ಕನ್ನಡ ಸುದ್ದಿ  /  Sports  /  Football News Sunil Chhetri To Be Felicitated By Aiff On 150th International Match For India Fifa World Cup 2026 Jra

150ನೇ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ಸುನಿಲ್‌ ಛೆಟ್ರಿ;‌ ವಿಶೇಷ ಮೈಲಿಗಲ್ಲು ವೇಳೆ ಎಐಎಫ್ಎಫ್ ಸನ್ಮಾನ

Sunil Chhetri: ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್ ಛೆಟ್ರಿ 150ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ವಿಶೇಷ ಮೈಲಿಗಲ್ಲು ತಲುಪುವ ವೇಳೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಸನ್ಮಾನ ಮಾಡಲಿದೆ.

150ನೇ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ಸುನಿಲ್‌ ಛೆಟ್ರಿ
150ನೇ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ಸುನಿಲ್‌ ಛೆಟ್ರಿ (AFP)

ಭಾರತ ಫುಟ್ಬಾಲ್‌ ತಂಡ ಎಂದಾಗ ಥಟ್ಟನೆ ನೆನಪಾಗುವವರು ಸುನಿಲ್‌ ಛೆಟ್ರಿ. ಸುಮಾರು ಎರಡು ದಶಕಗಳ ಕಾಲ ಭಾರತ ಫುಟ್ಬಾಲ್‌ ತಂಡವನ್ನು ಉನ್ನತ ಹಂತಕ್ಕೆ ಕೊಂಡೊಯ್ದ ದಿಗ್ಗಜ ಆಟಗಾರ ಇವರು. ದಶಕದ ಹಿಂದೆ ಪಾಕಿಸ್ತಾನ ವಿರುದ್ಧ ಹಿರಿಯರ ಫುಟ್ಬಾಲ್‌ ತಂಡಕ್ಕೆ ಪದಾರ್ಪಣೆ ಮಾಡಿದ ಸುನಿಲ್‌ ಛೆಟ್ರಿ ಅವರಲ್ಲಿ, ಕಾಲ್ಚೆಂಡು ಆಟದ ಹಸಿವು ಇನ್ನೂ ಮಾಗಿಲ್ಲ. ಇದು ಭಾರತೀಯ ಫುಟ್ಬಾಲ್‌ ರಂಗಕ್ಕೆ ಅತ್ಯುನ್ನತ ವರ. ಇದೀಗ ದೇಶ ಕಂಡ ಶ್ರೇಷ್ಠ ಆಟಗಾರನ ವಿಶೇಷ ಮೈಲಿಗಲ್ಲನ್ನು ಸಂಭ್ರಮಿಸುವ ಕಾಲ. ಭಾರತದ ನಾಯಕ ಛೆಟ್ರಿ, ಮಾರ್ಚ್‌ 26ರ ಮಂಗಳವಾರ ಗುವಾಹಟಿಯಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಲಿದ್ದಾರೆ. 150ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಮೂಲಕ ವಿಶ್ವ ಫುಟ್ನಾಲ್‌ನಲ್ಲೂ ಉನ್ನತ ಮೈಲಿಗಲ್ಲು ಸಾಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

2026ರಲ್ಲಿ ನಡೆಯುವ ಫಿಫಾ ವಿಶ್ವಕಪ್‌ ಪಂದ್ಯದಲ್ಲಿ ಭಾಗವಹಿಸುವ ಕನಸು ಕಾಣುತ್ತಿರುವ ಭಾರತವು, ವಿಶ್ವಕಪ್ ಅರ್ಹತಾ ಹಂತದ ಎರಡನೇ ಸುತ್ತಿನಲ್ಲಿ ಎರಡನೇ ಬಾರಿಗೆ ಅಫ್ಘಾನಿಸ್ತಾನ ವಿರುದ್ಧ‌ ಸೆಣಸಲಿದೆ. ಕೆಲವು ದಿನಗಳ ಹಿಂದೆ ನಡೆದ ಪಂದ್ಯದಲ್ಲಿ, ಇದೇ ತಂಡದ ವಿರುದ್ಧ ಭಾರತ ನೀರಸ ಡ್ರಾ ಸಾಧಿಸಿತ್ತು.

ಮತ್ತೊಮ್ಮೆ ಅಫ್ಘಾನಿಸ್ತಾನ ವಿರುದ್ಧದ ಭಾರತ ಕಣಕ್ಕಿಳಿಯಲಿದ್ದು, ಛೆಟ್ರಿಗೆ ಈ ಪಂದ್ಯ ವಿಶೇಷವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 150 ಫುಟ್ಬಾಲ್‌ ಪಂದ್ಯಗಳನ್ನಾಡಿದ ಭಾರತದ ಮೊದಲನೆ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಲಿದ್ದಾರೆ.

ವಿಶೇಷ ದಾಖಲೆ

ಪೋರ್ಚುಗಲ್‌ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಬರೋಬ್ಬರಿ 205 ಪಂದ್ಯಗಳಲ್ಲಿ ಆಡುವ ಮೂಲಕ, ಅತಿ ಹೆಚ್ಚು ಪಂದ್ಯವಾಡಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 150 ಅಥವಾ ಅದಕ್ಕಿಂತ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ 40ನೇ ಆಟಗಾರ ಎಂಬ ಹೆಗ್ಗಳಿಕೆಗೆ ಇದೀಗ ಛೆಟ್ರಿ ಪಾತ್ರರಾಗಲಿದ್ದಾರೆ. ಭಾರತದ ಪರ ಆಡಿದ ಪ್ರಥಮ, 25, 50, 75, 100 ಮತ್ತು 125ನೇ ಪಂದ್ಯಗಳಲ್ಲಿ ಕನಿಷ್ಠ ಒಂದು ಗೋಲು ಗಳಿಸಿದ ವಿಶಿಷ್ಟ ದಾಖಲೆ ಛೆಟ್ರಿ ಹೆಸರಲ್ಲಿದೆ.

ಪದಾರ್ಪಣೆ ಪಂದ್ಯದಲ್ಲೇ ಗೋಲು

2005ರ ಜೂನ್ 12ರಂದು ಕ್ವೆಟ್ಟಾದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಛೆಟ್ರಿ ಕಣಕ್ಕಿಳಿದಿದ್ದರು. ಸೌಹಾರ್ದ ಪಂದ್ಯದ ಮೂಲಕ ಮೊದಲ ಬಾರಿಗೆ ಹಿರಿಯರ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿದರು. ಆ ಪಂದ್ಯವು 1-1ರಲ್ಲಿ ಡ್ರಾದಲ್ಲಿ ಅಂತ್ಯವಾಗಿತ್ತು. ಆ ಒಂದು ಗೋಲು ಗಳಿಸಿದವರು ಛೆಟ್ರಿ ಎನ್ನುವುದು ವಿಶೇಷ. ಅಂದಿನಿಂದ ಇಲ್ಲಿಯವರೆಗೆ ಭಾರತದ ಪರ 149 ಪಂದ್ಯಗಳನ್ನು ಆಡಿರುವ ಸುನಿಲ್‌, ದಾಖಲೆಯ 93 ಗೋಲುಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ | ಇತಿಹಾಸ ನಿರ್ಮಿಸಿದ ಭಾರತದ ಜಿ ಸತ್ಯನ್; ವಿಶ್ವ ಟೇಬಲ್ ಟೆನಿಸ್ ಫೀಡರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯನೆಂಬ ದಾಖಲೆ

ಸುನಿಲ್‌ ಛೆಟ್ರಿ ವಿಶೇಷ ಮೈಲಿಗಲ್ಲು ಹಿನ್ನೆಲೆಯಲ್ಲಿ ಮಾತನಾಡಿದ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಅಧ್ಯಕ್ಷ ಕಲ್ಯಾಣ್ ಚೌಬೆ, “ಛೆಟ್ರಿ ತಮ್ಮ 150ನೇ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವುದು ಅಸಾಧಾರಣ ಸಾಧನೆ. ಆ ಮೂಲಕ ಭಾರತೀಯ ಫುಟ್ಬಾಲ್ ಧ್ವಜ ಇನ್ನಷ್ಟು ಎತ್ತರಕ್ಕೆ ಹಾರುತ್ತಿದೆ. ತಮ್ಮ ಆಟದೊಂದಿಗೆ ಉತ್ತಮ ಪ್ರಭಾವ ಬೀರುವ ಮೂಲಕ ಈ ಸುಂದರ ಆಟವನ್ನು ಲಕ್ಷಾಂತರ ಜನರು ಆಡಲು ಪ್ರೇರೇಪಿಸಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್‌ ಕ್ಷೇತ್ರದಲ್ಲಿ ಈ ಎತ್ತರವನ್ನು ತಲುಪಿದ್ದಕ್ಕಾಗಿ ನಾನು ಛೆಟ್ರಿ ಅವರನ್ನು ಅಭಿನಂದಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

ವಿಶೇಷ ಸಾಧಕನಿಗೆ ಎಐಎಫ್ಎಫ್ ಸನ್ಮಾನ

ಇದೇ ವೇಳೆ ಅಫ್ಘಾನಿಸ್ತಾನ ವಿರುದ್ಧ ಗುವಾಹಟಿಯಲ್ಲಿ ನಡೆಯುವ ಪಂದ್ಯದ ನಡುವೆ, ಛೆಟ್ರಿ ಅವರನ್ನು ಸನ್ಮಾನಿಸುವುದಾಗಿ ಎಐಎಫ್ಎಫ್ ಘೋಷಿಸಿದೆ. “150ನೇ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವ ಛೇಟ್ರಿ ಅವರನ್ನು ಸನ್ಮಾನಿಸಲು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಹೆಮ್ಮೆಪಡುತ್ತದೆ. ಮುಂದೆಯೂ ಛೆಟ್ರಿ ಅವರು ಇದೇ ಉತ್ಸಾಹದೊಂದಿಗೆ ಭಾರತೀಯ ಫುಟ್ಬಾಲ್‌ಗೆ ಸೇವೆ ಸಲ್ಲಿಸುತ್ತಾರೆ ಎಂಬ ಭರವಸೆ ನಮಗಿದೆ” ಎಂದು ಎಐಎಫ್ಎಫ್ ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಂ ಸತ್ಯನಾರಾಯಣ್ ಹೇಳಿದ್ದಾರೆ.