ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ
Sunil Chhetri : ಭಾರತ ಫುಟ್ಬಾಲ್ ತಂಡದ ದಿಗ್ಗಜ ಆಟಗಾರ ಹಾಗೂ ಕಾಲ್ಚೆಂಡಿನ ಚತುರ ಎಂದೇ ಕರೆಸಿಕೊಳ್ಳುವ ಸುನಿಲ್ ಛೆಟ್ರಿ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ತಮ್ಮ ಕೊನೆಯ ಪಂದ್ಯವನ್ನು ಜೂನ್ 26ರಂದು ಕುವೈತ್ ವಿರುದ್ಧ ಆಡಲಿದ್ದಾರೆ.
ಭಾರತ ತಂಡದ ಫುಟ್ಬಾಲ್ ದಿಗ್ಗಜ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಮೇ 16ರ ಗುರುವಾರ ನಿವೃತ್ತಿ (Sunil Chhetri Retire) ಘೋಷಿಸುವ ಮೂಲಕ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ನೀಡಿದ್ದಾರೆ. ಜೂನ್ 26ರಂದು ಕೋಲ್ಕತ್ತಾದಲ್ಲಿ ನಡೆಯುವ ಕುವೈತ್ ವಿರುದ್ಧದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ಎರಡು ದಶಕಗಳ ತಮ್ಮ ವೃತ್ತಿ ಜೀವನಕ್ಕೆ ತೆರೆ ಎಳೆಯಲು ಸಜ್ಜಾಗಿದ್ದಾರೆ.
ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಅತ್ಯಧಿಕ ಗೋಲು ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಛೆಟ್ರಿ, ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ ವಿಡಿಯೋ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಭಾರತ ತಂಡಕ್ಕಾಗಿ 150 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 20 ವರ್ಷಗಳ ಕರಿಯರ್ನಲ್ಲಿ 94 ಗೋಲು ಗಳಿಸಿದ್ದಾರೆ. 2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಡೆಬ್ಯೂ ಮಾಡಿದ್ದರು.
ಅತ್ಯಧಿಕ ಗೋಲು ಗಳಿಸಿದವರ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ, ಅಲಿ ದೇಯಿ, ಲಿಯೋನೆಲ್ ಮೆಸ್ಸಿ ನಂತರ ಸ್ಥಾನ ಪಡೆದಿರುವ ಚೆಟ್ರಿ, ಇತ್ತೀಚಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇಷ್ಟು ಬೇಗ ಈ ನಿರ್ಧಾರ ಕೈಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಅಲ್ಲದೆ, ಕೋಚ್ ಐಗರ್ ಸ್ಟಿಮ್ಯಾಕ್ ಕೂಡ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದರು.
ಪ್ರಸ್ತುತ ಅವರಿಗೆ 38 ವಯಸ್ಸು ಆಗಿದೆ. ಈ ವಿಷಯ ಅವರ ಗಮನಕ್ಕೂ ಬಂದಿದೆ. ಈ ವಯಸ್ಸಿನಲ್ಲಿ ಒಂದೂವರೆ ಗಂಟೆಯ ಆಟವಾಡಲು ದೇಹ ಸ್ಪಂದಿಸುವುದು ಕೂಡ ಕಷ್ಟ. ಭಾರತದ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರಾದ ಛೆಟ್ರಿ ಈ ಬಾರಿ ಏಷ್ಯಾಕಪ್ ನಂತರ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಸ್ಟಿಮ್ಯಾಕ್ ಹೇಳಿದ್ದರು. ಇದೀಗ ಕೊನೆಗೂ ಚೆಟ್ರಿ ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದಾರೆ.
ಕೊಹ್ಲಿ ಪ್ರತಿಕ್ರಿಯೆ
ಭಾರತೀಯ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಸಹೋದರ ಹೆಮ್ಮೆ ಎಂದು ಮಧ್ಯೆ ಒಂದು ಲವ್ ಎಮೋಜಿ ಹಾಕಿದ್ದಾರೆ.
ತನ್ನ ಪದಾರ್ಪಣೆ ಪಂದ್ಯ ನೆನೆದ ಸುನಿಲ್ ಛೆಟ್ರಿ
ಸುದೀರ್ಘ ಸೇವೆ ಸಲ್ಲಿಸಿದ ರಾಷ್ಟ್ರೀಯ ತಂಡದ ನಾಯಕ ತನ್ನ ನಿವೃತ್ತಿ ಬಗ್ಗೆ ಮಾತನಾಡಿದ್ದು, ಕಳೆದ 19 ವರ್ಷಗಳಲ್ಲಿ ಕರ್ತವ್ಯ, ಒತ್ತಡ ಮತ್ತು ಅಪಾರ ಸಂತೋಷದ ಉತ್ತಮ ಸಂಯೋಜನೆಯಾಗಿದೆ. ಇವುಗಳನ್ನು ನಾನು ದೇಶಕ್ಕಾಗಿ ಆಡಿದ ಆಟಗಳೆಂದು ಎಂದಿಗೂ ವೈಯಕ್ತಿಕವಾಗಿ ಯೋಚಿಸಲಿಲ್ಲ. ನಾನು ಯಾವಾಗಲೂ ನೆನಪಿಸಿಕೊಳ್ಳುವ ದಿನವೊಂದಿದೆ. ಅದೇ ನಾನು ದೇಶಕ್ಕಾಗಿ ಆಡಿದ ನನ್ನ ಮೊದಲ ಪಂದ್ಯ ಎಂದು ಭಾವುಕರಾಗಿದ್ದಾರೆ.
ಆ ಪಂದ್ಯವನ್ನೂ ಎಂದಿಗೂ ನಂಬಲಸಾಧ್ಯವಾಗಿತ್ತು. ಪದಾರ್ಪಣೆ ಮಾಡಿದ ದಿನವನ್ನು ಎಂದೂ ಮರೆಯಲ್ಲ. ಅದು ಸಾಧ್ಯವಿಲ್ಲ. ಆ ದಿನ ಎಂದಿಗೂ ನನ್ನ ಅತ್ಯುತ್ತಮ ದಿನಗಳಲ್ಲಿ ಒಂದಾಗಿದೆ. ನಾನು ಕ್ಲಬ್ ಪರ ಆಡುವಾಗ ವೃತ್ತಿಪರ ಸೆಟಪ್ ಇನ್ನೂ ದೂರವಿದೆ ಎಂದುಕೊಂಡಿದ್ದೆ. ಏಕೆಂದರೆ ಅಂದಿನ ಬಹಳ ಕಷ್ಟವಾಗುತ್ತಿತ್ತು. ಆದರೆ ದೇವರ ದಯೆಯಿಂದ ಈ ಸುವರ್ಣಾವಕಾಶ ಒದಗಿ ಬಂತು ಎಂದಿದ್ದಾರೆ.
ಮೊದಲ ಪಂದ್ಯದಲ್ಲೇ ಗೋಲು ಗಳಿಸಿದ್ದ ಛೆಟ್ರಿ
ಕ್ವೆಟ್ಟಾದಲ್ಲಿ 2005ರ ಜೂನ್ 12ರಂದು ಪಾಕಿಸ್ತಾನ ವಿರುದ್ಧ ಸೌಹಾರ್ದ ಪಂದ್ಯದಲ್ಲಿ ಸುನಿಲ್ ಛೆಟ್ರಿ ಅವರು ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಆ ಪಂದ್ಯ 1-1ರಲ್ಲಿ ಡ್ರಾ ಸಾಧಿಸಿತ್ತು. ಭಾರತದ ಪರ ಆ ಗೋಲು ಬಾರಿಸಿದ್ದು ಕೂಡ ಛೆಟ್ರಿಯೇ ಎಂಬುದು ವಿಶೇಷ. ಅಂದಿನಿಂದ ಇಲ್ಲಿಯವರೆಗೂ ಭಾರತ ತಂಡದ ಪರ ಛೆಟ್ರಿ ಸಾಧನೆಗಳು ಅನೇಕಾರು.
ತನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ವಿಶೇಷವಾಗಿ ನನ್ನ ತಾಯಿ, ತಂದೆ ಮತ್ತು ನನ್ನ ಪತ್ನಿ ಹಾಗೂ ಸಹ ಆಟಗಾರರು, ಕೋಚ್ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ. ನಾನು ಒತ್ತಡದಲ್ಲಿದ್ದ ಸಂದರ್ಭದಲ್ಲಿ ನನಗೆ ತುಂಬಾ ಬೆಂಬಲ ನೀಡಿದ್ದರು. ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಿಂತಿದ್ದಾರೆ. ನಾನು ದೇಶವನ್ನು ಪ್ರತಿನಿಧಿಸಿದ್ದೇ ದೊಡ್ಡ ಹೆಮ್ಮೆಯ ಸಂಗತಿ ಎಂದಿದ್ದಾರೆ.
ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.