ಫಿಫಾ ವಿಶ್ವಕಪ್ ಅರ್ಹತಾ ಸುತ್ತು; ಗೋಲು ಖಾತೆ ತೆರೆಯದೆ ಕತಾರ್ಗೆ ಮಣಿದ ಭಾರತ ಫುಟ್ಬಾಲ್ ತಂಡ
India vs Qatar Football: ಭುಬನೇಶ್ವರ್ನ ಕಳಿಂಗ ಮೈದಾನದಲ್ಲಿ ನಡೆದ 2026ರ ಫಿಫಾ ಫುಟ್ಬಾಲ್ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕತಾರ್ ವಿರುದ್ಧ ಭಾರತ ಸೋಲನುಭವಿಸಿದೆ.
2026ರ ಫಿಫಾ ಫುಟ್ಬಾಲ್ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ (FIFA World Cup 2026 qualifiers) ಕುವೈತ್ ವಿರುದ್ಧ 1-0 ಗೋಲು ಅಂತರದ ಜಯದೊಂದಿಗೆ ಶುಭಾರಂಭ ಮಾಡಿದ್ದ ಭಾರತ ತಂಡವು ನವೆಂಬರ್ 21ರ ಮಂಗಳವಾರ ನಡೆದ ತನ್ನ 2ನೇ ಪಂದ್ಯದಲ್ಲಿ ಕತಾರ್ ವಿರುದ್ಧ (India vs Qatar football) ಮುಗ್ಗರಿಸಿತು. ಏಷ್ಯನ್ ಚಾಂಪಿಯನ್ ಆಗಿರುವ ಕತಾರ್ ತಂಡಕ್ಕೆ ಕಠಿಣ ಪೈಪೋಟಿ ನೀಡಿದರೂ ಗೋಲು ಖಾತೆ ತೆರೆಯದೆ ಭಾರತ ಶರಣಾಯಿತು.
ಫಿಫಾ ಶ್ರೇಯಾಂಕದಲ್ಲಿ 61ನೇ ಸ್ಥಾನದಲ್ಲಿರುವ ಕತಾರ್, ಅರ್ಹತಾ ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ 8-1 ಗೋಲುಗಳ ಭಾರಿ ಅಂತರದ ಗೆಲುವು ದಾಖಲಿಸಿತ್ತು. ಇದೀಗ ತನ್ನ 2ನೇ ಪಂದ್ಯದಲ್ಲಿ ಭಾರತ ಎದುರು 3-0 ಗೋಲುಗಳಿಂದ ಗೆದ್ದಿದೆ. ಇದರೊಂದಿಗೆ ಸತತ 2ನೇ ಗೆಲುವಿಗೆ ಮುತ್ತಿಕ್ಕಿದೆ. ಇದರೊಂದಿಗೆ 15 ಪಂದ್ಯಗಳ ಅಜೇಯ ಓಟಕ್ಕೆ ತಡೆ ಬಿದ್ದಿದೆ.
ಭುಬನೇಶ್ವರ್ನ ಕಳಿಂಗ ಮೈದಾನದಲ್ಲಿ ಜರುಗಿದ ಪಂದ್ಯದಲ್ಲಿ ಆರಂಭದಿಂದಲೂ ಕತಾರ್ಗೆ ಪ್ರಬಲ ಪೈಪೋಟಿ ನೀಡಿದರೂ, ಭಾರತ ಗೋಲು ಗಳಿಸುವಲ್ಲಿ ವಿಫಲವಾಯಿತು. ಪಂದ್ಯದ 4ನೇ ನಿಮಿಷದಲ್ಲಿ ಕತಾರ್ ತಂಡದ ಪರ ಮುಸ್ತಾಫ ಮಿಶಾಲ್ ಗೋಲು ಗಳಿಸುವ ಮೂಲಕ ಮುನ್ನಡೆ ತಂದುಕೊಟ್ಟರು. ನಂತರ ಅಲ್ಮೋಜ್ ಅಲಿ 47ನೇ ನಿಮಿಷ, ಯೂಸಫ್ ಅಬ್ದುರಿಸಗ್ 86ನೇ ನಿಮಿಷದಲ್ಲಿ ಗೋಲು ಸಿಡಿಸಿದರು.
3ನೇ ಸ್ಥಾನದಲ್ಲಿ ಭಾರತ
ಭಾರತ 2ನೇ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ ಎ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ. 2ರಲ್ಲಿ ಜಯಿಸಿರುವ ಕತಾರ್ ಅಗ್ರಸ್ಥಾನ ಪಡೆದಿದೆ. ಗುಂಪಿನ ಎರಡು ತಂಡಗಳು ಅರ್ಹತಾ ಟೂರ್ನಿಯ 3ನೇ ಸುತ್ತಿಗೆ ಪ್ರವೇಶಿಸಲಿವೆ. ಎರಡನೇ ಸ್ಥಾನದಲ್ಲಿ ಕುವೈತ್ ತಂಡವಿದೆ. ನಾಲ್ಕನೇ ಹಾಗೂ ಅಂತಿಮ ಸ್ಥಾನದಲ್ಲಿ ಅಫ್ಘಾನಿಸ್ತಾನ ತಂಡವಿದೆ. ಅಫ್ಘನ್ ಆಡಿದ ಎರಡರಲ್ಲೂ ಸೋಲು ಕಂಡಿದೆ.
ಭಾರತದ ಮುಂದಿನ ಪಂದ್ಯ ಮುಂದಿನ ವರ್ಷ
ಇನ್ನು ಭಾರತ ತನ್ನ ಮುಂದಿನ ಪಂದ್ಯವನ್ನು 2024ರ ಮಾರ್ಚ್ 21ರಂದು ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಗುಂಪು ಹಂತದಲ್ಲಿ ಭಾರತ ತಂಡವು ಎಲ್ಲಾ ತಂಡಗಳ ಎದುರು ತಲಾ ಎರಡು ಪಂದ್ಯಗಳನ್ನಾಡಬೇಕಿದೆ. 2024ರ ಮಾರ್ಚ್ 26ರಂದು ಮತ್ತೆ ಅಫ್ಘಾನಿಸ್ತಾನ ತಂಡವನ್ನೇ ಎದುರಿಸಲಿದೆ. ತದನಂತರ ಜೂನ್ 6ರಂದು ಕುವೈತ್ ಮತ್ತು ಜೂನ್ 11ರಂದು ಕತಾರ್ ವಿರುದ್ಧ ಸೆಣಸಾಟ ನಡೆಸಲಿದೆ.
ಅರ್ಹತಾ ಸುತ್ತಿನ ಪಂದ್ಯಗಳಿಗೆ ಭಾರತೀಯ ಫುಟ್ಬಾಲ್ ತಂಡ
ಗೋಲ್ ಕೀಪರ್ಸ್: ಅಮರಿಂದರ್ ಸಿಂಗ್, ಗುರುಪ್ರೀತ್ ಸಿಂಗ್ ಸಂಧು, ವಿಶಾಲ್ ಕೈತ್.
ಡಿಫೆಂಡರ್ಸ್: ಆಕಾಶ್ ಮಿಶ್ರಾ, ಲಾಲ್ಚುಂಗ್ನುಂಗಾ, ಮೆಹ್ತಾಬ್ ಸಿಂಗ್, ನಿಖಿಲ್ ಪೂಜಾರಿ, ರಾಹುಲ್ ಭೇಕೆ, ರೋಷನ್ ಸಿಂಗ್ ನವೋರೆಮ್, ಸಂದೇಶ್ ಜಿಂಗನ್, ಸುಭಾಶಿಶ್ ಬೋಸ್
ಮಿಡ್ ಫೀಲ್ಡರ್ಸ್: ಅನಿರುದ್ಧ್ ಥಾಪಾ, ಬ್ರಾಂಡನ್ ಫೆರ್ನಾಂಡಿಸ್, ಲಾಲೆಂಗ್ಮಾವಿಯಾ, ಲಿಸ್ಟನ್ ಕೊಲಾಕೊ, ಮಹೇಶ್ ಸಿಂಗ್ ನೌರೆಮ್, ರೋಹಿತ್ ಕುಮಾರ್, ಸಹಲ್ ಅಬ್ದುಲ್ ಸಮದ್, ಸುರೇಶ್ ಸಿಂಗ್ ವಾಂಗ್ಜಮ್, ಉದಾಂತ ಸಿಂಗ್ ಕುಮಾಮ್
ಫಾರ್ವರ್ಡ್‌ಗಳು: ಇಶಾನ್ ಪಂಡಿತ, ಲಾಲಿಯನ್ ಜುವಾಲಾ ಚಾಂಗ್ಟೆ, ಮನ್ವಿರ್ ಸಿಂಗ್, ರಾಹುಲ್ ಕೆಪಿ, ಸುನಿಲ್ ಛೆಟ್ರಿ.