ಕನ್ನಡ ಸುದ್ದಿ  /  Sports  /  Football News Cristiano Ronaldo Al Nassr Team Beaten In Saudi Arabia As Al Ittihad Wins Saudi Pro League Jra

Cristiano Ronaldo: ಸೌದಿಯಲ್ಲಿ ಟ್ರೋಫಿ ಗೆಲ್ಲಲು ರೊನಾಲ್ಡೊ ವಿಫಲ; ಅಲ್ ಇತ್ತಿಹಾದ್ ಚಾಂಪಿಯನ್

Football News: ಸೌದಿ ಅರೇಬಿಯಾದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಆಡಿದ ಮೊದಲ ಸೀಸನ್‌ನಲ್ಲಿ ಟ್ರೋಫಿ ಗೆಲ್ಲಲು ವಿಫಲರಾಗಿದ್ದಾರೆ. ಅಲ್-ಇತ್ತಿಹಾದ್ ತಂಡವು ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ (REUTERS)

ವಿಶ್ವದ ಜನಪ್ರಿಯ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo), ಸೌದಿ ಅರೇಬಿಯಾದ ಕ್ಲಬ್‌ ಸೇರಿಕೊಂಡು ಜಾಗತಿಕ ಮಟ್ಟದಲ್ಲಿ ಸುದ್ದಿಯಾದ್ರು. ಅದರ ಬೆನ್ನಲ್ಲೇ ಅವರು ಪ್ರತಿನಿಧಿಸುವ ಅಲ್ ನಾಸರ್‌ (Al Nassr) ಕ್ಲಬ್‌ ತಂಡವು, ಸೌದಿ ಅರೇಬಿಯಾದ ಫುಟ್ಬಾಲ್‌ ಲೀಗ್‌ನಲ್ಲಿ ಸೋಲೊಪ್ಪಿದೆ. ಹೀಗಾಗಿ ರೊನಾಲ್ಡೊ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಸದ್ಯ ಸೌದಿ ಅರೇಬಿಯಾ ಫುಟ್ಬಾಲ್‌ ಲೀಗ್‌ನ ಮೊದಲ ಸೀಸನ್‌ನಲ್ಲಿ ಟ್ರೋಫಿ ಗೆಲ್ಲಲು ಕ್ರಿಸ್ಟಿಯಾನೊ ರೊನಾಲ್ಡೊ ವಿಫಲರಾಗಿದ್ದಾರೆ. ಅವರು ಪ್ರತಿನಿಧಿಸುವ ಅಲ್ ನಾಸರ್ ತಂಡವು ಶನಿವಾರದ ನಡೆದ ಅಂತಿಮ ಸುತ್ತಿನಲ್ಲಿ ಡ್ರಾ ಸಾಧಿಸಲಷ್ಟೇ ಸಾಧ್ಯವಾಯ್ತು. ಹೀಗಾಗಿ ಅಲ್ ಇತ್ತಿಹಾದ್‌ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಯ್ತು.

ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಪ್ರಮುಖ ಕ್ಲಬ್‌ ಮ್ಯಾಂಚೆಸ್ಟರ್ ಯುನೈಟೆಡ್‌ ಜೊತೆಗಿನ ಒಪ್ಪಂದದಿಂದ ಹೊರಬಂದ ಬಳಿಕ, ರೊನಾಲ್ಡೊ ಕಳೆದ ಜನವರಿ ತಿಂಗಳಲ್ಲಿ ರಿಯಾದ್‌ಗೆ ಬಂದಿಳಿದರು. 16 ತಂಡಗಳ ಸೌದಿ ಅರೇಬಿಯನ್ ಲೀಗ್‌ನಲ್ಲಿ, ರೊನಾಲ್ಡೋ ನಾಯಕತ್ವದ ಅಲ್‌ ನಾಸರ್‌ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇತ್ತಿಫಾಕ್‌ ತಂಡದ ವಿರುದ್ಧ ಅಲ್ ನಾಸರ್‌ ತಂಡವು 1-1ರಿಂದ ಡ್ರಾ ಸಾಧಿಸಿತು. ಅತ್ತ ಅಲ್‌ ಫೈಹಾ ತಂಡದ ವಿರುದ್ಧ ಅಲ್ ಇತ್ತಿಹಾದ್‌ ತಂಡವು 3-0 ಅಂತರದಿಂದ ಜಯ ಸಾಧಿಸಿತು. ಹೀಗಾಗಿ ಐದು ಪಾಯಿಂಟ್‌ಗಳ ಮುನ್ನಡೆಯೊಂದಿಗೆ ತಂಡವು 2009ರಿಂದ ಇದೇ ಮೊದಲ ಬಾರಿಗೆ ಲೀಗ್ ಪ್ರಶಸ್ತಿಯನ್ನು ಗೆದ್ದಿತು.

ಈ ವರ್ಷದ ಜನವರಿ ತಿಂಗಳಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಲು ಆರಂಭಿಸಿದ ಬಳಿಕ, ರೊನಾಲ್ಡೊ ಅವರು ಸೌದಿಯ 16 ಲೀಗ್ ಪಂದ್ಯಗಳಲ್ಲಿ 14 ಗೋಲುಗಳನ್ನು ಗಳಿಸಿದ್ದಾರೆ. ಆದರೆ ಈ ಬಾರಿ ತಂಡವನ್ನು ಗೆಲುವಿನ ದಡ ಸೇರಿಸಲು ಅವರಿಂದಾಗಲಿಲ್ಲ.

ಬ್ರೆಜಿಲ್‌ ಆಟಗಾರ ಫಾರ್ವರ್ಡ್ ರೊಮರಿನ್ಹೋ ಮತ್ತು ಅಹ್ಮದ್ ಶರಾಹಿಲಿ ಅವರ ನಿರ್ನಾಯಕ ಗೋಲುಗಳ ನೆರವಿನಿಂದ ಅಲ್-ಇತ್ತಿಹಾದ್ ಸುಲಭವಾಗಿ ಜಯಗಳಿಸಿದೆ. ನುನೊ ಎಸ್ಪಿರಿಟೊ ಸ್ಯಾಂಟೊ ನೇತೃತ್ವದ ತಂಡವು ಒಟ್ಟಾರೆಯಾಗಿ ತನ್ನ ಒಂಬತ್ತನೇ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಂತಾಗಿದೆ.

"ಈ ಋತುವಿನಲ್ಲಿ ನಮಗೆ ಬೆಂಬಲ ನೀಡಿದ್ದಕ್ಕಾಗಿ ಆಟಗಾರರು ಮತ್ತು ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಗೆಲುವಿಗಾಗಿ ಪ್ರತಿಯೊಬ್ಬರೂ ಆರಂಭದಿಂದಲೂ ತುಂಬಾ ಶ್ರಮಿಸಿದ್ದಾರೆ" ಎಂದು ಸ್ಯಾಂಟೋ ಪಂದ್ಯದ ಬಳಿಕ ಹೇಳಿದ್ದಾರೆ.

ಪೋರ್ಚುಗಲ್‌ ಪರ ಆಡುವ ರೊನಾಲ್ಡೊ, ಸೌದಿ ಅರೇಬಿಯಾದ ಫುಟ್ಬಾಲ್‌ ಕ್ಲಬ್‌ ಅಲ್‌ ನಾಸರ್‌ (Al Nassr) ಪರವೂ ಆಡುತ್ತಿದ್ದಾರೆ. ಅತ್ತ ಅರ್ಜೆಂಟೀನಾದ ಆರಾಧ್ಯ ದೈವವಾದ ಮೆಸ್ಸಿ, ಸೌದಿ ಅರೇಬಿಯಾ ಫುಟ್ಬಾಲ್‌ ಕ್ಲಬ್‌ ಪರ ಒಪ್ಪಂದ ಮಾಡಿರಲಿಲ್ಲ. ಆದರೆ, ಇದೀಗ ಅಭಿಮಾನಿಗಳ ಆಸೆ ಚಿಗುರೊಡೆಯುವ ಕಾಲ ಬಂದಿದೆ. ಸೌದಿ ಅರೇಬಿಯಾದಲ್ಲಿ ಲಿಯೋನೆಲ್ ಮೆಸ್ಸಿ ಆಡುವ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ಧ ಪೈಪೋಟಿ ನಡೆಸುವ ನಿರೀಕ್ಷೆಯು ನಿಜವಾಗುತ್ತಿದೆ. ಎಲ್ ಚಿರಿಂಗುಯಿಟೊ (El Chiringuito) ಮಾಡಿರುವ ವರದಿಯ ಪ್ರಕಾರ, ಸೌದಿ ಅರೇಬಿಯಾದ ಫುಟ್ಬಾಲ್‌ ಕ್ಲಬ್‌ ಅಲ್ ಹಿಲಾಲ್‌(Al-Hilal)ಗೆ ಸೇರುವ ಆಫರ್‌ ಅನ್ನು ಮೆಸ್ಸಿ ಒಪ್ಪಿಕೊಂಡಿದ್ದಾರೆ.