India Women vs Pakistan Women: ಮಾಹಿಯಂತೆಯೇ ಪಂದ್ಯ ಫಿನಿಶ್ ಮಾಡಿ ಅಭಿಮಾನಿಗಳ ಮನಗೆದ್ದ ಜೆಮಿಮಾ; ವಿಡಿಯೋ
ಕನ್ನಡ ಸುದ್ದಿ  /  ಕ್ರೀಡೆ  /  India Women Vs Pakistan Women: ಮಾಹಿಯಂತೆಯೇ ಪಂದ್ಯ ಫಿನಿಶ್ ಮಾಡಿ ಅಭಿಮಾನಿಗಳ ಮನಗೆದ್ದ ಜೆಮಿಮಾ; ವಿಡಿಯೋ

India Women vs Pakistan Women: ಮಾಹಿಯಂತೆಯೇ ಪಂದ್ಯ ಫಿನಿಶ್ ಮಾಡಿ ಅಭಿಮಾನಿಗಳ ಮನಗೆದ್ದ ಜೆಮಿಮಾ; ವಿಡಿಯೋ

ಅದ್ಭುತ ಫಾರ್ಮ್‌ನಲ್ಲಿದ್ದ 22ರ ಹರೆಯದ ಆಟಗಾರ್ತಿ ಜೆಮಿಮಾ ರೋಡ್ರಿಗಸ್, 38 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ ಅಜೇಯ 53 ರನ್ ಸಿಡಿಸಿದರು. ಅಲ್ಲದೆ ಕ್ರೀಸ್‌ಕಚ್ಚಿ ಆಡಿ ಭಾರತವನ್ನು ಗೆಲುವಿನ ದಡ ಸೇರಿಸಿದರು.

ಜೆಮಿಮಾ ಆಟದ ದೃಶ್ಯ
ಜೆಮಿಮಾ ಆಟದ ದೃಶ್ಯ (Twitter)

ಭಾನುವಾರ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಗೆಲುವಿನ ಅಭಿಯಾನ ಆರಂಭಿಸಿದೆ. ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಶುಭಾರಂಭ ಮಾಡಿದೆ.

ಅದ್ಭುತ ಫಾರ್ಮ್‌ನಲ್ಲಿದ್ದ 22ರ ಹರೆಯದ ಆಟಗಾರ್ತಿ ಜೆಮಿಮಾ ರೋಡ್ರಿಗಸ್, 38 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ ಅಜೇಯ 53 ರನ್ ಸಿಡಿಸಿದರು. ಅಲ್ಲದೆ ಕ್ರೀಸ್‌ಕಚ್ಚಿ ಆಡಿ ಭಾರತವನ್ನು ಗೆಲುವಿನ ದಡ ಸೇರಿಸಿದರು. ಪಾಕ್‌ ನೀಡಿದ 150 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಮತ್ತು ಸುಲಭವಾಗಿ ಬೆನ್ನಟ್ಟಿದ ಭಾರತ, ಕೇವಲ 19 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 151 ರನ್ ಗಳಿಸಿತು.

20 ಎಸೆತಗಳಲ್ಲಿ ಐದು ಬೌಂಡರಿ ಸೇರಿದಂತೆ ಅಜೇಯ 31 ರನ್ ಗಳಿಸುವ ಮೂಲಕ, ಯುವ ಆಟಗಾರ್ತಿ ರಿಚಾ ಘೋಷ್ ಅಬ್ಬರಿಸಿದರು. ಜೆಮಿಮಾ ಜೊತೆ ಸೀರಿ ಉತ್ತಮ ಜೊತೆಯಾಟವಾಡಿದರು. ಉತ್ತಮ ಪ್ರದರ್ಶನ ನೀಡಿದ ಜೆಮಿಮಾ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು. ಇವರೊಂದಿಗೆ ಅಂಡರ್‌ 19 ವಿಶ್ವಕಪ್‌ ವಿಜೇತ ನಾಯಕಿ ಶಫಾಲಿ ವರ್ಮಾ ಕೊಡುಗೆ ಕೂಡಾ ನಿರ್ಣಾಯಕವಾಗಿತ್ತು. ಈ ನಡುವೆ, ಪಾಕಿಸ್ತಾನದ ಪರವಾಗಿ ನಶ್ರಾ ಸಂಧು ಎರಡು ವಿಕೆಟ್ ಪಡೆರೆ, ಸಾದಿಯಾ ಇಕ್ಬಾಲ್ ಒಂದು ಪಡೆದರು.

ಪ್ರಮುಖವಾಗಿ ಈ ಪಂದ್ಯದಲ್ಲಿ ಜೆಮಿಮಾ ಭರ್ಜರಿ ಫಾರ್ಮ್‌ನಲ್ಲಿದ್ದರು. ಚೇಸಿಂಗ್‌ ವೇಳೆ ಶಾಂತವಾಗಿ ಇನ್ನಿಂಗ್ಸ್‌ ಆರಂಭಿಸಿ, ಅಗತ್ಯ ಸಂದರ್ಭದಲ್ಲಿ ಮಾತ್ರ ಅಬ್ಬರಿಸಿದರು. ಡೆತ್‌ ಓವರ್‌ಗಳಲ್ಲಿ ರಿಚಾ ಜೊತೆಗೂಡಿ ಭಾರತದ ಚೇಸಿಂಗ್ ವೇಗಗೊಳಿಸಿದರು. ಇವರಿಬ್ಬರು ಜೊತೆಗೂಡಿ ಮೇಲಿಂದ ಮೇಲೆ ಬೌಂಡರಿ ಸಿಡಿಸಿ, ಪಾಕಿಸ್ತಾನಕ್ಕೆ ಆಘಾತ ನೀಡಿದರು.

19ನೇ ಓವರ್‌ನ ಐದನೇ ಎಸೆತದಲ್ಲಿ, ಜೆಮಿಮಾ ಅವರು ಫಾತಿಮಾ ಸನಾ ಎಸೆತವನ್ನು ಶಾರ್ಟ್ ಥರ್ಡ್ ಮೂಲಕ ಬೌಂಡರಿಗಟ್ಟಿದರು. ಮುಂದಿನ ಎಸೆತವನ್ನು ಅವರು ಲೆಗ್ ಸೈಡ್‌ ಅನ್ನು ಗುರಿಯಾಗಿಸಿ ಬೌಂಡರಿ ಲೈನ್‌ಗೆ ಕಳುಹಿಸಿದರು. ಅಲ್ಲಿಗೆ ತಮ್ಮ ಅರ್ಧಶತಕ ಪೂರೈಸುವುದರೊಂದಿಗೆ ಭಾರತವು ವಿಜಯವನ್ನು ಮುದ್ರೆಯೊತ್ತಿತು. ಜೆಮಿಮಾ ಅವರ ಬ್ಯಾಕ್ ಟು ಬ್ಯಾಕ್ ಮ್ಯಾಚ್ ವಿನ್ನಿಂಗ್ ಬೌಂಡರಿಗಳ ವಿಡಿಯೋ ಇಲ್ಲಿದೆ.

ನಿನ್ನೆಯ ಪಂದ್ಯದ ಆರಂಭದಲ್ಲಿ ಪಾಕಿಸ್ತಾನದ ನಾಯಕಿ ಬಿಸ್ಮಾ ಮರೂಫ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಪ್ರದರ್ಶನ ನೀಡಿದ ಪಾಕ್‌ ನಾಯಕಿ 55 ಎಸೆತಗಳಲ್ಲಿ ಏಳು ಬೌಂಡರಿಗಳೊಂದಿಗೆ ಅಜೇಯ 68 ರನ್ ಗಳಿಸಿದರು. ಆ ಮೂಲಕ ತಮ್ಮ ತಂಡವು 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 149 ರನ್ ಗಳಿಸಲು ಸಹಾಯ ಮಾಡಿದರು. ಆಯೇಶಾ ನಸೀಮ್ ಅವರು 25 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದರು. ಈ ನಡುವೆ ಭಾರತದ ಪರ ರಾಧಾ ಯಾದವ್ ಎರಡು ವಿಕೆಟ್ ಪಡೆದರು. ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಕರ್ ತಲಾ ಒಂದು ವಿಕೆಟ್ ಪಡೆದರು.

ಪಂದ್ಯದ ಬಳಿಕ, ಜೆಮಿಮಾ ಅವರು ರಿಚಾ ಅವರನ್ನು ಶ್ಲಾಘಿಸಿದರು. ಈ ವೇಳೆ ತಮ್ಮ ಅರ್ಧಶತಕವನ್ನು ತಮ್ಮ ಪೋಷಕರಿಗೆ ಅರ್ಪಿಸಿದರು. “ಏನು ಹೇಳಬೇಕೆಂದು ನನಗೆ ತಿಳಿದಿಲ್ಲ. ಉತ್ತಮ ಜೊತೆಯಾಟದಿಂದ ಗುರಿ ಬೆನ್ನತ್ತಬಹುದು ಎಂದು ನನಗೆ ತಿಳಿದಿತ್ತು. ರಿಚಾ ಮತ್ತು ನಾನು ಬಾಂಗ್ಲಾದೇಶದ ವಿರುದ್ಧ ಉತ್ತಮ ಜೊತೆಯಾಟ ನೀಡಿದ್ದೆವು. ನಾವು ಇಂದು(ಭಾನುವಾರ) ಮತ್ತೆ ಇದನ್ನು ಮಾಡಬಹುದು ಎಂದು ತಿಳಿದಿತ್ತು. ಈ ಇನ್ನಿಂಗ್ಸ್ ನನಗೆ ನಿಜವಾಗಿಯೂ ವಿಶೇಷವಾಗಿದೆ. ನಾನು ಸ್ವಲ್ಪ ಸಮಯದಿಂದ ರನ್‌ ಗಳಿಸುತ್ತಿರಲಿಲ್ಲ. ಆದರೆ, ದೇವರು ಕೃತಜ್ಞನಾಗಿದ್ದಾನೆ. ಉಳಿದದ್ದನ್ನು ಅವನು ನೋಡಿಕೊಳ್ಳುತ್ತಾನೆ. ನಾನು ಇದನ್ನು ನನ್ನ ಹೆತ್ತವರಿಗೆ ಅರ್ಪಿಸಲು ಬಯಸುತ್ತೇನೆ, ಅವರು ಇಲ್ಲಿ ಕ್ರೀಡಾಂಗಣದಲ್ಲಿದ್ದಾರೆ,” ಎಂದು ಜೆಮಿಮಾ ಹೇಳಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.