂತರದಿಂದ.

Whats_app_banner