ಫಿಫಾ ಕ್ಲಬ್ ವಿಶ್ವಕಪ್ ಬಹುಮಾನ ಮೊತ್ತ ಪ್ರಕಟ; ಚಾಂಪಿಯನ್ ತಂಡ ಪಡೆಯಲಿದೆ ಒಟ್ಟು ಇಷ್ಟು ಸಾವಿರ ಕೋಟಿ ಹಣ
ಫಿಫಾ ಕ್ಲಬ್ ವಿಶ್ವಕಪ್ ಪಂದ್ಯಾವಳಿಯ ವಿಜೇತ ತಂಡವು, 40 ಮಿಲಿಯನ್ ಡಾಲರ್ ಸೇರಿದಂತೆ, ಒಟ್ಟು ಬರೋಬ್ಬರಿ 125 ಮಿಲಿಯನ್ ಡಾಲರ್‌ವರೆಗೆ ಬಹುಮಾನ ಮೊತ್ತ ಪಡೆಯಬಹುದು. ಅಂದರೆ ಸುಮಾರು 1068 ಕೋಟಿ ರೂಪಾಯಿ ಬಹುಮಾನವು ಗೆಲ್ಲುವ ಕ್ಲಬ್‌ಗೆ ಸಿಗಲಿದೆ.

ಈ ವರ್ಷ ಪ್ರತಿಷ್ಠಿತ ಫಿಫಾ ಕ್ಲಬ್ ವಿಶ್ವಕಪ್ (FIFA Club World Cup 2025) ನಡೆಯುತ್ತಿದೆ. ಫಿಫಾ ನಡೆಸುವ ಪ್ರತಿಷ್ಠಿತ ಟೂರ್ನಿಗೆ ಬಹುಮಾನ ಮೊತ್ತವನ್ನು ಘೋಷಿಸಿದೆ. ಟೂರ್ನಿಯಲ್ಲಿ ಭಾಗವಹಿಸುವ 32 ಕ್ಲಬ್‌ಗಳಿಗೆ ಒಟು 1 ಬಿಲಿಯನ್ ಯುಎಸ್ ಡಾಲರ್ (ಅಂದಾಜು 8,548 ಕೋಟಿ ರೂ) ಬಹುಮಾನದ ಹಣವನ್ನು ಘೋಷಿಸಲಾಗಿದೆ. ಇದರಲ್ಲಿ ಟೂರ್ನಿಯ ಚಾಂಪಿಯನ್ ತಂಡ ಸೇರಿದಂತೆ ಭಾಗವಹಿಸುವ ಎಲ್ಲಾ ತಂಡಗಳ ಒಟ್ಟು ಬಹುಮಾನ ಮೊತ್ತ ಸೇರಿದೆ. ಚಾಂಪಿಯನ್ ಆಗುವ ಕ್ಲಬ್‌ಗೆ ಬರೋಬ್ಬರಿ 40 ಮಿಲಿಯನ್ ಡಾಲರ್ (340 ಕೋಟಿ ರೂಪಾಯಿಗೂ ಹೆಚ್ಚು) ಬಹುಮಾನ ಸಿಗಲಿದೆ.
ಗುಂಪು ಹಂತದಲ್ಲಿ ಸ್ಪರ್ಧಿಸುವ ತಂಡಗಳು ಆರು ಗುಂಪು ಪಂದ್ಯಗಳಲ್ಲಿ ಪ್ರತಿ ಗೆಲುವಿಗೆ 2 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಪಡೆಯಲಿವೆ. ಇದೇ ವೇಳೆ ಡ್ರಾ ಸಾಧಿಸಿದರೆ 1 ಮಿಲಿಯನ್ ಡಾಲರ್ ಗಳಿಸುತ್ತವೆ. ಕ್ಲಬ್‌ಗಳು ನಾಕೌಟ್ ಸುತ್ತುಗಳಿಗೆ ಲಗ್ಗೆ ಇಟ್ಟರೆ, ಬಹುಮಾನ ಕೂಡಾ ಗಮನಾರ್ಹವಾಗಿ ಹೆಚ್ಚಾಗುತ್ತವೆ. 16ರ ಸುತ್ತು ಪ್ರವೇಶಿಸಿದರೆ ಹೆಚ್ಚುವರಿ 7.5 ಮಿಲಿಯನ್ ಡಾಲರ್ ಗಳಿಸುತ್ತದೆ. ಕ್ವಾರ್ಟರ್-ಫೈನಲ್ ಪಂದ್ಯಗಳಿಗೆ 13.125 ಮಿಲಿಯನ್ ಡಾಲರ್ ಬಹುಮಾನ ನಿಗದಿಯಾದರೆ, ಸೆಮಿಫೈನಲ್ ಪಂದ್ಯಗಳಿಗೆ 21 ಮಿಲಿಯನ್ ಡಾಲರ್ ಬಹುಮಾನ ಸಿಗಲಿದೆ. ಫೈನಲಿಸ್ಟ್ ಕ್ಲಬ್ ತಂಡಕ್ಕೆ 30 ಮಿಲಿಯನ್ ಡಾಲರ್ ಸಿಗಲಿದೆ.
ಪಂದ್ಯಾವಳಿಯ ವಿಜೇತ ತಂಡಕ್ಕೆ ಬಹುಮಾನ ಮೊತ್ತ 40 ಮಿಲಿಯನ್ ಡಾಲರ್ ಸೇರಿದಂತೆ, ಒಟ್ಟು ಬರೋಬ್ಬರಿ 125 ಮಿಲಿಯನ್ ಯುಎಸ್ ಡಾಲರ್‌ವರೆಗೆ ಬಹುಮಾನ ಮೊತ್ತ ಪಡೆಯಬಹುದು. ಅಂದರೆ ಸುಮಾರು 1068 ಕೋಟಿ ರೂಪಾಯಿ ಬಹುಮಾನವು ಗೆಲ್ಲುವ ಕ್ಲಬ್‌ಗೆ ಸಿಗಲಿದೆ.
ಭರ್ಜರಿ ಬಹುಮಾನ
“FIFA ಕ್ಲಬ್ ವಿಶ್ವಕಪ್‌ನ ಬಹುಮಾನ ವಿತರಣಾ ಮಾದರಿಯು ಕ್ಲಬ್ ಫುಟ್‌ಬಾಲ್‌ನ ಪರಾಕಾಷ್ಠೆಯನ್ನು ಪ್ರತಿಬಿಂಬಿಸುತ್ತದೆ. ಏಳು ಪಂದ್ಯಗಳ ಗುಂಪು ಹಂತ ಮತ್ತು ಪ್ಲೇಆಫ್ ಪಂದ್ಯಗಳನ್ನು ಒಳಗೊಂಡಿರುವ ಫುಟ್‌ಬಾಲ್ ಪಂದ್ಯಾವಳಿಗೆ ಇದುವರೆಗಿನ ಅತಿದೊಡ್ಡ ಬಹುಮಾನದ ಹಣವನ್ನು ನಿಗದಿಪಡಿಸಲಾಗಿದೆ. ವಿಜೇತ ತಂಡಕ್ಕೆ 125 ಮಿಲಿಯನ್ ಡಾಲರ್ ಸಂಭಾವ್ಯ ಬಹುಮಾನ ಮೊತ್ತವನ್ನು ನಿರೀಕ್ಷಿಸಲಾಗಿದೆ” ಎಂದು FIFA ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಹೇಳಿದ್ದಾರೆ.
ಫಿಫಾ ಕ್ಲಬ್ ವಿಶ್ವಕಪ್‌ನ ಹೊಸ ಸ್ವರೂಪವು ಜೂನ್ ಮತ್ತು ಜುಲೈ 2025ರಲ್ಲಿ ಡೆಯಲಿದೆ. ವಿಶ್ವದ 32 ಪ್ರಮುಖ ತಂಡಗಳು ಈ ಟೂರ್ನಿಯಲ್ಲಿ ಆಡಲಿವೆ. ಅದ್ಧೂರಿ ಟೂರ್ನಿಗೆ ಯುಎಸ್‌ಎ ಆತಿಥ್ಯ ವಹಿಸಲಿದೆ.
