AFC ಏಷ್ಯನ್ ಕಪ್; ಉಜ್ಬೇಕಿಸ್ತಾನ್ ವಿರುದ್ಧ 0-3 ಗೋಲುಗಳಿಂದ ಸೋತ ಭಾರತ; ಟೂರ್ನಿಯಲ್ಲಿ ಸತತ 2ನೇ ಸೋಲು
AFC Asian Cup: ವಿಶ್ವದ 68 ಶ್ರೇಯಾಂಕದ ಉಜ್ಬೇಕಿಸ್ತಾನದ ವಿರುದ್ಧ ಕಠಿಣ ಪೈಪೋಟಿ ಎದುರಿಸಿದ 102ನೇ ಶ್ರೇಯಾಂಕಿತ ಭಾರತ ತಂಡವು, ಕನಿಷ್ಠ ರೋಚಕ ಪೈಪೋಟಿ ನೀಡುವಲ್ಲೂ ವಿಫಲವಾಯ್ತು.
ಎಎಫ್‌ಸಿ ಏಷ್ಯನ್ ಕಪ್‌ನಲ್ಲಿ (2023 AFC Asian Cup) ಭಾರತೀಯ ಫುಟ್‌ಬಾಲ್ ತಂಡವು ಸತತ ಎರಡನೇ ಸೋಲು ಕಂಡಿದೆ. ಜನವರಿ 18ರ ಗುರುವಾರ ಕತಾರ್‌ನ ದೋಹಾದಲ್ಲಿ ನಡೆದ ಗ್ರೂಪ್ ಹಂತದ ಪಂದ್ಯದಲ್ಲಿ ಬಲಿಷ್ಠ ಉಜ್ಬೇಕಿಸ್ತಾನದ ವಿರುದ್ಧ ಭಾರತವು 0-3 ಗೋಲುಗಳ ಅಂತರದಿಂದ ಹೀನಾಯ ಸೋಲು ಕಂಡಿದೆ.
ಇದು ಬಿ ಗುಂಪಿನಲ್ಲಿ ಭಾರತ ತಂಡದ ಸತತ ಎರಡನೇ ಸೋಲು. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 0-2 ಅಂತರದಿಂದ ಸೋಲು ಕಂಡಿದ್ದ ಭಾರತವು, ತನ್ನ ಸೋಲಿನ ಸರಣಿ ಮುಂದುವರೆಸಿದೆ. ಆ ಮೂಲಕ ನಾಕೌಟ್ ಹಂತದ ಕನಸು ಬಹುತೇಕ ಕಮರಿದೆ.
ವಿಶ್ವದ 68 ಶ್ರೇಯಾಂಕದ ತಂಡದ ವಿರುದ್ಧ ಕಠಿಣ ಪೈಪೋಟಿ ಎದುರಿಸಿದ 102ನೇ ಶ್ರೇಯಾಂಕಿತ ಭಾರತ ತಂಡವು, ಕನಿಷ್ಠ ರೋಚಕ ಪೈಪೋಟಿ ನೀಡುವಲ್ಲೂ ವಿಫಲವಾಯ್ತು. ಉಜ್ಬೇಕಿಸ್ತಾನವು ಆಕ್ರಮಣಕಾರಿ ಆಟದ ಮೂಲಕ ಭಾರತದ ರಕ್ಷಣಾತ್ಮಕ ಆಟಕ್ಕೆ ಅಡ್ಡಿಪಡಿಸಿತು.
ಇದನ್ನೂ ಓದಿ | ಏಷ್ಯನ್ ಕಪ್ 2023: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಛೆಟ್ರಿ ಪಡೆ; ಭಾರತ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು
ಉಜ್ಬೇಕಿಸ್ತಾನ್ ತಂಡವು ಆರಂಭದಿಂದಲೂ ಕಠಿಣ ಹೋರಾಟ ನಡೆಸಲಿದೆ ಎಂದು ಭಾರತ ತಂಡದ ಕೋಚ್ ಇಗೊರ್ ಸ್ಟಿಮಾಕ್ ಭವಿಷ್ಯ ನುಡಿದಿದ್ದರು. ಆದರೆ, ಪಂದ್ಯದ ಮೊದಲಾರ್ಧದಲ್ಲಿಯೇ ಮೂರು ಗೋಲು ಗಳಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಬರೋಬ್ಬರಿ 38,491 ಪ್ರೇಕ್ಷಕರಲ್ಲಿ ಬಹುಪಾಲು ಭಾರತೀಯರೇ ತುಂಬಿದ್ದರು. ಸತತ ಎರಡನೇ ಸೋಲಿನೊಂದಿಗೆ ಅಭಿಮಾನಿಗಳು ನಿರಾಶರಾದರು.
ಉಜ್ಬೇಕಿಸ್ತಾನ್ ತಂಡವು ಪಂದ್ಯದ ಐದನೇ ನಿಮಿಷದಲ್ಲಿ ಅಬ್ಬೋಸ್ಬೆಕ್ ಫಯಾಜುಲ್ಲೇವ್ ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಾಧಿಸಿತು. 18ನೇ ನಿಮಿಷದಲ್ಲಿ ಇಗೊರ್ ಸೆರ್ಗೆವ್ ತಂಡಕ್ಕೆ 2-0 ಅಂತರದಿಂದ ಮುನ್ನಡೆ ತಂದುಕೊಟ್ಟರು.
ಆ ಬಳಿಕ ನಸ್ರುಲ್ಲೆವ್ 45ನೇ ನಿಮಿಷದಲ್ಲಿ ಮತ್ತೊಂದು ಅಂಕ ಗಳಿಸಿದರು. ಆ ಮೂಲಕ ಟೂರ್ನಮೆಂಟ್‌ನ ಆರಂಭಿಕ ಪಂದ್ಯದಲ್ಲಿ ಸಿರಿಯಾ ವಿರುದ್ಧ ಸೋತಿದ್ದ ಉಜ್ಬೇಕಿಸ್ತಾನ್, ಪಂದ್ಯಾವಳಿಯಲ್ಲಿ ಮೊದಲ ಗೆಲುವು ದಾಖಲಿಸಿತು.
ಭಾರತ ತನ್ನ ಅಂತಿಮ ಗುಂಪಿನ ಪಂದ್ಯವನ್ನು ಜನವರಿ 23ರಂದು ಸಿರಿಯಾ ವಿರುದ್ಧ ಆಡಲಿದೆ.
AFC ಏಷ್ಯನ್ ಕಪ್ 2023ರ ನಿಯಮಗಳ ಪ್ರಕಾರ, ಎಲ್ಲಾ ಆರು ಗುಂಪುಗಳ ಅಗ್ರ ಎರಡು ತಂಡಗಳು ನೇರವಾಗಿ ಸ್ಪರ್ಧೆಯ 16ರ ಸುತ್ತಿಗೆ ಅರ್ಹತೆ ಪಡೆಯುತ್ತವೆ. ಈ 12 ತಂಡಗಳ ಜೊತೆಗೆ, ಎಲ್ಲಾ ಆರು ಗುಂಪುಗಳಲ್ಲಿ ಮೂರನೇ ಸ್ಥಾನ ಪಡೆದ ಅಗ್ರ ನಾಲ್ಕು ತಂಡಗಳು 16ರ ಅಂತಿಮ ಸುತ್ತಿನಲ್ಲಿ ಅಂತಿಮ ನಾಲ್ಕು ಸ್ಥಾನಗಳನ್ನು ಪಡೆಯಲಿವೆ.
ಭಾರತ ತಂಡ: ಗುರುಪ್ರೀತ್ ಸಿಂಗ್ ಸಂಧು, ನಿಖಿಲ್ ಪೂಜಾರಿ, ಸಂದೇಶ್ ಜಿಂಗನ್, ರಾಹುಲ್ ಭೇಕೆ, ಆಕಾಶ್ ಮಿಶ್ರಾ, ಲಾಲೆಂಗ್ಮಾವಿಯಾ ಅಪುಯಾ, ಸುರೇಶ್ ಸಿಂಗ್ ವಾಂಗ್ಜಮ್, ಮನ್ವಿರ್ ಸಿಂಗ್, ಅನಿರುದ್ಧ್ ಥಾಪಾ, ಮಹೇಶ್ ಸಿಂಗ್ ನವೋರೆಮ್, ಸುನಿಲ್ ಛೆಟ್ರಿ.