ಕನ್ನಡ ಸುದ್ದಿ  /  Sports  /  Ex India Star Hints At Worry On Virat Kohli Playing Through Sickness

Virat Kohli:'ಸುಡು ಬಿಸಿಲಿನಲ್ಲೂ 8 ಗಂಟೆಗಳ ಕಾಲ ಬ್ಯಾಟಿಂಗ್'; ಅನಾರೋಗ್ಯದ ನಡುವೆ ಆಡಿದ ಕೊಹ್ಲಿ ಕುರಿತು ಮಾಜಿ ಆಟಗಾರನಿಗೆ ಚಿಂತೆ

ಕೊಹ್ಲಿ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಕೆಲ ಮಾಜಿ ಆಟಗಾರರು, ಈ ರೀತಿ ಆಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಅಹಮದಾಬಾದ್‌ನಲ್ಲಿ ತೀವ್ರವಾದ ಶಾಖದಿಂದಾಗಿ ಕೊಹ್ಲಿ ಅನಾರೋಗ್ಯಕ್ಕೆ ಒಳಗಾಗಿರಬಹುದು ಎಂದು ಭಾರತದ ಮಾಜಿ ಬೌಲರ್ ಅಜಿತ್ ಅಗರ್ಕರ್ ಹೇಳಿದ್ದಾರೆ.

ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ

ಜಾಗತಿಕ ಕ್ರಿಕೆಟ್‌ನ ಕಿಂಗ್‌ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನ ನಾಲ್ಕನೇ ದಿನದಂದು ಅಮೋಘ ಶತಕ ಸಿಡಿಸುವ ಮೂಲಕ 186 ರನ್ ಗಳಿಸಿದರು. ಆ ಮೂಲಕ ಭಾರತವು ಮೊದಲ ಇನ್ನಿಂಗ್ಸ್‌ನಲ್ಲಿ 570 ರನ್‌ ಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಕೊನೆಯ ಶತಕ ಸಿಡಿಸಿದ್ದ ಕೊಹ್ಲಿ, ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ ಮೂರಂಕಿ ಮೊತ್ತ ತಲುಪಲು ಬರೋಬ್ಬರಿ ಮೂರು ವರ್ಷಗಳಿಗೂ ಹೆಚ್ಚು ಕಾಲ ತೆಗೆದುಕೊಂಡರು.

ಅವರ ಇನ್ನಿಂಗ್ಸ್‌ನ ನಂತರ, ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಮುಖ ವಿಷಯವೊಂದನ್ನು ಬಹಿರಂಗಪಡಿಸಿದರು. ತಮ್ಮ ಪತಿಯನ್ನು ಶ್ಲಾಘಿಸಿದ ಅನುಷ್ಕಾ, ಟೆಸ್ಟ್ ಪಂದ್ಯದಲ್ಲಿ ವಿರಾಟ್ ಶತಕ ಸಿಡಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ “ಅನಾರೋಗ್ಯವಿದ್ದರೂ ಶಾಂತವಾಗಿ ಪಂದ್ಯದಲ್ಲಿ ಹಿಡಿತ ಸಾಧಿಸಿ ಆಡುವುದು ನನಗೆ ಯಾವಾಗಲೂ ಸ್ಫೂರ್ತಿ ತುಂಬುತ್ತದೆ,” ಎಂದು ಬರೆದುಕೊಂಡಿದ್ದಾರೆ. ಆ ಮೂಲಕ, ವಿರಾಟ್‌ ಅನಾರೋಗ್ಯದ ನಡುವೆಯೂ ಬ್ಯಾಟ್‌ ಬೀಸಿದ್ದಾರೆ ಎಂಬುದನ್ನು ಅವರು ತಿಳಿಸಿದರು.

ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಹ ಆಟಗಾರ ಅಕ್ಷರ್‌, ಕೊಹ್ಲಿ ಅವರ ಆಟ ನೋಡಿದ್ದರೆ ಅವರಿಗೆ ಅನಾರೋಗ್ಯ ಇತ್ತು ಎಂದು ನನಗನಿಸುತ್ತಿಲ್ಲ ಎಂದು ಹೇಳಿದರು. ಆದರೆ, ಕೊಹ್ಲಿ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಕೆಲ ಮಾಜಿ ಆಟಗಾರರು, ಈ ರೀತಿ ಆಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಅಹಮದಾಬಾದ್‌ನಲ್ಲಿ ತೀವ್ರವಾದ ಶಾಖದಿಂದಾಗಿ ಕೊಹ್ಲಿ ಅನಾರೋಗ್ಯಕ್ಕೆ ಒಳಗಾಗಿರಬಹುದು ಎಂದು ಭಾರತದ ಮಾಜಿ ಬೌಲರ್ ಅಜಿತ್ ಅಗರ್ಕರ್ ಹೇಳಿದ್ದಾರೆ.

“ಅವರ ವೃತ್ತಿಜೀವನದ ವಿಶಿಷ್ಟ ಲಕ್ಷಣವೆಂದರೆ ಫಿಟ್ನೆಸ್. ಅವರು ನಿಜವಾಗಿಯೂ ಅವರ ಫಿಟ್ನೆಸ್‌ ಬಗ್ಗೆ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರು ಈ ಬಿಸಿ ವಾತಾವರಣದಲ್ಲಿ 8 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿದರು. ಹೀಗಾಗಿ ಆರೋಗ್ಯದ ಬಗ್ಗೆ ಸಹಜವಾಗಿ ಚಿಂತೆ ಇರುತ್ತದೆ. ಆದರೆ,ಕೊಹ್ಲಿ ಆಟ ನೋಡಿದಾಗ ಹಾಗೆ ಅನಿಸಲಿಲ್ಲ. ಅವರು ವಿಕೆಟ್‌ಗಳ ನಡುವೆ ಓಡುವಾಗಲೂ ರನ್‌ಗಳು ಕಡಿಮೆಯಾಯಿತು ಎಂದು ಎಲ್ಲೂ ಅನಿಸಿಲ್ಲ,” ಎಂದು ಅಗರ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.

“ಈ ರೀತಿ ಈ ಹಿಂದೆಯೂ ನಡೆದಿದೆ. ಎಲ್ಲಾ ಶ್ರೇಷ್ಠ ಆಟಗಾರರು ಈ ವೇಳೆ ಹೆಚ್ಚುವರಿ ಶಕ್ತಿ ಕಂಡುಕೊಳ್ಳುತ್ತಾರೆ. ಕೊಹ್ಲಿ ಅವರ ಗಟ್ಟಿ ನಿರ್ಣಯ ಅವರ ಆಟದಲ್ಲಿ ಕಂಡಿತು. ಅವರು ದೊಡ್ಡ ರನ್‌ಗಳನ್ನು ಪಡೆಯಲು ನಿರ್ಧರಿಸಿದ್ದರು,” ಎಂದು ಅವರು ತಿಳಿಸಿದರು.

ಈ ನಡುವೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಕೂಡಾ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಅವರ ಇನ್ನಿಂಗ್ಸ್ ಭಾರತವನ್ನು ಆಟಕ್ಕೆ ಮರಳಿ ತಂದಿತು ಎಂದು ಹೇಳಿದ್ದಾರೆ.

“ದಿನದ ಆರಂಭದಲ್ಲಿ ಭಾರತವು ಈ ಟೆಸ್ಟ್ ಪಂದ್ಯವನ್ನು ಹೇಗೆ ನಿಯಂತ್ರಿಸುತ್ತಿದೆ ಎಂಬುದರ ಕುರಿತು ನಾವು ಮಾತನಾಡುತ್ತಿದ್ದೆವು. ಆ ಸಮಯದಲ್ಲಿ, ಪಂದ್ಯ ಹಾಗಿತ್ತು. ಆದರೆ, ಭಾರತದ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಎಲ್ಲವನ್ನೂ ಬದಲಾಯಿಸಿದರು. ಅವರು ದೊಡ್ಡ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿದರು. ಅದು ನಿಜಕ್ಕೂ ಕಷ್ಟಕರವಾಗಿತ್ತು. ಏಕೆಂದರೆ ಅದು ಅಂತಹ ವಿಕೆಟ್ ಆಗಿರಲಿಲ್ಲ. ಅಲ್ಲಿ ದೀರ್ಘಾವಧಿಯವರೆಗೆ ಇನ್ನಿಂಗ್ಸ್ ಆಡುವ ಅಗತ್ಯವಿತ್ತು. ವಿರಾಟ್ ಮಾಡಿದ್ದು ಕೂಡಾ ಅದನ್ನೇ. ಒಂದು ಚೆಂಡಿನ ನಂತರ ಮತ್ತೊಂದು ಚೆಂಡನ್ನು ಸಮರ್ಥವಾಗಿ ಎದುರಿಸಿದರು. ಉತ್ತಮ ಜೊತೆಯಾಟವಾಡಿದರು,” ಎಂದು ಹೇಡನ್ ಹೇಳಿದರು.