Football in India: ಸಖತ್ ಆಟ; ಭಾರತದಲ್ಲೇಕೆ ರೊನಾಲ್ಡೊ-ಮೆಸ್ಸಿಗಳಿಲ್ಲ ಎನ್ನುವವರಿಗೆ ಸುನಿಲ್ ಛೆಟ್ರಿಯೇ ಉತ್ತರ
ಕನ್ನಡ ಸುದ್ದಿ  /  ಕ್ರೀಡೆ  /  Football In India: ಸಖತ್ ಆಟ; ಭಾರತದಲ್ಲೇಕೆ ರೊನಾಲ್ಡೊ-ಮೆಸ್ಸಿಗಳಿಲ್ಲ ಎನ್ನುವವರಿಗೆ ಸುನಿಲ್ ಛೆಟ್ರಿಯೇ ಉತ್ತರ

Football in India: ಸಖತ್ ಆಟ; ಭಾರತದಲ್ಲೇಕೆ ರೊನಾಲ್ಡೊ-ಮೆಸ್ಸಿಗಳಿಲ್ಲ ಎನ್ನುವವರಿಗೆ ಸುನಿಲ್ ಛೆಟ್ರಿಯೇ ಉತ್ತರ

ಭಾರತದಲ್ಲಿ ಕ್ರಿಕೆಟ್​ನಷ್ಟು ಫುಟ್ಬಾಲ್​ಗೆ ಜನಪ್ರಿಯತೆ ಏಕಿಲ್ಲ? ಭಾರತದ ಮುಂದಿನ ಸವಾಲುಗಳೇನು? ದೇಶದಲ್ಲಿ ಫುಟ್ಬಾಲ್ ಬೆಳವಣಿಗೆಗೆ ಏನೆಲ್ಲಾ ಮಾಡಬೇಕು. ಇಂದಿನ ‘ಸಖತ್ ಆಟ’ದ ಅಂಕಣದಲ್ಲಿ ದೇಶದ ಫುಟ್ಬಾಲ್ ಸ್ಥಿತಿಗತಿ ಬಗ್ಗೆ ತಿಳಿಯೋಣ.

ಸಖತ್ ಆಟ ಅಂಕಣ
ಸಖತ್ ಆಟ ಅಂಕಣ

ವಿಶ್ವದ ಶ್ರೀಮಂತ ಕ್ರೀಡೆ ಫುಟ್ಬಾಲ್​​.. ಆದರೆ, ಇದರ ಶ್ರೀಮಂತಿಕೆ ಭಾರತದಲ್ಲಿ ಇಲ್ಲ ಎನ್ನುವುದು ನೆನಪಿರಲಿ. ಭಾರತದ ಅಷ್ಟ ದಿಕ್ಕುಗಳು ಸೂಚಿಸುವುದು ಒಂದೇ.. ಅದುವೇ ಕ್ರಿಕೆಟ್. ದೇಶಕ್ಕಾಗಿ ಎಂಟು ಚಿನ್ನ ಗೆದ್ದಿರುವ ಹಾಕಿ ರಾಷ್ಟ್ರೀಯ ಕ್ರೀಡೆ ಆಗಿದ್ದರೂ, ಆರಾಧಿಸುವುದು ಮಾತ್ರ ಕ್ರಿಕೆಟನ್ನು. ಹಾಗೆ ಕ್ರಿಕೆಟ್​ ಜಗತ್ತಿಗೂ ನಮ್ಮ ಮಂಡಳಿಯೇ (ಬಿಸಿಸಿಐ). ಹೀಗಿದ್ದಾಗ ಹುಟ್ಟುವ ಪ್ರಶ್ನೆ ಏನು ಗೊತ್ತಾ? 200 ದೇಶಗಳಲ್ಲಿ ಆಡುವ ಫುಟ್ಬಾಲ್, ಭಾರತದಲ್ಲಿ ಜನಮನ್ನಣೆ ಪಡೆದಿಲ್ಲ ಏಕೆ?

ಉದಾಹರಣೆ ನೋಡಿ; ಕ್ರಿಕೆಟ್​​​ಗೆ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ (ಇನ್ನೂ ಇದ್ದಾರೆ), ಹಾಕಿಗೆ ಬರೋಣ; ಧ್ಯಾನ್​ ಚಂದ್, ಧನರಾಜ್ ಪಿಳ್ಳೈ, ಬಲ್ಬೀರ್ ಸಿಂಗ್, ಹರ್​​ಪ್ರೀತ್​ ಸಿಂಗ್, ಅಥ್ಲೀಟ್​ ಕಡೆ ಕಣ್ಣಾಡಿಸೋಣ; ಮಿಲ್ಕಾ ಸಿಂಗ್, ಪಿಟಿ ಉಷಾ, ನೀರಜ್ ಚೋಪ್ರಾ... ಹೀಗೆ ಒಂದೊಂದು ವಿಭಾಗದಲ್ಲೂ ಹೆಸರು ಪಟ್ಟಿ ಮಾಡಬಹುದು. ಅದೊಂದು ಕಡೆ ಇರಲಿ. ವಿಷಯಕ್ಕೆ ಬರೋಣ. ಆದರೆ ಫುಟ್ಬಾಲ್​​ಗೆ ಯಾರು? ಕೇಳಿ ಬರುವ ಹೆಸರು ಒಂದೇ ಸುನಿಲ್ ಛೆಟ್ರಿ ಮಾತ್ರ.

ವಿಶ್ವಕ್ಕೆ ಮಾದರಿಯಾದ ಅನೇಕ ದಿಗ್ಗಜರನ್ನು ಕ್ರಿಕೆಟ್​ ಸೃಷ್ಟಿಸಿದೆ. ಉಳಿದ ಕ್ರೀಡೆಗಳು ಕಾಮನ್​ವೆಲ್ತ್, ಒಲಿಂಪಿಕ್​ಗಳಲ್ಲಿ ಪದಕಗಳ ಬೇಟೆಯಾಡಿವೆ. ಆದರೆ ಫುಟ್ಬಾಲ್ ಕಥೆಯೇನು? ಸುನಿಲ್ ಛೆಟ್ರಿ ಅವರಂಥ ಪ್ರತಿಭಾನ್ವಿತ ಆಟಗಾರರಿದ್ದರೂ, ಪ್ರೀತಿಸುವುದು, ಆರಾಧಿಸುವುದು ಅದೇ ಲಿಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೊ, ನೇಯ್ಮರ್, ಎಂಬಾಪ್ಪೆ, ಪೀಲೆ, ಮರಡೋನಾರನ್ನೇ. ಸಪ್ತ ಸಾಗರದಾಚೆಗಿರುವ ಆಟಗಾರರೇ ನಮಗೆ ಮುದ್ದು.

ಕಾಲ್ಚೆಂಡಿನ ಕಿಚ್ಚು ಹೆಚ್ಚಿಸಿದ ಛೆಟ್ರಿ

ಕ್ರಿಕೆಟ್​​, ಹಾಕಿಯಂಥ ಆಟಗಳಲ್ಲಿ ಭಾರತದ ಆಟಗಾರರೇ ಜಗತ್ತಿಗೆ ಮಾದರಿ. ಭಾರತದ ಫುಟ್ಬಾಲ್​​ನಲ್ಲಿ ಮಾತ್ರ ಇದೆಲ್ಲವೂ ವಿರುದ್ಧವಾಗಿದೆ. ಸದ್ಯ ಭಾರತ ಫುಟ್ಬಾಲ್ ತಂಡದ ಆಟವು ಬೆಳವಣಿಗೆ ಕಾಣುತ್ತಿದೆ. ನಿರೀಕ್ಷಿಸಿದಷ್ಟು ಅಲ್ಲದಿದ್ದರೂ, ವೀಕ್ಷಣೆಯಲ್ಲಿ ವೇಗ ಪಡೆಯುತ್ತಿದೆ. ಪ್ರಸ್ತುತ ನಡೆಯುತ್ತಿರುವ ಸೌತ್ ಏಷ್ಯನ್ ಫುಟ್ಬಾಲ್ ಫೆಡರೇಶನ್ ಚಾಂಪಿಯನ್‌ಶಿಪ್ ಸೆಮಿಫೈನಲ್​ಗೆ ಭಾರತ ಪ್ರವೇಶಿಸಿದೆ. ವಾರದ ಹಿಂದಷ್ಟೇ ಇಂಟರ್​​​ಕಾಂಟಿನೆಂಟರ್ ಪ್ರಶಸ್ತಿಗೆ ಮುತ್ತಿಕ್ಕಿದೆ.

ಇದೆಲ್ಲವೂ ಸಾಧ್ಯವಾಗಿದ್ದು 5 ಅಡಿ 7 ಇಂಚು ಎತ್ತರದ ಛೆಟ್ರಿಯಿಂದ. ಭಾರತದಲ್ಲಿ ಮೆಸ್ಸಿ, ರೊನಾಲ್ಡೊ, ನೇಯ್ಮರ್​ರಂತ ಆಟಗಾರರು ಇದ್ದಿದ್ದರೆ, ಫುಟ್​​ಬಾಲ್ ಇತಿಹಾಸವೇ ಬದಲಾಗುತ್ತಿತ್ತು ಎಂಬುದು ಕೆಲವರ ಮಾತು. ಆದರೆ ಅವರಿರಬೇಕು, ಇವರಿರಬೇಕು ಎಂಬ ಮಾತು ಬಿಡಿ, ನಮ್ಮಲ್ಲಿ ಅವರನ್ನೇ ಮೀರಿಸುವ ಪ್ರತಿಭಾನ್ವಿತ ಆಟಗಾರರಿದ್ದಾರೆ ಎಂಬುದನ್ನು ಮರೆತಿದ್ದಾರೆ. ನಿಜ ಹೇಳಬೇಕೆಂದರೆ ಮೆಸ್ಸಿ-ರೊನಾಲ್ಡೊಗೆ ಸರಿಸಮನಾದ ಆಟಗಾರ ನಮ್ಮ ಸುನಿಲ್ ಛೆಟ್ರಿ. ಮೆಸ್ಸಿ-ರೊನಾಲ್ಡೊ ಸಾರ್ವಕಾಲಿಕ ಶ್ರೇಷ್ಠ ಆಟಗಾರರು. ಇದನ್ನು ಅವರ ಆಟವೇ ಹೇಳುತ್ತದೆ.

ಆದರೆ, ಸುನಿಲ್​ ಛೆಟ್ರಿ ಅವರ ಮಟ್ಟಕ್ಕೆ ಬೆಳೆದಿದ್ದಾರೆ ಅಂದರೆ, ಸರಿಸಮನಾದ ಉತ್ತರ ಆಗುತ್ತಲ್ಲವೇ? ಅಂತಾರಾಷ್ಟ್ರೀಯ ಫುಟ್ಬಾಲ್​​ನಲ್ಲಿ ಅತ್ಯಧಿಕ ಗೋಲು ಗಳಿಸಿದವರ ಪಟ್ಟಿಯಲ್ಲಿ ಪೋರ್ಚುಗಲ್​​ನ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ. 123 ಗೋಲು ಗಳಿಸಿದ್ದಾರೆ. ಇರಾನ್​ನ ಅಲಿ ದಾಯಿ 109 ಗೋಲು ಸಿಡಿಸಿ 2ನೇ ಸ್ಥಾನದಲ್ಲಿದ್ದಾರೆ. ಅರ್ಜೆಂಟೀನಾದ ನಾಯಕ ಮೆಸ್ಸಿ 103 ಗೋಲು ಕಲೆ ಹಾಕಿದ್ದರೆ, ಅದೇ ಸುನಿಲ್​ ಛೆಟ್ರಿ 91 ಗೋಲು ಗಳಿಸಿ 4ನೇ ಸ್ಥಾನದಲ್ಲಿದ್ದಾರೆ. ಆದರೆ ಅಗ್ರ ಮೂವರು ಸಹ ಹೆಚ್ಚಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ, ಸುನಿಲ್​ ಛೆಟ್ರಿ ಇಷ್ಟರ ಮಟ್ಟಿಗೆ ದೊಡ್ಡ ಸಾಧನೆ ಮಾಡಿದ್ದರೂ, ಬೆಳಕಿಗೆ ಬರದಿರಲು ಕಾರಣ, ಭಾರತದಲ್ಲಿ ಫುಟ್ಬಾಲ್​ಗೆ ಕ್ರೇಜ್ ಇಲ್ಲದಿರುವುದು. ಮೆಸ್ಸಿ, ರೊನಾಲ್ಡೊ, ನೇಯ್ಮರ್​.. ಹೀಗೆ ಬೇರೆ ದೇಶಗಳ ಫುಟ್​ಬಾಲ್​ ಆಟಗಾರರೇಕೆ ಇಷ್ಟೊಂದು ಜನಪ್ರಿಯ? ನಮ್ಮವರು ಏಕಿಲ್ಲ ಎನ್ನುವ ಪ್ರಶ್ನೆಗೆ ಉತ್ತರ, ಫುಟ್ಬಾಲ್​ ವೀಕ್ಷಣೆಗೆ ಅಷ್ಟಾಗಿ ಇಲ್ಲ. ಮೆಸ್ಸಿ, ರೊನಾಲ್ಡೊ ವಿದೇಶಿ ಕ್ಲಬ್​ ಆಡುವ ಮೂಲಕ ವಿಶ್ವವ್ಯಾಪಿ ಗಮನ ಸೆಳೆದಿದ್ದಾರೆ. ಸಾವಿರಾರು ಕೋಟಿ ದುಡಿಯುತ್ತಾರೆ. ಆದರೆ, ನಮ್ಮ ದೇಶದ ಆಟಗಾರರಿಗೆ ಆ ಅವಕಾಶ ಇಲ್ಲ. ಭಾರತದಲ್ಲಿ ಫುಟ್ಬಾಲ್ ವೀಕ್ಷಣೆ ಕುಸಿಯಲು ಇದು ಒಂದು ಕಾರಣ. ಹಾಗಾಗಿ ಅಭಿಮಾನಿಗಳು ಜಗತ್ತಿನ ರಾಷ್ಟ್ರಗಳ ಹಿಂದೆ ಓಡುವುದನ್ನು ಬಿಡಬೇಕು.

ಭಾರತದಲ್ಲಿ ಸಿಗುತ್ತಿಲ್ಲ ಫುಟ್ಬಾಲ್​ಗೆ ಬೆಂಬಲ

ದೈಹಿಕ ಕ್ಷಮತೆ ಬೇಡುವ ಫುಟ್ಬಾಲ್ ಕ್ರೀಡೆಯಲ್ಲಿ ಇರುವುದು ಬಡವರೇ ಜಾಸ್ತಿ. ಉದ್ಯೋಗದ ಅಭದ್ರತೆಯಿಂದ ಹಿಂದೆ ಸರಿಯುತ್ತಿರುವ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಸರಿಯಾಗಿ ಗುರುತಿಸುತ್ತಿಲ್ಲ. ಇದು ಕೂಡ ಬೆಳವಣಿಗೆಗೆ ಹಿನ್ನಡೆ. ದೇಶದಲ್ಲಿ ಫುಟ್ಬಾಲ್​ಗೆ ಸಂಬಂಧಿಸಿ ಇಂಡಿಯನ್ ಸೂಪರ್​​ ಲೀಗ್​​ಗಳಂತ ಟೂರ್ನಿಗಳು ಹೆಚ್ಚಾಗುವುದು ಅನಿವಾರ್ಯ. ದೇಶದ ಗುಣಮಟ್ಟದ ಆಟಗಾರರನ್ನು ಬೆಳಕಿಗೆ ತರಲು ಯತ್ನಿಸಬೇಕು. ಭಾರತದ ಪ್ರಮುಖ ಕ್ಲಬ್​ಗಳಿಂದ ಪ್ರತಿಭಾನ್ವಿತರನ್ನು ಹೆಕ್ಕಿ ತೆಗೆಯಬೇಕು.

ಅರ್ಜೆಂಟೀನಾ ಮನವಿ ತಿರಸ್ಕಾರ

ಇದರ ಜೊತೆಗೆ ಆರ್ಥಿಕ ಪರಿಸ್ಥಿತಿ ಕೂಡ ನಿರೀಕ್ಷಿತವಾಗಿಲ್ಲ. ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಅಧಿಕಾರಿಗಳೇ ಇದನ್ನು ನೇರವಾಗಿ, ಬಹಿರಂಗವಾಗಿ ಹೇಳುತ್ತಿರುವುದು ಬೇಸರ ತರಿಸಿದೆ. ಇತ್ತೀಚೆಗೆ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಭಾರತದ ವಿರುದ್ಧ ಸ್ನೇಹ ಸೌಹಾರ್ದಯುತ ಪಂದ್ಯಕ್ಕೆ ಮನವಿ ಮಾಡಿತ್ತು. ಆದರೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ನಮ್ಮ ಕೈಯಲ್ಲಿ ಆಗೋದಿಲ್ಲ ಎಂದು ಹಿಂದೆ ಹೆಜ್ಜೆ ಇಟ್ಟಿತು. ಅದಕ್ಕೆ ಕಾರಣ ಕೊಟ್ಟಿದ್ದು, 40 ಕೋಟಿ ಖರ್ಚು ಮಾಡುವ ಶಕ್ತಿ ಇಲ್ಲವೆಂದು.

ಸುವರ್ಣಾವಕಾಶ ಕೈ ಚೆಲ್ಲಿದ ಭಾರತ

ದೊಡ್ಡಮಟ್ಟದ ಪ್ರಾಯೋಜಕತ್ವದ ಸಿಗಲ್ಲ ಎಂದು ಹೇಳಿಬಿಟ್ಟಿತು. ಇದು ಸರಿಯಾದ ಉತ್ತರವೇ? ನಮ್ಮ ಬಳಿ 40 ಕೋಟಿಯೂ ಇಲ್ಲವೇ? ಸರ್ಕಾರದೊಂದಿಗೆ ಈ ಕುರಿತು ಚರ್ಚಿಸಿದ್ದರೆ, ನೆರವಾಗುವ ಸಾಧ್ಯತೆ ಇತ್ತು. ಇದರೊಂದಿಗೆ ಭಾರತವು ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುತ್ತಿತ್ತು. ಒಂದು ಅರ್ಜೆಂಟೀನಾ ವಿರುದ್ಧ ಆಡುವಂತೆ ಆಗುತ್ತಿತ್ತು. ಮೆಸ್ಸಿ ಭಾರತದಲ್ಲಿ ಬಂದು ಆಡುತ್ತಿದ್ದರು. ಎರಡನೇಯದ್ದು, ಮೆಸ್ಸಿ ಭಾರತಕ್ಕೆ ಬಂದರೆ, ಕ್ರೇಜ್​ ಎಷ್ಟಿರಬೇಡ.. ಇದರಿಂದ ಭಾರತದ ಫುಟ್ಬಾಲ್​ನಲ್ಲೂ ಹೊಸ ಸಂಚಲನವಾದ ಮಾರ್ಪಾಡು ಆಗುತ್ತಿತ್ತು. ಆದರೆ ಇಂತಹ ಸುವರ್ಣಾವಕಾಶವನ್ನು ಕೈಚೆಲ್ಲಿತು.

ಕೈ ಜೋಡಿಸಿ ಮನವಿ ಮಾಡುತ್ತಾರೆ ಆಟಗಾರರು

ಇತ್ತೀಚೆಗೆ ಭಾರತದ ಯಾವುದೇ ಫುಟ್ಬಾಲ್​​ ಪಂದ್ಯ ಮುಕ್ತಾಯದ ನಂತರ ಆಟಗಾರರು, ಮೈದಾನಕ್ಕೆ ಬಂದು ಬೆಂಬಲಿಸಿದ ಅಭಿಮಾನಿಗಳಿಗೆ ಕೈ ಜೋಡಿಸಿ ಧನ್ಯವಾದ ಹೇಳುತ್ತಿದ್ದಾರೆ. ಸುನಿಲ್​ ಛೆಟ್ರಿ ಕೂಡ ಫುಟ್ಬಾಲ್​ ಪಂದ್ಯವನ್ನು ಹೆಚ್ಚೆಚ್ಚು ಜನರು ನೋಡಬೇಕು. ನಮಗೂ ಬೆಂಬಲ ಸಿಗಬೇಕು. ದಯವಿಟ್ಟು ಪಂದ್ಯ ನೋಡಲು ಮೈದಾನಕ್ಕೆ ಬನ್ನಿ ಎಂದು ಮನವಿ ಮಾಡಿದ್ದರು. ಅದೇ ಮೆಸ್ಸಿ ಭಾರತಕ್ಕೆ ಬಂದಿದ್ದರೆ, ಫುಟ್ಬಾಲ್ ಕ್ರೇಜ್​ ಚಿತ್ರಣವೇ ಬದಲಾಗುತ್ತಿತ್ತು ಎಂಬುದು ಮಾಜಿ ಕ್ರೀಡಾಪಟುಗಳ ವಾದ.

ಶೂ ಇಲ್ಲದೆ ವಿಶ್ವಕಪ್​​ಗೆ ಹೋಗಿರಲಿಲ್ಲ.

1950ರಲ್ಲಿ ಬ್ರೆಜಿಲ್​​ನಲ್ಲಿ ನಡೆದ ಫಿಫಾ ವಿಶ್ವಕಪ್​ ಟೂರ್ನಿಗೆ ಭಾರತ ಅರ್ಹತೆ ಗಳಿಸಿತ್ತು. ಕೆಲವು ದೇಶಗಳು ಟೂರ್ನಿಯಿಂದ ಸರಿದಿದ್ದು, ಭಾರತಕ್ಕೆ ಅರ್ಹತೆ ಸಿಗಲು ಕಾರಣವಾಗಿತ್ತು. ಸ್ವೀಡನ್, ಇಟಲಿ, ಪೆರುಗ್ವೆ ತಂಡಗಳು ಭಾರತದ ಗ್ರೂಪ್​​ನಲ್ಲಿದ್ದವು. ಆದರೆ, ಒಂದೇ ಒಂದು ಕಾರಣದಿಂದ ಭಾರತ ಹಿಂದೆ ಸರಿದಿತ್ತು. ಟೂರ್ನಿಗೆ ಬೇಕಾದ ಸೂಕ್ತ ಕಿಟ್​ ಇರಲಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಆಟಗಾರರ ಬಳಿ ಶೂ ವ್ಯವಸ್ಥೆಯೇ ಇರಲಿಲ್ಲ.

ವಿಶ್ವಕಪ್​ನಿಂದ ಭಾರತ ದೂರ ಯಾಕೆ?

ವಿಶ್ವಕಪ್​ಗೆ ಆಯ್ಕೆಯಾಗಬೇಕು ಅಂದರೆ, ಅದಕ್ಕೆ ಭೌಗೋಳಿಕವಾಗಿ ಕೆಲವು ಮಾನದಂಡಗಳು ಇವೆ. 7 ಖಂಡಗಳಿಂದಲೂ ಇಂತಿಷ್ಟು ಎಂದು ಪ್ರಾತಿನಿಧ್ಯ ನೀಡಲಾಗಿದೆ. ಅದೇ ರೀತಿ ಏಷ್ಯಾ ಖಂಡಕ್ಕೂ ಸಹ. ಏಷ್ಯಾದಿಂದ ಕನಿಷ್ಠ 5 ದೇಶಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ ಈ 5 ಸ್ಥಾನಗಳಿಗೆ ಏಷ್ಯಾದ ಖಂಡದಲ್ಲಿರುವ ರಾಷ್ಟ್ರಗಳು ಪೈಪೋಟಿ ನಡೆಸುತ್ತವೆ. ಅಗ್ರ ತಂಡಗಳು ಅರ್ಹತೆ ಪಡೆಯುತ್ತವೆ. ಏಷ್ಯನ್​ ರ್ಯಾಂಕಿಂಗ್​​ನಲ್ಲಿ ಭಾರತ 18ನೇ ಸ್ಥಾನದಲ್ಲಿದೆ. ಆದರೆ ಫಿಫಾ ವಿಶ್ವಕಪ್​ಗೆ ಅರ್ಹತೆ ಪಡೆಯಬೇಕೆಂದರೆ ಅಗ್ರ 10ರಲ್ಲಿ ಕಾಣಿಸಿಕೊಳ್ಳಬೇಕು. ಇದು ಸಾಧ್ಯವಾಗಬೇಕೆಂದರೆ ಏಷ್ಯಾದ ಎಲ್ಲಾ ದೇಶಗಳೊಂದಿಗೆ ನಿರಂತರ ಪಂದ್ಯಗಳನ್ನು ಆಡುತ್ತಿರಬೇಕು. ಅಷ್ಟೇ ಫಿಫಾ ರ್ಯಾಂಕಿಂಗ್​ನ ಅಗ್ರ 50ರಲ್ಲಿ ಕಾಣಸಿಗಬೇಕು. ಸದ್ಯ ಭಾರತ 106ನೇ ಸ್ಥಾನದಲ್ಲಿದೆ.

ಜನಸಂಖ್ಯೆ, ಭೌಗೌಳಿಕ ವಿಸ್ತರಣೆಯಲ್ಲೂ ಭಾರತವೇ ಮುಂದು. ಆದರೆ ಇಡೀ ಭೂಮಂಡಲವನ್ನೇ ಆವರಿಸಿರುವ ಫಿಫಾ ಫುಟ್ಬಾಲ್​​ ವಿಶ್ವಕಪ್​​ನಲ್ಲಿ ಏಕೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದೇ ದೊಡ್ಡ ಪ್ರಶ್ನೆ. ಮುಂದಿನ ಅಂದರೆ 2026, 2030ರಲ್ಲಾದರೂ, ಫಿಫಾ ವಿಶ್ವಕಪ್​​ನಲ್ಲಿ ನಮ್ಮ ತಂಡ ಇರುತ್ತಾ? ಇಲ್ಲಿಗೆ ತಲುಪಲು ಭಾರತದ ಮುಂದಿನ ಸವಾಲುಗಳೇನು? ದೇಶದಲ್ಲಿ ಫುಟ್ಬಾಲ್ ಬೆಳವಣಿಗೆಗೆ ಏನೆಲ್ಲಾ ಮಾಡಬೇಕು. ಈ ಮುಂದೆ ನೋಡೋಣ.

  • ದೇಶದಲ್ಲಿ ಪ್ರತಿಭಾನ್ವಿತ ಆಟಗಾರರ ಹುಡುಕಾಟ ನಡೆಯಬೇಕು. ಅಂತಹ ಮಕ್ಕಳಿಗೆ ವಿಶ್ವ ದರ್ಜೆಯ ಮಟ್ಟದಲ್ಲಿ ತರಬೇತಿ ಕೊಡಿಸಿದರೆ ಉತ್ತಮ.
  • ಆಟಗಾರರಿಗೆ ಪೋಷಕಾಂಶವುಳ್ಳ ಪೂರೈಸಬೇಕು. ಚಿಕ್ಕಂದಿನಿಂದಲೇ ತರಬೇತಿಗೆ ಅಣಿಗೊಳಿಸಬೇಕು. ಕ್ರೀಡೆಯ ಮೇಲಿನ ಬದ್ಧತೆ ಬೆಳೆಸಿದರೆ ಉತ್ತಮ.
  • ವಿದೇಶಿ ಕ್ಲಬ್​​ಗಳ ಜೊತೆಗೆ ನಿರಂತರವಾಗಿ ಸೌಹಾರ್ಧ ಪಂದ್ಯಗಳನ್ನು ಆಯೋಜಿಸಬೇಕು. ತಂಡದಲ್ಲಿ ತಪ್ಪುಗಳನ್ನು ಅರಿಯಲು ಮತ್ತು ಸುಧಾರಿಸಲು ಅವಕಾಶ ಕಲ್ಪಿಸುವುದು ಅಗತ್ಯ.
  • ದೇಶದಲ್ಲಿ ಕ್ರೀಡಾಂಗಣ ಸೇರಿ ಫುಟ್ಬಾಲ್​ಗೆ ಬೇಕಾದಂತಹ ಮೂಲ ಸೌಕರ್ಯಗಳನ್ನು ಚಿಕ್ಕಂದಿನಿಂದಲೇ ಒದಗಿಸುವುದು ಉತ್ತಮ.
  • ಫುಟ್ಬಾಲ್​ ಆಟಗಾರರಿಗೂ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಆದ್ಯತೆಯ ಮೇರೆಗೆ ಉದ್ಯೋಗ ಭದ್ರತೆ ಸಿಗಬೇಕು
  • ಐಎಸ್​​ಎಲ್​ನಂತಹ ಫುಟ್ಬಾಲ್ ಟೂರ್ನಿಯಲ್ಲಿ ದೇಶದ ಆಟಗಾರರಿಗೆ ಹೆಚ್ಚಿನ ಆದ್ಯತೆ ಸಿಗಬೇಕು. ಜೊತೆಗೆ ವಿದೇಶಿ ಕ್ಲಬ್​ಗಳಲ್ಲಿ ಆಡಲು ಪ್ರೋತ್ಸಾಹಿಸಬೇಕು.

ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ ht.kannada@htdigital.in ಗೆ ಈಮೇಲ್​ ಮಾಡಿ.

ಇಂತಹ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.