ಮೆಸ್ಸಿಯ ಬಾರ್ಸಿಲೋನಾ ವೃತ್ತಿಜೀವನಕ್ಕೆ ಮುನ್ನುಡಿ ಬರೆದ ನ್ಯಾಪ್ಕಿನ್ ಹರಾಜು; ಮೂಲ ಬೆಲೆ 3 ಕೋಟಿ ರೂಪಾಯಿ!
Lionel Messi: ಲಿಯೋನೆಲ್ ಮೆಸ್ಸಿ ಅವರ ಬಾರ್ಸಿಲೋನಾ ವೃತ್ತಿಜೀವನಕ್ಕೆ ಮುನ್ನುಡಿ ಬರೆದ ನ್ಯಾಪ್ಕಿನ್ ಈಗ ದಾಖಲೆಯ ಮೊತ್ತಕ್ಕೆ ಹರಾಜಿಗೆ ಸಿದ್ಧವಾಗಿದೆ.
ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದೇ ಪರಿಗಣಿಸಲ್ಪಟ್ಟಿರುವ ಲಿಯೋನೆಲ್ ಮೆಸ್ಸಿ (Lionel Messi), ಎಫ್‌ಸಿ ಬಾರ್ಸಿಲೋನಾ (Barcelona) ಫುಟ್ಬಾಲ್ ಕ್ಲಬ್‌ನ ಅತ್ಯಂತ ಯಶಸ್ವಿ ಆಟಗಾರ. ಅರ್ಜೆಂಟೀನಾ ತಂಡವನ್ನು ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸಿದ ಸ್ಟಾರ್ ಆಟಗಾರನು, ಕ್ಲಬ್ ಪರ ಗೆದ್ದ ಟ್ರೋಫಿಗಳ ಸಂಖ್ಯೆ ಬರೋಬ್ಬರಿ 34. ಬಾರ್ಸಿಲೋನಾ ಕ್ಲಬ್ ಜೊತೆಗಿದ್ದ ಸಮಯದಲ್ಲಿ, ಮೆಸ್ಸಿ ಹತ್ತು ಲಾ ಲಿಗಾ ಪ್ರಶಸ್ತಿಗಳು, ಏಳು ಕೋಪಾ ಡೆಲ್ ರೇಸ್ ಮತ್ತು ನಾಲ್ಕು ಚಾಂಪಿಯನ್ಸ್ ಲೀಗ್ ಟ್ರೋಫಿಗಳನ್ನು ಗೆದ್ದಿರುವುದು ಇತಿಹಾಸ.
2022ರಲ್ಲಿ ತಮ್ಮ ದೇಶವನ್ನು ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸಿದ್ದು ಮೆಸ್ಸಿಯ ಐತಿಹಾಸಿಕ ಸಾಧನೆ. ಈ ನಡುವೆ ಫುಟ್ಬಾಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೆಸ್ಸಿಯ ಹಲವಾರು ವಸ್ತುಗಳು ದಾಖಲೆಯ ಸಂಖ್ಯೆಗೆ ಹರಾಜಾಗುತ್ತಿವೆ. ಇದಕ್ಕೆ ಈಗ ಹೊಸ ವಸ್ತುವೊಂದು ಸೇರ್ಪಡೆಗೊಂಡಿದೆ.
ಇದನ್ನೂ ಓದಿ | ರೋಜರ್ ಫೆಡರರ್ ಮತ್ತು ನಾನು ವಿಂಬಲ್ಡನ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದೆವು; ಟೆನಿಸ್ ದಿಗ್ಗಜನ ಕ್ರೀಡಾಪ್ರೇಮ ವಿವರಿಸಿದ ಬೋಪಣ್ಣ
2000ನೇ ಇಸವಿಯ ಸೆಪ್ಟೆಂಬರ್ ತಿಂಗಳಲ್ಲಿ ಬಾರ್ಸಿಲೋನಾ ತಂಡದ ಮೊದಲ ನಿರ್ದೇಶಕ ಕಾರ್ಲಸ್ ರೆಕ್ಸಾಚ್ ಅವರು ಮೆಸ್ಸಿಯನ್ನು ತಂಡ ಸೇರಿಸಿಕೊಳ್ಳಲು ಬಯಸಿದ್ದರು. ಆದರೆ ನಿರ್ದೇಶಕರ ಮಂಡಳಿಯಿಂದ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ. ಹೀಗಾಗಿ ಮೆಸ್ಸಿಯ ತಂದೆಯೊಂದಿಗೆ ತಮ್ಮ ಬದ್ಧತೆಯನ್ನು ತೋರಿಸಲು ರೆಕ್ಸಾಚ್ ನಿರ್ಧರಿಸಿದರು. ಹೀಗಾಗಿ ತಕ್ಷಣವೇ ಒಪ್ಪಂದ ಮಾಡಿಕೊಳ್ಳಲು ಮುಂದಾದರು. ಕೈಯಲ್ಲಿ ಯಾವುದೇ ಕಾಗದವಿಲ್ಲದ ಕಾರಣದಿಂದ, ಸಿಕ್ಕಿದ ನ್ಯಾಪ್ಕಿನ್ ಮೇಲೆ ಒಪ್ಪಂದ ಪತ್ರವನ್ನು ಬರೆದು ಮೆಸ್ಸಿ ತಂದೆಗೆ ನೀಡಿದರು.
ಇದನ್ನೂ ಓದಿ | PKL 10: ಜೈಪುರ ಬಳಿಕ ಪಾಟ್ನಾ ವಿರುದ್ಧದ ಪಂದ್ಯವೂ ಟೈನಲ್ಲಿ ಅಂತ್ಯ; ಬೆಂಗಳೂರು ಬುಲ್ಸ್ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣ
ಒಪ್ಪಂದದ ನ್ಯಾಪ್ಕಿನ್‌ನಲ್ಲಿ ಏನಿತ್ತು?
“ಬಾರ್ಸಿಲೋನಾದಲ್ಲಿ 2000ದ ಡಿಸೆಂಬರ್ 14ರಂದು, ಮೆಸರ್ಸ್ ಮಿಂಗುಯೆಲ್ಲಾ ಮತ್ತು ಹೊರಾಸಿಯೊ ಅವರ ಉಪಸ್ಥಿತಿಯಲ್ಲಿ, ಎಫ್ಸಿ ಬಾರ್ಸಿಲೋನಾದ ಕ್ರೀಡಾ ನಿರ್ದೇಶಕ ಕಾರ್ಲಸ್ ರೆಕ್ಸಾಚ್, ತಮ್ಮ ಜವಾಬ್ದಾರಿಯಡಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ ಆಟಗಾರ ಲಿಯೋನೆಲ್ ಮೆಸ್ಸಿ ಅವರನ್ನು ತಂಡಕ್ಕೆ ಸೇರಿಸಲು ಈ ಮೂಲಕ ಒಪ್ಪುತ್ತಾರೆ” ಎಂದು ನ್ಯಾಪ್ಕಿನ್‌ನಲ್ಲಿ ಬರೆಯಲಾಗಿದೆ.
ಇದನ್ನೂ ಓದಿ | ದಾಖಲೆಯ ವೀಕ್ಷಕರನ್ನು ಸೆಳೆದ ಪ್ರೊ ಕಬಡ್ಡಿ ಲೀಗ್ ಸೀಸನ್ 10; ಮೊದಲ 90 ಪಂದ್ಯಗಳಲ್ಲಿ 226 ಮಿಲಿಯನ್ ವೀಕ್ಷಣೆ
ಮೆಸ್ಸಿಯ ವೃತ್ತಿಜೀವನವನ್ನು ಪ್ರಾರಂಭಿಸಿದ ನ್ಯಾಪ್ಕಿನ್ ಅನ್ನು ಇದೀಗ ಹರಾಜಿಗಿಡಲಾಗುತ್ತಿದೆ. ಇದರ ಆರಂಭಿಕ ಬೆಲೆ ಬರೋಬ್ಬರಿ 3 ಲಕ್ಷ ಡಾಲರ್. ಅಂದರೆ ರೂಪಾಯಿ ಮೌಲ್ಯದಲ್ಲಿ 3,16,82,852 ರೂಪಾಯಿ. ಇದು ಭಾರಿ ಮೊತ್ತಕ್ಕೆ ಬಿಕರಿಯಾಗುವುದರಲ್ಲಿ ಅನುಮಾನವಿಲ್ಲ.