ವಿಶ್ವ ಚೆಸ್ ಚಾಂಪಿಯನ್‌ಶಿಪ್: 12ನೇ ಸುತ್ತಿನಲ್ಲಿ ಡಿ ಗುಕೇಶ್‌ಗೆ ಸೋಲು; ಇತಿಹಾಸ ನಿರ್ಮಾಣಕ್ಕೆ ಇನ್ನೆಷ್ಟು ಗೆಲುವು ಬೇಕು?
ವಿಶ್ವ ಚೆಸ್ ಚಾಂಪಿಯನ್‌ಶಿಪ್ ಆರಂಭಿಕ ಪಂದ್ಯದಲ್ಲಿ 32ರ ಹರೆಯದ ಡಿಂಗ್ ಲಿರೆನ್ ಗೆದ್ದರೆ, ಮೂರನೇ ಗೇಮ್‌ನಲ್ಲಿ ಗುಕೇಶ್ ಜಯಶಾಲಿಯಾಗಿದ್ದರು. ಉಳಿದ ಸುತ್ತು ಡ್ರಾಗೊಂಡವು. ಆ ಬಳಿಕ 11ನೇ ಸುತ್ತಿನಲ್ಲಿ ಮತ್ತೆ ಗುಕೇಶ್ ಗೆದ್ದರೆ, 12ನೇ ಸುತ್ತಿನಲ್ಲಿ ಗೆಲುವು ಲಿರೆನ್ ಅವರದ್ದಾಗಿದೆ. ಹೀಗಾಗಿ ಕೊನೆಯ ಎರಡು ಸುತ್ತು ರೋಚಕವಾಗಿರಲಿದೆ.
ಸಿಂಗಾಪುರದಲ್ಲಿ ನಡೆಯುತ್ತಿರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ (World Chess Championship) 12ನೇ ಗೇಮ್‌ನಲ್ಲಿ ಭಾರತದ ಯುವ ಪ್ರತಿಭೆ ಡಿ ಗುಕೇಶ್ (D Gukesh) ಸೋಲು ಕಂಡಿದ್ದಾರೆ. ಇದಕ್ಕೂ ಹಿಂದೆ ಸತತ ಡ್ರಾ ಬಳಿಕ 11 ಸುತ್ತಿನಲ್ಲಿ ಜಯ ಸಾಧಿಸಿ ಚಾಂಪಿಯನ್‌ಶಿಪ್‌ನಲ್ಲಿ ಮುನ್ನಡೆ ಸಾಧಿಸಿದ್ದ ಗುಕೇಶ್, ಇದೀಗ 12 ಸುತ್ತಿನ ಬಳಿಕ ಎದುರಾಳಿ ಡಿಂಗ್ ಲಿರೆನ್ ಜತೆಗೆ ಸಮಬಲ ಸಾಧಿಸಿದ್ದಾರೆ. ವಿಜೇತರ ನಿರ್ಣಯಕ್ಕೆ ಇನ್ನೆರಡು ಸುತ್ತುಗಳು ಮಾತ್ರವೇ ಬಾಕಿ ಉಳಿದಿದ್ದು, ಅಷ್ಟರಲ್ಲಿ ಭಾರತೀಯ ಯುವ ಆಟಗಾರ ಮತ್ತೆ ಲಯಕ್ಕೆ ಮರಳಬೇಕಿದೆ.
ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಎದುರಿಸುತ್ತಿರುವ 18ರ ಹರೆಯದ ಗುಕೇಶ್, ಭಾನುವಾರದ (ಡಿಸೆಂಬರ್ 8) ಪಂದ್ಯದಲ್ಲಿ ತಮ್ಮ ಎರಡನೇ ಗೆಲುವನ್ನು ಗಳಿಸಿದ ನಂತರ ಒಂದು ಪಾಯಿಂಟ್‌ನಿಂದ ಮುಂದಿದ್ದರು. ಆ ಗೆಲುವು ಸತತ ಏಳು ಡ್ರಾಗಳ ನಂತರ ಬಂದಿದ್ದು ವಿಶೇಷ. ಆದರೆ, ಇದೀಗ ಸೋಮವಾರ (ಡಿಸೆಂಬರ್ 9) ಲಿರೆನ್ ಅವರ ಗೆಲುವು ಗುಕೇಶ್ ಲೆಕ್ಕಾಚಾರವನ್ನು ಕೆಡಿಸಿದೆ. ಒಂದು ವೇಳೆ ಪಂದ್ಯ ಡ್ರಾ ಆಗಿದ್ದರೂ ಗುಕೇಶ್ ಮುನ್ನಡೆ ಹಾಗೆಯೇ ಇರುತ್ತಿತ್ತು. ಆದರೆ ಈಗ ಅಂಕವು 6-6 ರಿಂದ ಸಮಬಲಗೊಂಡಿದೆ.
ಒಟ್ಟು 14 ಸುತ್ತುಗಳ ಶಾಸ್ತ್ರೀಯ ಸ್ವರೂಪದ ಪಂದ್ಯದಲ್ಲಿ ಕೇವಲ ಎರಡು ಪಂದ್ಯಗಳು ಬಾಕಿ ಉಳಿದಿವೆ. ಇಬ್ಬರು ಆಟಗಾರರ ಕೈಯಲ್ಲಿ ಈಗ ತಲಾ 6 ಪಾಯಿಂಟ್‌ಗಳಿವೆ. ಪ್ರಶಸ್ತಿ ಗೆಲ್ಲಲು ಇನ್ನೂ 1.5 ಪಾಯಿಂಟ್‌ಗಳ ಅಗತ್ಯವಿದೆ. ಒಟ್ಟು 14 ಸುತ್ತುಗಳ ಮುಕ್ತಾಯದ ನಂತರವೂ ಇದೇ ರೀತಿಯ ಸಮಬಲದ ಫಲಿತಾಂಶ ಬಂದರೆ, ವಿಜೇತರನ್ನು ನಿರ್ಧರಿಸಲು ವೇಗದ ಸಮಯದ ನಿಯಂತ್ರಣದಲ್ಲಿ ಆಟಗಳು ಇರುತ್ತವೆ. ಅಂದರೆ ಟೈ ಬ್ರೇಕರ್ ಇರುತ್ತದೆ. ಇಂದು (ಡಿಸೆಂಬರ್ 10, ಮಂಗಳವಾರ) ವಿಶ್ರಾಂತಿ ದಿನವಾಗಿದ್ದು, ನಂತರ ಬುಧವಾರ ಮತ್ತು ಗುರುವಾರ ಕೊನೆಯ ಎರಡು ಸುತ್ತುಗಳು ನಡೆಯಲಿವೆ.
ಈವರೆಗಿನ ಫಲಿತಾಂಶ
32ರ ಹರೆಯದ ಲಿರೆನ್, ಆರಂಭಿಕ ಪಂದ್ಯವನ್ನು ಗೆದ್ದರೆ, ಮೂರನೇ ಗೇಮ್‌ನಲ್ಲಿ ಗುಕೇಶ್ ಜಯಶಾಲಿಯಾಗಿದ್ದರು. ಎರಡನೇ ಮತ್ತು ನಾಲ್ಕರಿಂದ 10ನೇ ಗೇಮ್‌ಗಳು ಡ್ರಾಗೊಂಡವು. ಆ ಬಳಿಕ 11ನೇ ಸುತ್ತಿನಲ್ಲಿ ಮತ್ತೆ ಗುಕೇಶ್ ಗೆದ್ದರೆ, 12ನೇ ಸುತ್ತಿನಲ್ಲಿ ಗೆಲುವು ಲಿರೆನ್ ಅವರದ್ದಾಯಿತು.
ಗುಕೇಶ್ ಚಾಂಪಿಯನ್ ಆಗಲು ಇನ್ನೆಷ್ಟು ಗೆಲುವು ಬೇಕು?
ಭಾರತದ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎಂಬ ಹಿರಿಮೆಗೆ ಪಾತ್ರರಾಗಲು ಗುಕೇಶ್‌ಗೆ ಇನ್ನೂ ಅವಕಾಶವಿದೆ. ಇನ್ನು 2 ಸುತ್ತುಗಳು ಮಾತ್ರವೇ ಬಾಕಿ ಉಳಿದಿರುವುದು ಸ್ಪಷ್ಟ. ಇದರಲ್ಲಿ ಎರಡರಲ್ಲೂ ಗೆದ್ದರೆ, ಗುಕೇಶ್ ಚಾಂಪಿಯನ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ವೇಳೆ ಇಬ್ಬರೂ ತಲಾ ಒಂದು ಗೇಮ್‌ಗಳಲ್ಲಿ ಗೆದ್ದರೆ, ಡಿಸೆಂಬರ್ 13ರಂದು ನಡೆಯುವ ಟೈ ಬ್ರೇಕರ್‌ನಲ್ಲಿ ಗೆಲ್ಲುವ ಆಟಗಾರರು ವಿಜಯಶಾಲಿಯಾಗುತ್ತಾರೆ. ಒಂದು ವೇಳೆ ಅಂತಿಮ ಎರಡು ಸುತ್ತಿನಲ್ಲಿ ಒಂದರಲ್ಲಿ ಗುಕೇಶ್ ಗೆದ್ದು, ಇನ್ನೊಂದು ಸುತ್ತು ಡ್ರಾಗೊಂಡರೂ ಗುಕೇಶ್‌ಗೆ ಚಾಂಪಿಯನ್ ಪಟ್ಟ ಸಿಗುತ್ತದೆ. ಎರಡೂ ಸುತ್ತುಗಳು ಡ್ರಾ ಆದರೂ, ಟ್ರೈ ಬ್ರೇಕರ್ ಮೂಲಕ ವಿಜೇತರ ನಿರ್ಧಾರವಾಗುತ್ತದೆ.