IPL 2023: ಟಿವಿಯಲ್ಲೂ ಐಪಿಎಲ್ ವೀಕ್ಷಕರ ಪ್ರಮಾಣ ಹೆಚ್ಚಳ; ಶೇ.29ರಷ್ಟು ಹೆಚ್ಚುವರಿ ರೇಟಿಂಗ್ ಪಡೆದ ಡಿಸ್ನಿ ಸ್ಟಾರ್!
ಉದ್ಘಾಟನಾ ಪಂದ್ಯದ ದಿನದಂದು, ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಮೊದಲ ಪಂದ್ಯವನ್ನು 130 ಮಿಲಿಯನ್ ಜನರು ವೀಕ್ಷಿಸಿದ್ದರು. ಉದ್ಘಾಟನಾ ಸಮಾರಂಭ ಸೇರಿದಂತೆ ಮೊದಲ ದಿನದ ಪಂದ್ಯವನ್ನು ಒಟ್ಟು 140 ಮಿಲಿಯನ್ ವೀಕ್ಷಕರು ನೇರಪ್ರಸಾರದಲ್ಲಿ ವೀಕ್ಷಿಸಿದ್ದಾರೆ.
ಐಪಿಎಲ್ 2023ರ ಆವೃತ್ತಿಯ ಟೆಲಿವಿಷನ್ ಪ್ರಸಾರದ ಹಕ್ಕುಗಳನ್ನು ಡಿಸ್ನಿ ಸ್ಟಾರ್ ಪಡೆದುಕೊಂಡಿದೆ. ಉದ್ಘಾಟನಾ ಪಂದ್ಯವು ಟಿವಿಯಲ್ಲಿ ಒಟ್ಟು 8.7 ಶತಕೋಟಿ ನಿಮಿಷಗಳ ವೀಕ್ಷಣೆಯನ್ನು ಪಡೆದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು 47 ಶೇಕಡದಷ್ಟು ಹೆಚ್ಚುವರಿ ಬೆಳವಣಿಗೆಯಾಗಿದೆ.
ಉದ್ಘಾಟನಾ ಪಂದ್ಯದ ದಿನದಂದು, ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಮೊದಲ ಪಂದ್ಯವನ್ನು 130 ಮಿಲಿಯನ್ ಜನರು ವೀಕ್ಷಿಸಿದ್ದರು. ಉದ್ಘಾಟನಾ ಸಮಾರಂಭ ಸೇರಿದಂತೆ ಮೊದಲ ದಿನದ ಪಂದ್ಯವನ್ನು ಒಟ್ಟು 140 ಮಿಲಿಯನ್ ವೀಕ್ಷಕರು ನೇರಪ್ರಸಾರದಲ್ಲಿ ವೀಕ್ಷಿಸಿದ್ದಾರೆ.
“ದೇಶಾದ್ಯಂತ ಅಭಿಮಾನಿಗಳ ಅಗಾಧ ಪ್ರತಿಕ್ರಿಯೆಯಿಂದ ನಾವು ವಿನೀತರಾಗಿದ್ದೇವೆ. ವೀಕ್ಷಣಾ ಸಮಯದ ಬೃಹತ್ ಬೆಳವಣಿಗೆಯು ನಮ್ಮ ಅಭಿಯಾನದ ಯಶಸ್ಸಿಗೆ ಸಾಕ್ಷಿಯಾಗಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ಪ್ರಸಾರದ ಗುಣಮಟ್ಟವನ್ನು ನಿರ್ಮಿಸುವತ್ತ ಗಮನಹರಿಸಿ, ಟೆಲಿವಿಶನ್ ಲೋಕದಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. ಲೈವ್ ಕ್ರಿಕೆಟ್‌ನಲ್ಲಿ ಯಾವುದೇ ಅಡೆತಡೆಯಿಲ್ಲದ ವೀಕ್ಷಣೆಗೆ ವೇದಿಕೆ ಆದ್ಯತೆ ಕಲ್ಪಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ, ನಾವು ಕ್ರಿಕೆಟ್ ಅಭಿಮಾನಿಗಳೊಂದಿಗೆ ಆಳವಾದ ಸಂಬಂಧವನ್ನು ಹಂಚಿಕೊಳ್ಳುತ್ತೇವೆ” ಎಂದು ಡಿಸ್ನಿ ಸ್ಟಾರ್‌ನ ಕ್ರೀಡಾ ಮುಖ್ಯಸ್ಥ ಸಂಜೋಗ್ ಗುಪ್ತಾ ಹೇಳಿದ್ದಾರೆ.
ಜಿಯೋ ಸಿನಿಮಾದಲ್ಲಿ ಮೂರೇ ದಿನಕ್ಕೆ 147 ಕೋಟಿ ವೀಕ್ಷಣೆ
ಇದೇ ವೇಳೆ ಐಪಿಎಲ್‌ನ ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ಖರೀದಿಸಿರುವ ವಯಾಕಾಮ್18 ಮಾಲೀಕತ್ವದ ಜಿಯೋ ಸಿನಿಮಾ ಕೂಡಾ ಯಶಸ್ವಿಯಾಗಿದೆ. ಐಪಿಎಲ್ ಪಂದ್ಯ ಆರಂಭಗೊಂಡ ಮೊದಲ ವಾರಾಂತ್ಯದಲ್ಲೇ ಅಪಾರ ಸಂಖ್ಯೆ ವೀಕ್ಷಕರು ಡಿಜಿಟಲ್ ಮಾಧ್ಯಮದಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದಾರೆ.
ಭಾನುವಾರದ ವೇಳೆಗೆ ಐದು ಪಂದ್ಯಗಳು ನಡೆದಿದ್ದು, ಬರೋಬ್ಬರಿ 147 ಕೋಟಿ ವಿಡಿಯೋ ವೀಕ್ಷಣೆಗಳನ್ನು ಜಿಯೋ ಸಿನಿಮಾ ಪಡೆದಿದೆ. ಇದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಕಳೆದ ವರ್ಷ ಸ್ಟ್ರೀಮ್ ಮಾಡಲಾದ ಐಪಿಎಲ್ 2022ರ ಸಂಪೂರ್ಣ ಆವೃತ್ತಿಯ ಡಿಜಿಟಲ್ ವೀಕ್ಷಕರಿಗಿಂತ ಹೆಚ್ಚಿನದಾಗಿದೆ ಎಂದು ಪ್ಲಾಟ್‌ಫಾರ್ಮ್ ಹೇಳಿಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಡುವಿನ ಉದ್ಘಾಟನಾ ಪಂದ್ಯವನ್ನು, ಜಿಯೋ ಸಿನಿಮಾದಲ್ಲಿ ಏಕಕಾಲಕ್ಕೆ 1.6 ಕೋಟಿ ಜನ ವೀಕ್ಷಿಸಿದ್ದರು. ಇದು ಏಕಕಾಲದಲ್ಲಿ ವೀಕ್ಷಣೆ ಕಂಡ ಗರಿಷ್ಠ ಸಂಖ್ಯೆ. ಮೊದಲ ದಿನವಾದ ಅಂದು, 2.5 ಕೋಟಿಗೂ ಹೆಚ್ಚು ಜನ ಆಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಮೊದಲ ವಾರಾಂತ್ಯದಲ್ಲಿ ಒಟ್ಟಾರೆ ಲಭ್ಯವಾದ ಹೊಸ ವೀಕ್ಷಕರ ಸಂಖ್ಯೆ 10 ಕೋಟಿ.
ಸೋಮವಾರದ ಪಂದ್ಯದಲ್ಲಿ ಸಿಎಸ್‌ಕೆ ಮತ್ತು ಎಲ್‌ಎಸ್‌ಜಿ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡುವಾಗ ಜಿಯೋ ಸಿನಿಮಾದಲ್ಲಿ ಬರೋಬ್ಬರಿ 1.7 ಕೋಟಿ ಮಂದಿ ಪಂದ್ಯ ವೀಕ್ಷಿಸಿದ್ದರು. ಇದು 2023ರ ಐಪಿಎಲ್‌ನಲ್ಲಿ ಈವರೆಗೆ ಡಿಜಿಟಲ್ ಮಾಧ್ಯಮದಲ್ಲಿ ಏಕಕಾಲಕ್ಕೆ ದಾಖಲಾದ ಅತಿ ಹೆಚ್ಚು ವೀಕ್ಷಣೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಧೋನಿ ಬ್ಯಾಟಿಂಗ್ ಮಾಡುವಾಗ 1.6 ಕೋಟಿ ಮಂದಿ ಪಂದ್ಯ ವೀಕ್ಷಿಸಿದ್ದರು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಸಿಎಸ್‌ಕೆ ಓಪನರ್ ರುತುರಾಜ್ ಗಾಯಕ್ವಾಡ್ ಸ್ಫೋಟಕ 92 ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 178 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ, ಟೈಟಾನ್ಸ್ 19.2 ಓವರ್‌ಗಳಲ್ಲಿ ಗುರಿ ತಲುಪಿತು. ಶುಬ್ಮನ್ ಗಿಲ್ 36 ಎಸೆತಗಳಲ್ಲಿ 63 ರನ್ ಗಳಿಸಿದರು.
ವಿಭಾಗ