ಒಂದೇ ಒಂದು ಗೋಲು ಗಳಿಸದೆ ಸತತ ಮೂರು ಸೋಲು; ಎಎಫ್‌ಸಿ ಏಷ್ಯನ್ ಕಪ್‌ನಿಂದ ಹೊರಬಿದ್ದ ಭಾರತ ಫುಟ್ಬಾಲ್‌ ತಂಡ
ಕನ್ನಡ ಸುದ್ದಿ  /  ಕ್ರೀಡೆ  /  ಒಂದೇ ಒಂದು ಗೋಲು ಗಳಿಸದೆ ಸತತ ಮೂರು ಸೋಲು; ಎಎಫ್‌ಸಿ ಏಷ್ಯನ್ ಕಪ್‌ನಿಂದ ಹೊರಬಿದ್ದ ಭಾರತ ಫುಟ್ಬಾಲ್‌ ತಂಡ

ಒಂದೇ ಒಂದು ಗೋಲು ಗಳಿಸದೆ ಸತತ ಮೂರು ಸೋಲು; ಎಎಫ್‌ಸಿ ಏಷ್ಯನ್ ಕಪ್‌ನಿಂದ ಹೊರಬಿದ್ದ ಭಾರತ ಫುಟ್ಬಾಲ್‌ ತಂಡ

Asian Cup 2024: ಎಎಫ್‌ಸಿ ಏಷ್ಯನ್‌ ಕಪ್ ಟೂರ್ನಿಯುದ್ದಕ್ಕೂ ಭಾರತ ಆಡಿದ ಮೂರೂ ಪಂದ್ಯಗಳಲ್ಲಿ ಕನಿಷ್ಠ ಒಂದು ಗೋಲು ಗಳಿಸುವುದು ಕೂಡಾ ಸಾಧ್ಯವಾಗಲಿಲ್ಲ. ಭಾರತವು, ಆಸ್ಟ್ರೇಲಿಯಾ, ಉಜ್ಬೇಕಿಸ್ತಾನ ಹಾಗೂ ಇದೀಗ ಸಿರಿಯಾ ವಿರುದ್ಧವೂ ಗೋಲಿನ ಖಾತೆ ತೆರೆಯಲಿಲ್ಲ. ಒಂದೇ ಒಂದು ಗೋಲು ಹಾಗೂ ಅಂಕಗಳಿಲ್ಲದೆ ಟೂರ್ನಿಯಿಂದ ತಂಡ ನಿರ್ಗಮಿಸಿದೆ.

ಸಿರಿಯಾ ವಿರುದ್ಧ ಭಾರತ ಫುಟ್ಬಾಲ್‌ ತಂಡಕ್ಕೆ ಸೋಲು
ಸಿರಿಯಾ ವಿರುದ್ಧ ಭಾರತ ಫುಟ್ಬಾಲ್‌ ತಂಡಕ್ಕೆ ಸೋಲು (AFP)

ಸಿರಿಯಾ ವಿರುದ್ಧ 0-1 ಗೋಲುಗಳ ಅಂತರದಿಂದ ಸೋತ ಭಾರತ ಫುಟ್ಬಾಲ್‌ ತಂಡವು, ಎಎಫ್‌ಸಿ ಏಷ್ಯನ್‌ ಕಪ್‌ (2024 Asian Cup) ಟೂರ್ನಿಯಿಂದ ಹೊರಬಿದ್ದಿದೆ. ಏಷ್ಯನ್ ಕಪ್‌ನಲ್ಲಿ ನಾಕೌಟ್ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಭಾರತದ ಕಾಯುವಿಕೆಯು ಚಾತಕ ಪಕ್ಷಿಯಂತೆ ಮತ್ತೆ ಮುಂದುವರೆದಿದೆ.

ಕತಾರ್‌ನ ಅಲ್ ಖೋರ್‌ನಲ್ಲಿ ಜನವರಿ 23ರ ಮಂಗಳವಾರ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿಯೂ ಭಾರತ ಸೋಲೊಪ್ಪಿತು. ಸಿರಿಯಾ ಆಟಗಾರ ಒಮರ್ ಕ್ರಿಬಿನ್ ಪಂದ್ಯದ 76ನೇ ನಿಮಿಷದಲ್ಲಿ ಏಕೈಕ ಅತ್ಯಮೂಲ್ಯ ಗೋಲು ಬಾರಿಸಿ ಸಿರಿಯಾ ತಂಡವನ್ನು 16ನೇ ಸುತ್ತಿಗೆ ಪ್ರವೇಶಿಸುವಂತೆ ಮಾಡಿದರು. ಅತ್ತ ಸುನಿಲ್‌ ಛೆಟ್ರಿ ನೇತೃತ್ವದ ಭಾರತ ತಂಡವು ಗುಂಪು ಹಂತದ ತನ್ನ ಎಲ್ಲಾ ಮೂರು ಪಂದ್ಯಗಳಲ್ಲಿ ಸೋತು ಯಾವುದೇ ಗೋಲು ಗಳಿಸದೆ ನಾಲ್ಕು ತಂಡಗಳ ಬಿ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ | AFC ಏಷ್ಯನ್ ಕಪ್‌; ಉಜ್ಬೇಕಿಸ್ತಾನ್ ವಿರುದ್ಧ 0-3 ಗೋಲುಗಳಿಂದ ಸೋತ ಭಾರತ; ಟೂರ್ನಿಯಲ್ಲಿ ಸತತ 2ನೇ ಸೋಲು

ಟೂರ್ನಿಯುದ್ದಕ್ಕೂ ಭಾರತ ಆಡಿದ ಮೂರೂ ಪಂದ್ಯಗಳಲ್ಲಿ ಕನಿಷ್ಠ ಒಂದು ಗೋಲು ಗಳಿಸುವುದು ಕೂಡಾ ಸಾಧ್ಯವಾಗಲಿಲ್ಲ. ತಂಡಗಳ ಶ್ರೇಯಾಂಕದ ದೃಷ್ಟಿಯಿಂದ ಕಠಿಣ ಗುಂಪಿನಲ್ಲಿ ಸ್ಥಾನ ಪಡೆದ ಭಾರತವು, ಆಸ್ಟ್ರೇಲಿಯಾ, ಉಜ್ಬೇಕಿಸ್ತಾನ ಹಾಗೂ ಇದೀಗ ಸಿರಿಯಾ ವಿರುದ್ಧವೂ ಗೋಲಿನ ಖಾತೆ ತೆರೆಯಲಿಲ್ಲ. ಒಂದೇ ಒಂದು ಗೋಲು ಹಾಗೂ ಅಂಕಗಳಿಲ್ಲದೆ ಟೂರ್ನಿಯಿಂದ ತಂಡ ನಿರ್ಗಮಿಸಿದೆ.

ಇದು ಬಿ ಗುಂಪಿನಲ್ಲಿ ಭಾರತ ತಂಡದ ಸತತ ಮೂರನೇ ಸೋಲು. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 0-2 ಅಂತರದಿಂದ ಸೋಲು ಕಂಡಿದ್ದ ಭಾರತವು, ದೋಹಾದಲ್ಲಿ ನಡೆದ ಗ್ರೂಪ್‌ ಹಂತದ ಎರಡನೇ ಪಂದ್ಯದಲ್ಲಿ ಬಲಿಷ್ಠ ಉಜ್ಬೇಕಿಸ್ತಾನದ ವಿರುದ್ಧ 0-3 ಗೋಲುಗಳ ಅಂತರದಿಂದ ಹೀನಾಯ ಸೋಲು ಕಂಡಿತ್ತು.

ಛೆಟ್ರಿಗೆ ಕೊನೆಯ ಏಷ್ಯನ್ ಕಪ್ ಪಂದ್ಯ

ಮಂಗಳವಾರದ ಪಂದ್ಯವು ಸುನಿಲ್ ಛೆಟ್ರಿ ಅವರಿಗೆ ಬಹುತೇಕ ಕೊನೆಯ ಏಷ್ಯನ್ ಕಪ್ ಪಂದ್ಯವಾಗಲಿದೆ. ಅವರು ಹಿಂದೆ 2011 ಮತ್ತು 2019ರ ಎರಡು ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದರು. 39 ವರ್ಷದ ಛೆಟ್ರಿ ತಮ್ಮ ಅಮೋಘ ವೃತ್ತಿಜೀವನದಲ್ಲಿ 2011 ಮತ್ತು 2019ರಲ್ಲಿ ತಲಾ ಎರಡು ಗೋಲುಗಳನ್ನು ಗಳಿಸಿದ್ದಾರೆ. ಒಟ್ಟು ಒಂಬತ್ತು ಪಂದ್ಯಗಳಲ್ಲಿ ಆಡುವ ಮೂಲಕ ಭಾರತದಿಂದ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿದ್ದಾರೆ.

ಟೂರ್ನಿಯ 1984, 2011 ಮತ್ತು 2019ರ ಆವೃತ್ತಿಗಳಲ್ಲಿ ಭಾರತವು ನಾಕೌಟ್ ಸುತ್ತಿಗೆ ಪ್ರವೇಶಿಸಲು ವಿಫಲವಾಗಿತ್ತು. 1964 ರಲ್ಲಿ ರೌಂಡ್-ರಾಬಿನ್ ಲೀಗ್ ನಂತರ ಭಾಗವಹಿಸಿದ ನಾಲ್ಕು ತಂಡಗಳಲ್ಲಿ ವಿಜೇತರನ್ನು ನಿರ್ಧರಿಸಲಾಯ್ತು. ಆಗ ಭಾರತವು ರನ್ನರ್-ಅಪ್ ಸ್ಥಾನ ಪಡೆದಿತ್ತು.

ಇದನ್ನೂ ಓದಿ | ಏಷ್ಯನ್ ಕಪ್ 2023: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಛೆಟ್ರಿ ಪಡೆ; ಭಾರತ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು

ಏಷ್ಯನ್ ಕಪ್ 2023ರ ನಿಯಮಗಳ ಪ್ರಕಾರ, ಎಲ್ಲಾ ಆರು ಗುಂಪುಗಳ ಅಗ್ರ ಎರಡು ತಂಡಗಳು ನೇರವಾಗಿ ಸ್ಪರ್ಧೆಯ 16ರ ಸುತ್ತಿಗೆ ಅರ್ಹತೆ ಪಡೆಯುತ್ತವೆ. ಈ 12 ತಂಡಗಳ ಜೊತೆಗೆ, ಎಲ್ಲಾ ಆರು ಗುಂಪುಗಳಲ್ಲಿ ಮೂರನೇ ಸ್ಥಾನ ಪಡೆದ ಅಗ್ರ ನಾಲ್ಕು ತಂಡಗಳು 16ರ ಅಂತಿಮ ಸುತ್ತಿನಲ್ಲಿ ಅಂತಿಮ ನಾಲ್ಕು ಸ್ಥಾನಗಳನ್ನು ಪಡೆಯಲಿವೆ.

ಭಾರತ ತಂಡ: ಗುರುಪ್ರೀತ್ ಸಿಂಗ್ ಸಂಧು, ನಿಖಿಲ್ ಪೂಜಾರಿ, ಸಂದೇಶ್ ಜಿಂಗನ್, ರಾಹುಲ್ ಭೇಕೆ, ಆಕಾಶ್ ಮಿಶ್ರಾ, ಲಾಲೆಂಗ್ಮಾವಿಯಾ ಅಪುಯಾ, ಸುರೇಶ್ ಸಿಂಗ್ ವಾಂಗ್ಜಮ್, ಮನ್ವಿರ್ ಸಿಂಗ್, ಅನಿರುದ್ಧ್ ಥಾಪಾ, ಮಹೇಶ್ ಸಿಂಗ್ ನವೋರೆಮ್, ಸುನಿಲ್ ಛೆಟ್ರಿ. (This copy first appeared in Hindustan Times Kannada website. To read more like this please logon to kannada.hindustantime.com )

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.