ಫಿಫಾ ವಿಶ್ವಕಪ್‌ಗೂ ಮುನ್ನ 30 ಲಕ್ಷ ಬೀದಿನಾಯಿಗಳ ಸಾಮೂಹಿಕ ಹತ್ಯೆಗೆ ಮುಂದಾದ ಮೊರಾಕೊ; ಪ್ರಾಣಿಪ್ರಿಯರ ಖಂಡನೆ
2030ರ ಫಿಫಾ ವಿಶ್ವಕಪ್ ಆತಿಥ್ಯಕ್ಕೆ ಸಜ್ಜಾಗುತ್ತಿರುವ ಮೊರಾಕೊ, ದೇಶದಾದ್ಯಂತ ಸುಮಾರು 30 ಲಕ್ಷ ಬೀದಿ ನಾಯಿಗಳನ್ನು ಕೊಲ್ಲಲು ಯೋಜಿಸಿದೆ. ಆದರೆ, ಈ ನಿರ್ಧಾರಕ್ಕೆ ಜಾಗತಿಕ ಖಂಡನೆ ವ್ಯಕ್ತವಾಗಿದೆ.

2030ರ ಫಿಫಾ ವಿಶ್ವಕಪ್ ಟೂರ್ನಿಗೆ ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳೊಂದಿಗೆ ಮೊರಾಕೊ ಕೂಡಾ ಸಹ-ಆತಿಥ್ಯ ವಹಿಸಲಿದೆ. ಫುಟ್ಬಾಲ್ ವಿಶ್ವಕಪ್‌ಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಮೊರಾಕೊ, ದೇಶದಾದ್ಯಂತ ಬರೋಬ್ಬರಿ ಮೂವತ್ತು ಲಕ್ಷ ಬೀದಿ ನಾಯಿಗಳನ್ನು ಕೊಲ್ಲುವ ಯೋಜನೆ ಘೋಷಿಸಿದೆ. ಇದು ಜಾಗತಿಕ ಮಟ್ಟದಲ್ಲಿ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಷ್ಠಿತ ಪಂದ್ಯಾವಳಿ ಸಮಯಕ್ಕೆ ದೇಶದಲ್ಲಿ ಪ್ರವಾಸೋದ್ಯಮದ ಆಕರ್ಷಣೆಯನ್ನು ಹೆಚ್ಚಿಸಲು ದೇಶವು ಮುಂದಾಗಿದೆ. ಆ ಪ್ರಯತ್ನದ ಭಾಗವಾಗಿ ನಾಯಿಗಳ ಸಾಮೂಹಿಕ ಹತ್ಯೆಗೆ ಯೋಜನೆ ರೂಪಿಸಿದೆ. ಇದು ಪ್ರಾಣಿ ಕಲ್ಯಾಣ ಸಂಸ್ಥೆಗಳು ಮತ್ತು ಪ್ರಾಣಿಪ್ರಿಯರ ವ್ಯಾಪಕ ಖಂಡನೆಯನ್ನು ಹುಟ್ಟುಹಾಕಿದೆ.
ಮೊರಾಕೊದಲ್ಲಿ ಬೀದಿ ನಾಯಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಅದನ್ನು ನಿರ್ವಹಿಸಲು ದೇಶದ ಅಧಿಕಾರಿಗಳು ಅಮಾನವೀಯ ವಿಧಾನಗಳನ್ನು ಆಶ್ರಯಿಸುತ್ತಿದ್ದಾರೆ ಎಂದು ದಿ ಡೈಲಿ ಮೇಲ್ (ಬ್ರಿಟಿಶ್ ದಿನಪತ್ರಿಕೆ) ವರದಿ ಸೂಚಿಸಿವೆ.
ನಾಯಿಗಳನ್ನು ಕೊಲ್ಲಲು ಅನುಸರಿಸುತ್ತಿರುವ ವಿಧಾನ ಇನ್ನೂ ಘೋರವಾಗಿವೆ. ವಿಷವುಣಿಸಿ ಕೊಲ್ಲಲು ಅತ್ಯಂತ ವಿಷಕಾರಿ ಸ್ಟ್ರೈಕ್ನೈನ್ ಬಳಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮೂಕ ಪ್ರಾಣಿಯನ್ನು ಗುಂಡಿಕ್ಕಿ ಕೊಲ್ಲುವುದು ಮತ್ತು ಬದುಕುಳಿದ ಪ್ರಾಣಿಗಳನ್ನು ಸಲಾಕೆಗಳಿಂದ ಹೊಡೆದು ಕೊಲ್ಲುವ ವಿಧಾನ ಅನುಸರಿಸುವ ಯೋಜನೆ ರೂಪಿಸಲಾಗಿದೆ. ಈ ಕ್ರೂರ, ಅಮಾನವೀಯ ತಂತ್ರಗಳು ವಿಶ್ವಾದ್ಯಂತ ಪ್ರಾಣಿ ಪ್ರಿಯರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಹೀಗಾಗಿ ತಕ್ಷಣವೇ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.
ಜಾಗತಿಕ ಆಕ್ರೋಶ; ಫಿಫಾ ಮಧ್ಯಪ್ರವೇಶಕ್ಕೆ ಕರೆ
ಮೂರು ಮಿಲಿಯನ್ ನಾಯಿಗಳನ್ನು ಕೊಲ್ಲುವ ಸಾಧ್ಯತೆಯ ಬಗ್ಗೆ ಅಂತಾರಾಷ್ಟ್ರೀಯ ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣಾ ಒಕ್ಕೂಟವು ಎಚ್ಚರಿಕೆ ನೀಡಿದೆ. ಖ್ಯಾತ ಪ್ರಿಮಾಟಾಲಜಿಸ್ಟ್ ಮತ್ತು ಪ್ರಾಣಿ ಹಕ್ಕುಗಳ ವಕೀಲ ಜೇನ್ ಗೂಡಾಲ್ ಅವರು ಈ ಕ್ರೂರ ವಿಧಾನವನ್ನು ಖಂಡಿಸಿದ್ದು, ಫಿಫಾ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.
ಫುಟ್ಬಾಲ್ ಆಡಳಿತ ಮಂಡಳಿಗೆ ಬರೆದ ಬಹಿರಂಗ ಪತ್ರದಲ್ಲಿ, ಶ್ವಾನ ಹತ್ಯೆ ಮುಂದುವರೆದರೆ ಮೊರಾಕೊ ದೇಶದ ಆತಿಥ್ಯ ಹಕ್ಕುಗಳನ್ನು ಕಸಿದುಕೊಳ್ಳುವಂತೆ ಕರೆ ನೀಡಿದ್ದಾರೆ. ಪ್ರಾಣಿ ಹತ್ಯೆ ನಿಲ್ಲಿಸಲು ಫಿಫಾ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕಾನೂನು ಕಡೆಗಣನೆ
ಬೀದಿ ನಾಯಿಗಳನ್ನು ಕೊಲ್ಲುವುದನ್ನು ನಿಷೇಧಿಸುವ ಕಾನೂನು ಚೌಕಟ್ಟು ದೇಶದಲ್ಲಿದ್ದರೂ, ಅಧಿಕಾರಿಗಳು ಮಾತ್ರ ಕಾನೂನು ಹಸ್ತಕ್ಷೇಪವಿಲ್ಲದೆ ಪ್ರಾಣಿ ಹತ್ಯೆಯನ್ನು ಮುಂದುವರೆಸುತ್ತಾರೆ ಎಂದು ವರದಿಗಳು ಸೂಚಿಸಿವೆ. ಸ್ಥಳೀಯಾಡಳಿತ ಕೂಡ ಹಿಂಸಾಚಾರದ ಬಗ್ಗೆ ಕಣ್ಣುಮುಚ್ಚಿ ಕುಳಿತಿವೆ ಎಂದು ಆರೋಪಿಸಲಾಗಿದೆ.
ಫಿಫಾದಿಂದ ಪರಿಸ್ಥಿತಿಯ ಮೇಲ್ವಿಚಾರಣೆ
ಸದ್ಯ ಈ ಕುರಿತು ಫಿಫಾ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಸಂಸ್ಥೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ನಿರ್ವಹಿಸಲು ಮಾನವೀಯ, ಸುಸ್ಥಿರ ವಿಧಾನಗಳನ್ನು ಅಳವಡಿಸಿಕೊಳ್ಳಲು ಮೊರೊಕೋ ಅಧಿಕಾರಿಗಳಿಗೆ ಒತ್ತಾಯ ಕೇಳಿ ಬರುತ್ತಿವೆ.
