ಅರ್ಷದ್ ನದೀಮ್ ಬೆನ್ನು ತಟ್ಟಿ ಮರೆತ ಪಾಕಿಸ್ತಾನ ಸರ್ಕಾರ; ಚಿನ್ನ ಗೆದ್ದ ಜಾವೆಲಿನ್ ತಾರೆಯಿಂದಲೇ ಬಯಲಾಯ್ತು ವಾಸ್ತವ!
Arshad Nadeem: ಪಾಕಿಸ್ತಾನದ ಒಲಿಂಪಿಕ್ ಹೀರೋ ಅರ್ಷದ್ ನದೀಮ್ ಪಾಕಿಸ್ತಾನ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಸ್ಲಾಮಾಬಾದ್: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಚಿನ್ನದ ಪದಕ ಗೆದ್ದು ಪಾಕಿಸ್ತಾನವನ್ನು ವಿಶ್ವದಲ್ಲಿ ಮೆರೆಯಿಸಿದ ಜಾವೆಲಿನ್ ತಾರೆ ಅರ್ಷದ್ ನದೀಮ್ ಇದೀಗ ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿ ಸುದ್ದಿಯಲ್ಲಿದ್ದಾರೆ. ತಮ್ಮ ಸಾಧನೆಯ ನಂತರ ಸರ್ಕಾರದಿಂದ ಬಹುಕಾಲಿಕ ಬೆಂಬಲ, ಗೌರವ, ಬಹುಮಾನಗಳು ಘೋಷಣೆಯಾದರೂ, ಅವುಗಳಲ್ಲಿ ಬಹುಮಟ್ಟಿಗೆ ಯಾವುದೇ ಕೂಡಾ ನೆರವಿಗೆ ಬಂದಿಲ್ಲ ಎಂದು ನದೀಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಯೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅರ್ಷದ್ ನದೀಮ್, "ನನಗೆ ಘೋಷಿಸಿದ ಬಹುಮಾನಗಳಲ್ಲಿ ಪ್ರಮುಖವಾದದ್ದು ಒಂದು ಪ್ಲಾಟ್ ನೀಡುವ ವಿಷಯವಾಗಿತ್ತು. ಆದರೆ, ಇಂದು ತನಕ ಅದು ನನಗೆ ಸಿಕ್ಕಿಲ್ಲ. ಎಲ್ಲವೂ ಕಾಗದದ ಘೋಷಣೆಯಷ್ಟೇ ಉಳಿದಿವೆ. ಪದಕ ಗೆದ್ದಾಗ ಅಧಿಕಾರಿಗಳು ಮಾಡಿದ್ದ ಭರವಸೆ, ಮಾತುಗಳು ಇತ್ತೀಚೆಗೆ ಮರೆತುಹೋಗಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
92.97 ಮೀಟರ್ ದೂರ ಎಸೆದು ದಾಖಲೆ
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 28 ವರ್ಷದ ಜಾವೆಲಿನ್ ಎಸೆತಗಾರ ದಾಖಲೆಯ 92.97 ಮೀಟರ್ ಎಸೆದು ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಪಾಕಿಸ್ತಾನಕ್ಕೆ ಮೊದಲ ಒಲಿಂಪಿಕ್ ಚಿನ್ನವನ್ನು ತಂದುಕೊಟ್ಟರು. ಈ ಪಂದ್ಯದಲ್ಲಿ ಅವರು ಭಾರತದ ನೀರಜ್ ಚೋಪ್ರಾ ಅವರನ್ನು ಸೋಲಿಸಿದ್ದರು. ಚೋಪ್ರಾ ಅವರು ಬೆಳ್ಳಿ ಪದಕ ಪಡೆದಿದ್ದರು.
ಸುಳ್ಳು ಭರವಸೆ ನೀಡಿದ ಪಾಕಿಸ್ತಾನ, ಆಕ್ರೋಶ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿ, ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅರ್ಷದ್ ನದೀಮ್, 1996ರ ನಂತರ ಪಾಕಿಸ್ತಾನಕ್ಕೆ ಒಲಿಂಪಿಕ್ ಪದಕ ತಂದುಕೊಟ್ಟ ಮೊದಲ ಆಟಗಾರರಾಗಿದ್ದರು. ಈ ಸಾಧನೆಗೆ ಅವರು ರಾಷ್ಟ್ರದ ಹೀರೋ ಎಂಬ ಹೆಸರು ಪಡೆದಿದ್ದರು. ಆದರೆ ಇದೀಗ ಅವರ ಮಾತುಗಳಿಂದ ತಿಳಿಯುವಂತೆ, ಪಾಕಿಸ್ತಾನದಲ್ಲಿ ಕ್ರೀಡಾಪಟುಗಳಿಗೆ ಗೌರವ, ಸಹಕಾರ ಎನ್ನುವುದು ಕೇವಲ ಕಾರ್ಯಕ್ರಮದ ದಿನದವರೆಗೆ ಮಾತ್ರ ಸೀಮಿತವಾಗಿದೆ ಎಂಬುದನ್ನು ತೋರುತ್ತದೆ.
ಇದು ಕ್ರೀಡಾ ಕ್ಷೇತ್ರದ ಪ್ರಾಮುಖ್ಯತೆ ಹಾಗೂ ಸರ್ಕಾರದ ಭರವಸೆಯ ಪ್ರಾಮಾಣಿಕತೆಗೆ ದೊಡ್ಡ ಪ್ರಶ್ನೆ ಎಬ್ಬಿಸುವಂತಹ ವಿಷಯ. ರಾಷ್ಟ್ರದ ಹೆಮ್ಮೆ ಆಗಿರುವ ಅರ್ಷದ್ ನದೀಮ್ ಅವರ ಈ ಹೇಳಿಕೆ, ಪಾಕಿಸ್ತಾನ ಕ್ರೀಡಾಂಗಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಕ್ರೀಡಾ ವಲಯದಲ್ಲೂ ಆಕ್ರೋಶ ಭುಗಿಲೆದ್ದಿದೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಸಜ್ಜು
ಇಷ್ಟೆಲ್ಲಾ ಇದ್ದರೂ, ಅರ್ಷದ್ ನದೀಮ್ ಅವರ ಗಮನ ಇನ್ನೂ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮೇಲಿದೆ. ಈ ಸ್ಫರ್ಧೆ ಸೆಪ್ಟೆಂಬರ್‌ನಲ್ಲಿ ಟೊಕಿಯೊದಲ್ಲಿ ನಡೆಯಲಿದೆ. ಈ ಬಗ್ಗೆ ನದೀಮ್ ಮಾತನಾಡಿ, 'ನನ್ನ ಸಂಪೂರ್ಣ ಗಮನ ಈ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮೇಲೆ ಇಟ್ಟಿದ್ದೇನೆ. ಆದರೆ, ಇದರ ಹೊರತಾಗಿಯೂ ನನ್ನೊಂದಿಗೆ ತರಬೇತಿಗೆ ಯಾರೇ ಬಂದರೂ ಅವರಿಗೆ ತರಬೇತಿ ನೀಡಲಾಗುತ್ತದೆ. ಈ ತರಬೇತಿಯನ್ನು ನನ್ನ ತರಬೇತುದಾರ ಸಲ್ಮಾನ್ ಬಟ್ ನೀಡುತ್ತಾರೆ ಎಂದು ಹೇಳಿದ್ದಾರೆ.
ಟೊಕಿಯೊಗೂ ಮುನ್ನ, ಅಭಿಮಾನಿಗಳು ಮತ್ತೊಮ್ಮೆ ಅರ್ಷದ್ ನದೀಮ್ ಮತ್ತು ನೀರಜ್ ಚೋಪ್ರಾ ನಡುವಿನ ಕಾಳಗಕ್ಕೆ ಕಾತರದಿಂದ ಕಾದುನೋಡುತ್ತಿದ್ದಾರೆ. ಆಗಸ್ಟ್ 16ರಂದು ಪೋಲೆಂಡ್‌ನ ಸಿಲೇಸಿಯಾದಲ್ಲಿ ನಡೆಯಲಿರುವ ಡೈಮಂಡ್ ಲೀಗ್‌ನಲ್ಲಿ ಇಬ್ಬರೂ ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ನಂತರ ಇಬ್ಬರು ಆಟಗಾರರು ಇನ್ನೂ ಮುಖಾಮುಖಿಯಾಗಿಲ್ಲ.


