ಕೊಲಂಬಿಯಾ ಮಣಿಸಿ 16ನೇ ಕೋಪಾ ಅಮೆರಿಕ ಪ್ರಶಸ್ತಿ ಮುಡಿಗೇರಿಸಿದ ಅರ್ಜೆಂಟೀನಾ; ಮೆಸ್ಸಿ ಬಳಗಕ್ಕೆ ಸತತ ಪ್ರಶಸ್ತಿ
ಲಿಯೋನೆಲ್ ಮೆಸ್ಸಿ ಗಾಯದ ಹೊರತಾಗಿಯೂ ಅರ್ಜೆಂಟೀನಾ ಫುಟ್ಬಾಲ್ ತಂಡ ಕೋಪಾ ಅಮೆರಿಕ ಟ್ರೋಫಿ ಗೆದ್ದಿದೆ. ಫೈನಲ್ ಪಂದ್ಯದಲ್ಲಿ ಲೌಟಾರೊ ಮಾರ್ಟಿನೆಜ್ ಗಳಿಸಿದ ಗೋಲಿನ ನೆರವಿಂದ ಕೊಲಂಬಿಯಾ ವಿರುದ್ಧ ಅರ್ಜೆಂಟೀನಾ ಗೆದ್ದು ಬೀಗಿದೆ.

ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಫುಟ್ಬಾಲ್ ತಂಡ ಮತ್ತೊಂದು ಪ್ರತಿಷ್ಠಿತ ಟ್ರೋಫಿ ಗೆದ್ದು ಬೀಗಿದೆ. 2024ರ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿ ಗೆದ್ದ ಮೆಸ್ಸಿ ಬಳಗ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಮಿಯಾಮಿಯ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೊಲಂಬಿಯಾವನ್ನು ಕೇವಲ 1-0 ಗೋಲುಗಳ ಅಂತರದಿಂದ ರೋಚಕವಾಗಿ ಮಣಿಸಿದ ಅರ್ಜೆಂಟೀನಾ, ದಾಖಲೆಯ 16ನೇ ಪ್ರಶಸ್ತಿ ಗೆದ್ದುಗೊಂಡಿದೆ. ಆ ಮೂಲಕ ಉರುಗ್ವೆಯನ್ನು ಹಿಂದಿಕ್ಕಿ, ದಕ್ಷಿಣ ಅಮೆರಿಕದ ಪ್ರಮುಖ ಅಂತಾರಾಷ್ಟ್ರೀಯ ಸ್ಪರ್ಧೆಯನ್ನು ಹೆಚ್ಚು ಬಾರಿ ಗೆದ್ದ ಅತ್ಯಂತ ಯಶಸ್ವಿ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅರ್ಜೆಂಟೀನಾ ಪಾಲಿಗೆ ಇದು ಸತತ ಎರಡನೇ ಕೋಪಾ ಅಮೆರಿಕ ಪ್ರಶಸ್ತಿಯಾಗಿದೆ. ಅಲ್ಲದೆ 2022ರಲ್ಲಿ ನಡೆದ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿರುವ ತಂಡದ ಯಶಸ್ವಿ ಪಯಣ ಮುಂದುವರೆದಿದೆ. ಫೈನಲ್ ಪಂದ್ಯವು ರೋಚಕವಾಗಿ ನಡೆಯಿತು. ಮೈದಾನದ ಹೊರಗಡೆ ಅಭಿಮಾನಿಗಳ ಟಿಕೆಟ್ ಗೊಂದಲದ ನಡುವೆ ಪಂದ್ಯ ಆರಂಭವಾಗಿದ್ದು ಒಂದೆಡೆಯಾದರೆ, ಮೈದಾನದೊಳಗೆ ಅರ್ಜೆಂಟೀನಾ ನಾಯಕ ಮೆಸ್ಸಿ ಗಾಯಕ್ಕೊಳಗಾಗಿ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದರು. ಕೊನೆಗೂ, ಲೌಟಾರೊ ಮಾರ್ಟಿನೆಜ್ ಗಳಿಸಿದ ಆ ಒಂದು ಗೋಲು ವಿಶ್ವ ಚಾಂಪಿಯನ್ನರ ಟ್ರೋಫಿ ಗೆಲುವಿಗೆ ಕಾರಣವಾಯ್ತು. ಪಂದ್ಯದ 111ನೇ ನಿಮಿಷದಲ್ಲಿ ಮಾರ್ಟಿನೆಜ್ ಗೋಲು ಗಳಿಸಿದರು.
ದಿಗ್ಗಜ ನಾಯಕ ಲಿಯೋನೆಲ್ ಮೆಸ್ಸಿ ಪಾಲಿಗೆ ಇದು ಬಹುತೇಕ ಕೊನೆಯ ಕೋಪಾ ಅಮೆರಿಕ ಕಪ್. ಇತ್ತೀಚಿನ ವರ್ಷಗಳಲ್ಲಿ ಮೂರು ಪ್ರಮುಖ ಟ್ರೋಫಿಗಳನ್ನು ಎತ್ತುವ ಮೂಲಕ ಅವರು ತಮ್ಮ ವೃತ್ತಿ ಬದುಕನ್ನು ಇನ್ನಷ್ಟು ಶ್ರೀಮಂತವಾಗಿಸಿದ್ದಾರೆ. ಎಂಟು ಬಾರಿ ಬ್ಯಾಲನ್ ಡಿ'ಓರ್ ಗೆದ್ದಿರುವ ಮೆಸ್ಸಿ, ಮುಂದಿನ ವಿಶ್ವಕಪ್ ವೇಳೆಗೆ 40 ವರ್ಷ ತಲುಪಲಿದ್ದಾರೆ. ಇದೇ ವೇಳೆ ಮತ್ತೋರ್ವ ದಿಗ್ಗಜ ಆಟಗಾರ ಏಂಜೆಲ್ ಡಿ ಮಾರಿಯಾ ಅವರ ಪಾಲಿಗೆ ಈದು ಕೊನೆಯ ಪಂದ್ಯವಾಗಿದೆ.
ಫೈನಲ್ ಪಂದ್ಯದ ದ್ವಿತೀಯಾರ್ಧದಲ್ಲಿ ಮೆಸ್ಸಿ ಕಾಲಿನ ಗಾಯಕ್ಕೆ ಒಳಗಾದರು. ಹೀಗಾಗಿ ಮೆಸ್ಸಿ ಮೈದಾನದಿಂದ ಹೊರಗುಳಿಯಬೇಕಾಯ್ತು. ಆ ವೇಳೆಗೆ ಪಂದ್ಯದಲ್ಲಿ ಉಭಯ ತಂಡಗಳು ಖಾತೆ ತೆರೆದಿರಲಿಲ್ಲ. ಹೀಗಾಗಿ ಅರ್ಧ ಗಂಟೆಯ ಹೆಚ್ಚುವರಿ ಸಮಯ ನೀಡಲಾಯ್ತು. ಜಿಯೋವಾನಿ ಲೋ ಸೆಲ್ಸೊ ಅವರಿಂದ ಚೆಂಡನ್ನು ಪಡೆದ ಮಾರ್ಟಿನೆಜ್, ಕೊಲಂಬಿಯಾ ಗೋಲ್ ಕೀಪರ್ ಕ್ಯಾಮಿಲೊ ವರ್ಗಾಸ್ ವಿರುದ್ಧ ರೈಟ್ ಓವರ್‌ನಲ್ಲಿ ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.
ಮೈದಾನದ ಹೊರಗೆ ಪ್ರೇಕ್ಷಕರ ತೊಂದರೆಯಿಂದಾಗಿ ಪಂದ್ಯದ ಆರಂಭವು ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು. ಟಿಕೆಟ್ ಇಲ್ಲದ ಅಭಿಮಾನಿಗಳು ಗೇಟ್‌ಗಳ ಬಳಿ ಜಮಾಯಿಸಿದ್ದರು. ಹೀಗಾಗಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆಡಲಾಗದೆ ಅಳುತ್ತಾ ಕುಳಿತ ಮೆಸ್ಸಿ
ಪಂದ್ಯದ 36ನೇ ನಿಮಿಷದಲ್ಲಿ ಸ್ಯಾಂಟಿಯಾಗೊ ಅರಿಯಾಸ್‌ಗೆ ಡಿಕ್ಕಿ ಹೊಡೆದ ಬಳಿಕ ಮೆಸ್ಸಿ ಅವರ ಪಾದಕ್ಕೆ ಗಾಯವಾಗಿಯ್ತು. ಆದರೆ ಚಿಕಿತ್ಸೆ ಪಡೆದು ಅವರು ಮತ್ತೆ ಮೈದಾನಕ್ಕೆ ಮರಳಿದರು. ಆ ಬಳಿಕ 64ನೇ ನಿಮಿಷದಲ್ಲಿ ಮತ್ತೆ ಅವರ ಪಾದ ತಿರುಚಿಕೊಂಡಂತಾಯ್ತು. ಆಗ ನೋವಿನಿಂದ ಚೇತರಿಸಿಕೊಳ್ಳಲು ಮೆಸ್ಸಿಗೆ ಸಾಧ್ಯವಾಗಲಿಲ್ಲ. ಅರ್ಜೆಂಟೀನಾ ನಾಯಕನ ಪಾದ ಊದಿಕೊಂಡಿರುವುದು ಕ್ಯಾಮೆರಾದಲ್ಲಿ ಸೆರೆಯಾಯ್ತು. ಪಂದ್ಯವು ಹೆಚ್ಚುವರಿ ಸಮಯಕ್ಕೆ ಹೋಗುತ್ತಿದ್ದಂತೆ ಮೆಸ್ಸಿ ಗಳಗಳನೆ ಅತ್ತರು.
ಇನ್ನಷ್ಟು ಫುಟ್ಬಾಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | 24 ಗ್ರ್ಯಾಂಡ್ ಸ್ಲಾಮ್ ಒಡೆಯ ನೊವಾಕ್ ಜೊಕೊವಿಕ್ ಮಣಿಸಿದ 21 ವರ್ಷದ ಅಲ್ಕರಾಜ್; ಫೆಡರರ್ ಕ್ಲಬ್ ಸೇರಿದ ಸ್ಪೇನ್ ಆಟಗಾರ
