Danish Kaneria: ವಿಶ್ವಕಪ್‌ ಬಹಿಷ್ಕರಿಸುವ ಧೈರ್ಯ ಪಿಸಿಬಿಗಿಲ್ಲ; ಪಾಕ್‌ ಹೋಗದಿದ್ರೂ ಭಾರತಕ್ಕೆ ನಷ್ಟವಿಲ್ಲ -ಪಾಕ್‌ ಮಾಜಿ ಕ್ರಿಕೆಟಿಗ
ಕನ್ನಡ ಸುದ್ದಿ  /  ಕ್ರೀಡೆ  /  Danish Kaneria: ವಿಶ್ವಕಪ್‌ ಬಹಿಷ್ಕರಿಸುವ ಧೈರ್ಯ ಪಿಸಿಬಿಗಿಲ್ಲ; ಪಾಕ್‌ ಹೋಗದಿದ್ರೂ ಭಾರತಕ್ಕೆ ನಷ್ಟವಿಲ್ಲ -ಪಾಕ್‌ ಮಾಜಿ ಕ್ರಿಕೆಟಿಗ

Danish Kaneria: ವಿಶ್ವಕಪ್‌ ಬಹಿಷ್ಕರಿಸುವ ಧೈರ್ಯ ಪಿಸಿಬಿಗಿಲ್ಲ; ಪಾಕ್‌ ಹೋಗದಿದ್ರೂ ಭಾರತಕ್ಕೆ ನಷ್ಟವಿಲ್ಲ -ಪಾಕ್‌ ಮಾಜಿ ಕ್ರಿಕೆಟಿಗ

ಪಿಸಿಬಿಯ ಈ ಬೆದರಿಕೆಗಳಿಂದ ಭಾರತವು ವಿಚಲಿತರಾಗುವುದಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗೆ ಡ್ಯಾನಿಶ್‌ ಕನೇರಿಯಾ ಹೇಳಿದ್ದಾರೆ. ಪಾಕಿಸ್ತಾನವು ವಿಶ್ವಕಪ್ ಆಡದಿರಲು ನಿರ್ಧರಿಸಿದರೆ, ಅದು ಪಾಕಿಸ್ತಾನಕ್ಕೆ ನಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಮೀಜ್ ರಾಜಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ
ರಮೀಜ್ ರಾಜಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ (AP)

ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಬಗ್ಗೆ ಬಿಸಿಸಿಐ ನಿಲುವು ಮತ್ತು ಪಾಕಿಸ್ತಾನವು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸಲು ಬಯಸುತ್ತಿರುವ ಬಗ್ಗೆ ಇತ್ತೀಚೆಗೆ ಪಿಸಿಬಿ ಮುಖ್ಯಸ್ಥ ರಮೀಜ್‌ ರಾಜಾ ನೀಡಿದ ಹೇಳಿಕೆಯು ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿದೆ.

2023ರ ಏಷ್ಯಾಕಪ್‌ಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಮತ್ತು ಆತಿಥ್ಯ ಸ್ಥಳವನ್ನು ಯುಎಇಗೆ ಸ್ಥಳಾಂತರಿಸಲು ಬಯಸುತ್ತೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಾಂಬ್ ಸಿಡಿಸಿದ ಒಂದು ತಿಂಗಳ ಬಳಿಕ, ರಮೀಜ್ ಬಿಸಿಸಿಐಗೆ ಪ್ರತಿಕ್ರಿಯೆ ನೀಡಿದ್ದರು. 'ನೀವು ಬರದಿದ್ರೆ ನಾವು ಕೂಡಾ ಭಾರತಕ್ಕೆ ಬರುವುದಿಲ್ಲ. ನಾವಿಲ್ಲದ ಪಂದ್ಯ ಯಾರು ನೋಡುತ್ತಾರೆ' ಎಂದು ರಮೀಜ್‌ ಹೇಳಿದ್ದರು. ಈ ಮಾತಿಗೆ ಭಾರತದಲ್ಲಿ ಯಾರೂ ಸೊಪ್ಪು ಹಾಕಿರಲಿಲ್ಲ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೇ ರಮೀಜ್‌ ರಾಜಾ ಹೇಳಿಕೆಯನ್ನು ಟೀಕಿಸಿದ್ದಾರೆ.

ಶುಕ್ರವಾರ ಉರ್ದು ನ್ಯೂಸ್‌ನೊಂದಿಗೆ ಮಾತನಾಡಿದ ರಮೀಜ್, ಏಷ್ಯಾಕಪ್‌ಗಾಗಿ ಭಾರತ ಪಾಕಿಸ್ತಾನಕ್ಕೆ ಬರದಿದ್ದರೆ, ಬಾಬರ್ ಅಜಮ್ ನೇತೃತ್ವದ ತಂಡವು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಅನ್ನು ಬಹಿಷ್ಕರಿಸಲಿದೆ ಎಂದು ಹೇಳಿದ್ದರು.

ಆದರೆ ಪಿಸಿಬಿಯ ಈ ಬೆದರಿಕೆಗಳಿಂದ ಭಾರತವು ವಿಚಲಿತರಾಗುವುದಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗೆ ಡ್ಯಾನಿಶ್‌ ಕನೇರಿಯಾ ಹೇಳಿದ್ದಾರೆ. ಪಾಕಿಸ್ತಾನವು ವಿಶ್ವಕಪ್ ಆಡದಿರಲು ನಿರ್ಧರಿಸಿದರೆ, ಅದು ಪಾಕಿಸ್ತಾನಕ್ಕೆ ನಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಐಸಿಸಿ ಈವೆಂಟ್‌ ಅನ್ನು ಬಹಿಷ್ಕರಿಸುವಷ್ಟು ಧೈರ್ಯ ಪಿಸಿಬಿಗೆ ಇಲ್ಲ. ಮತ್ತೊಂದೆಡೆ, ಪಾಕಿಸ್ತಾನ ತಮ್ಮ ದೇಶಕ್ಕೆ ಬರದಿದ್ದರೂ ಭಾರತ ಹೆದರುವುದಿಲ್ಲ. ಅವರು ಸಾಕಷ್ಟು ಆದಾಯವನ್ನು ಗಳಿಸುವ ದೊಡ್ಡ ಮಾರುಕಟ್ಟೆ ಹೊಂದಿದ್ದಾರೆ. ಭಾರತಕ್ಕೆ ಹೋಗದೆ ವಿಶ್ವಕಪ್‌ನಿಂದ ಪಾಕಿಸ್ತಾನ ಹಿಂದೆ ಸರಿದರೆ, ಅದು ಪಾಕಿಸ್ತಾನ ಕ್ರಿಕೆಟ್‌ ಮೇಲೆಯೇ ಹೆಚ್ಚಿನ ಪರಿಣಾಮ ಬೀರಲಿದೆ” ಎಂದು ಅವರು ಹೇಳಿದ್ದಾರೆ.

“ಪಾಕಿಸ್ತಾನ ಅಂತಿಮವಾಗಿ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಲಿದೆ. ಐಸಿಸಿಯಿಂದ ಒತ್ತಡವಿದ್ದ ಕಾರಣ ನಮಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಐಸಿಸಿ ಕಾರ್ಯಕ್ರಮವನ್ನು ಬಿಟ್ಟುಬಿಡುವ ಬಗ್ಗೆ ಪದೇ ಪದೇ ಮಾತನಾಡಿದರೆ, ಅದು ಪಾಕಿಸ್ತಾನ ಕ್ರಿಕೆಟ್‌ಗೆ ಕೆಟ್ಟದಾಗಿ ಹಾನಿ ಮಾಡುತ್ತದೆ” ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಶಾ ಅವರ ಹೇಳಿಕೆಯ ಕುರಿತು ಎಸಿಸಿ ಇನ್ನೂ ಸಭೆ ನಡೆಸದಿದ್ದರೂ, ದೇಶದ ಪರಿಸ್ಥಿತಿಯಿಂದಾಗಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಂತಹ ತಂಡಗಳು ಪಾಕಿಸ್ತಾನದಲ್ಲಿ ನಡೆಯಲಿರುವ 2023ರ ಏಷ್ಯಾಕಪ್ ಅನ್ನು ಭಾರತದೊಂದಿಗೆ ಬಹಿಷ್ಕರಿಸುವ ಸಾಧ್ಯತೆಯಿದೆ ಎಂದು ಕನೇರಿಯಾ ರಮೀಜ್‌ಗೆ ಎಚ್ಚರಿಕೆ ನೀಡಿದ್ದಾರೆ.

“ಏಷ್ಯಾಕಪ್‌ಗೆ ಇನ್ನೂ ಸಾಕಷ್ಟು ಸಮಯವಿದೆ. ಅಲ್ಲಿಯವರೆಗೆ ದೇಶದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ ಅಥವಾ ಪಾಕಿಸ್ತಾನದ ನೆಲದಲ್ಲಿ ಪಂದ್ಯಾವಳಿಯನ್ನು ನಡೆಸುತ್ತದೆಯೇ ಅಥವಾ ಇಲ್ಲವೇ ಎಂದು ನಮಗೆ ಖಚಿತವಾಗಿ ಹೇಳಲಾಗುವುದಿಲ್ಲ. ಪರಿಸ್ಥಿತಿ ಏನೆಂದು ನಮಗೆ ತಿಳಿದಿಲ್ಲ. ಭಾರತದ ಹೊರತಾಗಿ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಂತಹ ತಂಡಗಳು ಕೂಡಾ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸುವ ಸಾಧ್ಯತೆಯಿದೆ. ಪಾಕಿಸ್ತಾನದ ಜನರು ಏಷ್ಯಾಕಪ್ ಅನ್ನು ತಮ್ಮ ದೇಶದಲ್ಲಿ ಆಡಬೇಕೆಂದು ಬಯಸುತ್ತಾರೆ. ಆದರೆ, ದೇಶದ ಪರಿಸ್ಥಿತಿಯಿಂದಾಗಿ ಈ ವಿಚಾರವಾಗಿ ಮುಂದೆ ಹೆಜ್ಜೆ ಇಡುವ ಮುನ್ನ ನಾವು ಯೋಚಿಸಬೇಕು,” ಎಂದು ಅವರು ಹೇಳಿದ್ದಾರೆ.‌

ರಮೀಜ್‌ ಏನು ಹೇಳಿದ್ದರು?

“ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸದಿದ್ದರೆ ಅದನ್ನು ಯಾರು ನೋಡುತ್ತಾರೆ? ನಮಗೆ ಸ್ಪಷ್ಟ ನಿಲುವಿದೆ. ಭಾರತ ತಂಡ ಇಲ್ಲಿಗೆ ಬಂದರೆ ನಾವು ವಿಶ್ವಕಪ್‌ಗೆ ಭಾರತಕ್ಕೆ ಹೋಗುತ್ತೇವೆ. ಅವರು ಬರದಿದ್ದರೆ ನಾವು ಅಲ್ಲಿಗೆ ಹೋಗುವುದಿಲ್ಲ. ಅವರು ಕೂಡಾ ನಾವು ಇಲ್ಲದೆ ವಿಶ್ವಕಪ್ ಆಡಬಹುದು. ನಾವು ಈ ವಿಚಾರವಾಗಿ ಆಕ್ರಮಣಕಾರಿ ವಿಧಾನವನ್ನು ಅಳವಡಿಸಿಕೊಳ್ಳುತ್ತೇವೆ. ನಮ್ಮ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ನಾವು ಪಾಕಿಸ್ತಾನ ಕ್ರಿಕೆಟ್‌ನ ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕು ಎಂದು ನಾನು ಯಾವಾಗಲೂ ಹೇಳುತ್ತೇನೆ. ನಾವು ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ಅದು ಸಾಧ್ಯ. 2021ರ ಟಿ20 ವಿಶ್ವಕಪ್‌ನಲ್ಲಿ ನಾವು ಭಾರತವನ್ನು ಸೋಲಿಸಿದ್ದೇವೆ. ಟಿ20 ಏಷ್ಯಾಕಪ್‌ನಲ್ಲೂ ನಾವು ಭಾರತವನ್ನು ಸೋಲಿಸಿದ್ದೇವೆ. ಒಂದು ವರ್ಷದಲ್ಲಿ, ಪಾಕಿಸ್ತಾನ ಕ್ರಿಕೆಟ್ ತಂಡವು ಶತಕೋಟಿ ಡಾಲರ್ ಶ್ರೀಮಂತ ತಂಡವನ್ನು ಎರಡು ಬಾರಿ ಸೋಲಿಸಿತು,” ಎಂದು ಅವರು ಹೇಳಿಕೊಂಡಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.