ಪ್ಯಾರಿಸ್ ಒಲಿಂಪಿಕ್ಸ್ ನಂತರ ವಿನೇಶ್ ಫೋಗಟ್ ನಿವ್ವಳ ಮೌಲ್ಯ ಭಾರಿ ಏರಿಕೆ; ಅನರ್ಹತೆ ನಂತರ ಕುಗ್ಗಲಿಲ್ಲ ಮಾಜಿ ಕುಸ್ತಿಪಟು
ಪ್ಯಾರಿಸ್ ಒಲಿಂಪಿಕ್ಸ್ ಅನರ್ಹತೆಯ ನಂತರ, ಕುಸ್ತಿಪಟು ವಿನೇಶ್ ಫೋಗಟ್ ಅವರ ಮಾರುಕಟ್ಟೆ ಮೌಲ್ಯ ಗಗನಕ್ಕೇರಿದೆ. ಈಗ ಕುಸ್ತಿಗೆ ವಿದಾಯ ಹೇಳಿರುವ ಅವರು ರಾಜಕಾರಣಿಯಾಗಿದ್ದಾರೆ. ಒಲಿಂಪಿಕ್ಸ್‌ಗೂ ಹಿಂದೆ ಪ್ರತಿ ಜಾಹೀರಾತು ಒಪ್ಪಂದಕ್ಕೆ ಸುಮಾರು 25 ಲಕ್ಷ ರೂ. ಪಡೆಯುತ್ತಿದ್ದ ಅವರು, ಈಗ ಎಷ್ಟು ಹಣ ಪಡೆಯುತ್ತಾರೆ ಎಂಬುದನ್ನು ನೋಡಿ.

ಭಾರತ ಕಂಡ ಅತ್ಯುನ್ನತ ಕ್ರೀಡಾಪಟುಗಳಲ್ಲಿ ವಿನೇಶ್ ಫೋಗಟ್ ಕೂಡಾ ಒಬ್ಬರು. ಅವರ ಕುಟುಂಬವೇ ತಮ್ಮನ್ನು ಕ್ರೀಡಾಕ್ಷೇತ್ರಕ್ಕೆ ಮುಡಿಪಾಗಿಟ್ಟಿದೆ. ಫೋಗಟ್ ಅವರ ತಂದೆ ರಾಜ್‌ಪಾಲ್ ಫೋಗಟ್ ಮತ್ತು ಅವರ ಸೋದರಸಂಬಂಧಿಗಳಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಕೂಡಾ ಕ್ರೀಡಾಪಟುಗಳೇ. ಹಲವು ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿರುವ ವಿನೀಶ್ ಫೋಗಟ್, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆಲ್ಲಲು ಸಾಧ್ಯವಾಗಲಿಲ್ಲ. ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ಅವರು, ಅಂತಿಮ ಸುತ್ತಿಗೂ ಮುನ್ನ ಒಲಿಂಪಿಕ್ಸ್‌ನಿಂದ ಅನರ್ಹಗೊಂಡರು. 100 ಗ್ರಾಂ ತೂಕದ ಮಿತಿಯನ್ನು ಮೀರಿದ್ದಕ್ಕಾಗಿ ವಿನೇಶ್ ಅವರನ್ನು ಅನರ್ಹಗೊಳಿಸಲಾಯ್ತು. ಈ ಘಟನೆಯು ಆರಂಭಿಕ ಹಂತದಲ್ಲಿ ಅವರ ವೃತ್ತಿಜೀವನದ ಮೇಲೆ ಕರಿನೆರಳು ಬೀರಿತು. ಆದರೆ, ಅದು ಮುಂದುವರೆಯಲಿಲ್ಲ.
ಫೋಗಟ್ ಅನರ್ಹತೆಯ ಪ್ರಕರಣವು ರಾಜಕೀಯ ಬಣ್ಣ ಪಡೆದಿದ್ದು ಹೊಸ ವಿಷಯವೇನಲ್ಲ. ಈ ಬಗ್ಗೆ ಪರ-ವಿರೋಧದ ಮಾತೇ ಮುನ್ನೆಲೆಗೆ ಬಂದವು. ರಾಜಕೀಯದ ಹೊರಗೆ ನೋಡಿದರೆ, ಅಂದು ಅನರ್ಹತೆಯಿಂದ ಮಾನಸಿಕವಾಗಿ ಕುಗ್ಗಿದ್ದ ಫೋಗಟ್, ಇಂದು ಅನಿರೀಕ್ಷಿತ ಎಂಬಂತೆ ತಮ್ಮ ಘನತೆ ಹೆಚ್ಚಿಸಿಕೊಂಡಿದ್ದಾರೆ. ಆರ್ಥಿಕವಾಗಿ ತುಂಬಾ ಮೇಲೇರಿದ್ದಾರೆ. ಅವರ ಸಾಮಾಜಿಕ ಸ್ಥಾನಮಾನವೂ ಏರಿದೆ.
ಒಲಿಂಪಿಕ್ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಆದರೆ ಪದಕ ಗೆಲುವು ಮಾತ್ರ ಸಾಧ್ಯವಾಗಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ಅನರ್ಹತೆಯ ನಂತರ ವಿನೇಶ್ ಕುಸ್ತಿಯಿಂದ ನಿವೃತ್ತಿ ಪಡೆದರು.
ಒಲಿಂಪಿಕ್ಸ್‌ನಲ್ಲಾದ ವಿವಾದದ ನಂತರ, ವಿನೇಶ್ ಅವರ ಮಾರುಕಟ್ಟೆ ಮೌಲ್ಯ ಸ್ವಲ್ಪವೂ ಕುಸಿದಿಲ್ಲ. ಬದಲಿಗೆ ಗಗನಕ್ಕೇರಿದೆ. ಒಲಿಂಪಿಕ್ಸ್‌ಗೂ ಹಿಂದೆ ಪ್ರತಿ ಜಾಹೀರಾತು ಒಪ್ಪಂದಕ್ಕೆ ಸುಮಾರು 25 ಲಕ್ಷ ರೂ. ಪಡೆಯುತ್ತಿದ್ದ ಅವರು, ಆ ನಂತರದಲ್ಲಿ ಪ್ರತಿ ಎಂಡೋರ್ಸ್‌ಮೆಂಟ್‌ಗಳಿಗೆ 75 ಲಕ್ಷದಿಂದ ರೂ. 1 ಕೋಟಿ ರೂವರೆಗೆ ಶುಲ್ಕ ವಿಧಿಸುತ್ತಿದ್ದಾರೆ.
ಟೈಮ್ಸ್ ನೌ ವರದಿ ಪ್ರಕಾರ, ಒಲಿಂಪಿಕ್ಸ್‌ಗೂ ಮುನ್ನ ಫೋಗಟ್ ಮಾರುಕಟ್ಟೆ ಮೌಲ್ಯ 5 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ ಆ ಬಳಿಕ ಈ ನಿವ್ವಳ ಮೌಲ್ಯವು ಈಗ ಸುಮಾರು 36.5 ಕೋಟಿ ರೂ.ಗಳಿಗೆ ಬೆಳೆದಿದೆಯಂತೆ. ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್ ನಿರ್ವಹಿಸುವ ಬ್ರಾಂಡ್ ಅನುಮೋದನೆಗಳು ಮಾತ್ರವಲ್ಲದೆ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಅವರ ವಾರ್ಷಿಕ ಸಂಬಳ 6 ಲಕ್ಷ ರೂ. ಕೂಡಾ ಸೇರುತ್ತದೆ.
ಹರಿಯಾಣ ಸರ್ಕಾರವು ತನ್ನ ಕ್ರೀಡಾ ನೀತಿಯಡಿಯಲ್ಲಿ ವಿನೇಶ್ ಅವರಿಗೆ ಇತ್ತೀಚೆಗೆ ಮೂರು ಆಯ್ಕೆಗಳನ್ನು ನೀಡಿತ್ತು. ಇದರಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಕೇಳಲಾಯ್ತು. 4 ಕೋಟಿ ರೂ.ಗಳ ನಗದು ಬಹುಮಾನ, ಗ್ರೂಪ್ ಎ ಸರ್ಕಾರಿ ಕೆಲಸ ಅಥವಾ ಭೂಮಿಯನ್ನು ಕೊಡುವುದಾಗಿ ಹೇಳಿತು. ವಿನೇಶ್ ಕುಟುಂಬವು ನಗದು ಬಹುಮಾನ ಆಯ್ಕೆ ಮಾಡಿತು.
ಐಶಾರಾಮಿ ಜೀವನ
ತಮ್ಮ ನಿವ್ವಳ ಮೌಲ್ಯವನ್ನು ಹೆಚ್ಚಿಸಿಕೊಂಡಿರುವ ವಿನೇಶ್, ಒಲಿಂಪಿಕ್ಸ್ ನಂತರ ಕ್ರೀಡಾಲೋಕದಿಂದ ದೂರವಿದ್ದರೂ ಯಶಸ್ವಿಯಾಗಿದ್ದಾರೆ. ಅವರ ಬಳಿ ಹಲವು ಐಶಾರಾಮಿ ಕಾರುಗಳಿವೆ. ಟೊಯೋಟಾ ಫಾರ್ಚೂನರ್ (ರೂ 35 ಲಕ್ಷ), ಟೊಯೋಟಾ ಇನ್ನೋವಾ (ರೂ 28 ಲಕ್ಷ), ಮರ್ಸಿಡಿಸ್ ಜಿಎಲ್‌ಇ (ರೂ 1.8 ಕೋಟಿ) ಪ್ರಮುಖ ಕಾರುಗಳು.
ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟ ಎರಡರಲ್ಲಿಯೂ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ವಿನೇಶ್ ಫೋಗಟ್. ಇದೇ ವೇಳೆ ಬಹು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಪಡೆದ ಏಕೈಕ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಸತತ ಮೂರು ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.