ದೋಹಾ ಡೈಮಂಡ್ ಲೀಗ್; ಚಾರಿತ್ರಿಕ 90 ಮೀಟರ್ ಎಸೆದಿದ್ದರ ನಡುವೆಯೂ ನೀರಜ್ ಚೋಪ್ರಾಗೆ ಕೈತಪ್ಪಿತು ಚಿನ್ನದ ಪದಕ
2025ರ ದೋಹಾ ಡೈಮಂಗ್ ಲೀಗ್‌ನಲ್ಲಿ 91.06 ಮೀಟರ್ ದೂರ ಜರ್ಮನ್ನ ಜೂಲಿಯನ್ ವೆಬರ್ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಭಾರತದ ನೀರಜ್ ಚೋಪ್ರಾ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

2025ರ ದೋಹಾ ಡೈಮಂಗ್ ಲೀಗ್‌ನಲ್ಲಿ ಐತಿಹಾಸಿಕ 90 ಮೀಟರ್ ಮಾರ್ಕ್ ಮುಟ್ಟಿದ್ದರ ನಡುವೆಯೂ ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾಗೆ ಚಿನ್ನದ ಪದಕ ಕೈ ತಪ್ಪಿತು. ಮೂರನೇ ಪ್ರಯತ್ನದಲ್ಲಿ ತನ್ನ ವೈಯಕ್ತಿಕ ದಾಖಲೆಯ 90.23 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿಗೆ ತೃಪ್ತಿಪಟ್ಟ ನೀರಜ್, ಚಿನ್ನದ ಪದಕ ಜಯಿಸಿದ ಜರ್ಮನ್ನ ಜೂಲಿಯನ್ ವೆಬರ್ ಅವರನ್ನು ಹಿಂದಿಕ್ಕಲು ವಿಫಲರಾದರು. ವೆಬರ್ ಅವರು 91.06 ಮೀಟರ್ ಜಾವೆಲಿನ್ ಎಸೆದು ಸ್ವರ್ಣಕ್ಕೆ ಕೊರೊಳೊಡ್ಡಿದರು.
ದೋಹಾದ ಸುಹೀಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ನಡೆದ ಲೀಗ್‌ನಲ್ಲಿ ನೀರಜ್ ಚೋಪ್ರಾ 90 ಮೀಟರ್ ಗಡಿ ದಾಟಿದರು. ಇದು ಅವರ ವೃತ್ತಿಜೀವನದ ಗರಿಷ್ಠ ಸಾಧನೆ. 27 ವರ್ಷದ ನೀರಜ್ ಚೋಪ್ರಾ ಶುಕ್ರವಾರ (ಮೇ 16) ರಾತ್ರಿಯ ಮೂರನೇ ಥ್ರೋನಲ್ಲಿ ಈ ಸಾಧನೆ ಮಾಡಿದರು. ನೀರಜ್ ಈ ಮೈಲಿಗಲ್ಲು ಸಾಧಿಸಿದ ಮತ್ತು ರಾಷ್ಟ್ರೀಯ ದಾಖಲೆಯನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ಪರ ಅತಿ ದೂರ ಎಸೆದ ದಾಖಲೆಯೂ ಅವರ ಹೆಸರಿನಲ್ಲೇ ಇತ್ತು.
ಈ ಪ್ರದರ್ಶನಕ್ಕೂ ಮುನ್ನ, ನೀರಜ್ 89.94 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದ್ದರು. ಹಾಲಿ ವಿಶ್ವ ಚಾಂಪಿಯನ್ ಜಾನ್ ಝೆಲೆಜ್ನಿ ಅವರನ್ನು ತಮ್ಮ ವೈಯಕ್ತಿಕ ಕೋಚ್ ಆಗಿ ನೇಮಿಸಿಕೊಂಡ ಕೆಲವೇ ತಿಂಗಳುಗಳ ನಂತರ ಈ ಸಾಧನೆ ಮಾಡಿರುವುದು ವಿಶೇಷ. ಝೆಲೆಜ್ನಿ ಸಾರ್ವಕಾಲಿಕ ಶ್ರೇಷ್ಠ ಜಾವೆಲಿನ್ ಎಸೆತಗಾರನಾಗಿದ್ದು, ಅವರು ಅತಿ ಉದ್ದದ ಎಸೆತದ (98.48 ಮೀ) ವಿಶ್ವ ದಾಖಲೆಯನ್ನು ಹೊಂದಿದ್ದಾರೆ.
ನೀರಜ್ ಚೋಪ್ರಾಗೆ 2ನೇ ಸ್ಥಾನ
ನೀರಜ್ ತನ್ನ ಮೊದಲ ಥ್ರೋವನ್ನು 88.44 ಮೀ ಎಸೆತದೊಂದಿಗೆ ಪ್ರಾರಂಭಿಸಿದರು. ಆದರೆ ಎರಡನೇ ಥ್ರೋನಲ್ಲಿ ಪೋಲ್ ಆದರು. ನಂತರ 3ನೇ ಥ್ರೋನಲ್ಲಿ ಐತಿಹಾಸಿಕ 90.23 ಮೀಟರ್ ಎಸೆತದೊಂದಿಗೆ ಮುಗಿಸಿದರು. ಎರಡನೇ ಮತ್ತು ಐದನೇ ಎಸೆತಗಳು ಫೌಲ್ ಆದವು. ಮತ್ತು ಆದ್ದರಿಂದ ಅವುಗಳನ್ನು ಅಳೆಯಲಾಗಲಿಲ್ಲ. ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ 88.20 ಮೀಟರ್ ಎಸೆತದೊಂದಿಗೆ ಲೀಗ್ಪೂರ್ಣಗೊಳಿಸುವ ಮೊದಲು 80.56 ಮೀಟರ್ ದೂರ ದಾಖಲಿಸಿದರು.
ಆದಾಗ್ಯೂ, ಜೂಲಿಯನ್ ವೆಬರ್ ತನ್ನ ಆರನೇ ಮತ್ತು ಕೊನೆಯ ಎಸೆತದಲ್ಲಿ 91.06 ಮೀಟರ್ ಎಸೆದು ಇತಿಹಾಸ ನಿರ್ಮಿಸಿದ್ದರಿಂದ ನೀರಜ್ ಈವೆಂಟ್ ಗೆಲ್ಲುವಲ್ಲಿ ವಿಫಲರಾದರು. ಜರ್ಮನ್ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 90 ಮೀಟರ್ ಎಸೆದು ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದರು. ಇದು ಕೂಡ ಅವರ ಪಾಲಿಗೆ ಚಾರಿತ್ರಿಕ ಸಾಧನೆಯಾಗಿದೆ. ವೆಬರ್ 88 ಮೀಟರ್‌ಗಿಂತ ಹೆಚ್ಚು ದೂರವನ್ನು ನಾಲ್ಕು ಸಲ ಎಸೆದರು. 83.82 ಮೀ ಮತ್ತು 855.57 ಮೀ ಎಸೆತಗಳೊಂದಿಗೆ ಕಳಪೆ ಆರಂಭ ಪಡೆದರೂ ನಂತರ 89.06, 88.05, 89.84 ಮತ್ತು 91.06 ಎಸೆತಗಳೊಂದಿಗೆ ಕ್ರಮೇಣ ಸುಧಾರಿಸಿದರು.
ಅಗ್ರಸ್ಥಾನದಲ್ಲಿ ಸ್ಥಾನ ಗಳಿಸುವಲ್ಲಿ ವಿಫಲವಾದರೂ, ನೀರಜ್ ನಾಲ್ಕು ವರ್ಷಗಳಿಂದ ತನ್ನ ಗಮನಾರ್ಹ ಓಟವನ್ನು ಮುಂದುವರೆಸಿದ್ದಾರೆ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ಅವರು ಸ್ಪರ್ಧಿಸಿದ ಯಾವುದೇ ಸ್ಪರ್ಧೆಯಲ್ಲಿ ಎರಡನೇ ಸ್ಥಾನಕ್ಕಿಂತ ಕೆಳಗಿಳಿದಿಲ್ಲ ಎಂಬುದು ಮತ್ತೊಂದು ವಿಶೇಷ.


