ಐಪಿಎಲ್ ನಡುವೆ ಫುಟ್ಬಾಲ್ ಮರೀಬೇಡಿ; ಇಂದು ಮೋಹನ್ ಬಗಾನ್ vs ಬೆಂಗಳೂರು ಎಫ್‌ಸಿ ನಡುವೆ ಐಎಸ್‌ಎಲ್ ಫೈನಲ್ ಪಂದ್ಯ
Mohun Bagan Super Giant vs Bengaluru FC: ಬೆಂಗಳೂರು ಎಫ್‌ಸಿ ಮತ್ತು ಮೋಹನ್ ಬಗಾನ್ ತಂಡಗಳ ನಡುವಿನ ಐಎಸ್‌ಎಲ್ ಫೈನಲ್‌ಗೆ ಕೋಲ್ಕತ್ತಾ ಸಜ್ಜಾಗಿದೆ. ಎರಡೂ ತಂಡಗಳು ರೋಮಾಂಚಕ ಮುಖಾಮುಖಿಗಳ ಇತಿಹಾಸ ಹೊಂದಿದೆ.

ಅತ್ತ ಐಪಿಎಲ್ ಕ್ರೇಜ್ ಜೋರಾಗಿದ್ದರೆ, ಅದರ ನಡುವೆ ಇಂದು (ಏಪ್ರಿಲ್ 12) ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯ ನಡೆಯುತ್ತಿದೆ. ವಿಶೇಷವೆಂದರೆ, ಈ ಬಾರಿ ಕೂಡಾ 2022-23ರ ಐಎಸ್‌ಎಲ್ ಫೈನಲ್ ಪಂದ್ಯವೇ ಮರುಕಳಿಸುವಂತಿದೆ. ಕೋಲ್ಕತ್ತಾದ ಮೋಹನ್ ಬಗಾನ್ ಸೂಪರ್ ಜೈಂಟ್ ಮತ್ತು ಬೆಂಗಳೂರು ಎಫ್‌ಸಿ (Mohun Bagan Super Giant vs Bengaluru FC) ತಂಡಗಳು 2025ರ ರೋಚಕ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳಿಗೆ ಇದು ಮೊದಲ ಫೈನಲ್ ಏನಲ್ಲ. ಕಪ್ ಕೂಡಾ ಹೊಸದಲ್ಲ. ಹೀಗಾಗಿ ಗತವೈಭವವನ್ನು ಮರುಕಳಿಸಲು ತಂಡಗಳು ಎದುರು ನೋಡುತ್ತಿವೆ.
ಪ್ರಸಕ್ತ ಐಎಸ್‌ಎಲ್ ಅಭಿಯಾನದಲ್ಲಿ ಪ್ರಬಲ ಪೈಪೋಟಿ ನೀಡಿ ಮೋಹನ್ ಬಗಾನ್ ತಂಡ ಫೈನಲ್‌ಗೆ ಪ್ರವೇಶಿಸಿದೆ. ತಂಡವು ಸೆಮಿಫೈನಲ್‌ನಲ್ಲಿ ಜೆಮ್‌ಶೆಡ್‌ಪುರ ಎಫ್‌ಸಿ ವಿರುದ್ಧದ ರೋಚಕ ಗೆಲುವು ಕಂಡಿತ್ತು. ಅತ್ತ ಬೆಂಗಳೂರು ಎಫ್‌ಸಿ ತಂಡವು ಗೋವಾ ವಿರುದ್ಧ ರೋಚಕ ಗೆಲುವು ಸಾಧಿಸಿತು.
2023ರ ಐಎಸ್‌ಎಲ್ ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡ ಇದೇ ಮೋಹನ್ ಬಗಾನ್ ವಿರುದ್ಧ ಸೋತು, ಸ್ವಲ್ಪದರಲ್ಲೇ ಟ್ರೋಫಿ ಮಿಸ್ ಮಾಡಿಕೊಂಡಿತ್ತು. ಆ ಸೋಲಿಗೆ, ಅದರದ್ದೇ ತವರಲ್ಲಿ ಸೇಡು ತೀರಿಸಲು ತಂಡ ಮುಂದಾಗಿದೆ. ಕೋಲ್ಕತ್ತಾದ ಐತಿಹಾಸಿಕ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ.
ಮುಖಾಮುಖಿ ದಾಖಲೆ
ಉಭಯ ತಂಡಗಳ ಮುಖಾಮುಖಿಯಲ್ಲಿ ಮೋಹನ್ ಬಗಾನ್ ಹೆಚ್ಚು ಬಲಿಷ್ಠವಾಗಿದೆ. ಈ ಎರಡು ತಂಡಗಳು ಈವರೆಗೆ 11 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಬಿಎಫ್‌ಸಿ 2 ಪಂದ್ಯ ಮಾತ್ರ ಗೆದ್ದರೆ ಕೋಲ್ಕತ್ತಾ 7 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ಇಂಡಿಯನ್ ಸೂಪರ್ ಲೀಗ್ 2024-25ರ ಫೈನಲ್: ಮೋಹನ್ ಬಗಾನ್ vs ಬೆಂಗಳೂರು ಎಫ್‌ಸಿ ನಡುವಿನ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ?
ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 2024-25 ಫೈನಲ್ ಪಂದ್ಯವು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಸಂಜೆ 7:30 ಕ್ಕೆ ಪ್ರಾರಂಭವಾಗಲಿದೆ.
ಐಎಸ್‌ಎಲ್ ಫೈನಲ್ ಪಂದ್ಯ ಲೈವ್ ವೀಕ್ಷಿಸುವುದು ಹೇಗೆ?
ಐಎಸ್‌ಎಲ್ ಫೈನಲ್ ಪಂದ್ಯವು ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ 3ಯಲ್ಲಿ ನೇರ ಪ್ರಸಾರವಾಗಲಿದೆ. ಇದೇ ವೇಳೆ ಜಿಯೋಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದ್ದು, ಮೊಬೈಲ್‌ನಲ್ಲೂ ನೋಡಬಹುದು.
