Explainer: ಗಾಯವೆಂದು ಘೋಷಿಸಿದ್ದರೆ ವಿನೇಶ್ ಫೋಗಟ್ ಬೆಳ್ಳಿ ಗೆಲ್ಲುತ್ತಿದ್ರಾ; ಫೈನಲ್‌ಗೂ ಮುನ್ನ ತೂಕ ಪರೀಕ್ಷೆ ನಿಯಮವೇನು?-explainer would vinesh phogat have won silver medal if she had declared herself injured in wrestling paris olympics ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Explainer: ಗಾಯವೆಂದು ಘೋಷಿಸಿದ್ದರೆ ವಿನೇಶ್ ಫೋಗಟ್ ಬೆಳ್ಳಿ ಗೆಲ್ಲುತ್ತಿದ್ರಾ; ಫೈನಲ್‌ಗೂ ಮುನ್ನ ತೂಕ ಪರೀಕ್ಷೆ ನಿಯಮವೇನು?

Explainer: ಗಾಯವೆಂದು ಘೋಷಿಸಿದ್ದರೆ ವಿನೇಶ್ ಫೋಗಟ್ ಬೆಳ್ಳಿ ಗೆಲ್ಲುತ್ತಿದ್ರಾ; ಫೈನಲ್‌ಗೂ ಮುನ್ನ ತೂಕ ಪರೀಕ್ಷೆ ನಿಯಮವೇನು?

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಫೋಗಟ್‌ ಕುಸ್ತಿ ಫೈನಲ್‌ ಪಂದ್ಯಕ್ಕೂ ಮುನ್ನ ಅನರ್ಹಗೊಂಡಿರುವುದು ಭಾರತೀಯರಿಗೆ ಅರಗಿಸಿಕೊಳ್ಳಲಾರದಷ್ಟು ನೋವುಂಟುಮಾಡಿದೆ. ಗಾಯವೆಂದು ಘೋಷಿಸಿಕೊಂಡಿದ್ದರೆ ಕನಿಷ್ಠ ಬೆಳ್ಳಿ ಪದಕವನ್ನಾದರೂ ಗೆಲ್ಲಬಹುದಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕುಸ್ತಿಯ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ನೋಡೋಣ.

ಗಾಯವೆಂದು ಘೋಷಿಸಿದ್ದರೆ ವಿನೇಶ್ ಫೋಗಟ್ ಬೆಳ್ಳಿ ಗೆಲ್ಲುತ್ತಿದ್ರಾ; ಫೈನಲ್‌ಗೂ ಮುನ್ನ ತೂಕ ಪರೀಕ್ಷೆ ನಿಯಮವೇನು?
ಗಾಯವೆಂದು ಘೋಷಿಸಿದ್ದರೆ ವಿನೇಶ್ ಫೋಗಟ್ ಬೆಳ್ಳಿ ಗೆಲ್ಲುತ್ತಿದ್ರಾ; ಫೈನಲ್‌ಗೂ ಮುನ್ನ ತೂಕ ಪರೀಕ್ಷೆ ನಿಯಮವೇನು? (HT_PRINT)

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕುಸ್ತಿ ಸ್ಪರ್ಧೆಯನ್ನು 2 ದಿನಗಳಲ್ಲಿ ನಡೆಸಲಾಗುತ್ತದೆ. ಈ ಎರಡೂ ದಿನಗಳಲ್ಲಿ ಆಯಾ ವಿಭಾಗದ ಕುಸ್ತಿಯಲ್ಲಿ ಸ್ಪರ್ಧಿಸುವ ಕುಸ್ತಿಪಟುಗಳ ತೂಕ ತಪಾಸಣೆ ಮಾಡಲಾಗುತ್ತದೆ. ಇದು ಕಡ್ಡಾಯ ಹಂತ. ಸ್ಪರ್ಧೆ ನಡೆಯುವ ಮೊದಲ ದಿನದಂದು ಪ್ರತಿ ಕುಸ್ತಿಪಟುಗಳು ತಮ್ಮ ಕುಸ್ತಿಯ ಉಡುಪು ಧರಿಸಿ ತೂಕ ಪರೀಕ್ಷೆಗೆ ಹಾಜರಾಗಬೇಕು. 30 ನಿಮಿಷಗಳ ಅವಧಿಯಲ್ಲಿ ಹಲವು ಬಾರಿ ಅವರ ತೂಕ ಪರಿಶೀಲನೆ ಮಾಡಲಾಗುತ್ತದೆ. ಒಂದು ವೇಳೆ ಹೆಚ್ಚು ತೂಕವಿದ್ದರೆ, ಈ ಅವಧಿಯೊಳಗೆ ತೂಕ ಕಡಿಮೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ತೂಕ ಪರೀಕ್ಷೆ ಹೊರತಾಗಿ ಇತರ ವೈದ್ಯಕೀಯ ಪರೀಕ್ಷೆ ಕೂಡಾ ನಡೆಯುತ್ತವೆ.

ಫೈನಲ್‌ ಪಂದ್ಯ, ಕಂಚಿನ ಪದಕ ಪಂದ್ಯ ಸೇರಿದಂತೆ ಪ್ಲೇಆಫ್ ಪಂದ್ಯಗಳಿಗೆ ಅರ್ಹತೆ ಪಡೆದ ಕುಸ್ತಿಪಟುಗಳು ಎರಡನೇ ದಿನ ತೂಕ ಪರೀಕ್ಷೆಗೆ ಒಳಗಾಗಬೇಕು. ಸ್ಪರ್ಧೆಯ ಎರಡನೇ ದಿನ ಅಥವಾ ಫೈನಲ್‌ ಪಂದ್ಯದ ದಿನ ಬೆಳಗ್ಗೆ ತೂಕ ಪರೀಕ್ಷೆಯ ವಿಂಡೋ 15 ನಿಮಿಷಗಳ ಅವಧಿಗೆ ಇರುತ್ತದೆ. ವಿನೇಶ್‌ ವಿಫಲವಾಗಿದ್ದು ಕೂಡಾ ಈ ಎರಡನೇ ದಿನದ ಅವಧಿಯಲ್ಲಿ. 50 ಕೆಜಿ ವಿಭಾಗದಲ್ಲಿ ವಿನೇಶ್‌ ಸ್ಪರ್ಧಿಸುತ್ತಿದ್ದು, ಅದಕ್ಕಿಂತ ತೂಕ ಜಾಸ್ತಿ ಇರಬಾರದು. ಆದರೆ ಅವರ ತೂಕ 50.1 ಕೆಜಿ ಇತ್ತು. 15 ನಿಮಿಷದೊಳಗೆ ತೂಕ ಕಡಿಮೆ ಮಾಡಲು ಅವಕಾಶ ನೀಡಲಾಗುತ್ತದೆ. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಜಾಸ್ತಿ ತೂಕವಿದ್ದ ಕಾರಣದಿಂದ ಅವರನ್ನು ಅನರ್ಹಗೊಳಿಸಲಾಯ್ತು.

ಮೊದಲ ದಿನ ವಿನೇಶ್ ತೂಕ‌ ಸರಿಯಿತ್ತು. ಎರಡನೇ ದಿನಕ್ಕೆ ಅವರ ತೂಕ ದಿಢೀರ್‌ ಏರಿಕೆಯಾಗಿದೆ. ಒಂದು ದಿನದೊಳಗೆ ಈ ತೂಕ ವ್ಯತ್ಯಾಸ ಹೇಗಾಯಿತು ಎಂಬ ಪ್ರಶ್ನೆಗಳಿವೆ. ಆಟಗಾರರಿಗೆ ಸಾಕಷ್ಟು ಪ್ರಮಾಣದ ನೀರು, ಪೋಷಕಾಂಶಗಳ ಅಗತ್ಯವಿರುತ್ತದೆ. ಹಣ್ಣು, ತರಕಾರಿ ಸೇರಿದಂತೆ ಕೆಲವೊಂದು ಆಹಾರಗಳು ಬೇಕು. ಇದರಿಂದ ವಿನೇಶ್‌ ತೂಕ ಏರಿಕೆಯಾಗಿದೆ.

6 ಕೆಜಿ ತೂಕ ಇಳಿಸುವ ಕಠಿಣ ಸವಾಲು

ವಿನೇಶ್‌ ಈ ಹಿಂದೆ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆಗ ಅವರ ದೇಹ ತೂಕವು 55 ರಿಂದ 56 ಕೆಜಿ ಇರುತ್ತಿತ್ತು. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದರು. ಹೀಗಾಗಿ, ಈ ಬಾರಿ ಪ್ರತಿ ಸ್ಪರ್ಧೆಗೂ ಮುನ್ನ ಅವರ ಮುಂದೆ ಕನಿಷ್ಠ 6 ಕೆಜಿ ತೂಕ ಇಳಿಸಬೇಕಾದ ಕಷ್ಟಕರ ಸವಾಲು ಇತ್ತು. ಹಠಾತ್ ತೂಕ ಕಡಿತ ಮಾಡುವುದು ತುಂಬಾ ಕಷ್ಟಕರ ಪ್ರಕ್ರಿಯೆ.

ಪ್ಯಾರಿಸ್‌ನಲ್ಲಿ ಮೊದಲ ದಿನದ ಆಟದ ನಂತರ, ವಿನೇಶ್‌ ತೂಕ ಸುಮಾರು 1.5 ಕೆಜಿ ಹೆಚ್ಚಾಯ್ತು. ಅದಾಗಲೇ ತೂಕ ಕಡಿತಕ್ಕೆ ಶ್ರಮ ಹಾಕಿದ್ದ ವಿನೇಶ್,‌ ಕಡಿಮೆ ಸಮಯದೊಳಗೆ ಹೆಚ್ಚು ತೂಕ ಕಳೆದುಕೊಳ್ಳುವುದು ಸುಲಭವಾಗಿರಲಿಲ್ಲ. ದಿಢೀರ್ ತೂಕ ಕಡಿತವು ಕೆಲವು ಗಂಭೀರ ದೈಹಿಕ ಸಮಸ್ಯೆಗಳಿಗೆ ಕಾರಣವಾಗುವ ಕಾರಣದಿಂದ ವೈದ್ಯರು ಕೂಡಾ ಇದಕ್ಕೆ ಅನುಮತಿ ನೀಡುವುದಿಲ್ಲ.

ಗಾಯವೆಂದು ಉಲ್ಲೇಖಿಸಿದ್ದರೆ, ವಿನೇಶ್‌ಗೆ ಬೆಳ್ಳಿ ಪದಕ ಸಿಗುತ್ತಿತ್ತಾ?

ವಿನೇಶ್‌ ಫೋಗಟ್‌ ಅನರ್ಹಗೊಳ್ಳಲು ಅವಕಾಶ ನೀಡುವ ಬದಲಿಗೆ, ಗಾಯವೆಂಬ ಕಾರಣ ನೀಡುವ ಮೂಲಕ ಬೆಳ್ಳಿ ಪದಕ ಪಡೆಯಬಹುದಿತ್ತು ಎಂದು ಹಲವು ಕಡೆಯಿಂದ ಅಭಿಪ್ರಾಯಗಳು ಬರುತ್ತಿವೆ. ಇದು ಸಾಧ್ಯವೇ ಎಂಬುದು ಈಗಿನ ಪ್ರಶ್ನೆ. ಕುಸ್ತಿ ನಿಯಮಗಳ ಪ್ರಕಾರ, ಇದರ ಸಾಧ್ಯತೆ ಇಲ್ಲ. ಕೆಲವು ಕ್ರೀಡೆಗಳಲ್ಲಿ ಫೈನಲ್‌ ಪಂದ್ಯಕ್ಕೂ ಮುನ್ನ ಗಾಯದ ಕಾರಣದಿಂದ ಆಟಗಾರರು ಹಿಂದೆ ಸರಿದರೆ, ಅವರು ಫೈನಲ್‌ ಪಂದ್ಯ ಸೋತರು ಎಂಬ ಲೆಕ್ಕಾಚಾರದಲ್ಲಿ ಬೆಳ್ಳಿ ಪದಕ ನೀಡಲಾಗುತ್ತದೆ. ಆದರೆ, ಕುಸ್ತಿಗೆ ಈ ನಿಯಮ ಅನ್ವಯವಾಗುವುದಿಲ್ಲ.

ಕುಸ್ತಿ ಪಂದ್ಯಕ್ಕೂ ಮುನ್ನ ಎರಡು ದಿನ ತೂಕ ಪರೀಕ್ಷೆ ಇರುತ್ತದೆ ಎಂಬುದು ಇಲ್ಲಿ ಪ್ರಮುಖ ಅಂಶ. ಮೊದಲ ದಿನದ ತೂಕ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ಆ ಕುಸ್ತಿಪಟು ಗಾಯಗೊಂಡರೆ, ಎರಡನೇ ದಿನ ತೂಕ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುವ ಅಗತ್ಯವಿಲ್ಲ ಎಂಬುದು ನಿಯಮ. ಏಕೆಂದರೆ ಪಂದ್ಯ ನಡೆಯುವ ಸಮಯದಲ್ಲಿ ಆಗಿರುವ ಗಾಯ ಅಲ್ಲಿ ಸಾಕ್ಷಿ. ಇದೇ ವೇಳೆ, ಮೊದಲ ದಿನದ ಸ್ಪರ್ಧೆಯಲ್ಲಿ ಭಾಗಿಯಾದ ನಂತರ ಆ ಕುಸ್ತಿಪಟು ಗಾಯಗೊಂಡರೆ ಅಥವಾ ಯಾವುದೇ ಅನಾರೋಗ್ಯಕ್ಕೆ ಒಳಗಾದರೆ, ಗಾಯದ ನೆಪ ಹೇಳಿ ವಾಕ್‌ಓವರ್ ಹೇಳುವ ಮೊದಲು ತೂಕ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.

ಮೊದಲ ದಿನದ ಸ್ಪರ್ಧೆಯ ಸಮಯದಲ್ಲಿ ವಿನೇಶ್ ಫೋಗಟ್‌ ಗಾಯಗೊಂಡಿರಲಿಲ್ಲ. ಹೀಗಾಗಿ ಆ ನಂತರ ಗಾಯವೆಂದು ಹೇಳಿದ್ದರೂ‌, ಅವರು ತೂಕ ಪರೀಕ್ಷೆಗೆ ಹಾಜರಾಗಬೇಕಿತ್ತು. ಒಂದು ವೇಳೆ ತನಗೆ ಗಾಯವೆಂಬ ಕಾರಣ ಹೇಳಿ ತೂಕ ಪರೀಕ್ಷೆಗೆ ಹಾಜರಾಗದೆ ಇದ್ದಿದ್ದರೂ, ವಿನೇಶ್‌ ಅನರ್ಹಗೊಳ್ಳುತ್ತಿದ್ದರು. ಇಲ್ಲಿ ಆಗಿದ್ದು ಇಷ್ಟೇ. ಎರಡನೇ ದಿನ (ಫೈನಲ್‌ ಪಂದ್ಯದ ದಿನ) ವಿನೇಶ್‌ ತೂಕ ಪರೀಕ್ಷೆಗೆ ಹಾಜರಾಗಿದ್ದಾರೆ. 15 ನಿಮಿಷಗಳ ಒಳಗೆ ತೂಕ ಸಾಬೀತುಪಡಿಸಲು ಆಗಿರಲಿಲ್ಲ. ಎಲ್ಲಾ ಪ್ರಯತ್ನ ನಡೆಸಿದ ಬಳಿಕವೂ 100 ಗ್ರಾಮ್ ಹೆಚ್ಚಿದ್ದ ಕಾರಣದಿಂದಾಗಿ ವಿನೇಶ್‌ ಪದಕ ವಂಚಿತರಾದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.