FIFA World Cup 2022: ಇಂದು ಹಾಲಿ ಚಾಂಪಿಯನ್‌ಗೆ ಡೆನ್ಮಾರ್ಕ್ ಸವಾಲು; ಸೋಲಿನ ಆಘಾತದಿಂದ ಹೊರಬರುತ್ತಾ ಅರ್ಜೆಂಟೀನಾ?
ಅರ್ಜೆಂಟೀನಾದ 36 ಪಂದ್ಯಗಳ ಅಜೇಯ ಗೆಲುವಿನ ನಾಗಾಲೋಟವು ಸೌದಿ ಅರೇಬಿಯಾ ವಿರುದ್ಧದ ಸೋಲಿನೊಂದಿಗೆ ಕೊನೆಗೊಂಡಿತು. ಭಾರತದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಮೆಸ್ಸಿ ಬಳಗ ಇಂದು ಗೆಲ್ಲುವ ಫೇವರೇಟ್ ಆಗಲಿದೆ.
ಕತಾರ್: ಸೌದಿ ಅರೇಬಿಯಾ ವಿರುದ್ಧ ಆಘಾತಕಾರಿ ಸೋಲಿನೊಂದಿಗೆ 2022ರ ವಿಶ್ವಕಪ್ ಅಭಿಯಾನದಲ್ಲಿ ಕಹಿ ಆರಂಭ ಪಡೆದ ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ, ಇಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಡುತ್ತಿದೆ. 16ರ ಸುತ್ತಿಗೆ ಅರ್ಹತೆ ಪಡೆಯಲು ಮೆಸ್ಸಿ ಬಳಗ ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದೆ.
ಇಂದು ಅರ್ಜೆಂಟೀನಾಗೆ ಸವಾಲು ಹಾಕಲು ಸಿದ್ಧವಿರುವ ತಂಡ ಮೆಕ್ಸಿಕೊ. ಸೌದಿ ಅರೇಬಿಯಾ ವಿರುದ್ಧ ಸೋಲುವುದಕ್ಕೂ ಮುನ್ನ ಆಡಿದ 36 ಪಂದ್ಯಗಳಲ್ಲಿ ಅರ್ಜೆಂಟೀನಾ ಅಜೇಯವಾಗಿ ಆಡಿದೆ. ಲಿಯೋನೆಲ್ ಸ್ಕಾಲೋನಿ ಅವರ ನಿರ್ವಹಣೆಯಲ್ಲಿ ಒಂದೇ ಒಂದು ಪಂದ್ಯವನ್ನು ಕೂಡಾ ಈ ಬಲಿಷ್ಠ ತಂಡ ಕಳೆದುಕೊಂಡಿಲ್ಲ. ಆದರೆ ಸೌದಿ ವಿರುದ್ಧ ಸೋಲುವ ಮೂಲಕ ತಂಡ ಈಗ ಅತ್ಯಂತ ಕಠಿಣ ಸಮಯದಲ್ಲಿದೆ ಎಂದು ಕ್ರೀಡಾ ತಜ್ಞರು ಬಣ್ಣಿಸಿದ್ದಾರೆ. ಅರ್ಜೆಂಟೀನಾದ 36 ಪಂದ್ಯಗಳ ಅಜೇಯ ಗೆಲುವಿನ ನಾಗಾಲೋಟವು ಸೌದಿ ಅರೇಬಿಯಾ ವಿರುದ್ಧದ ಸೋಲಿನೊಂದಿಗೆ ಕೊನೆಗೊಂಡಿತು. ಭಾರತದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಮೆಸ್ಸಿ ಬಳಗ ಇಂದು ಗೆಲ್ಲುವ ಫೇವರೇಟ್ ಆಗಲಿದೆ.
ಇಂದಿನ ಮತ್ತೊಂದು ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು ಸ್ಟೇಡಿಯಂ 974ನಲ್ಲಿ ಸೋಲಿಸಿದರೆ, ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವು 16ರ ಸುತ್ತಿಗೆ ತಮ್ಮ ಸ್ಥಾನವನ್ನು ಕಾಯ್ದಿರಿಸಬಹುದು. ಆಸ್ಟ್ರೇಲಿಯ ವಿರುದ್ಧದ ಆರಂಭಿಕ 4-1 ಗೆಲುವಿನಲ್ಲಿ ಫ್ರೆಂಚ್ ಡಿಫೆಂಡರ್ ಲ್ಯೂಕಾಸ್ ಹೆರ್ನಾಂಡೆಜ್ ಅವರು ಗಾಯಗೊಂಡು ತಂಡದಿಂದ ಹೊರಬಿದ್ದರು.
ಇಂದಿನ ಪಂದ್ಯಗಳು ಯಾವುವು?
ಇಂದಿನ ಮೊದಲ ಪಂದ್ಯದಲ್ಲಿ ಟುನೀಶಿಯಾ ವಿರುದ್ಧ ಆಸ್ಟ್ರೇಲಿಯಾ ಕಣಕ್ಕಿಳಿದರೆ, ಎರಡನೇ ಪಂದ್ಯದಲ್ಲಿ ಪೋಲೆಂಡ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿ ಸೌದಿ ಅರೇಬಿಯಾ ಮೈದಾನಕ್ಕಿಳಿಯಲಿದೆ. ಮೂರನೇ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಡೆನ್ಮಾರ್ಕ್ ಆಡಿದರೆ, ಮಧ್ಯರಾತ್ರಿ ನಡೆಯುವ ಪಂದ್ಯದಲ್ಲಿ ಅರ್ಜೆಂಟೀನಾಗೆ ಮೆಕ್ಸಿಕೋ ಸವಾಲೆಸೆಯಲಿದೆ.
ಪಂದ್ಯದ ಸಮಯ
ಮೊದಲ ಮೂರು ಪಂದ್ಯಗಳು ಭಾರತೀಯ ಸಮಯದ ಪ್ರಕಾರ ಶನಿವಾರದಂದು ನಡೆಯಲಿವೆ. ಸಂಜೆಯ ಅಂತಿಮ ಪಂದ್ಯ(ಅರ್ಜೆಂಟೀನಾ ಮತ್ತು ಮೆಕ್ಸಿಕೋ) ಮಧ್ಯರಾತ್ರಿಯ ಬಳಿಕ ನಡೆಯಲಿದೆ. ಟುನೀಶಿಯಾ ಮತ್ತು ಆಸ್ಟ್ರೇಲಿಯಾ ಪಂದ್ಯ ಭಾರತದಲ್ಲಿ ಮಧ್ಯಾಹ್ನ 3.30ಕ್ಕೆ ಆರಂಭವಾಗುತ್ತದೆ. ಪೋಲೆಂಡ್ ವಿರುದ್ಧ ಸೌದಿ ಅರೇಬಿಯಾ ಪಂದ್ಯ ಸಂಜೆ 6.30ಕ್ಕೆ ನಡೆಯಲಿದೆ. ಫ್ರಾನ್ಸ್ ಮತ್ತು ಡೆನ್ಮಾರ್ಕ್ ಪಂದ್ಯವು ರಾತ್ರಿ 9.30ಕ್ಕೆ ಆರಂಭವಾದರೆ, ಅರ್ಜೆಂಟೀನಾ ಹಾಗೂ ಮೆಕ್ಸಿಕೊ ತಂಡಗಳು ತಡರಾತ್ರಿ 12:30ಕ್ಕೆ ಸೆಣಸಲಿವೆ.
ಕ್ರೀಡಾಂಗಣಗಳು ಯಾವುವು?
ಅಲ್ ಜನೌಬ್ ಸ್ಟೇಡಿಯಂನಲ್ಲಿ ಟುನೀಶಿಯಾ ಮತ್ತು ಆಸ್ಟ್ರೇಲಿಯಾ ಪಂದ್ಯ ನಡೆಯಲಿದೆ. ಪೋಲೆಂಡ್ ಮತ್ತು ಸೌದಿ ಅರೇಬಿಯಾ ಪಂದ್ಯವು ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆಯಲಿದೆ. ಫ್ರಾನ್ಸ್ ಮತ್ತು ಡೆನ್ಮಾರ್ಕ್ ಪಂದ್ಯ 974 ಸ್ಟೇಡಿಯಂನಲ್ಲಿ ನಡೆದರೆ, ಅರ್ಜೆಂಟೀನಾ ಮತ್ತು ಮೆಕ್ಸಿಕೋ ಪಂದ್ಯ ಲುಸೇಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇಂದಿನ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ವಿವರ
ಇಂದಿನ ಎಲ್ಲಾ ನಾಲ್ಕು ಪಂದ್ಯಗಳು Sports18 ಮತ್ತು Sports18 HD ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ ಈ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.
ನಿನ್ನೆಯ ಪಂದ್ಯದ ಫಲಿತಾಂಶ
ಶುಕ್ರವಾರ ನಡೆದ ಗುಂಪು ಹಂತದ ಪಂದ್ಯದಲ್ಲಿ ಸೋತ ಅತಿಥೇಯ ಕಥಾರ್, ಫುಟ್ಬಾಲ್ ವಿಶ್ವಕಪ್‌ನಿಂದ ಹೊರಬಿದ್ದಿದೆ. ಎ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಸೆನೆಗಲ್ ವಿರುದ್ಧ 3-1ರಿಂದ ಕತಾರ್ ಸೋತಿತು. ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿಂದು ನಡೆದ ಪಂದ್ಯದಲ್ಲಿ ಇರಾನ್ ತಂಡ ವೇಲ್ಸ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿದೆ. ಮತ್ತೊಂದೆಡೆ ನೆದರ್‌ಲ್ಯಾಂಡ್ಸ್ ಮತ್ತು ಈಕ್ವೆಡಾರ್ ನಡುವಿನ ಪಂದ್ಯವು 1-1ರಿಂದ ಡ್ರಾ ಆದರೆ, ಇಂಗ್ಲೆಂಡ್ ಮತ್ತು ಅಮೆರಿಕ ನಡುವಿನ ಪಂದ್ಯ ಕೂಡಾ ಡ್ರಾಗೊಂಡಿತು.