ದಾಖಲೆಯ ಎಂಟನೇ ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಲಿಯೋನೆಲ್ ಮೆಸ್ಸಿ
Ballon d’Or 2023: ಲಿಯೋನೆಲ್ ಮೆಸ್ಸಿ ಎಂಟನೇ ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ದಿಗ್ಗಜ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ದಾಖಲೆಯನ್ನು ಮುರಿದಿದ್ದಾರೆ.
ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ (Lionel Messi), ದಾಖಲೆಯ ಎಂಟನೇ ಬ್ಯಾಲನ್ ಡಿ'ಓರ್ (Ballon d’Or) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ 36 ವರ್ಷ ವಯಸ್ಸಿನ ಆಟಗಾರ, ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಮಾತ್ರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಇಂಟರ್ ಮಿಯಾಮಿ ಫುಟ್ಬಾಲ್ ಕ್ಲಬ್‌ನ ಸ್ಟಾರ್ ಆಟಗಾರ, ಪುರುಷರ 30 ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದಾರೆ. ಆ ಮೂಲಕ ಮ್ಯಾಂಚೆಸ್ಟರ್ ಸಿಟಿ ಸ್ಟಾರ್ ಎರ್ಲಿಂಗ್ ಹಾಲೆಂಡ್ ಅವರು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಫ್ರಾನ್ಸ್ ತಂಡದ ಬಲಿಷ್ಠ ಆಟಗಾರ ಕೈಲಿಯನ್ ಎಂಬಪ್ಪೆ ಮೂರನೇ ಸ್ಥಾನ ಪಡೆದಿದ್ದಾರೆ. ಅಕ್ಟೋಬರ್ 30ರ ಸೋಮವಾರ ಪ್ಯಾರಿಸ್‌ನ ಥಿಯೇಟರ್ ಡು ಚಾಟೆಲೆಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗಿದೆ.
ಮೆಸ್ಸಿ ನೇತೃತ್ವದಲ್ಲಿ ಕಳೆದ ವರ್ಷ ಕತಾರ್‌ನಲ್ಲಿ ನಡೆದ 2022ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಅರ್ಜೆಂಟೀನಾ ತಂಡವು ಐತಿಹಾಸಿಕ ವಿಶ್ವವಕಪ್ ಗೆದ್ದು ಸಂಭ್ರಮಿಸಿತ್ತು. ಈ ಹಿಂದೆ ಮೆಸ್ಸಿ 2009, 2010, 2011, 2012, 2015, 2019, 2021ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದೆ. ಇದೀಗ 2023ರಲ್ಲಿಯೂ ಮತ್ತೆ ಬ್ಯಾಲನ್ ಡಿ'ಓರ್ ಕಿರೀಟಕ್ಕೆ ಅವರು ಭಾಜನರಾಗಿದ್ದಾರೆ. 2009ರಲ್ಲಿ ತಮ್ಮ ಮೊದಲ ಬ್ಯಾಲನ್ ಡಿ'ಓರ್ ಪ್ರಶಸ್ತಿ ತಮ್ಮದಾಗಿಸಿದ್ದ ಮೆಸ್ಸಿ, ಒಟ್ಟು ಎಂಟು ಟ್ರೋಫಿಯೊಂದಿಗೆ ತಮ್ಮ ಹಳೆಯ ಪ್ರತಿಸ್ಪರ್ಧಿ ಕ್ರಿಸ್ಟಿಯಾನೋ ರೊನಾಲ್ಡೊಗಿಂತ ಬರೋಬ್ಬರಿ ಮೂರು ಹೆಚ್ಚುವರಿ ಪ್ರಶಸ್ತಿ ಹೊಂದಿದ್ದಾರೆ.
ತಮ್ಮ ಪ್ರಶಸ್ತಿಯನ್ನು ಮೆಸ್ಸಿ ಅರ್ಜೆಂಟೀನಾದ ದಿಗ್ಗಜ ಫುಟ್ಬಾಲ್ ಆಟಗಾರ ದಿವಂಗತ ಡಿಯಾಗೋ ಮರಡೋನಾ ಅವರಿಗೆ ಅರ್ಪಿಸಿದ್ದಾರೆ.
ಐತಾನಾ ಬೊನ್ಮತಿ ಅವರಿಗೆ ಮಹಿಳಾ ಬ್ಯಾಲನ್ ಡಿ'ಓರ್ ಪ್ರಶಸ್ತಿ
ಅತ್ತ ಕಳೆದ ಆಗಸ್ಟ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಫಿಫಾ ಮಹಿಳಾ ವಿಶ್ವಕಪ್‌ನಲ್ಲಿ ಸ್ಪೇನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಐತಾನಾ ಬೊನ್ಮತಿ ಮಹಿಳಾ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 25 ವರ್ಷ ವಯಸ್ಸಿನ ಮಿಡ್‌ಫೀಲ್ಡರ್ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು.
2023ರ ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
- ಪುರುಷರ ಬ್ಯಾಲನ್ ಡಿ'ಓರ್ - ಲಿಯೋನೆಲ್ ಮೆಸ್ಸಿ
- ಮಹಿಳಾ ಬ್ಯಾಲನ್ ಡಿ'ಓರ್ - ಐತಾನಾ ಬೊನ್ಮತಿ
- ಗೆರ್ಡ್ ಮುಲ್ಲರ್ ಟ್ರೋಫಿ - ಎರ್ಲಿಂಗ್ ಹಾಲೆಂಡ್
- ಯಾಚಿನ್ ಟ್ರೋಫಿ - ಎಮಿಲಿಯಾನೋ ಮಾರ್ಟಿನೆಜ್ (ಅತ್ಯುತ್ತಮ ಪುರುಷ ಗೋಲ್‌ಕೀಪರ್)
- ಸಾಕ್ರಟೀಸ್ ಪ್ರಶಸ್ತಿ - ವಿನಿಸಿಯಸ್ ಜೂನಿಯರ್
- ಕೋಪ ಟ್ರೋಫಿ (Kopa Trophy) - ಜೂಡ್ ಬೆಲ್ಲಿಂಗ್‌ಹ್ಯಾಮ್ (ಅತ್ಯುತ್ತಮ ಪುರುಷರ U-21 ಆಟಗಾರ)
- ವರ್ಷದ ಪುರುಷರ ಕ್ಲಬ್ - ಮ್ಯಾಂಚೆಸ್ಟರ್ ಸಿಟಿ
- ವರ್ಷದ ಮಹಿಳಾ ಕ್ಲಬ್ - ಎಫ್‌ಸಿ ಬಾರ್ಸಿಲೋನಾ
ಸಂಬಂಧಿತ ಲೇಖನ