Igor Stimac: ನಾನೊಬ್ಬ ಹುಟ್ಟು ಹೋರಾಟಗಾರ, ಅನ್ಯಾಯದ ವಿರುದ್ಧ ಮತ್ತೆ ಸಿಡಿಯುತ್ತೇನೆ; ಇಂಡೋ ಪಾಕ್ ಜಗಳದ ಬಳಿಕ ಸ್ಟಿಮ್ಯಾಕ್ ಪ್ರತಿಕ್ರಿಯೆ
India vs Pakistan: ನಾನೊಬ್ಬ ಹುಟ್ಟು ಹೋರಾಟಗಾರ. ನ್ಯಾಯಯುತವಲ್ಲದ ನಿರ್ಧಾರಗಳ ವಿರುದ್ಧ ಮತ್ತೆ ಸಿಡಿದೇಳುತ್ತೇನೆ. ತಪ್ಪು ನಿರ್ಧಾರಗಳ ವಿರುದ್ಧ ನಮ್ಮ ತಂಡವನ್ನು ರಕ್ಷಿಸುವ ಅಗತ್ಯ ಬಿದ್ದಾಗ ನಾನು ಮತ್ತೆ ನನ್ನ ಹುಡುಗರನ್ನು ಸಮರ್ಥಿಸುತ್ತೇನೆ,” ಎಂದು ಸ್ಟಿಮ್ಯಾಕ್ ಹೇಳಿದ್ದಾರೆ.

ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (SAFF Championship 2023) ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಭಾರತ (India vs Pakistan) ರೋಚಕ ಜಯ ಸಾಧಿಸಿತು. ಉದ್ಯಾನ ನಗರಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ ಮಳೆಯ ನಡುವೆ ಪಂದ್ಯವನ್ನು ಅಭಿಮಾನಿಗಳು ಎಂಜಾಯ್ ಮಾಡಿದರು. ಈ ನಡುವೆ ಭಾರತ ಹಾಗೂ ಪಾಕ್ ತಂಡದ ಆಟಗಾರರು ಹಾಗೂ ಮ್ಯಾನೇಜರ್ ನಡುವೆ ನಡೆದ ಜಗಳ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಮೊದಲಾರ್ಧದ ಮುಕ್ತಾಯದ ವೇಳೆಗೆ ಮೈದಾನದಲ್ಲಿ ಇಂಡೋ ಪಾಕ್ ಆಟಗಾರರು ಹಾಗೂ ಕೋಚ್‌ಗಳ ನಡುವೆ ಜಗಳ ನಡೆಯಿತು. ಮೈದಾನದ ಸೈಡ್ ಲೈನ್ ದಾಟಿದ್ದ ಚೆಂಡನ್ನು ಪಾಕಿಸ್ತಾನದ ಆಟಗಾರ ಥ್ರೋ ಇನ್ ಮಾಡಲು ಮುಂದಾದರು. ಈ ವೇಳೆ ಗೆರೆಯ ಬಳಿ ಇದ್ದ ಭಾರತ ತಂಡದ ಮ್ಯಾನೇಜರ್ ಇಗೊರ್ ಸ್ಟಿಮ್ಯಾಕ್ ಪಾಕಿಸ್ತಾನ ಆಟಗಾರನ ಕೈಯಲ್ಲಿದ್ದ ಚೆಂಡನ್ನು ಹಿಂಬದಿಯಿಂದ ಎಳೆದು ತಪ್ಪಿಸಿದರು. ಇದರಿಂದ ಪಾಕ್ ಹಾಗೂ ಭಾರತ ತಂಡದ ಆಟಗಾರರ ನಡುವೆ ಜಗಳವಾಯ್ತು. ಮೈದಾನದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯ್ತು. ಜೋರಾಗಿ ಸುರಿಯುತ್ತಿದ್ದ ಮಳೆಯ ನಡುವೆ ಆಟಗಾರರ ಗಲಾಟೆ ನಡುವೆ ಅಭಿಮಾನಿಗಳು ಕೂಡಾ ಭಾರತವನ್ನು ಬೆಂಬಲಿಸಿ ಘೋಷಣೆ ಕೂಗಿದರು. ಪರಿಸ್ಥಿತಿ ನಿಭಾಯಿಸಲು ಮಧ್ಯಪ್ರವೇಶಿಸಿದ ಪಂದ್ಯದ ರೆಫರಿಗಳು, ಭಾರತ ತಂಡದ ಮ್ಯಾನೇಜರ್‌ಗೆ ರೆಡ್ ಕಾರ್ಡ್ ತೋರಿಸಿ ಹೊರಕಳುಹಿಸಿದರು. ಅಲ್ಲದೆ ಪಾಕಿಸ್ತಾನದ ಮ್ಯಾನೇಜರ್ ಶಹಜಾದ್ ಅನ್ವರ್ ಅವರಿಗೂ ಹಳದಿ ಕಾರ್ಡ್ ನೀಡಿದರು.
ಥ್ರೋ-ಇನ್ ಅನ್ನು ಪಾಕಿಸ್ತಾನಕ್ಕೆ ತಪ್ಪಾಗಿ ನೀಡಲಾಗಿದೆ ಎಂದು ಸ್ಟಿಮ್ಯಾಕ್ ಅಂದುಕೊಂಡರು. ಅದರಂತೆಯೇ ಅವರು ಆಟಕ್ಕೂ ಅಡ್ಡಿಪಡಿಸಿದರು. ಈ ಬಗ್ಗೆ ಪಾಕಿಸ್ತಾನದ ಆಟಗಾರರು ಮತ್ತು ಸಿಬ್ಬಂದಿ ತಕರಾರು ಎತ್ತಿದರು. ಈ ವೇಳೆ ಉಭಯ ತಂಡಗಳ ನಾಯಕರಾದ ಸುನಿಲ್ ಛೆಟ್ರಿ ಮತ್ತು ಹಸನ್ ಬಶೀರ್ ತಮ್ಮ ಆಟಗಾರರನ್ನು ಶಾಂತಗೊಳಿಸಲು ಮುಂದಾದರು. ಈ ನಡುವೆ ಪಾಕಿಸ್ತಾನದ ಕೋಚ್‌ಗಳು ಭಾರತೀಯ ಕೋಚಿಂಗ್ ಸಿಬ್ಬಂದಿಯ ಮೇಲೆ ಖಾರವಾಗಿ ಪ್ರತಿಕ್ರಿಯಿಸುತ್ತಿರುವುದನ್ನು ಕ್ಯಾಮರಾಗಳು ಸೆರೆಹಿಡಿದವು. ಅಂತಿಮವಾಗಿ ರೆಫರಿಗಳು ಮಧ್ಯಪ್ರವೇಶಿಸಿ ಭಾರತದ ಕೋಚ್ ಸ್ಟಿಮ್ಯಾಕ್ ಅವರಿಗೆ ರೆಡ್ ಕಾರ್ಡ್ ತೋರಿಸಿ ಪಂದ್ಯದಿಂದ ಹೊರಕಳುಹಿಸಿದರು. ಹೀಗಾಗಿ ಭಾರತದ ಸಹಾಯಕ ಕೋಚ್ ಮಹೇಶ್ ಗಾವ್ಲಿ ಆಟದ ದ್ವಿತೀಯಾರ್ಧದಲ್ಲಿ ಕೋಚಿಂಗ್ ಜವಾಬ್ದಾರಿ ಹೊತ್ತರು.
ಕ್ಷಮೆ ಕೇಳೋ ಮಾತೇ ಇಲ್ಲ
ಪಂದ್ಯದ ಬಳಿಕ ಭಾರತದ ಕೋಚ್ ಸ್ಟಿಮ್ಯಾಕ್, ತಮ್ಮ ನಡೆಯನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವ ಮಾತೇ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಕ್ರೊಯೇಷಿಯಾದ ಮಾಜಿ ಫುಟ್ಬಾಲ್ ಆಟಗಾರ, “ಫುಟ್‌ಬಾಲ್ ಎನ್ನುವುದು ಒಳಗಿನ ಉತ್ಸಾಹ. ವಿಶೇಷವಾಗಿ ನಮ್ಮ ದೇಶದ ಬಣ್ಣಗಳನ್ನು ನಾವು ಸಮರ್ಥಿಸಿಕೊಂಡಾಗ” ಎಂದು ಅವರು ಬರೆದುಕೊಂಡಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಅವರು ಭಾರತ ಮತ್ತು ಕ್ರೊಯೇಷಿಯಾದ ಬಾವುಟಗಳ ಎಮೋಜಿಗಳನ್ನು ಕೂಡಾ ಹಾಕಿದ್ದಾರೆ. 1998ರಲ್ಲಿ ಕ್ರೊಯೇಷಿಯಾದ ಮೊದಲ ವಿಶ್ವಕಪ್ ತಂಡದ ಭಾಗವಾಗಿದ್ದ ಸ್ಟಿಮ್ಯಾಕ್, ದೇಶವು ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
“ನಿನ್ನೆಯ ನನ್ನ ನಡವಳಿಕೆಯಿಂದಾಗಿ ನೀವು ನನ್ನನ್ನು ದ್ವೇಷಿಸಲೂಬಹುದು ಅಥವಾ ಪ್ರೀತಿಸಲೂಬಹುದು. ಆದರೆ ನಾನೊಬ್ಬ ಹುಟ್ಟು ಹೋರಾಟಗಾರ. ನ್ಯಾಯಯುತವಲ್ಲದ ನಿರ್ಧಾರಗಳ ವಿರುದ್ಧ ಮತ್ತೆ ಸಿಡಿದೇಳುತ್ತೇನೆ. ತಪ್ಪು ನಿರ್ಧಾರಗಳ ವಿರುದ್ಧ ನಮ್ಮ ತಂಡವನ್ನು ರಕ್ಷಿಸುವ ಅಗತ್ಯ ಬಿದ್ದಾಗ ನಾನು ಮತ್ತೆ ನನ್ನ ಹುಡುಗರನ್ನು ಸಮರ್ಥಿಸುತ್ತೇನೆ,” ಎಂದು ಅವರು ಖಡಕ್ ಮಾತುಗಳನ್ನಾಡಿದ್ದಾರೆ.
ರೆಡ್ ಕಾರ್ಡ್ ತೋರಿಸಲು ಕಾರಣವಾದ ಘಟನೆಯ ವಿಡಿಯೋವನ್ನು ಕೂಡಾ ಸ್ಟಿಮ್ಯಾಕ್ ಹಂಚಿಕೊಂಡಿದ್ದಾರೆ. ತಮ್ಮ ತಂಡವನ್ನು ರಕ್ಷಿಸಲು ಆ ಕ್ಷಣದಲ್ಲಿ ಅವರು ಮಾಡಿದ ನಿರ್ಧಾರವನ್ನು ಅವರು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. 2019ರಲ್ಲಿ ಭಾರತ ಫುಟ್ಬಾಲ್ ತಂಡದ ಮ್ಯಾನೇಜರ್ ಆಗಿ ನೇಮಕವಾದಾಗಿನಿಂದ ಬ್ಲೂ ಟೈಗರ್ಸ್ ಪರ ಪ್ರತಿ ಬಾರಿ ಅವರು ಧ್ವನಿ ಎತ್ತಿದ್ದಾರೆ.